ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ!

By Suvarna NewsFirst Published Jun 30, 2020, 4:09 PM IST
Highlights

ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಬದಲಾವಣೆಯಿಂದಾಗಿ ವ್ಯಕ್ತಿಯ ಜೀವನದಲ್ಲಿ ಏರುಪೇರಾಗುತ್ತದೆ. ಗ್ರಹಗಳ ಸ್ಥಿತಿ ಬಲವಾಗಿದ್ದರೆ ಸಕಲ ಕಾರ್ಯಗಳಲ್ಲೂ ಯಶಸ್ಸು ಲಭಿಸುತ್ತದೆ. ಅದೇ ಗ್ರಹಗಳ ಸ್ಥಿತಿ ನೀಚವಾಗಿದ್ದರೆ ಅನೇಕ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಯಾವ್ಯಾವ ಸಮಸ್ಯೆಗಳು ಎದುರಾಗುತ್ತವೆ ಮತ್ತು ಅದರಿಂದ ಪಾರಾಗಲು ಅನುಸರಿಸಬೇಕಾದ ಪರಿಹಾರಗಳ ಬಗ್ಗೆ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿನ ಗ್ರಹಗಳ ಸ್ಥಾನ ಮತ್ತು ಸ್ಥಿತಿ ನೇರವಾಗಿ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜೀವನದ ಪ್ರತಿ ಹಂತದಲ್ಲಿ ಎದುರಿಸುವ ಕಷ್ಟ ಮತ್ತು ಸುಖಗಳಿಗೆ ಗ್ರಹಗತಿಗಳೇ ಕಾರಣವಾಗಿರುತ್ತದೆ. ಪ್ರತಿ ಗ್ರಹಗಳಿಗೂ ಅದರದ್ದೇ ಆದ ಗುಣ ಸ್ವಭಾವಗಳಿರುತ್ತದೆ. ಜಾತಕದಲ್ಲಿ ಯಾವ ಮನೆಯಲ್ಲಿ ಯಾವ ಗ್ರಹ ಸ್ಥಿತವಾಗಿದೆ ಮತ್ತು ಅದರ ಸ್ಥಿತಿಯ ಮೇಲೆ ಭವಿಷ್ಯದ ವಿಚಾರಗಳನ್ನು ಹೇಳಲಾಗುತ್ತದೆ. 

ಗ್ರಹದ ಸ್ಥಿತಿ ಉಚ್ಛವಾಗಿದ್ದರೆ ಅದರ ಪರಿಣಾಮ ಉತ್ತಮವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ. ಸಂಸಾರದಲ್ಲಿ ಸುಖ ಮತ್ತು ನೆಮ್ಮದಿ ನೆಲೆಸಿರುತ್ತದೆ. ಅದೇ ಗ್ರಹದ ಸ್ಥಿತಿ ನೀಚವಾಗಿದ್ದರೆ ಆಗುವ ಕೆಲಸಕ್ಕೆ ಹತ್ತಾರು ಅಡ್ಡಿ- ಆತಂಕಗಳು, ಒತ್ತಡದ ಜೀವನವನ್ನು ನಡೆಸಬೇಕಾಗುತ್ತದೆ. ಹಾಗಾಗಿ ಯಾವ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಯಾವ ರೀತಿಯ ತೊಂದರೆಯಾಗುತ್ತದೆ ಮತ್ತು ಆ ಗ್ರಹಗಳಿಂದಾಗುವ ತೊಂದರೆಗೆ ಪರಿಹಾರವೇನು ಎಂಬುದರ ಬಗ್ಗೆ ತಿಳಿಯೋಣ.



ಸೂರ್ಯ ಗ್ರಹ
ಜಾತಕದಲ್ಲಿ ಸೂರ್ಯ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಶಾರೀರಿಕ ರೋಗ ಬಾಧೆಯನ್ನು ಎದುರಿಸಬೇಕಾಗುತ್ತದೆ. ಸೂರ್ಯನ ಅಶುಭ ಪ್ರಭಾವದಿಂದ ಹೃದಯಕ್ಕೆ ಸಂಬಂಧಿಸಿದ ರೋಗ, ಕಣ್ಣಿನ ತೊಂದರೆ, ಧನ ನಾಶ ಮತ್ತು ಸುಳ್ಳು ಅಪವಾದಗಳಿಗೆ ತುತ್ತಾಗಬೇಕಾಗುತ್ತದೆ. 

ಪರಿಹಾರ –ಆದಿತ್ಯವಾರದಂದು ಸೂರ್ಯೋದಯದ ಸಮಯದಲ್ಲಿ ಜಲವನ್ನು ಅರ್ಪಿಸಬೇಕು. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಸೂರ್ಯನ ಅಶುಭ ಪ್ರಭಾವ ತಗ್ಗುತ್ತದೆ.

ಇದನ್ನು ಓದಿ: ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!

ಚಂದ್ರ ಗ್ರಹ
ಚಂದ್ರಮಾ ಮನಸೋ ಜಾತಃ ಎಂಬಂತೆ ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ಹಾಗಾಗಿ ಜಾತಕದಲ್ಲಿ ಚಂದ್ರನ ಸ್ಥಿತಿ ನೀಚವಾಗಿದ್ದರೆ ಮಾನಸಿಕ ಸಮಸ್ಯೆಗಳು ಎದುರಾಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿ ತೊಂದರೆಗಳು ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಪರಿಹಾರ – ಚಂದ್ರನ ಅಶುಭ ಪ್ರಭಾವವನ್ನು ಕಡಿಮೆ ಮಾಡಲು, ಹಾಲು, ಮೊಸರು, ಅಕ್ಕಿ, ಶ್ವೇತ ಪುಷ್ಪ ಮತ್ತು ಕರ್ಪೂರವನ್ನು ದಾನವಾಗಿ ಕೊಡಬೇಕು.



ಮಂಗಳ ಗ್ರಹ
ಕುಜ ಗ್ರಹದ ಅಶುಭ ಪ್ರಭಾವದಿಂದ ಹೃದಯ ರೋಗ, ಸಾಲಬಾಧೆ ಮತ್ತು ಆಸ್ತಿ, ಜಮೀನು ವಿಚಾರಕ್ಕೆ ವಿವಾದಗಳಾಗುತ್ತದೆ.

ಪರಿಹಾರ – ಮಂಗಳನ ಅಶುಭ ಪ್ರಭಾವವನ್ನು ತಗ್ಗಿಸಲು ಕೆಂಪು ಬಣ್ಣದ ರಕ್ಷಾಸೂತ್ರವನ್ನು ಧರಿಸಬೇಕು. ಸೂರ್ಯನ ಮುಂದೆ ಹನುಮಾನ್ ಚಾಲೀಸ್ ಪಠಿಸಬೇಕು.

ಇದನ್ನು ಓದಿ: ಮನೆ ಖರೀದಿಸುವಾಗ ಈ ಅಂಶ ಗಮನಿಸಿ, ವಾಸ್ತುದೋಷ ತೊಲಗಿಸಿ! 

ಬುಧ ಗ್ರಹ
ಜಾತಕದಲ್ಲಿ ಬುಧಗ್ರಹವು ನೀಚವಾಗಿದ್ದರೆ ಪರಿಣಾಮವಾಗಿ ಚರ್ಮ ಸಂಬಂಧಿ ಸಮಸ್ಯೆಗಳು ಮತ್ತು ಕುಟುಂಬ ಕಲಹಗಳಾಗುವ ಸಂಭವ ಎದುರಾಗುತ್ತದೆ.

ಪರಿಹಾರ- ಬುಧನ ಅಶುಭ ಪ್ರಭಾವವನ್ನು ಶಮನಗೊಳಿಸಲು ಹಸಿರು ಬಣ್ಣದ ವಸ್ತುಗಳನ್ನು ಅಂದರೆ ಹಸಿರು ವಸ್ತ್ರ, ಹಸಿರು ಹಣ್ಣು ಮತ್ತು ತರಕಾರಿಗಳನ್ನು ದಾನವಾಗಿ ನೀಡಬೇಕು.

ಗುರು ಗ್ರಹ
ಗುರುಗ್ರಹದ ಅಶುಭ ಪ್ರಭಾವದಿಂದ ಸ್ವಂತ ಮಗನಿಂದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಅಸಫಲತೆಯುಂಟಾಗುತ್ತದೆ. ವಿವಾಹ ಕಾರ್ಯಗಳಲ್ಲಿ ಅಡೆ-ತಡೆಗಳುಂಟಾಗುತ್ತದೆ.

ಪರಿಹಾರ- ಗುರು ಗ್ರಹದ ಅಶುಭ ಪ್ರಭಾವದಿಂದ ಪಾರಾಗಲು ಧಾರ್ಮಿಕ ಗ್ರಂಥಗಳನ್ನು ದಾನವಾಗಿ ನೀಡಬೇಕು. ಲಕ್ಷ್ಮೀನಾರಾಯಣ ದೇವರನ್ನು ಪೂಜಿಸುವವರಿಗೆ ಹಳದಿ ವಸ್ತ್ರವನ್ನು ನೀಡಬೇಕು.

ಶುಕ್ರ ಗ್ರಹ
ಶುಕ್ರ ಗ್ರಹವು ಸೌಂದರ್ಯ ಮತ್ತು ಸಂಪನ್ನತೆಯ ಪ್ರತೀಕವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವೈವಾಹಿಕ ಸುಖಕ್ಕೆ ಅಡ್ಡಿಯುಂಟಾಗುತ್ತದೆ. ದಾರಿದ್ರ್ಯವನ್ನು ಅನುಭವಿಸಬೇಕಾಗುತ್ತದೆ.

ಪರಿಹಾರ- ಶುಕ್ರಗ್ರಹದ ಅಶುಭ ಪ್ರಭಾವದಿಂದ ಪಾರಾಗಲು ದೇವಿಯ ದೇವಸ್ಥಾನಕ್ಕೆ ಹೋಗಿ ಕೆಂಪು ವಸ್ತ್ರವನ್ನು ನೀಡಬೇಕು. ಲಕ್ಷ್ಮೀದೇವಿಯನ್ನು ಆರಾಧಿಸಬೇಕು.

ಶನಿ ಗ್ರಹ
ಶನಿ ಗ್ರಹದ ಅಶುಭ ಪ್ರಭಾವದಿಂದ ದುರ್ಘಟನೆಗಳು, ಕಣ್ಣಿನ ರೋಗ ಮತ್ತು ತಂದೆಯೊಂದಿಗೆ ಮನಸ್ತಾಪಗಳುಂಟಾಗುವ ಸಾಧ್ಯತೆಗಳಿರುತ್ತವೆ.
ಪರಿಹಾರ- ಎಳ್ಳೆಣ್ಣೆ, ಕಪ್ಪು ಎಳ್ಳು, ಕಪ್ಪು ವಸ್ತ್ರಗಳನ್ನು ದಾನ ಮಾಡಿದರೆ ಒಳಿತಾಗುತ್ತದೆ.

ಇದನ್ನು ಓದಿ: ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ!

ರಾಹು-ಕೇತು ಗ್ರಹ
ರಾಹುವಿನ ಅಶುಭ ಪ್ರಭಾವದಿಂದ ತಲೆಗೆ ಪೆಟ್ಟಾಗಿ,ಮಾನಸಿಕ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಕೇತುವಿನ ಅಶುಭ ಪ್ರಭಾವದಿಂದ ವಿಶ್ವಾಸಘಾತವನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಪರಿಹಾರ- ರಾಹುವಿನ ಅಶುಭ ಪ್ರಭಾವವನ್ನು ತಗ್ಗಿಸಲು ನಿರ್ಗತಿಕರಿಗೆ ವಸ್ತ್ರದಾನವನ್ನು ಮಾಡಬೇಕು. ತೆಂಗಿನಕಾಯಿ, ಉದ್ದಿನಬೇಳೆಗಳನ್ನು  ದಾನಮಾಡಿದರೆ ಕೇತು ಗ್ರಹದ ಅಶುಭ ಪ್ರಭಾವದಿಂದ ಪಾರಾಗಬಹುದು.

click me!