ದೀಪಾವಳಿ- ಇಲ್ಲಿ ದೀಪವಲ್ಲದ್ದು ಏನಿದೆ? ದೇವರಿಗೆ ಪೂಜೆಯಿದೆ. ಬದುಕಿಗೆ ಆಧಾರವಾದ ವಾಣಿಜ್ಯ ಮತ್ತು ಕೃಷಿಯ ಸಂಭ್ರಮವಿದೆ. ಆಟವಿದೆ, ನೋಟವಿದೆ, ಕೂಟವಿದೆ. ಗೆಲುವಿನ ಹೆಮ್ಮೆಯಿದೆ, ಸೋತರೂ ಖುಷಿಯಿದೆ. ಅಣ್ಣ-ತಂಗಿಯರ ಭಾವನಾತ್ಮಕ ಮಿಲನವಿದೆ.
ಜಗದೀಶ ಶರ್ಮಾ ಸಂಪ
ಮತ್ತೊಂದು ದೀಪಾವಳಿ ಬದುಕನ್ನು ಹಾದು ಹೋಗಲು ಬಂದಿದೆ. ಬೇರೆ ಬೇರೆ ದೇವತೆಗಳನ್ನು ಆರಾಧಿಸುವ ಐದು ದಿನಗಳ ಈ ಹಬ್ಬ ದೀಪಕ್ಕೆ ತನ್ನನ್ನು ಅದೆಷ್ಟು ಕೊಟ್ಟುಕೊಂಡಿದೆಯೆಂದರೆ ಇದರ ಹೆಸರೇ ದೀಪಗಳ ಸಾಲಾಗಿದೆ. ಆವಲಿ ಎಂದರೆ ಸಾಲು. ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ವಾಸ್ತವದ ಬದುಕಲ್ಲಿ ತೋರಿಸುವ ವಸ್ತುವಾದಂತೆ ಸಾಂಕೇತಿಕವಾಗಿಯೂ ಪ್ರತಿಮಾತ್ಮಕವಾಗಿಯೂ ತೋರಿಸುವ ವಸ್ತುವೇ. ಹಾಗಾಗಿಯೇ ದೀಪವೆನ್ನುವ ಶಬ್ದವೇ ಪುಳಕಗೊಳಿಸುತ್ತದೆ. ಯಾಕೆಂದರೆ ಈ ಶಬ್ದ ಮನಸ್ಸನ್ನು ಹೊಳೆಯಿಸುತ್ತದೆ. ಕತ್ತಲೆ ಎಂದಾಗ ಮುದುಡುವ ಮನಸ್ಸು, ದೀಪ ಎಂದಾಗ ಅರಳುತ್ತದೆ.
undefined
ದೀಪಾವಳಿ ಹಬ್ಬವೆಂದರೆ ಹಬ್ಬಗಳ ಸಮ್ಮೇಳನ. ನರಕಾಸುರನನ್ನು ಕೊಂದ ದಿನದ ಸ್ಮರಣೆಯ ನರಕ ಚತುರ್ದಶಿ ಕೃಷ್ಣನ ಹಬ್ಬವಾದರೆ ಅಂದು ರಾತ್ರಿ ಶಿವನ ಪೂಜೆಗೆ ಮೀಸಲು. ಮಹಾಕಾಲ ಮತ್ತು ಮಹಾರಾತ್ರಿಯರನ್ನು ಆ ರಾತ್ರಿ ಪೂಜಿಸುವ ಪರಿಪಾಟವಿದೆ. ಅಮಾವಾಸ್ಯೆಯ ದಿನ ಸಂಪತ್ತಿನ ಒಡತಿ ಲಕ್ಷ್ಮಿಗೆ ಪೂಜೆ ಸಂದಂತೆ ಧನಾಧ್ಯಕ್ಷ ಕುಬೇರನಿಗೂ ಪೂಜೆಯಿದೆ. ಸಂಪತ್ತಿನ ಎಡೆಯಾದ ಅಂಗಡಿಯೇ ಅಂದು ಪೂಜೆಗೊಳ್ಳುತ್ತದೆ. ಮಾರನೆಯ ದಿನ ಪಾಡ್ಯದಂದು ರಾಕ್ಷಸ ಬಲಿಯ ಉಪಾಸನೆ ನಡೆದಂತೆ, ಗೋವಿನ ಉಪಾಸನೆಯೂ ನಡೆಯುತ್ತದೆ. ಅದರ ಮಾರನೆಯ ದಿನದ ಬಿದಿಗೆಯಂದು ಸಾವಿಗೆ ಮತ್ತು ನರಕದ ನೋವಿಗೆ ಕಾರಣನಾದ ಯಮನ ಆರಾಧನೆ ನಡೆದಂತೆ, ತನ್ನ ಹರಿವಿನಿಂದ ದೇಶವನ್ನು ಸಮೃದ್ಧಗೊಳಿಸಿದ ಯಮುನೆಯ ಪೂಜೆಯೂ ನಡೆಯುತ್ತದೆ. ರಾಕ್ಷಸನೊಬ್ಬನ ಸಂಹಾರದ ಸಂಭ್ರಮ ಒಂದೆಡೆಯಾದರೆ, ಇನ್ನೊಬ್ಬ ರಾಕ್ಷಸನ ಪೂಜೆಯೂ ಇಲ್ಲಿದೆ. ಸಾವಿನ ದೇವರ ಪೂಜೆಯ ಜೊತೆಗೆ, ಬದುಕನ್ನು ಸಮೃದ್ಧಗೊಳಿಸುವ ದೇವಿಯ ಉಪಾಸನೆಯೂ ಇದೆ.
ವಾರ ಭವಿಷ್ಯ: ಕಟಕಕ್ಕೆ ದುಃಖದ ಸುದ್ದಿ, ವೃಶ್ಚಿಕಕ್ಕೆ ಕೈಲಿರಲಿ ಬುದ್ಧಿ
ದೀಪಾವಳಿ ಆರಂಭವಾಗುವುದು ನರಕ ಚತುರ್ದಶಿಯ ಹಿಂದಿನ ತ್ರಯೋದಶಿಯ ಸಂಜೆ. ಅಂದು ಮಾರನೆಯ ದಿನದ ಅಭ್ಯಂಗಕ್ಕಾಗಿ ಸ್ನಾನಗೃಹ ಸಿಂಗಾರಗೊಳ್ಳುತ್ತದೆ. ಮನೆಯ ಬೇರೆಲ್ಲ ಭಾಗಕ್ಕೆ ಸಿಂಗಾರ ಸಹಜವಾದರೂ ಸ್ನಾನದ ಹಂಡೆಗೆ ಅಲಂಕಾರ ಮಾಡುವ ವೈಶಿಷ್ಟ್ಯ ಈ ಹಬ್ಬದ್ದು. ಮಾರನೆಯ ಬೆಳಗು ಮೈಮನಗಳನ್ನು ಪ್ರಫುಲ್ಲಿತಗೊಳಿಸುವ ಎಣ್ಣೆ ಸ್ನಾನದ್ದು. ಅಭ್ಯಂಗದಿಂದ ದೂರಾದ ನಮಗೆ ಅದರ ಖುಷಿಯ ಅರಿವೂ ಇಲ್ಲವಾಗಿದೆ. ಕುವೆಂಪು ಬರೆದ ಅಭ್ಯಂಗದ ಪ್ರಬಂಧ ಓದಿದರೆ ತಿಳಿದೀತು ಅದರ ಸೌಖ್ಯ. ಅದರ ಮಾರನೆಯ ದಿನ ಸಿಂಗಾರಗೊಳ್ಳುವುದು ವಾಣಿಜ್ಯ ಲೋಕ. ಪೇಟೆಗಳು ಅಂದು ನಳನಳಿಸುತ್ತವೆ. ದೀಪಾವಳಿ ಮುಗಿಯುವುದು ಸಹೋದರರು ಸಹೋದರಿಯರ ಮನೆಗೆ ಹೋಗಿ ಉಡುಗೊರೆ ಕೊಟ್ಟು ಪಡೆದು, ಉಂಡುಟ್ಟು ನಲಿವ ಭಗಿನೀ ದ್ವಿತೀಯಾದಂದು. ಇದರ ನಡುವೆ ಪಗಡೆಯಾಟದ ಸಂಭ್ರಮ ಬೇರೆ. ಈ ದಿನ ಪರಶಿವನೇ ಪಾರ್ವತಿಯೊಡನೆ ಪಗಡೆಯಾಡಿ ಸೋತನಂತೆ. ದೀಪಾವಳಿಯಲ್ಲಿ ಹಿಂದೆ ರಾಜರು ಪ್ರಜೆಗಳ ಜೊತೆ ಹಗ್ಗಜಗ್ಗಾಟದಂತಹ ಒಂದು ಆಟ ಆಡುತ್ತಿದ್ದರು. ಅದರಲ್ಲಿ ಪ್ರಜೆಗಳು ಗೆದ್ದರೆ ರಾಜನಿಗೆ ಶ್ರೇಯಸ್ಸು ಎಂದು ನಂಬಿಕೆ. ಗಂಡನ ಎದುರು ಹೆಂಡತಿ ಗೆಲ್ಲುವುದು, ರಾಜನ ಎದುರು ಪ್ರಜೆಗಳು ಗೆಲ್ಲುವುದು ಇವೆಲ್ಲ ಹೊಳೆಯಿಸುವ ಸಂದೇಶ ಅದ್ಭುತವಾದದ್ದು. ದೀಪಾವಳಿಯ ಐದು ದಿನದ ಸಮಗ್ರ ಅಲಂಕಾರದಲ್ಲಿ ಪ್ರಧಾನ ಪಾತ್ರ ದೀಪದ್ದೇ. ಮನೆಯೊಳಗೂ, ಮನೆ ಹೊರಗೂ, ಬೀದಿಗಳಲ್ಲೂ, ಮರಗಳ ಕೊನೆಯಲ್ಲೂ ದೀಪಗಳೇ ದೀಪಗಳು. ಪುಟ್ಟಹಣತೆಯಿಂದ ದಿಟ್ಟಆಕಾಶದೀಪದ ತನಕ ಇದರ ವ್ಯಾಪ್ತಿ. ಹೊಸ ಬಟ್ಟೆ, ಸಿಹಿಯೂಟ, ಬಂಧು-ಮಿತ್ರ ಕೂಟ ಇವೆಲ್ಲ ಹಬ್ಬದ ಇನ್ನುಳಿದ ಸಂಗತಿಗಳು.
ಜನವರಿವರೆಗೆ ತಪ್ಪೋಲ್ಲ ಲೋಕ ಕಂಟಕ, ದೇಹಗಳು ದಾರಿಯಲ್ಲೇ ಬಿದ್ದು ಸಾಯುತ್ವೆ; ಕೋಡಿಶ್ರೀ ಭವಿಷ್ಯ ಬಾಂಬ್!
ಇಲ್ಲಿ ದೀಪವಲ್ಲದ್ದು ಏನಿದೆ? ದೇವರಿಗೆ ಪೂಜೆಯಿದೆ. ಬದುಕಿಗೆ ಆಧಾರವಾದ ವಾಣಿಜ್ಯ ಮತ್ತು ಕೃಷಿಯ ಸಂಭ್ರಮವಿದೆ. ಆಟವಿದೆ, ನೋಟವಿದೆ, ಕೂಟವಿದೆ. ಗೆಲುವಿನ ಹೆಮ್ಮೆಯಿದೆ, ಸೋತರೂ ಖುಷಿಯಿದೆ. ಅಣ್ಣ-ತಂಗಿಯರ ಭಾವನಾತ್ಮಕ ಮಿಲನವಿದೆ.
ಇಲ್ಲಿದೆ ಕತ್ತಲು - ಬೆಳಕುಗಳ ವಿವೇಚನೆ. ಕಪ್ಪು ಕತ್ತಲೆಯಲ್ಲ, ಬಿಳಿ ಬೆಳಕಲ್ಲ. ರಾತ್ರಿ ಕತ್ತಲಲ್ಲ, ಹಗಲು ಬೆಳಕಲ್ಲ. ಕಣ್ಣಿಗೆ ಕಾಣದಿರುವುದು ಕತ್ತಲಲ್ಲ, ಕಣ್ಣಿಗೆ ಕಾಣುವುದು ಬೆಳಕಲ್ಲ. ನೋಯುವುದು ಕತ್ತಲೆ; ಬೇಯುವುದು ಕತ್ತಲೆ. ನಿರಾಸೆ ಕತ್ತಲೆ; ಹತಾಶೆ ಕತ್ತಲೆ. ಎಲ್ಲ ಬೇಕೆಂಬ ಬಯಕೆ ಕತ್ತಲೆ; ಸಿಕ್ಕಿಲ್ಲವೆಂದು ಕೊರಗುವುದು ಕತ್ತಲೆ. ತನ್ನಲ್ಲಿ ಇದೆಯೆಂದು ಬೀಗುವುದು ಕತ್ತಲೆ; ಇನ್ನೊಬ್ಬನಲ್ಲಿ ಇದೆಯೆಂದು ಕರುಬುವುದು ಕತ್ತಲೆ. ತಿರಸ್ಕಾರ ಕತ್ತಲೆ, ಲೇವಡಿ ಕತ್ತಲೆ, ಅವಮಾನಿಸುವುದು ಕತ್ತಲೆ. ಒಬ್ಬನೇ ಆಕಾಶದೆತ್ತರಕ್ಕೆ ಬೆಳೆಯಬೇಕೆಂಬ ಬಯಕೆ ಕತ್ತಲೆ. ತಾನು ಮೇಲೇರಲು ಇನ್ನೊಬ್ಬನನ್ನು ತುಳಿಯುವುದು ಕತ್ತಲೆ. ಕೀಳು ಎನ್ನುವುದು ಕತ್ತಲೆ, ಕೀಳುವುದು ಕತ್ತಲೆ. ಬೆಳಕು ಯಾವುದೆಂದು ಹೇಳಲೇಬೇಕಿಲ್ಲ. ಇವೆಲ್ಲವೂ ಅಲ್ಲದ್ದು ಬೆಳಕು.
ಲೋಕರೂಢಿಯ ಕತ್ತಲು - ಬೆಳಕಿನ ವಿಮರ್ಶೆಗೆ ಪುರಾತನ ಇತಿಹಾಸವೇ ಇದೆ. ಅದು ಕತ್ತಲೆ ಎಂದೊಂದು ಇದೆಯೇ ಎಂದು ಚರ್ಚಿಸುತ್ತದೆ. ಬೆಳಕು ಇಲ್ಲದಿರುವುದೇ ಕತ್ತಲಲ್ಲವೇ ಎನ್ನುವುದು ಆ ಚರ್ಚೆ. ಕತ್ತಲು ಆವರಿಸಿತು ಎಂದು ಹೇಳುತ್ತೇವಾದರೂ ಆವರಿಸುವುದು ಬೆಳಕು. ಬೆಳಕು ಇಲ್ಲದಿದ್ದಾಗಲಷ್ಟೆಕತ್ತಲಿನ ಅಸ್ತಿತ್ವ. ಕತ್ತಲು ಬಂದು ಬೆಳಕನ್ನು ಇಲ್ಲವಾಗಿಸುವುದಿಲ್ಲ. ಬೆಳಕು ತಾನಾಗಿಯೇ ತನ್ನನ್ನು ಕ್ಷೀಣವಾಗಿಸಿಕೊಂಡರೆ ಬೆಳಕಿಲ್ಲವಾಗುವ ಜಾಗದಲ್ಲಿ ಕತ್ತಲು ಕಾಣಿಸಿಕೊಳ್ಳುತ್ತದೆ. ಬೆಳಕು ತಾನಾಗಿ ಇಲ್ಲವಾದರೆ ಅಲ್ಲಿ ಕತ್ತಲೆಯ ಸಾಮ್ರಾಜ್ಯ. ಕತ್ತಲು - ಬೆಳಕಿನ ಸಮರ ಎಂಬುದೊಂದಿಲ್ಲ. ಬೆಳಕು ತಾನಾಗಿ ಸತ್ತರೆ ಕತ್ತಲಿನ ವಿಜಯ. ಕತ್ತಲೆಗೆ ಬೆಳಕನ್ನು ಸಾಯಿಸುವುದಿರಲಿ ಸೋಲಿಸುವುದಿರಲಿ ಎದುರಿಸಲೂ ಸಾಧ್ಯವಿಲ್ಲ. ಹಾಗಾಗಿ ಬೆಳಕಿನ ಅಭಾವಕ್ಕೆ ಕತ್ತಲು ಎಂದು ಹೆಸರೇ ಹೊರತು ಅದಕ್ಕೊಂದು ಪ್ರತ್ಯೇಕ ಅಸ್ತಿತ್ವವಿಲ್ಲ ಎನ್ನುವುದು ಹಳೆಯ ವಾದ.
Weekly Love Horoscope: ಈ ರಾಶಿಯ ಪತಿ ಪತ್ನಿ ನಡುವೆ ಜಗಳ
ಹಾಗಿದ್ದಾಗ ಸೋಲೆನ್ನುವ ನೋವೆನ್ನುವ ಕತ್ತಲು ಇದೆಯೇ ಎಂದು ಕೇಳಿಕೊಳ್ಳಬೇಕು. ಅದು ಗೆಲುವಿನ ನಲಿವಿನ ಅಭಾವ ಅಷ್ಟೇ ಅಲ್ಲವೇ? ಹೀಗೇಕೆ ನಾವು ಯೋಚಿಸಬಾರದು? ಯೋಚಿಸಲೇಬೇಕು. ಹಾಗಾದರಷ್ಟೆಇದು ದೀಪಾವಳಿಯಾದೀತು. ಇಲ್ಲ ಇಲ್ಲ ಎಂದು ಕೊರಗುತ್ತಿದ್ದೇವಲ್ಲ, ಅದು ಸಾಧನೆಯ ಹೋರಾಟ ಮಾಡದೆ ಉಳಿದಿದ್ದು ಮಾತ್ರ ಅಲ್ಲವೇ? ಡಿವಿಜಿ ಕಗ್ಗವೊಂದರಲ್ಲಿ ಇದನ್ನು ಚೆನ್ನಾಗಿ ಹೇಳುತ್ತಾರೆ.
ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು?
ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು?
ಘನಮಹಿಮನೊಳ್ ಜ್ವಲಿಸುತಿತರೊಳು ನಿದ್ರಿಸುತೆ
ಅನಲನೆಲ್ಲರೊಳಿಹನು - ಮಂಕುತಿಮ್ಮ
ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದರು. ಅದೊಂದು ಅದ್ಭುತ ಕಾವ್ಯ. ಅವರಂತೆ ನಾವಾಗಲು ಸಾಧ್ಯವೇ ಎಂದುಕೊಳ್ಳುತ್ತೇವೆ. ಅವರು ದೊಡ್ಡವರು, ನಾವು ಅವರಂತಲ್ಲ ಎಂದು ನಮ್ಮ ಭಾವ. ಇಲ್ಲಿ ಡಿವಿಜಿ ಇದನ್ನು ಪ್ರಶ್ನಿಸುತ್ತಾರೆ. ವಾಲ್ಮೀಕಿ ಕೂಡಾ ನಿನ್ನಂತೆ ಕಣ್ಣು, ಬಾಯಿ, ಕೈ, ಕಾಲು ಇದ್ದವರಲ್ಲವೇ? ಅವರು ಬರೆದದ್ದು ನಿನ್ನ ಮನಸ್ಸನ್ನು ಮುಟ್ಟುತ್ತದೆಯಲ್ಲವೇ? ಎಂದಮೇಲೆ ನಿನಗೂ ಮಹರ್ಷಿಗೂ ಅಂತರವಿಲ್ಲ ಎಂದಾಯ್ತು. ವಿಷಯ ಇಷ್ಟೇ. ಅವರಲ್ಲಿ ಸಾಮರ್ಥ್ಯವೆನ್ನುವ ಅಗ್ನಿ ಜಾಗೃತವಾಗಿದೆ, ಉಳಿದವರಲ್ಲಿ ಅದು ಮಲಗಿದೆ.
ಇದು ಎಲ್ಲ ವಿಷಯಗಳಿಗೂ ಅನ್ವಯ. ಎಲ್ಲರ ಅಂತರಂಗದಲ್ಲೂ ದೀಪವಿದೆ. ಬೆಳಗಿ ಅದರ ಬೆಳಕನ್ನು ಬದುಕಿಗೆ ಹರಿಸಿಕೊಳ್ಳುವುದಷ್ಟೆಆಗಬೇಕಿರುವುದು. ಹಾಗಾದರೆ ಅದು ದೀಪಾವಳಿ, ದೀಪಗಳ ಆವಲಿ, ಹಾಗಾದಾಗ ಇಲ್ಲ ನೋವುಗಳ ಹಾವಳಿ.