ನಮ್ಮೊಟ್ಟಿಗಿದ್ದು ಗತರಾದವರೆಲ್ಲರಿಗೂ ಪಿಂಡ ಪ್ರಧಾನ ಮಾಡೋ ಮಹಾಲಯ

By Suvarna NewsFirst Published Sep 12, 2020, 6:50 PM IST
Highlights

ಪಿತೃ ಪಕ್ಷವೆಂದು ಕರೆಯುವ ಮಹಾಲಯ ಅಮಾವಾಸ್ಯೆಗೆ ತನ್ನದೇಯಾದ ವೈಶಿಷ್ಟ್ಯವಿದೆ. ನಮ್ಮ ಪೂರ್ವಿಕರನ್ನು ನೆನೆದು, ಅವರಿಗೆ ಕೃತಜ್ಞತೆ ಸಲ್ಲಿಸುವುದು ಈ ಸಮಯದಲ್ಲಿ ಮಾಡುವ ಮುಖ್ಯ ಕಾರ್ಯ. ಆ ಮೂಲಕ  ನಮ್ಮ ಪೂರ್ವಿಕರ ಋಣ ತೀರಿಸಲಾಗುತ್ತದೆ. 

ಸಾಮಾನ್ಯವಾಗಿ ಪ್ರತಿ ಮಾಸದಲ್ಲೂ ಕೃಷ್ಣ ಪಕ್ಷದಲ್ಲಿ ಸಂಭವಿಸುವ ಅಮಾವಾಸ್ಯೆ ಕೇಳಿದ್ದೀವಿ. ಮಹಾಲಯ ಅಮಾವಾಸ್ಯೆ ಅಂದ್ರೆ ಏನು..? ಏನಿದರ ವಿಶೇಷತೆ..? ಸೂಕ್ಷ್ಮವಾಗಿ ಗಮನಿಸಿದಾಗ ಈ ಅಮಾವಾಸ್ಯೆಯ ವಿಶೇಷತೆಗಳು ಹಲವು.

"

ಮಹಾಲಯ ಎಂಬ ಪದವೇ ವಿಶೇಷ ಅರ್ಥವನ್ನು ಹೊಂದಿದೆ.  ಮಹ: ಎಂದರೆ ಕಲ್ಯಾಣಮಯ, ಮಂಗಳ ಅಂತ ಅರ್ಥ. ದೊಡ್ಡದು ಎಂಬ ಅರ್ಥವೂ ಇದೆ. ಇನ್ನು ಆಲಯ ಎಂದರೆ ಆಶ್ರಯ, ಸ್ಥಳ ಎಂದರ್ಥ. ಹೀಗಾಗಿ ಮಂಗಳದ ಆಲಯವೇ ಮಹಾಲಯ. ಇನ್ನು ಅಮಾವಾಸ್ಯೆ.  ಇದರ ಅರ್ಥ-ವೈಶಿಷ್ಠ್ಯಗಳನ್ನು ಗಮನಿಸುವುದಾದರೆ :  ಉತ್ತರಾಯಣ ದೇವತೆಗಳ ಕಾಲ ದಕ್ಷಿಣಾಯನ ಪಿತೃಗಳ ಕಾಲ ಎನ್ನುತ್ತಾರೆ. ಹಾಗೆಯೇ ಶುಕ್ಲಪಕ್ಷವನ್ನು ದೇವತೆಗಳ ಕಾಲವೆಂದರೆ ಕೃಷ್ಣಪಕ್ಷವನ್ನು ಪಿತೃಗಳ ಕಾಲ ಎನ್ನುತ್ತಾರೆ. ಈ ಶುಕ್ಲ ಹಾಗೂ ಕೃಷ್ಣ ಪಕ್ಷಗಳಿಗೆ ಎರಡು ಉಚ್ಛ್ರಾಯ ಸ್ಥಾನಗಳಿವೆ. ಶುಕ್ಲ ಪಕ್ಷದ  ಉಚ್ಛ್ರಾಯ ಸ್ಥಾನ ಪೌರ್ಣಮಿಯಾದರೆ ಕೃಷ್ಣ ಪಕ್ಷದ ಉಚ್ಛ್ರಾಯ ಸ್ಥಾನ ಅಮಾವಾಸ್ಯೆ.

ಪಿತೃ ಪಕ್ಷದಲ್ಲಿ ಶ್ರಾದ್ಧಾ ಮಾಡುವುದೇಕೆ?

ಆಕಾಶದಲ್ಲಿ ಸೂರ್ಯ- ಚಂದ್ರರ ಸಂಗಮವಾಗುವುದನ್ನೇ ಅಮಾವಾಸ್ಯೆ ಎನ್ನುತ್ತಾರೆ. ಖಗೋಳದಲ್ಲಿ ನಡೆಯುವ ವೈಜ್ಞಾನಿಕ ವಿಸ್ಮಯವನ್ನು ಜ್ಯೋತಿಷ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಕುಂಡಲಿಯಲ್ಲಿ ರವಿಗ್ರಹ ಹಾಗೂ ಚಂದ್ರ ಗ್ರಹ ಒಟ್ಟಿಗೆ ಒಂದೇ ಮನೆಯಲ್ಲಿದ್ದಾಗ ಅದನ್ನು ಅಮಾವಾಸ್ಯೆ ಅಂತಾರೆ. ಅಲ್ಲಿ ಗಮನಿಸಬೇಕಾದ ಅಂಶವೆಂದರೆ ಸೂರ್ಯನನ್ನು ಪಿತೃ ಕಾರಕನೆಂದೂ ಚಂದ್ರನನ್ನು ಮಾತೃಕಾರಕನೆಂದು ಗುರ್ತಿಸುವುದುಂಟು. ಆ ಎರಡೂ ಕಾರಕ ಗ್ರಹಗಳು ಒಂದೇ ಕಡೆ ಸೇರಿದಾಗ ಅಮಾವಾಸ್ಯೆ ಎಂದು ಗುರ್ತಿಸಿ ಅವರಿಗೆ ಕೃತಜ್ಞತೆ ತಿಳಿಸುವುದಾಗುತ್ತದೆ.


ಪೂರ್ವಿಕರ ಋಣ ತೀರಿಸುವ ಕ್ರಮ:

ಇನ್ನು ಈ ಮಹಾಲಯ ಅಮಾವಾಸ್ಯೆಯನ್ನೇ ಪಿತೃ ಪಕ್ಷ ಎಂದು ಕರೆಯುತ್ತಾರೆ. ಅದರ  ವಿಶೇಷತೆಯನ್ನೇ ಗಮನಿಸುವುದಾದರೆ ಆಷಾಢ ಪೌರ್ಣಮಿಯಿಂದ ಐದನೇ ಪಕ್ಷಯಾವುದಿದೆ ಅದನ್ನೇ ಪಿತೃಪಕ್ಷ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಸಮಯದಲ್ಲಿ ಮೃತರಾದವರ ಸ್ಮರಣೆ ಮಾಡುವ ಪದ್ದತಿ ಇದೆ. ಕೃತಜ್ಞತೆ ಸಲ್ಲಿಸುವುದು ಮನುಷ್ಯನ ಮಹೋನ್ನತ ಗುಣ. ಅದನ್ನು ಮನುಷ್ಯ ಮರೆಯಬಾರದು. ನಮ್ಮ ಪೂರ್ವೀಕರನ್ನು ನೆನೆದು ಅವರಿಗೆ ಕೃತಜ್ಞತೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದೊಂದು ಋಣ ತೀರಿಸುವ ಕ್ರಮ. ಹುಟ್ಟಿದ ಮನುಷ್ಯನಿಗೆ ಮೂರು ಋಣಗಳು ಪ್ರಧಾನವಾಗಿರುತ್ತವೆ ಎಂದು ಹೇಳುತ್ತದೆ ಶಾಸ್ತ್ರ. 'ತ್ರಿಭಿ: ಋಣೈ:' ಅಂತ. ಋಣಗಳು ಮೂರು. ಯಾವುವು ಅಂದರೆ ದೇವ ಋಣ, ಋಷಿ ಋಣ, ಪಿತೃ ಋಣ. ದೇವತೆಗಳ ಋಣವನ್ನು ನಾವು ಪೂಜೆ, ಯಜ್ಞ-ಯಾಗಾದಿಗಳನ್ನು ಮಾಡುವುದರಿಂದ ತೀರಿಸಿಕೊಂಡರೆ, ಋಷಿಋಣವನ್ನು ಅಧ್ಯಯನ, ಪ್ರವಚನಗಳಿಂದ ತೀರಿಸಬೇಕು. ಇನ್ನು ಪ್ರಧಾನವಾದದ್ದು ಈ ಪಿತೃ ಋಣ. ಇದನ್ನು ಶ್ರಾದ್ಧದ ಮೂಲಕ ತೀರಿಸಬೇಕು. ತಿಲ ತರ್ಪಣ, ಜಲ ತರ್ಪಣ, ವಾಯಸ ಬಲಿ, ಗೋಗ್ರಾಸ, ಪಿಂಡ ಪ್ರದಾನ ಹೀಗೆ ಹಲವು ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವುದಿದೆ.

"

ಪಿತೃಪಕ್ಷದಲ್ಲಿ ಪೂರ್ವಜರನ್ನು ತೃಪ್ತಿ ಪಡಿಸುವುದು ಹೇಗೆ?

ನಾವು ದೇವತೆಗಳಿಗೆ ಹೇಗೆ ಪೂಜೆ ಸಲ್ಲಿಸುತ್ತೇವೋ ಹಾಗೆಯೇ ಇಲ್ಲೂ ಪಿತೃಗಳ ಪೂಜೆ ಮಾಡುವ ಪದ್ದತಿ ಇದೆ. ಆ ಮೂಲಕ ಅವರಿಗೆ ತೃಪ್ತಿಪಡಿಸುವ ಮಾರ್ಗಗಳಿದ್ದಾವೆ.  ಹೋಮದಿಂದ ಸಮರ್ಪಿಸಿದ ಶ್ರಾದ್ಧ ದಿವ್ಯ ಲೋಕದಲ್ಲಿದ್ದ ಪಿತೃಗಳಿಗೆ ಸಂದಾಯವಾಗುತ್ತದೆ. ನಿಮಂತ್ರಣ ಮಾಡಿದವರಿಗೆ ಶ್ರದ್ಧ ಭೋಜನ ಮಾಡಿಸಿದರೆ ಅದು ಮೃತರಾದವರು ಜೀವರಾಶಿಗಳಲ್ಲಿ ಸೇರಿದ್ದರೆ ಅವರಿಗೆ ಸಂದಾಯವಾಗುತ್ತದೆ. ಅಕಸ್ಮಾತ್ ಅವರು ಕ್ರಿಮಿ ಕೀಟಗಳಾಗಿದ್ದಲ್ಲಿ ಶ್ರಾದ್ಧದಲ್ಲಿ ಚೆಲ್ಲಾಡಿದ ಅನ್ನ , ಅದನ್ನೇ ವಿಕಿರಾನ್ನ ಅಂತಾರೆ ಅದು ಆ ರೂಪದಲ್ಲಿದ್ದವರಿಗೆ ಸಂದಾಯವಾಗುತ್ತದೆ. ಜಲದಲ್ಲಿ ವಿಸರ್ಜನೆ ಮಾಡಿದಾಗ ಅಕಸ್ಮಾತ್ ಮೃತರಾದವರು ಜಲಚರದಲ್ಲಿ ಸೇರಿದ್ದರೆ ಆ ಮೂಲಕ ಅವರಿಗೆ ಸಂದಾಯವಾಗುತ್ತದೆ. ಇನ್ನು ಪಕ್ಷಿ ಸಂಕುಲದಲ್ಲಿ ಸೇರಿದ್ದರೆ ಅವರಿಗೆ ಆಹಾರ ಸಂದಾಯವಾಗಲಿ ಎಂಬ ಕಾರಣಕ್ಕೆ ಕಾಗೆಗೆ ಸಮರ್ಪಣೆ ಮಾಡುವ ಪದ್ದತಿ ಇದೆ. ಕಾಗೆಗೂ ಈ ಪಿಂಡ ಸಲ್ಲಿಸುವುದಕ್ಕೂ ಒಂದು ಹಿನ್ನೆಲೆ ಇದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಹಾಗೆ ಮರುತ ಎಂಬ ಮಹಾರಾಜ ದೊಡ್ದ ಯಾಗವನ್ನು ಹಮ್ಮಿಕೊಂಡಿದ್ದ ಆ ಸಂದರ್ಭದಲ್ಲಿ ಎಲ್ಲ ದೇವತೆಗಳೂ ಹವಿಸ್ಸುನ್ನು ಸ್ವೀಕರಿಸಲಿಕ್ಕೆ ದೇವಲೋಕಕ್ಕೆ ಹೋಗಿದ್ದರು. ಆ ಸಂದರ್ಭದಲ್ಲೇ ಮಹಾ ರಾಕ್ಷಸ ರಾವಣನೂ ಅಲ್ಲಿಗೆ ಬಂದ. ಅವನು ಬಂದದ್ದನ್ನು ಕಂಡು ದೇವತೆಗಳೆಲ್ಲ ಪಶು-ಪಕ್ಷರೂಪದಲ್ಲಿ ಬದಲಾಗಿಹೋದರು ಹಾಗೆ ತನ್ನ ರೂಪ ಬದಲಿಸಿದ್ದರಲ್ಲಿ ಯಮಧರ್ಮನೂ ಒಬ್ಬ. ಯಮ ಧರ್ಮ ಕಾಗೆಯ ರೂಪ ತಾಳಿಬಿಟ್ಟ. ಯಮ ಪಿತೃಲೋಕದ ಅಧಿಪತಿ. ಹೀಗಾಗಿ ಕಾಗೆಗೆ ಅನ್ನ ಹಾಕಿದರೆ ಅದು ಪಿತೃಗಳಿಗೆ ಸಂದಾಯವಾಗತ್ತೆ ಎಂಬ ಕಥೆ ಇದೆ. ಹೀಗೆ ಯಾವ ರೂಪದಲ್ಲಾದರೂ ಸರಿ ಅವರಿಗೆ ಆಹಾರ ಸಂದಾಯವಾಗಲಿ ಎಂಬ ಉದಾರ ಅರ್ಥದಲ್ಲಿ ಈ ಶ್ರಾದ್ಧ ಕರ್ಮ ಬೆಳೆದುಬಂದಿದೆ. ಮುಖ್ಯವಾಗಿ ಇಲ್ಲಿ ಕರ್ತೃವಿಗೆ ಬೇಕಾದದ್ದು ಶ್ರದ್ಧೆ. ಬ್ರಹ್ಮ ಪುರಾಣ ವಿವರಿಸುವ ಹಾಗೆ
'ದೇಶೇ ಕಾಲೇ ಚ ಪಾತ್ರೇ ಚ ಶ್ರದ್ಧಯಾ ವಿಧಿನಾ ಚ ಯತ್
ಪಿತೃನುದ್ದಿಶ್ಯ ವಿಪ್ರೇಭ್ಯೋ ದತ್ತಂ ಶ್ರಾದ್ಧಮುದಾಹೃತಮ್ ' ಅಂತಾರೆ. ತನ್ನ ಪಿತೃಗಳನ್ನ ಉದ್ದೇಶಿಸಿ ಯೋಗ್ಯವಾದ ದೇಶ-ಕಾಲ-ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ವಿಪ್ರರಿಗೆ ಶ್ರದ್ಧೆಯಿಂದ ಶಾಸ್ತ್ರವಿಧಿಗೆ ಅನುಸಾರವಾಗಿ ಏನನ್ನು ದಾನ ಕೊಡುತ್ತಾನೋ ಅದೇ ಶ್ರಾದ್ಧ. ಹೀಗೆ ಮಾಡಿದಲ್ಲಿ ಅವರ ಋಣ ತೀರಿಸಿದಂತಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

ಸಾಮಾನ್ಯವಾಗಿ ವರ್ಷಕ್ಕೊಂದು ಬಾರಿ ಶ್ರಾದ್ಧ ಮಾಡುವ ಕ್ರಮವಿದೆ. ಅದನ್ನೇ ಪಾರ್ವಣ ಶ್ರಾದ್ಧ ಎನ್ನುತ್ತಾರೆ. ಅದರ ಜೊತೆಗೆ ನಿತ್ಯ ಶ್ರಾದ್ಧ, ನೈಮಿತ್ತಿಕ ಶ್ರಾದ್ಧ, ಕಾಮ್ಯ ಶ್ರಾದ್ಧ ಹೀಗೆ ಇದ್ದಾವೆ. ಈ ವರ್ಷಕ್ಕೊಂದು ಬಾರಿ ಮಾಡುವ ಶ್ರಾದ್ಧ ಕೇವಲ ಮೃತರಾದವರಿಗೆ ಮಾತ್ರ ಸಲ್ಲುತ್ತದೆ. ಈ ಮಹಾಲಯದಲ್ಲಿ ಒಂದು ವಿಶೇಷತೆ ಇದೆ. ಇಲ್ಲಿ ಕೇವಲ ಒಬ್ಬರಿಗಲ್ಲ ಬಂಧುಗಳು, ಜ್ಞಾತಿಗಳು, ಮಿತ್ರರು, ಭೃತ್ಯರು(ಸೇವಕರು) ಇಷ್ಟರು ಹೀಗೆ ಯಾವ ಆಪ್ತರು ನಮ್ಮೊಟ್ಟಿಗಿದ್ದು ಗತರಾಗಿದ್ದಾರೋ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮಹೋನ್ನತ ದಿನವೇ ಈ ಮಹಾಲಯ ಅಮಾವಾಸ್ಯೆ.

- ಶ್ರೀಕಂಠ ಶಾಸ್ತ್ರಿ - ಜ್ಯೋತಿಷಿಗಳು, ಸುವರ್ಣ ನ್ಯೂಸ್

 

click me!