Uttara Kannada; ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಸಾತೇರಿದೇವಿ ಜಾತ್ರಾ ಮಹೋತ್ಸವ

By Suvarna News  |  First Published Sep 5, 2022, 8:55 PM IST

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿರುವ ಸಾತೇರಿದೇವಿ ತನ್ನ ಜಾತ್ರಾ ಮಹೋತ್ಸವ ಸಂಭ್ರಮ. ವರ್ಷದಲ್ಲಿ ಏಳು ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 


ವರದಿ: ಭರತ್‌ ರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ಕಾರವಾರ (ಸೆ.5): ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯವೂ ದೇವರಿಗೆ ಪೂಜೆ ನಡೆಯುತ್ತದೆ ಹಾಗೂ ಭಕ್ತರಿಗೆ ದಿನಾಲೂ ದೇವರ ದರ್ಶನಕ್ಕೆ ಅವಕಾಶವಿದೆ.‌ ಆದ್ರೆ, ಇಲ್ಲಿನ ದೇವಾಲಯವೊಂದರಲ್ಲಿ ಮಾತ್ರ ವರ್ಷದಲ್ಲಿ ಭಕ್ತರಿಗೆ ದೇವರ ದರ್ಶನ ಸಿಗುವುದು ಕೇವಲ ಏಳು ದಿನ. ಈ ದೇವಿಗೆ ಹರಕೆ ಹೊತ್ತುಕೊಂಡರೆ ಒಂದೇ ವರ್ಷದಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಕೂಡಾ ಜನರಲ್ಲಿದ್ದು, ವಿವಿಧೆಡೆಗಳಿಂದ ಭಕ್ತ ಸಾಗರವೇ ಈ ದೇವಾಲಯಕ್ಕೆ ಹರಿದು ಬರುತ್ತದೆ. ರಾಜ್ಯದ ಯಾವುದೇ ದೇವಸ್ಥಾನಗಳಿಗೆ ಹೋದ್ರೂ ಸಾಮಾನ್ಯವಾಗಿ ಪ್ರತಿನಿತ್ಯ ತ್ರಿಕಾಲ ಪೂಜೆ, ವಿವಿಧ ಸೇವೆ, ಭಕ್ತರಿಗೆ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ಮಾತ್ರ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ.  ಸಾತೇರಿದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನವನ್ನು ನೀಡುವ ಪ್ರತೀತಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಕಳೆದೆರಡು ದಿನಗಳಿಂದ ದೇವಿಯ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

Tap to resize

Latest Videos

ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆಗಳನ್ನು ಅರ್ಪಿಸಿ ದರ್ಶನ ಪಡೆದುಕೊಂಡರು. ಇನ್ನು ಜಾತ್ರಾ ಮಹೋತ್ಸವದ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಮಾತ್ರ ದೇವಿ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ. ಬಳಿದ ಉಳಿದ ಐದು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿಯೇ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ. ಇಂದು ಸಾರ್ವಜನಿಕ ದರ್ಶನದ ಮೊದಲ ದಿನವಾಗಿದ್ದು, ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದುಕೊಂಡಿದ್ದಾರೆ.


 
ಅಂದಹಾಗೆ, ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದರ್ಶನದ ಅವಕಾಶವಿರುವ ಈ ಸಾತೇರಿ ದೇವಿಗೆ ಪೌರಾಣಿಕ ಇತಿಹಾಸವೇ ಇದೆ. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನ ನಿವಾರಿಸುತ್ತಿದ್ದಳಂತೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. 

ಗಣಪತಿ ಮೂರ್ತಿ ಇಟ್ಟು ಭಾವೈಕ್ಯತೆ ಸಂದೇಶ ಸಾರಿದ ಅಬ್ದುಲ್ ನಬಿ ಕುಟುಂಬ!

ಅದರಂತೆ ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವಿಯ ಪೋಟೋ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲೀ ದೇವಸ್ಥಾನದಲ್ಲಿ ಅವಕಾಶವಿರುವುದಿಲ್ಲ. ಹಾಗೇನಾದರೂ ಮಾಡಿದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಅನ್ನೋ ನಂಬಿಕೆ ಭಕ್ತರದ್ದು. ಹೀಗಾಗಿ ದೇವರನ್ನು ನೋಡಬೇಕಾದರೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ವಿವಿಧೆಡೆಯಿಂದ ಬಂದ ಭಕ್ತರು ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಾರೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿಲ್ಲವಾಗಿದ್ದು, ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

Evening Puja Rules: ನೀವು ಸಂಜೆ ಪೂಜೆ ಮಾಡುವವರಾದರೆ, ಈ ನಿಯಮ ತಪ್ಪಬೇಡಿ!

ಒಟ್ಟಿನಲ್ಲಿ ಈ ಬಾರಿ ಕೂಡಾ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ದೇವಿಯ ದರ್ಶನವನ್ನು ಪಡೆಯುವುದಕ್ಕೆ ಇನ್ನೂ ನಾಲ್ಕು ದಿನಗಳ ಕಾಲಾವಕಾಶವಿದೆ. ಸಾರ್ವಜನಿಕರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ. 

click me!