ಮನಸ್ಸನ್ನು ನಿಗ್ರಹಿಸುವ ಚಂದ್ರನ ಹುಟ್ಟು ಹಬ್ಬವೇ ಕಾರ್ತಿಕ ಪೌರ್ಣಮಿ!

By Web DeskFirst Published Nov 11, 2019, 3:13 PM IST
Highlights

ಚಂದ್ರನೆಂದರೆ ಮನುಷ್ಯನಿಗೆ ಅದೇನೋ ನಂಟು. ಮನಸ್ಸಿನ ಮೇಲೂ ಪರಿಣಾಮ ಬೀರುವ ಈ ಶಶಿಯ ಬಗ್ಗೆ ಎಲ್ಲಿಲ್ಲದ ಕುತೂಹಲ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಈ ಚಂದ್ರ ಹುಟ್ಟಿದ್ದು ಇದೇ ಕಾರ್ತಿಕ ಪೌರ್ಣಮಿಯಂದು. ಏನೀ ದಿನದ ವಿಶೇಷ?

ನವಗ್ರಹಗಳಲ್ಲಿ ಮನಸ್ಸನ್ನು ನಿಗ್ರಹಿಸುವ ಏಕೈಕ ಗ್ರಹ ಅದು ಚಂದ್ರ ಗ್ರಹ. ಅಂಥ ಚಂದ್ರನ ಅವತಾರಿಸಿದ್ದು ಕಾರ್ತೀಕ ಮಾಸದ ಪೌರ್ಣಮಿಯಂದು. ಚಂದ್ರನ ಉದ್ಭವದ ಕುರಿತಾಗಿ ಎರಡು ಕಥೆಗಳಿದ್ದಾವೆ. ಮೊದಲನೆಯದ್ದು ದೇವ ದಾನವರು ಹಾಲ್ಗಡಲನ್ನು ಕಡೆದಾಗ ಅದರಲ್ಲಿ ಹುಟ್ಟಿದ ಅನರ್ಘ್ಯರತ್ನಗಳ ಜೊತೆ ಚಂದ್ರನೂ ಹುಟ್ಟಿದ ಎಂಬುದು.
ಮತ್ತೊಂದು ಕಥೆಯ ಪ್ರಕಾರ ಅತ್ರಿ ಅನಸೂಯೆಯರಿಗೆ ತ್ರಿಮೂರ್ತಿಗಳು ಸಂತಾನ ಅನುಗ್ರಹ ಮಾಡಿದಾಗ ಬ್ರಹ್ಮನಿಂದ ವರವಾಗಿ ಬಂದವನು ಈ ಚಂದ್ರ ಅಂತ. ಅಂತೂ ಚಂದ್ರನ ಅವತಾರವಾಗಿದ್ದು ಹೀಗೆ. ಇಂಥ ಚಂದ್ರ ಹುಟ್ಟಿದ್ದು ಕಾರ್ತೀಕ ಪೌರ್ಣಮಿಯಂದು ಅಂತ ಆಧಾರವನ್ನು ಕೊಡುತ್ತಾರೆ. ಇಂಥ ಚಂದ್ರ ಜಯಂತಿಯ ದಿನ ಚಂದ್ರನಿಗೂ ನಮಗೂ ಇರುವ ನಂಟನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮಗೆ ಬೆಳದಿಂಗಳನ್ನು ಕರುಣಿಸುವ ಚಂದ್ರಕಿರಣದ ಹಿಂದೆ ಮನುಷ್ಯನಿಗೂ ಚಂದ್ರನಿಗೂ ಇರುವ ಅವಿನಾಭಾವ ನಂಟನ್ನು ಅರ್ಥ ಮಾಡಕೊಳ್ಳಬೇಕು. ಆಗಲೇ ಚಂದ್ರ ಜಯಂತಿಗೆ ಒಂದು ಅರ್ಥ.

ಮುಖ್ಯವಾಗಿ ಚಂದ್ರನನ್ನು ಓಷಧೀ ಪತಿ ಅಂತ ಕರೀತಾರೆ. ಚಂದ್ರ ತನ್ನ ಹಿಮಕಿರಣಗಳಿಂದ ನಾವು ತಿನ್ನುವ ಆಹಾರಗಳಲ್ಲಿ ಪುಷ್ಠಿಯನ್ನ ತುಂಬುತ್ತಾನೆ. ಆ ಚಂದ್ರನ ಪುಷ್ಠಿಯಿಂದಲೇ ನಮ್ಮ ಶರೀರಕ್ಕೆ ಕಾಂತಿ ಬರೋದು. ಹೀಗಾಗಿ ನಾವು ತಿನ್ನುವ ಅನ್ನಕ್ಕೂ ಚಂದ್ರನಿಗೂ ನಿಕಟ ಸಂಬಂಧವಿದೆ. ಶ್ರೀಸೂಕ್ತದ ಮಂತ್ರಗಳು ವಿವರಿಸುವ ಹಾಗೆ ‘ಮನಸ: ಕಾಮಮಾಕೂತಿಂ ವಾಚ:ಸತ್ಯಮಶೀಮಹಿ ಪಶೂನಾಂ ರೂಪಮನ್ನಸ್ಯ ಮಯಿ ಶ್ರೀ ಶ್ರಯತಾಂ ಯಶ:’ ಈ ಮಂತ್ರ ಹೇಳುವ ಪ್ರಕಾರ ನಮ್ಮ ಮನಸ್ಸು-ರೂಪಗಳು ಸಿದ್ಧವಾಗುವುದೇ ನಾವು ತಿನ್ನುವ ಅನ್ನದಿಂದ. ಹೀಗಾಗಿ ಅನ್ನಕ್ಕೂ ನಮಗೂ ಹಾಗೂ ಅನ್ನದೊಳಗೆ ಶಕ್ತಿ ತುಂಬುವ ಚಂದ್ರನಿಗೂ ನಿಕಟ ನಂಟಿದೆ. ಇನ್ನು ಜ್ಯೋತಿಷ ಶಾಸ್ತ್ರಕ್ಕೆ ಬಂದ್ರೆ ಅಲ್ಲಿ ನಮ್ಮ ಮನಸ್ಸಾಳುವ ಗ್ರಹವೇ ಚಂದ್ರ.

ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

ಮನಸ್ಸಿಗೆ ಅಧಿಪತಿಯೇ ಚಂದ್ರ..!

‘ಮನೋಬುದ್ಧಿ:ಪ್ರಸಾದಂತು ಮಾತೃಚಿಂತಾಚ ಚಂದ್ರಮಾ’ ಎಂಬ ವಾಕ್ಯವಿದೆ. ಇದರ ಅರ್ಥ ಮನಸ್ಸು, ಬುದ್ಧಿ, ತಾಯಿ, ಇವೆಲ್ಲವನ್ನೂ ಚಂದ್ರನಿಂದ ಚಿಂತಿಸು ಅಂತ. ವೇದದಲ್ಲಂತೂ ‘ಚಂದ್ರಮಾ ಮನಸೋ ಜಾತ:’ಎಂದು ಹೇಳುತ್ತಾರೆ. ಚಂದ್ರನೇ ಮನಸ್ಸಿಗೆ ಅಧಿಪತಿ ಅಂತ. ಹೀಗಾಗಿ ನಮ್ಮ ಮನಸ್ಸಿನ ನೆಮ್ಮದಿ ಹಾಗೂ ಮನೋ ವ್ಯಾಧಿ ಎರಡಕ್ಕೂ ಚಂದ್ರನೇ ಮುಖ್ಯಕಾರಣ. ಇತರರನ್ನು ನೋಡಿ ನಮ್ಮ ಮನಸ್ಸು ಕರಗುತ್ತಿದೆ, ಅಥವಾ ಕುದಿಯುತ್ತಿದೆ ಎಂದರೆ ಅದಕ್ಕೆ ಕಾರಣೀ ಕರ್ತನೇ ಚಂದ್ರ. ಯಾರ ಜಾತಕದಲ್ಲಿ ಚಂದ್ರ ಚನ್ನಾಗಿದ್ದಾನೋ ಆ ವ್ಯಕ್ತಿ ಸದಾ ಚಿಂತಾರಹಿತನಾಗಿರ್ತಾನೆ. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಕೂಲ್ ಮ್ಯಾನ್ ಆಗಿರ್ತಾನೆ.

ಚಂದ್ರಬಲದ ರಹಸ್ಯ..!

ಜಾತಕದಲ್ಲಿ ಚಂದ್ರ ಸೂರ್ಯನ ಸಮೀಪದಲ್ಲಿದ್ದರೆ  ಅಂದರೆ ಒಂದೇ ರಾಶಿಯಲ್ಲಿ ಅಥವಾ ಹಿಂದಿನ ಮುಂದಿನ ರಾಶಿಯಲ್ಲಿ ಸೂರ್ಯನಿದ್ದಾನೆ ಅಂದ್ರೆ ಅದು ಅಮಾವಾಸ್ಯೆ. ಅಥವಾ ಅಮಾವಾಸ್ಯೆಯ ಆಸುಪಾಸು ಅಂತ. ಇಂಥ ಅಮಾವಾಸ್ಯೆಯಲ್ಲಿ ಚಂದ್ರ ಬಲ ಸಂಪೂರ್ಣವಾಗಿ ಕ್ಷೀಣವಾಗಿರತ್ತೆ. ಸೂರ್ಯನಿಂದ 180 ಡಿಗ್ರಿಯಲ್ಲಿ ಚಂದ್ರನಿದ್ದಾನೆ ಅಂದ್ರೆ ಅದು ಪೌರ್ಣಮಿ. ಆಗ ಚಂದ್ರನಿಗೆ ಸಂಪೂರ್ಣ ಬಲ. ‘ಪಕ್ಷೋದ್ಭವಂ ಹಿಮಕರಸ್ಯ ವಿಶೇಷಮಾಹು’ ಎಂಬ ಆಧಾರದಂತೆ ಚಂದ್ರನಿಗೆ ಪಕ್ಷದ ಬಲವೇ ಬಲ ಅಂತ. ಹಾಗಾಗಿ ಶುಕ್ಲ ಪಕ್ಷದ ಪಂಚಮಿಯಿಂದ ಕೃಷ್ಣ ಪಕ್ಷದ ಪಂಚಮಿ ವರೆಗೆ ಚಂದ್ರನಿಗೆ ಬಲವಿರುತ್ತದೆ, ಪೌರ್ಣಮಿಯಲ್ಲಂತೂ ಇನ್ನೂ ಹೆಚ್ಚಿನ ಬಲವಿರುತ್ತದೆ. ಹೀಗೆ ಯಾರ ಜಾತಕದಲ್ಲಿ ಚಂದ್ರ ಪಕ್ಷ ಬಲದಿಂದ ಕೂಡಿದ್ದಾನೋ ಅವರು ಸಾಮಾನ್ಯವಾಗಿ ಸಮಾಧಾನದಿಂದಿರುತ್ತಾರೆ. ಮತ್ತೊಬ್ಬರ ಮನಸ್ಸನ್ನು ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾರೆ, ಮತ್ತೊಬ್ಬರ ಭಾವನೆಗಳಿಗೆ ಸ್ಪಂದಿಸುವ ಗುಣದವರಾಗಿರ್ತಾರೆ. ಹಾಗಿದ್ದರೆ ಚಂದ್ರನ ಬಲ ಕಂಡುಕೊಳ್ಳುವುದು ಹೇಗೆ..?

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ನಿಮ್ಮ ಜಾತಕದಲ್ಲಿ ಚಂದ್ರನು ವೃಷಭ ರಾಶಿಯಲ್ಲೋ, ಕರ್ಕಟಕ ರಾಶಿಯಲ್ಲೋ ಇದ್ದಾನೆ ಅಂದ್ರೆ ಅಲ್ಲಿ ಚಂದ್ರನಿಗೆ ಬಲವಿರುತ್ತದೆ. ಆದರೆ ಚಂದ್ರನ ಜೊತೆಗೆ ಸೂರ್ಯನಿರಬಾರದು ಅಷ್ಟೆ. ಸೂರ್ಯನಿದ್ದರೆ ಉಚ್ಚದಲ್ಲಿದ್ದರೂ, ಸ್ವಕ್ಷೇತ್ರದಲ್ಲಿದ್ರೂ ಚಂದ್ರ ಬಲರಹಿತನಾಗಿಬಿಡುತ್ತಾನೆ.  ಕಾರಣ ಮೇಲೆ ತಿಳಿಸಿದ ಹಾಗೆ ಚಂದ್ರನಿಗೆ ಪಕ್ಷದ ಬಲವೇ ಬಲ. ಅಂದಹಾಗೆ ಚಂದ್ರನಿಗೆ ನೀಚ ರಾಶಿ ವೃಶ್ಚಿಕ. ವೃಶ್ಚಿಕದ ಚಂದ್ರ ಮನೋವ್ಯಾಧಿ ತರುತ್ತಾರೆ, ಆ ರಾಶಿಯವರು ಸಾಮಾನ್ಯವಾಗಿ ಸಣ್ಣಪುಟ್ಟದ್ದಕ್ಕೂ ಕೊರಗುವ ಮನಸ್ಸಿನವರಾಗಿರುತ್ತಾರೆ. ಆದ್ರೆ ಪಕ್ಷದ ಬಲವಿದ್ದರೆ ಅವರೂ ಚನ್ನಾಗೇ ಇರುತ್ತಾರೆ. ಹಾಗಾಗೇ ಜಾತಕದಲ್ಲಿ ಚಂದ್ರ ಚನ್ನಾಗಿರ್ಬೇಕು ಅನ್ನೋದು.

ಮನೋ ರೋಗಕ್ಕೂ ಚಂದ್ರನೇ ಕಾರಣ..!

ಜಾತಕದಲ್ಲಿ ಚಂದ್ರ ವೀಕಾಗಿದ್ರೆ ವ್ಯಕ್ತಿ ತುಂಬ ಮಂಕಾಗಿಬಿಡ್ತಾನೆ. ಬುದ್ಧಿ ವಿಕಾರವಾಗುತ್ತದೆ, ಕಫದ ಸಮಸ್ಯೆ ಉಲ್ಬಣವಾಗತ್ತೆ, ಮೂತ್ರ ರೋಗ, ರಕ್ತ ವಿಕಾರತೆ, ನಿದ್ರಾ ಹೀನತೆ ಇವೆಲ್ಲಕ್ಕೂ ಚಂದ್ರನೇ ಕಾರಣ, ಇನ್ನು ಈಗ ಎಲ್ಲರನ್ನೂ ಅತಿಯಾಗಿ ಬಾಧಿಸುತ್ತಿರುವ ಸಕ್ಕೆರೆ ಕಾಯಿಲೆಗೆ ಚಂದ್ರನೇ ಮುಖ್ಯಕಾರಣ. ಚಂದ್ರ ಪಾಪಗ್ರಹಗಳ ಜೊತೆ ಇದ್ದರೆ ಅಥವಾ ನೀಚತ್ವ, ಪಕ್ಷಬಲಹೀನತೆ ಇದ್ದರೆ ಇಂಥ ಕಾಯಿಲೆಗಳು ಖಂಡಿತಾ ಕಾಡುತ್ತವೆ. ಮನಸ್ಸು ಸ್ಥಿರವಾಗಿಲ್ಲ ಅಂದ್ರೆ ಏನುತಾನೆ ಮಾಡಲಿಕ್ಕೆ ಸಾಧ್ಯ ಹೇಳಿ..? ಇಷ್ಟೇ ಅಲ್ಲ  ಮುಖ್ಯವಾಗಿ ಚಂದ್ರ ಪ್ರಭಾವ ಬೀರುವುದು ಹೆಣ್ಣುಮಕ್ಕಳ ಮೇಲೆ.

ಹೆಣ್ತನದ ಕಾರಕ ಚಂದ್ರ..!

ಮುಖ್ಯವಾಗಿ ಚಂದ್ರ ಸ್ತ್ರೀಗ್ರಹ. ಹೆಣ್ಣುಮಕ್ಕಳಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹ. ‘ಕುಜೇಂದು ಹೇತು: ಪ್ರತಿ ಮಾಸಮಾರ್ತವಂ’ಎಂಬ ವರಾಹಮಿಹಿರರ ಉಲ್ಲೇಖದಂತೆ  ಹೆಣ್ಣುಮಕ್ಕಳ ತಿಂಗಳ ಋತು ಪ್ರಕ್ರಿಯಲ್ಲಿ ಕುಜ ಹಾಗೂ ಚಂದ್ರ ಇಬ್ಬರೂ ಕಾರಣಕರ್ತರಿದ್ದಾರೆ. ಚಂದ್ರನ ಅನುಗ್ರಹವಿದ್ದರೆ ಹೆಣ್ಣು ಹೆಣ್ಣಾಗಿರ್ತಾಳೆ. ಯಾವ ಸ್ತ್ರೀಗೆ ಚಂದ್ರನ ಅನುಗ್ರಹವಿದೆಯೋ ಆ ಸ್ತ್ರೀ ಒಳ್ಳೆ ಹೆಣ್ಣು, ಒಳ್ಳೆ ಹೆಂಡತಿ, ಒಳ್ಳೆ ತಾಯಿ, ಒಳ್ಳೆ ಗೃಹಿಣಿ ಅಂತನ್ನಿಕೊಳ್ತಾಳೆ. ಎಲ್ಲಿ ಹೆಣ್ಣು ಶಾಂತವಾಗಿರುತ್ತಾಳೋ ಆ ಗೃಹ, ಆ ಸಮಾಜ, ಆ ದೇಶ ಶಾಂತವಾಗಿರುತ್ತೆ. ಹೀಗಾಗಿ ಚಂದ್ರನ ಅನುಗ್ರಹ ನಮ್ಮ ಜೀವನಕ್ಕೆ ಅತ್ಯವಶ್ಯಕ ನಮ್ಮೆಲ್ಲರ ಬದುಕಿನ ಗುರಿ ಹಣವಲ್ಲ. ಸಮಾಧಾನ. ಆ ಸಮಾಧಾನ ಕರುಣಿಸುವ ಮಹಾನ್ ದೈವ ಚಂದ್ರ. ಯಾರಿಗೆ ಈ ಚಂದ್ರನ ಅನುಗ್ರಹ ಬೇಕೋ ಅವರು ಲಲಿತಾ ದೇವಿಯ ಉಪಾಸನೆ ಮಾಡಿ. ಶ್ರೀಚಕ್ರ ಉಪಾಸನೆ ಮಾಡಿ. ಇಲ್ಲವೆಂದರೆ ಪೌರ್ಣಮಿಯಂದು ಅರ್ಧ ಗಂಟೆಗಳ ಕಾಲ ಚಂದ್ರ ದರ್ಶನ ಮಾಡಿ. ಖಂಡಿತಾ ನಿಮ್ಮ ಬದುಕಲ್ಲಿ ಶಾಂತಿ ನೆಲೆಸುತ್ತದೆ.

click me!