Gautam Buddha Story: ಕರ್ಮ ಎಂದರೇನು? ರಾಜನ ಸಾವನ್ನು ಬಯಸಿದ ವ್ಯಾಪಾರಿಯ ಕತೆ!

By Suvarna NewsFirst Published Apr 19, 2023, 5:54 PM IST
Highlights

ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳಲ್ಲಿ, ಯಾವಾಗಲೂ ವ್ಯಕ್ತಿಯ ಕರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ಮ ಎಂದು ಯಾವುದನ್ನು ಕರೆಯುತ್ತಾರೆ ಮತ್ತು ಕರ್ಮ ಎಂದರೇನು ಎಂದು ನಿಮಗೆ ತಿಳಿದಿದೆಯೇ? ಬುದ್ಧನ ಈ ಕತೆ ಅದನ್ನು ಸರಿಯಾಗಿ ಅರ್ಥ ಮಾಡಿಸುತ್ತದೆ. 

ಗೀತೆಯಲ್ಲಿ ನಿತ್ಯ ಕರ್ಮ, ನೈಮಿತ ಕರ್ಮ, ಕಾಮ್ಯ ಕರ್ಮ, ನಿಷ್ಕಾಮ್ಯ ಕರ್ಮ, ಸಂಚಿತ ಕರ್ಮ, ನಿಷಿದ್ಧ ಕರ್ಮ ಹೀಗೆ ಹಲವು ವಿಧದ ಕರ್ಮಗಳನ್ನು ಹೇಳಲಾಗಿದೆ. ಆದರೆ ಕರ್ಮವು ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆಯೇ ಮತ್ತು ಕರ್ಮ ಎಂದರೆ ಯಾವುದು ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆಯಾಗಿದೆ.

ಒಮ್ಮೆ ಗೌತಮ ಬುದ್ಧನ ಶಿಷ್ಯ ಕೂಡ ಅದೇ ಪ್ರಶ್ನೆಯನ್ನು ಕೇಳಿದನು, ಕರ್ಮ ಎಂದರೇನು ಎಂದು. ಆಗ ಬುದ್ಧನು ಕರ್ಮದ ಬಗ್ಗೆ ಹೇಳುತ್ತಾ ಶಿಷ್ಯನಿಗೆ ಈ ಕಥೆಯನ್ನು ಹೇಳಿದನು.

ಕರ್ಮಕ್ಕೆ ಸಂಬಂಧಿಸಿದ ಗೌತಮ ಬುದ್ಧನ ಕಥೆ
ಒಬ್ಬ ರಾಜನು ತನ್ನ ಮಂತ್ರಿಯೊಂದಿಗೆ ಕುದುರೆಯ ಮೇಲೆ ತನ್ನ ಸಾಮ್ರಾಜ್ಯದ ಪ್ರವಾಸಕ್ಕೆ ಹೋಗುತ್ತಾನೆ. ರಾಜ್ಯ ಪ್ರವಾಸದ ವೇಳೆ ರಾಜನ ಕಣ್ಣು ಅಂಗಡಿಯವನ ಮೇಲೆ ಬೀಳುತ್ತದೆ. ಅಂಗಡಿಯ ಬಳಿ ನಿಂತು ಅಂಗಡಿಯವನನ್ನು ನೋಡಿ ನಾಳೆಯೇ ಈ ಅಂಗಡಿಯವನಿಗೆ ಮರಣದಂಡನೆ ವಿಧಿಸಬೇಕೆಂದು ನನಗೇಕೆ ಅನ್ನಿಸುತ್ತದೆ ಎಂದು ಮಂತ್ರಿಗೆ ಕೇಳುತ್ತಾನೆ. 

22ಕ್ಕೋ, 23ಕ್ಕೋ? ಭಾರತದಲ್ಲಿ ಈದ್-ಉಲ್-ಫಿತರ್ ಯಾವಾಗ?

ಅವನು ಹೀಗೆ ಹೇಳಿದ ತಕ್ಷಣ ರಾಜನು ಒಬ್ಬನೇ ಹೊರಟುಹೋದನು ಮತ್ತು ಮಂತ್ರಿಯು ಇದಕ್ಕೆ ಕಾರಣವನ್ನು ಕೇಳಲು ಸಹ ಸಾಧ್ಯವಾಗಲಿಲ್ಲ. ಮರುದಿನ ಮಂತ್ರಿ ತನ್ನ ವೇಷ ಬದಲಿಸಿ ಸಾಮಾನ್ಯ ಮನುಷ್ಯನಂತೆ ಅಂಗಡಿಯವನ ಬಳಿ ಹೋಗುತ್ತಾನೆ. ಆ ಅಂಗಡಿಯವನು ಶ್ರೀಗಂಧ ಮಾರುತ್ತಿದ್ದ.

ಮಂತ್ರಿಯು ಅಲ್ಲೊಂದು ಇಲ್ಲೊಂದು ಅಂಗಡಿಯವರೊಂದಿಗೆ ಮಾತನಾಡಿ ಅವರ ಕೆಲಸ, ಸ್ಥಿತಿಗತಿ ಬಗ್ಗೆ ವಿಚಾರಿಸುತ್ತಾನೆ. ಹಾಗೆಯೇ ಈ ಅಂಗಡಿಗೂ ಬಂದು ವ್ಯಾಪಾರ ಹೇಗಿದೆ ಎಂದು ಕೇಳುತ್ತಾನೆ. ಅಂಗಡಿಯವನು ಹೇಳುತ್ತಾನೆ, 'ಅಣ್ಣಾ ಏನು ಹೇಳಲಿ, ನನ್ನ ಸ್ಥಿತಿ ತುಂಬಾ ಕೆಟ್ಟದಾಗಿದೆ. ನನ್ನ ಅಂಗಡಿಗೆ ಜನ ಬರುತ್ತಾರೆ. ಅವರು ಶ್ರೀಗಂಧದ ಪರಿಮಳವನ್ನು ತುಂಬಾ ಹೊಗಳುತ್ತಾರೆ. ಆದರೆ ಯಾರೂ ಅದನ್ನು ಖರೀದಿಸುವುದಿಲ್ಲ' ಎನ್ನುತ್ತಾನೆ.

ಮುಂದುವರಿದು, 'ನಮ್ಮ ರಾಜ ಯಾವಾಗ ಸಾಯುತ್ತಾನೋ ಮತ್ತು ಅವನ ಅಂತಿಮ ಸಂಸ್ಕಾರಕ್ಕಾಗಿ ನನ್ನ ಅಂಗಡಿಯಿಂದ ಜನ ಯಾವಾಗ ಸಾಕಷ್ಟು ಶ್ರೀಗಂಧವನ್ನು ಕೊಳ್ಳುತ್ತಾರೋ ಎಂದು ನಾನು ಕಾಯುತ್ತಿದ್ದೇನೆ,' ಎನ್ನುತ್ತಾನೆ. ಅಂಗಡಿಯವನಿಂದ ಇದನ್ನು ಕೇಳಿದ ಮಂತ್ರಿಗೆ ಎಲ್ಲವೂ ಅರ್ಥವಾಗತೊಡಗುತ್ತದೆ. 
ಈ ಅಂಗಡಿಯವನ ಬಗ್ಗೆ ರಾಜನಿಗೆ ಏಕೆ ನಕಾರಾತ್ಮಕ ಆಲೋಚನೆಗಳಿವೆ ಎಂದು ಅವನಿಗೆ ಅರ್ಥವಾಗುತ್ತದೆ.

500 ವರ್ಷಗಳ ಬಳಿಕ ಅಪರೂಪದ Kedar Yoga ಸೃಷ್ಟಿ; 4 ರಾಶಿಗಳ ಮೇಲೆ ಅದೃಷ್ಟದ ವೃಷ್ಟಿ

ಅಂಗಡಿಯವನ ಮಾತು ಕೇಳಿ ಮಂತ್ರಿಯು ಶ್ರೀಗಂಧವನ್ನು ಖರೀದಿಸುತ್ತಾನೆ. ನಂತರ ರಾಜನಿದ್ದಲ್ಲಿಗೆ ಹೋಗಿ, ನೀವು ಮರಣದಂಡನೆಯನ್ನು ನೀಡಲು ಯೋಚಿಸುತ್ತಿದ್ದ ಅಂಗಡಿಯವನು, 'ನಿಮಗಾಗಿ ಶ್ರೀಗಂಧವನ್ನು ಉಡುಗೊರೆಯಾಗಿ ಕಳುಹಿಸಿದ್ದಾನೆ' ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಜನಿಗೆ ಸಂತೋಷವಾಗುತ್ತದೆ ಮತ್ತು ಅನಗತ್ಯವಾಗಿ ಆ ಬಡ ಅಂಗಡಿಯವನ ಬಗ್ಗೆ ಕೆಟ್ಟದಾಗಿ ಯೋಚಿಸಿದೆನಲ್ಲ ಎಂದುಕೊಳ್ಳುತ್ತಾವೆ. ರಾಜನು ಮಂತ್ರಿಯಿಂದ ಶ್ರೀಗಂಧವನ್ನು ತೆಗೆದುಕೊಂಡು ಅದರ ಪರಿಮಳವನ್ನು ಸವಿದನು.

ಕರ್ಮ ಎಂದರೇನು?
ರಾಜನು ಅಂಗಡಿಯವನಿಗೆ ಕೆಲವು ಚಿನ್ನದ ನಾಣ್ಯಗಳನ್ನು ಕಳುಹಿಸುತ್ತಾನೆ. ಮರುದಿನ ಮಂತ್ರಿಯು ಅಂಗಡಿಯವನ ಬಳಿಗೆ ಹೋಗಿ ರಾಜನು ಈ ನಾಣ್ಯಗಳನ್ನು ನಿನಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ ಎಂದು ಹೇಳುತ್ತಾನೆ. ಅಂಗಡಿಯವನು ಚಿನ್ನದ ನಾಣ್ಯಗಳನ್ನು ಪಡೆದ ನಂತರ ಸಂತೋಷಪಡುತ್ತಾನೆ ಮತ್ತು ರಾಜನ ಸಾವಿನ ಬಗ್ಗೆ ನಾನು ಎಷ್ಟು ತಪ್ಪಾಗಿ ಯೋಚಿಸಿದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಗೌತಮ ಬುದ್ಧನು ಕಥೆಯನ್ನು ಮುಗಿಸಿ ಶಿಷ್ಯನಿಗೆ ಹೇಳುತ್ತಾನೆ. 'ನಮ್ಮ ಕ್ರಿಯೆಗಳು, ಭಾವನೆಗಳು ಮತ್ತು ಆಲೋಚನೆಗಳೇ ನಮ್ಮ ಕರ್ಮ'

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!