ಶ್ರದ್ಧಾಭಕ್ತಿಯಿಂದ ಜರುಗಿದ ರಾಜ್ಯದ ಏಕೈಕ ಗಣೇಶ ಬ್ರಹ್ಮರಥೋತ್ಸವ: ಸಾವಿರಾರು ಈಡುಗಾಯಿ ಅರ್ಪಿಸಿದ ಭಕ್ತರು!

Published : Nov 08, 2025, 06:31 PM IST
Ganesha Rathotsava

ಸಾರಾಂಶ

ನಾಲ್ಕುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಗಣಪತಿ ದೇವಾಲಯ ವಾರ್ಷಿಕ ಜಾತ್ರೆ ಮತ್ತು ರಥೋತ್ಸವ ಅದ್ದೂರಿಯಿಂದ ನೆರವೇರಿತು. ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ಥಿ ಲಗ್ನದಲ್ಲಿ ಗಣೇಶನ ಬ್ರಹ್ಮ ರಥೋತ್ಸವ ನಡೆಯಿತು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.08): ಗಣೇಶ ಬಪ್ಪಾ ಮೋರಿಯಾ... ಮೋದಕ ಪ್ರಿಯನೇ ಮೋರಿಯಾ ಎನ್ನುತ್ತಾ ವಿರಾಜಮಾನನಾದ ಗಣೇಶನ ರಥವನ್ನು ಎಳೆಯುತ್ತಾ ಭಕ್ತಿ ಭಾವವನ್ನು ಸಾವಿರಾರು ಭಕ್ತರು ಮೆರೆದರು. ರಾಜ್ಯದ ಏಕೈಕ ಗಣೇಶ ರಥೋತ್ಸವದಲ್ಲಿ ಲಕ್ಷಾಂತರ ತೆಂಗಿನ ಕಾಯಿಗಳನ್ನು ಈಡುಗಾಯಿಯಾಗಿ ಅರ್ಪಿಸುತ್ತಿರುವ ಸಾವಿರಾರು ಭಕ್ತರು. ಗಣಪತಿಯ ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರಗೆ ಬರುತ್ತಿದ್ದಂತೆ ಅಪಾರ ಪ್ರಮಾಣದ ಕರ್ಪೂರ ಹಚ್ಚಿ ಗಣೇಶ ಮೂರ್ತಿಯ ಭಜಿಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳು. ಹೌದು ಹೀಗೆ ಗಣೇಶನನ್ನು ಭಜಿಸುತ್ತಾ, ಪ್ರಾರ್ಥಿಸುತ್ತಾ ಗಣಪತಿ ಬಪ್ಪಾ ಮೋರಿಯ ಎನ್ನುತ್ತಾ ಬ್ರಹ್ಮರಥೋತ್ಸವ ನಡೆದಿದ್ದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ.

ನಾಲ್ಕುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಗಣಪತಿ ದೇವಾಲಯ ವಾರ್ಷಿಕ ಜಾತ್ರೆ ಮತ್ತು ರಥೋತ್ಸವ ಅದ್ದೂರಿಯಿಂದ ನೆರವೇರಿತು. ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ಥಿ ಲಗ್ನದಲ್ಲಿ ಗಣೇಶನ ಬ್ರಹ್ಮ ರಥೋತ್ಸವ ನಡೆಯಿತು. ದೇವಾಲಯದ ಒಳಗಿಂದ ಉತ್ಸವ ಮೂರ್ತಿ ಮಂಗಳ ವಾದ್ಯಗಳೊಂದಿಗೆ ಹೊರಗೆ ಬರುತ್ತಿದ್ದಂತೆ ಸಾವಿರಾರು ಭಕ್ತರು ತಮ್ಮ ಶಕ್ತಾನುಸಾರ ಈಡುಗಾಯಿಗಳನ್ನು ಅರ್ಪಿಸಿದರು. ಕೆಲವರು ಐದು ಈಡುಗಾಯಿ ಹೊಡೆದರೆ, ಇನ್ನು ಕೆಲವರು ನೂರು, ಮತ್ತೆ ಕೆಲವರು ಐದು ನೂರು ಈಡುಗಾಯಿಯಂತೆ ಸಾವಿರಾರು ಭಕ್ತರು ಸಾವಿರಾರು ಈಡುಗಾಯಿಗಳನ್ನು ಅರ್ಪಿಸಿದರು. ಇನ್ನು ಗಣಪತಿ ದೇವಾಲಯದ ಮುಂಭಾಗದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಅಪಾರ ಪ್ರಮಾಣದ ಕರ್ಪೂರ ಹಚ್ಚಿ ವಿಘ್ನನಿವಾರಕನನ್ನು ನೆನೆದರು.

ಇದನ್ನು ಪ್ರತೀ ವರ್ಷವೂ ಭಕ್ತರು ಅತ್ಯಂತ ಭಕ್ತಿಯಿಂದ ಮಾಡುತ್ತಿದ್ದಾರೆ ಎಂದು ಭಕ್ತರಾದ ಪಲ್ಲವಿ ಹೇಳಿದರು. ದೇವಾಲಯದ ಮುಂಭಾಗದಿಂದ ಹೊರಟ ಗಣಪತಿ ಬ್ರಹ್ಮ ರಥವನ್ನು ಐದುನೂರು ಮೀಟರ್ ದೂರದಲ್ಲಿ ಇರುವ ಆಂಜನೇಯ ದೇವಾಲಯದವರೆಗೆ ಎಳೆದು ನಿಲ್ಲಿಸಲಾಯಿತು. ರಥ ಸಾಗಿದಂತೆಲ್ಲಾ ರಥ ಬೀದಿಯ ಉದ್ದಕ್ಕೂ ಭಕ್ತರು ರಥಕ್ಕೆ ಹೂವು, ಬಾಳೆಹಣ್ಣು ಮತ್ತು ಜವನವನ್ನು ಅರ್ಪಿಸಿ ಗಣೇಶನಲ್ಲಿ ಬೇಡಿದರು. ಕೊಡಗಿನ ವಿವಿಧ ಭಾಗಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿದ್ದರು. ಇಡೀ ರಥ ಬೀದಿಯಲ್ಲಿ ಅಪಾರ ಪ್ರಮಾಣದ ಭಕ್ತರ ದಂಡೇ ಇತ್ತು.

ಬೇಡಿದ ವರಗಳನ್ನು ಕರುಣಿಸುತ್ತಿದ್ದಾನೆ

ಸಾಕಷ್ಟು ಭಕ್ತರು ವಿವಿಧ ಕಟ್ಟಡಗಳ ಮೇಲೇರಿ ರಥೋತ್ಸವವನ್ನು, ರಥದಲ್ಲಿ ವಿರಾಜಮಾನನಾಗಿದ್ದ ಗಣೇಶ್ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡರು. ಹಲವು ವರ್ಷಗಳಿಂದಲೂ ತಪ್ಪದೇ ರಥೋತ್ಸವದಲ್ಲಿ ಭಾಗವಹಿಸುತ್ತಿದ್ದೇವೆ. ಗಣೇಶನು ತಾವು ಬೇಡಿದ ವರಗಳನ್ನು ಕರುಣಿಸುತ್ತಿದ್ದಾನೆ. ಹೀಗಾಗಿಯೇ ತಾವು ತಪ್ಪದೇ ಪ್ರತೀ ರಥೋತ್ಸವದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುತ್ತೇವೆ. ಉತ್ಸವ ಮೂರ್ತಿ ರಥದಲ್ಲಿ ವಿರಾಜಮಾನನಾಗುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ ಎಂದು ಭಕ್ತರಾದ ಭಾವನಾ ಅಭಿಪ್ರಾಯಿಸಿದರು. ಒಟ್ಟಿನಲ್ಲಿ ರಾಜ್ಯದಲ್ಲಿಯೇ ಏಕೈಕ ಗಣೇಶನ ಬ್ರಹ್ಮ ರಥೋತ್ಸವ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

PREV
Read more Articles on
click me!

Recommended Stories

ಶೀಘ್ರದಲ್ಲೇ ಶುಭ ಫಲಗಳು ದೊರೆಯುವ 3 ರಾಶಿ, ಬೊಂಬಾಟ್‌ ಅದೃಷ್ಟ
ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ