ಉತ್ತರ ಭಾರತದಲ್ಲಿ ಜಲಪ್ರಳಯ : ಅಮರನಾಥ ಯಾತ್ರೆಗೆ ಹೋಗಿ ನಿರಾಶ್ರಿತ ಕೇಂದ್ರ ಸೇರಿದ ಕನ್ನಡಿಗರ ಪರದಾಟ

By Suvarna NewsFirst Published Jul 12, 2023, 10:54 AM IST
Highlights

ಉತ್ತರ ಭಾರತದ ಹಲವೆಡೆ ಭಾರೀ ಪ್ರವಾಹದಿಂದ ಜಲಪ್ರಳಯ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ ಹಲವು ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ನವದೆಹಲಿ: ಉತ್ತರ ಭಾರತದ ಹಲವೆಡೆ ಭಾರೀ ಪ್ರವಾಹದಿಂದ ಜಲಪ್ರಳಯ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ ಹಲವು ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕರ್ನಾಟಕದಿಂದ ಜೂನ್ 29 ರಂದು ಸರಸ್ವತಿ ಟ್ರಾವೆಲ್ಸ್ ವತಿಯಿಂದ 46 ಜನ ಕನ್ನಡಿಗರು ಅಮರನಾಥ ಯಾತ್ರೆಗೆ ಹೋಗಿದ್ದರು. 
ಬೆಂಗಳೂರು , ತುಮಕೂರು, ಗೌರಿಬಿದನೂರಿನ 28 ಮಹಿಳೆಯರು,18 ಪುರುಷರು ಸೇರಿ ಒಟ್ಟು 46 ಜನ ಅಮರನಾಥ ಯಾತ್ರೆಗೆ ಹೋಗಿದ್ದು, ಈಗ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಈ ಪ್ರವಾಸಿಗರ ತಂಡ  ಅಮರನಾಥ ತಲುಪುವ ಮೊದಲೇ  ದೇವಭೂಮಿಯಲ್ಲಿ ಮೇಘಸ್ಫೋಟ (cloud Blast) ಶುರುವಾಗಿದ್ದು, ಹೀಗಾಗಿ ಅಮರನಾಥ ಯಾತ್ರೆ (Amarnath Yatra) ರದ್ದಾಗಿತ್ತು. ಹೀಗಾಗಿ ಎರಡು ದಿನ ಬಾಲತಾಲ್‌ನಲ್ಲಿ ಆಶ್ರಯ ಪಡೆದು  ಬೇರೆ ಮಾರ್ಗವಾಗಿ ಇವರು ಜಮ್ಮು ತಲುಪಿದ್ದರು.  ಆದರೆ ನಿನ್ನೆ ಜಮ್ಮುವಿನಿಂದ ದೆಹಲಿಗೆ ತೆರಳುವ ವೇಳೆ ಅನಾಹುತ ಸಂಭವಿಸಿದ್ದು, ಇವರನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯ ರಾತ್ರಿ 2 ಗಂಟೆಗೆ ಮಳೆಯಿಂದಾಗಿ  ಅರ್ಧ ಮುಳುಗಿದೆ. ಈ ವೇಳೆ ಸ್ಥಳಕ್ಕೆ ಬಂದ ಪೋಲೀಸರು ಯಾತ್ರಿಕರನ್ನ ರಕ್ಷಿಸಿದ್ದು, ಯಾತ್ರಿಕರ (Piligrims) ಲಗೇಜ್  ಹಣ ಬಟ್ಟೆಗಳಲ್ಲೇ ಬಸ್ಸಿನಲ್ಲೇ ಉಳಿದಿದೆ. ಈ ಬಸ್‌ನ್ನು ಹೊರ ತೆಗೆಯುವ ಯತ್ನ ಯಾರು ಮಾಡದ ಹಿನ್ನಲೆಯಲ್ಲಿ ರಾಜ್ಯದಿಂದ ಹೊರಟ ಯಾತ್ರಿಕರು ಕುರುಕ್ಷೇತ್ರದಿಂದ 7 ಕಿ.ಮೀ ದೂರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಸಿಲುಕಿದ್ದಾರೆ. 

Latest Videos

ಇವರಿಗೆ ಅಮರನಾಥ ಯಾತ್ರೆ ನೋಡಿ ವಾಪಸ್ ಬರಲು ದೆಹಲಿಯಿಂದ ಬೆಳಗ್ಗೆ 7 ಗಂಟೆ ಟ್ರೈನ್ ಬುಕ್ ಆಗಿತ್ತು.  ಆದರೆ ಅತ್ತ ಅಮರನಾಥ ಯಾತ್ರೆಯೂ ಆಗದೇ ಇತ್ತ ಊರಿಗೆ ಬರಲು ಬಸ್‌ ರೈಲು ಇಲ್ಲದೇ  ಕೈಯಲ್ಲಿ ಹಣವೂ ಇಲ್ಲದೇ ರಾಜ್ಯದ ಯಾತ್ರಿಕರು ಅತಂತ್ರರಾಗಿದ್ದಾರೆ.  ನಮ್ಮ ಬಳಿ ದುಡ್ಡು ಇಲ್ಲದೆ , ಅಗತ್ಯ ವಸ್ತುಗಳು ಇಲ್ಲದೆ ಪರದಾಡುವಂತಾಗಿದ್ದು ಕರ್ನಾಟಕ ತಲುಪಲು ಸರ್ಕಾರ ಸಹಾಯಮಾಡುವಂತೆ ಅವರು ಕೇಳಿದ್ದಾರೆ. 

ಮೈಸೂರಿನ ಪ್ರವಾಸಿಗರೂ ಸಂಕಷ್ಟದಲ್ಲಿ

ಇತ್ತ ಮೈಸೂರಿನಿಂದಲೂ ಅಮರನಾಥ ಯಾತ್ರೆಗೆ ಹೋಗಿದ್ದ ಕೆಲ ಪ್ರವಾಸಿಗರು ಜಮ್ಮು ಕಾಶ್ಮೀರದ ‌ಅನಂತನಾಗ್ ಜಿಲ್ಲೆಯಲ್ಲಿ ಸಿಲುಕಿದ್ದು, ವಾಪಸ್ಸು ಕರೆತರಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  ಮೈಸೂರಿನ ವಿವಿಧ ಬಡಾವಣೆಯ ನಿವಾಸಿಗಳಾದ ಮಹೇಶ್, ಸೋಮ ಸುಂದರ್, ಮಹೇಶ್, ಗಿರೀಶ್, ಶ್ರೀನಿವಾಸ್ ಎಂಬುವವರು ಜುಲೈ 4 ರಂದು ತಮ್ಮದೆ ಖಾಸಗಿ ವಾಹನದಲ್ಲಿ ಅಮರನಾಥ ಯಾತ್ರೆಗೆ ತೆರಳಿದ್ದು ಜಮ್ಮುವರೆಗೆ ಪ್ರಯಾಣಿಸಿದ್ದರು.  ಅಲ್ಲಿಂದ ಬಸ್ ಮೂಲಕ ಅಮರನಾಥ ಯಾತ್ರೆಗೆ ಹೊರಡಲು ಯೋಜನೆ ರೂಪಿಸಿದ್ದರು. ಆದರೆ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ  ಅತ್ತ ಅಮರನಾಥನ ದರ್ಶನವೂ ಸಾಧ್ಯವಾಗದೇ ಸದ್ಯ ಅನಂತನಾಗ್ ಜಿಲ್ಲೆಯಲ್ಲಿಯೇ ಮೈಸೂರಿನ ಪ್ರವಾಸಿಗರು ಉಳಿದಿದ್ದು, ವಾಪಸ್ಸು ಕರೆತರಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

click me!