ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

By Suvarna News  |  First Published Jul 1, 2020, 5:38 PM IST

ಸ್ಕಂದಪುರಾಣದ ಪ್ರಕಾರ ಜಗತ್ತಿನಲ್ಲಿ ಮನುಷ್ಯ ಜನ್ಮ ಮತ್ತು ವಿಷ್ಣು ಭಕ್ತಿ ದೊರಕುವುದು ಸುಲಭವಲ್ಲ. ಹಾಗಾಗಿ ಚಾತುರ್ಮಾಸದಲ್ಲಿ ವಿಷ್ಣುವಿನ ವ್ರತವನ್ನು ಮಾಡುವುದು ಶ್ರೇಷ್ಠ ಎನ್ನುತ್ತದೆ ಶಾಸ್ತ್ರ. ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಪುಣ್ಯಫಲ ಸಿಗುತ್ತದೆ. ಚಾತುರ್ಮಾಸದಲ್ಲಿ ಮಾಡಿದ ಪುಣ್ಯಕಾರ್ಯಕ್ಕೆ ಫಲ ದೊರಕುವುದು ಖಚಿತ. ಹಾಗಾಗಿ ಚಾತುರ್ಮಾಸದ ವಿಶೇಷತೆಯನ್ನು ತಿಳಿಯೋಣ. 


ದೇವಾನುದೇವತೆಗಳಿಗೆ ಒಂದು ದಿನವೆಂದರೆ ಮನುಷ್ಯನಿಗೆ ಅದು ಒಂದು ಸಂವತ್ಸರ. ಈ ವರ್ಷದಲ್ಲಿ ದೇವತೆಗಳಿಗೆ ಹಗಲು ಮತ್ತು ರಾತ್ರಿ ಎಂದು ಆರು ತಿಂಗಳು ವಿಂಗಡಿಸಲ್ಪಡುತ್ತದೆ. ಅದೇ ಉತ್ತರಾಯಣ ಹಾಗೂ ದಕ್ಷಿಣಾಯಣ. ಉತ್ತರಾಯಣವು ದೇವತೆಗಳಿಗೆ ಹಗಲಾದರೆ, ದಕ್ಷಿಣಾಯಣವು ದೇವತೆಗಳು ನಿದ್ರಿಸುವ ಕಾಲ ಅಂದರೆ ರಾತ್ರಿ.

ಸೂರ್ಯನು ಕರ್ಕರಾಶಿಯನ್ನು ಪ್ರವೇಶ ಮಾಡಿದಾಗ ದಕ್ಷಿಣಾಯಣ ಪ್ರಾರಂಭವಾಗುತ್ತದೆ. ಇದೇ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶಿಯಿಂದ ಚಾತುರ್ಮಾಸವು ಆರಂಭವಾಗುತ್ತದೆ. ಕಾರ್ತೀಕ ಶುಕ್ಲ ಏಕಾದಶೀ ಅಥವಾ ಹುಣ್ಣಿಮೆಯಂದು ಕೊನೆಗೊಳ್ಳುತ್ತದೆ. ಇಲ್ಲಿ ಈ ನಾಲ್ಕು ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತೀಕ ಮಾಸಗಳು ಬರುತ್ತವೆ. ಈ ನಾಲ್ಕು ತಿಂಗಳ ಕಾಲ ಆಚರಿಸುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯುತ್ತಾರೆ. 

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ!

ಚಾತುರ್ಮಾಸ ವ್ರತವನ್ನು ಎಲ್ಲರೂ ಆಚರಿಸಬಹುದೆಂದು ಶಾಸ್ತ್ರ ಹೇಳುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಸರ್ವಪಾಪ ನಾಶವಾಗುತ್ತದೆ ಎಂದು ಹೇಳುತ್ತಾರೆ. ಚಾತುರ್ಮಾಸ ವ್ರತಾಚರಣೆಯ ಬಗ್ಗೆ ಸ್ಕಂದಪುರಾಣವು ಹೀಗೆ ಹೇಳುತ್ತದೆ.

ಇದಂ ವ್ರತಂ ಮಹಾಪುಣ್ಯಂ ಸರ್ವಪಾಪಹರಂ ಶುಭಮ್/ ಸರ್ವಾಪರಾಧಶಮನಂ ಸರ್ವೋಪದ್ರವನಾಶನಮ್/ ಸರ್ವೈರವಶ್ಯಂ ಕರ್ತವ್ಯಂ ಚತುರಾಶ್ರಮವಾಸಿಭಿಃ// 

ಚಾತುರ್ಮಾಸ ವ್ರತವನ್ನು ಮಾಡಿದರೆ ಮಹಾಪುಣ್ಯವು  ಲಭಿಸುತ್ತದೆ. ಸಕಲ ಪಾಪಗಳನ್ನು ನಾಶ ಮಾಡುವ ಶಕ್ತಿ ಈ ವ್ರತಕ್ಕಿದೆ. ಪರಮಾತ್ಮನು ಎಲ್ಲ ತರಹದ ಅಪರಾಧವನ್ನು ಕ್ಷಮಿಸುವನು, ಇದರಿಂದ ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆ. ನಾಲ್ಕು ಅಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮದವರು ಈ ವ್ರತವನ್ನು ಆಚರಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಈ ವ್ರತವನ್ನು ಎಲ್ಲ ವರ್ಣದವರೂ ಆಚರಿಸಬಹುದಾಗಿಯೂ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಾತುರ್ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿದರೆ ಪುಣ್ಯಫಲ

- ಈ ನಾಲ್ಕು ಮಾಸಗಳಲ್ಲಿ ದೇವಸ್ಥಾನವನ್ನು ಗುಡಿಸುವುದು, ಸ್ವಚ್ಛಗೊಳಿಸುವುದು, ಗೋಮಯದಿಂದ ನೆಲವನ್ನು ಸಾರಿಸುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡರೆ ಉತ್ತಮ ಜನ್ಮಪ್ರಾಪ್ತಿಯಾಗುತ್ತದೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿತವಾಗಿದೆ. 



- ಚಾತುರ್ಮಾಸದಲ್ಲಿ ದೇವರಿಗೆ ಹಾಲು, ತುಪ್ಪ, ಮೊಸರು, ಜೇನುತುಪ್ಪ ಮತ್ತು ಸಕ್ಕರೆಯಿಂದ ಅಭಿಷೇಕ ಮಾಡಿದಲ್ಲಿ ವೈಭವಯುತವಾಗಿ ಜೀವನ ನಡೆಸುತ್ತಾರೆ. ಸ್ವರ್ಗದಲ್ಲಿ ಇಂದ್ರನಂತೆ ವೈಭವಯುತವಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

 - ಧೂಪ, ದೀಪ,ಪುಷ್ಪಗಳಿಂದ ದೇವರಿಗೆ ಅರ್ಚನೆ ಮತ್ತು ನೈವೇದ್ಯವನ್ನು ಮಾಡಿದವರು, ಅಕ್ಷಯ ಸುಖವನ್ನು ಅನುಭವಿಸುತ್ತಾರೆ ಎಂದು ಪದ್ಮ ಪುರಾಣವು ಹೇಳುತ್ತದೆ.

ಇದನ್ನು ಓದಿ: ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!

- ಅಶ್ವತ್ಥ ಮರಕ್ಕೆ ಪ್ರತಿದಿನ ಪ್ರದಕ್ಷಿಣೆ ಹಾಕುವುದು ಮತ್ತು ಜಲವನ್ನು ಅರ್ಪಿಸುವುದು, ದೇವಾಲಯಕ್ಕೆ ಘಂಟೆಯನ್ನು ದಾನವಾಗಿ ನೀಡುವುದು, ಬ್ರಾಹ್ಮಣರಿಗೆ ಗೌರವ ನೀಡುವುದು ಹಾಗೂ ಇತ್ಯಾದಿ ಅನೇಕ ವಸ್ತುಗಳನ್ನು ಸಜ್ಜನರಿಗೆ ದಾನ ನೀಡುವುದರಿಂದ ಜೀವನದಲ್ಲಿ ಎಂದೂ ಯಾವ ವಸ್ತುವಿಗೂ ಕೊರತೆ ಇರುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

- ವ್ರತವನ್ನು ಸಮಾಪ್ತಿಗೊಳಿಸುವ ದಿನದಂದು ಅನ್ನ, ವಸ್ತ್ರ ಮತ್ತು ಹಾಸಿಗೆಯನ್ನು ದಾನ ಮಾಡುವುದರಿಂದ ಅಕ್ಷಯ ಸುಖವನ್ನು ಹೊಂದುವುದಲ್ಲದೆ, ಸದಾ ಧನಸಂಪತ್ತನ್ನು ಹೊಂದಿರುತ್ತಾರೆ.

- ಚಾತುರ್ಮಾಸದಲ್ಲಿ ಹಣ್ಣುಗಳನ್ನು ದಾನ ಮಾಡುವುದರಿಂದ ಒಳಿತಾಗುತ್ತದೆ

- ನಿಯಮದಂತೆ ದಿನಕ್ಕೆ ಒಂದೇ ಬಾರಿ ಭೋಜನ ಮಾಡುವುದು, ಹಸಿದವರಿಗೆ ಅನ್ನ ನೀಡುವುದು, ನಿಯಮ ಬದ್ಧರಾಗಿರುವುದು, ಭೋಜನ ಮಾಡುವಾಗ ಮೌನದಿಂದಿರುವುದು, ನೆಲದ ಮೇಲೆ ಮಲಗುವುದು ಶ್ರೇಯಸ್ಕರವಾಗಿದೆ ಮತ್ತು ಜೀವನದಲ್ಲಿ ಕೀರ್ತಿಯನ್ನು ತಂದುಕೊಡುತ್ತದೆ.

ಇದನ್ನು ಓದಿ: ಮನೆ ಖರೀದಿಸುವಾಗ ಈ ಅಂಶ ಗಮನಿಸಿ, ವಾಸ್ತುದೋಷ ತೊಲಗಿಸಿ!

ಚಾತುರ್ಮಾಸದಲ್ಲಿ ಮಾಡಬೇಕಾದ ಕಾರ್ಯಗಳು
ಶಾಸ್ತ್ರದ ಪ್ರಕಾರ ಈ ಮಾಸದಲ್ಲಿ  ಹೆಚ್ಚೆಚ್ಚು ದೇವರ ಕಾರ್ಯಗಳನ್ನು ಮಾಡಬೇಕು. ಧಾರ್ಮಿಕ ಅನುಷ್ಠಾನ, ಶ್ರೀಮದ್ಭಾಗವತ ಜ್ಞಾನ ಯಜ್ಞ, ಶ್ರೀ ರಾಮಾಯಣ ಮತ್ತು ಭಗವದ್ಗೀತೆಯ ಕಥೆ ಮುಂತಾದ ಧಾರ್ಮಿಕ ಕಾರ್ಯಗಳು ಶ್ರಾವಣ ಮಾಸದಲ್ಲಿ ಮಾಡಿದರೆ ಉತ್ತಮ ಫಲ ದೊರೆಯುತ್ತದೆ.

Latest Videos

click me!