ಶ್ರೀರಾಮ ಸತಿ, ಮಹಾನ್ ಪತಿವ್ರತೆ ಸೀತಾ ಮಾತೆ ಎಂದರೆ ತಾಯಿ ಲಕ್ಷ್ಮಿಯ ಅವತಾರವೇ. ಆಕೆಯ ಜನ್ಮ ಜಯಂತಿ ಇಂದು. ಜಾನಕಿ ಜಯಂತಿಯ ಪ್ರಾಮುಖ್ಯತೆ ಏನು, ಹೇಗೆ ಆಚರಿಸಬೇಕು ತಿಳಿಯಿರಿ.
ಮಹಾವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮ ಮರ್ಯಾದಾ ಪುರುಷೋತ್ತಮ. ಆತನ ಪತ್ನಿಯಾಗಿ, ಲಕ್ಷ್ಮೀ ದೇವಿಯ ಅವತಾರವಾಗಿ ಹುಟ್ಟಿದಾಕೆ ಸೀತಾ ಮಾತೆ(Goddess Sita). ರಾಜ ಜನಕನ ಪುತ್ರಿಯಾಗಿ ಜಾನಕಿ ಎಂಬ ಹೆಸರಿನಲ್ಲೂ ಗುರುತಿಸಿಕೊಂಡಿದ್ದ ಈ ಮಹಾಸತಿಯ ಜನ್ಮ ಜಯಂತಿ ಇಂದು. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ತಾಯಿ ಸೀತೆಯ ಜಯಂತಿ ಆಚರಿಸಲಾಗುತ್ತದೆ. ಅಷ್ಟಮಿ ತಿಥಿಯಲ್ಲಿ ಆಕೆ ಜನಿಸಿದ್ದರಿಂದ ಈ ದಿನವನ್ನು ಸೀತಾ ಅಷ್ಟಮಿ ಎಂದೂ ಕರೆಯಲಾಗುತ್ತದೆ. ಭಾರತ(India) ಹಾಗೂ ನೇಪಾಳ(Nepal)ದಲ್ಲಿ ಭಕ್ತರು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದ ಪ್ರಾಮುಖ್ಯತೆಯನ್ನು ತಿಳಿಯೋಣ.
ಸೀತೆ ರಾಜ ಜನಕ(King Janak) ಹಾಗೂ ರಾಣಿ ಸುನೈನಾರಿಗೆ ಭೂಮಿಯ ಒಡಲಲ್ಲಿ ಸಿಕ್ಕಿದ ಮಗು. ಮಕ್ಕಳಿಲ್ಲದ ಈ ರಾಜದಂಪತಿ ಸೀತೆಯನ್ನು ಅತಿ ಪ್ರೀತಿಯಿಂದ ಬೆಳೆಸಿದರು. ಕೆಲ ವರ್ಷಗಳ ಬಳಿಕ ಸೀತೆಗಾಗಿ ರಾಜ ಜನಕನು ಸ್ವಯಂವರ ಏರ್ಪಡಿಸುತ್ತಾನೆ. ಸ್ವಯಂವರದಲ್ಲಿ ಅಯೋಧ್ಯೆಯ ರಾಜ ದಶರಥನ ಪುತ್ರ ಶ್ರೀರಾಮನು ಜಾನಕಿಯನ್ನು ಗೆದ್ದು ವಿವಾಹವಾಗುತ್ತಾನೆ. ಆದರೆ, ವಿವಾಹದ ಬಳಿಕ ಕಷ್ಟಗಳ ಸರಮಾಲೆಯೇ ಈ ಜೋಡಿಯನ್ನು ಬಾಧಿಸುತ್ತದೆ. ಕುಟುಂಬದಿಂದ ಬೇರ್ಪಟ್ಟು, ರಾಜಜೀವನವನ್ನು ಬಿಟ್ಟು ಕಾಡಿನಲ್ಲಿ 14 ವರ್ಷ ಕಳೆಯಬೇಕಾಗಿ ಬರುತ್ತದೆ. ಈ ಎಲ್ಲ ವರ್ಷಗಳೂ ಒಂದಾದ ಮೇಲೊಂದು ಕಷ್ಟಗಳು ಅವರನ್ನು ಬಾಧಿಸುತ್ತವೆ. ರಾವಣ ಸೀತೆಯನ್ನು ಅಪಹರಿಸುತ್ತಾನೆ. ಸಮುದ್ರ ದಾಟಿ, ರಾವಣನನ್ನು ಸೋಲಿಸಿ ಸೀತೆಯನ್ನು ಗೆದ್ದು ಬರುತ್ತಾನೆ ರಾಮ(Shri Rama).
undefined
Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!
ಆದರ್ಶ ಪತ್ನಿ ಸೀತೆ
ರಾಮನ ಶಕ್ತಿ, ಸೀತೆಯ ನಂಬಿಕೆ ಅವರಿಬ್ಬರಿಗೆ ಬದುಕಿನ ಎಲ್ಲ ಸವಾಲುಗಳನ್ನು ಗೆಲ್ಲಲು ದಾರಿಯಾಗುತ್ತದೆ. ಈ ಗೆಲುವಿನ ಹಿಂದೆ ಸೀತೆಯ ಕಷ್ಟ ಸಹಿಷ್ಣುತೆ, ತಾಳ್ಮೆ, ನಂಬಿಕೆ, ಭರವಸೆ, ಪತಿಯ ಮೇಲಿನ ಅಚಲ ಪ್ರೀತಿ, ಧೈರ್ಯ ಎಲ್ಲದರ ಪಾಲೂ ದೊಡ್ಡದಿದೆ. ವನವಾಸದ ಬಳಿಕವೂ ಶ್ರೀರಾಮನಿಗೆ ತನ್ನ ಪಾತಿವ್ರತ್ಯ ಸಾಧಿಸಿತೋರಿಸಲು ಅಗ್ನಿಪರೀಕ್ಷೆಗೂ ಎದೆಗುಂದದೆ ನುಗ್ಗುತ್ತಾಳೆ ಸೀತೆ. ಪಂಚ ಪತಿವ್ರತೆಯರಲ್ಲಿ ಒಬ್ಬಳಾಗಿರುವ ಜಾನಕಿಯನ್ನು ದೇವರ ಅವತಾರವೇ ಎಂದು ಎಲ್ಲೆಡೆ ಪೂಜಿಸಲಾಗುತ್ತದೆ. ಈ ಜಾನಕಿ ಜಯಂತಿಯಂದು ಅವಳನ್ನು ನೆನೆದು ಪೂಜಿಸಿ, ಉಪವಾಸ ಆಚರಿಸಿ ಆಶೀರ್ವಾದಕ್ಕಾಗಿ ಬೇಡುತ್ತಾರೆ ಮಹಿಳೆಯರು.
ಫೆಬ್ರವರಿ 23ರ ಸಂಜೆ 4:56ರಿಂದ ಫೆ.24ರ ಮಧ್ಯಾಹ್ನ 3:03ರವರೆಗೆ ಅಷ್ಟಮಿ ತಿಥಿ ಇದ್ದು ಜಯಂತಿ ಆಚರಣೆಗೆ ಸಮಯವಾಗಿದೆ.
Bird Superstitions: ತಲೆ ಮೇಲೆ ಹಕ್ಕಿ ಪೀ ಮಾಡಿದ್ರೆ ಶುಭನಾ ಅಶುಭನಾ?
ದೇವಾಲಯಗಳಲ್ಲಿ ವಿಶೇಷ ಪೂಜೆ
ಭಕ್ತರು ಇಂದು ಶ್ರೀರಾಮ ದೇವಾಲಯಕ್ಕೆ ಭೇಟಿ ನೀಡಿ ರಾಮ, ಸೀತೆ, ಲಕ್ಷ್ಮಣನಿಗೆ ಪೂಜಿಸುತ್ತಾರೆ. ರಾಮ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ತಾಯಿ ಸೀತೆಗೆ ಮಹಾರತಿ, ಮಹಾ ಅಭಿಷೇಕ, ಶೃಂಗಾರ ದರ್ಶನ, ಭಜನೆ, ಕೀರ್ತನೆ ಸೇವೆಗಳು ನಡೆಯುತ್ತವೆ. ರಾಮಾಯಣದ ಕತೆಯನ್ನು ಇಂದು ಶ್ರವಣ ಮಾಡುವುದರಿಂದಲೂ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.
ಇಂದು ಸೀತೆಯನ್ನು ಪೂಜಿಸುವುದರಿಂದ ಬದುಕಲ್ಲಿ ನೆಮ್ಮದಿ, ಶಾಂತಿ, ಸಂತೋಷ, ಅದೃಷ್ಟ ದೊರೆಯಲಿದೆ. ಅವಿವಾಹಿತ ಹೆಣ್ಣುಮಕ್ಕಳು ಸೀತಾ ಜಯಂತಿ ಆಚರಿಸಿ ರಾಮನಂಥ ಮರ್ಯಾದಾ ಪುರುಷೋತ್ತಮ ತಮ್ಮ ಗಂಡನಾಗಲಿ ಎಂದು ಹರಸುವಂತೆ ಬೇಡಿಕೊಳ್ಳುತ್ತಾರೆ. ಅಂತೆಯೇ ವಿವಾಹಿತ ಮಹಿಳೆಯರು ಜಾನಕಿಯನ್ನು ಆರಾಧಿಸಿ ತಮ್ಮ ಪತಿಯ ಆಯಸ್ಸು ಆರೋಗ್ಯಕ್ಕಾಗಿ ಪ್ರಾರ್ಥಿಸುವ ಪದ್ಧತಿ ಇದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.