ಈ ನೂತನ ಸಂವತ್ಸರದ ಹೆಸರು ಕ್ರೋಧಿ. ಕ್ರುಧ್ಯತೀತಿ ಕ್ರೋಧಿ. ಸಿಟ್ಟಿನದು. ಕೋಪ ಸೂಚಕ ಹೆಸರು. ಈ ಸಂವತ್ಸರದ ಹೆಸರು ಕೆಳಿದರೇ ಭಯವಾಗುವಹಾಗಿದೆ.
ಶ್ರೀಕಂಠ ಶಾಸ್ತ್ರಿ
ಜ್ಯೋತಿಷಿಗಳು
ಸುವರ್ಣ ನ್ಯೂಸ್
ಈ ನೂತನ ಸಂವತ್ಸರದ ಹೆಸರು ಕ್ರೋಧಿ. ಕ್ರುಧ್ಯತೀತಿ ಕ್ರೋಧಿ. ಸಿಟ್ಟಿನದು. ಕೋಪ ಸೂಚಕ ಹೆಸರು. ಈ ಸಂವತ್ಸರದ ಹೆಸರು ಕೆಳಿದರೇ ಭಯವಾಗುವಹಾಗಿದೆ. ಕೋಪ ಯಾವಾಗ ಯಾರನ್ನು ಬಲಿತೆಗೆದುಕೊಳ್ಳುತ್ತದೋ..! ಭಗವದ್ಗೀತೆಯಲ್ಲಿ ಅರ್ಜುನ ಒಂದು ಪ್ರಶ್ನೆ ಕೇಳ್ತಾನೆ ಅಥ ಕೇನ ಪ್ರಯುಕ್ತೋಯಂ ಪಾಪಂ ಚರತಿ ಪೌರುಷ:? ಮನುಷ್ಯ ಯಾವ ಕಾರಣಕ್ಕೆ ಮನುಷ್ಯ ಪಾಪವನ್ನ ಮಾಡ್ತಾನೆ..? ಮನುಷ್ಯನಿಗೆ ಪಾಪವನ್ನ ಮಾಡಲಿಕ್ಕೆ ಇಷ್ಟವಿಲ್ಲದೆ ಹೋದರೂ ಯಾವ ಕಾರಣಕ್ಕೆ ಹಾಗೆ ಮಾಡ್ತಾನೆ ಅಂತ ಪ್ರಶ್ನೆ ಕೇಳ್ತಾನೆ. ಅದಕ್ಕೆ ಕೃಷ್ಣ ಎರಡು ಮುಖ್ಯ ಕಾರಗಳನ್ನ ಕೊಡ್ತಾನೆ.
‘ಕಾಮ ಏಷ: ಕ್ರೋಧ ಏಷ:’ ಅಂತ. ಒಂದು ಬಯಕೆಯಿಂದ ಸೃಷ್ಟಿಯಾಗಿ ಬಯಕೆ ತೀರದೆ ಕೋಪ. ಕೋಪದಿಂದ ಸಮಸ್ಯೆಗಳ ಉತ್ಪತ್ತಿ ಅಂತ. ಹೀಗೆ ಈ ಕ್ರೋಧಿ ಸಂವತ್ಸರ ಜನರಲ್ಲಿ ಸಿಟ್ಟನ್ನು ಹುಟ್ಟುಹಾಕುತ್ತದೆ ಎಂಬ ಸಂದೇಶ ನೀಡುವ ಸೂಚನಾಪ್ರಾಯ ಸಂವತ್ಸರವಾಗಿದೆ. ಅದಕ್ಕೆ ಸರಿಯಾಗಿ ಈ ವರ್ಷದ ರಾಜನೂ ಕುಜನೇ ಆಗಿದ್ದಾನೆ. ಕುಜಗೂ ಉಗ್ರ ಗ್ರಹ. ಅಂತೂ ಈ ಸಂವತ್ಸರ ಜನರಲ್ಲಿ ಕೃಪಣತ್ವವನ್ನ, ಸಿಟ್ಟನ್ನು ಸೃಷ್ಟಿಮಾಡದಿರಲಿ ಅಂತ ಪ್ರಾರ್ಥಿಸೋಣ.
ಕ್ರೋಧಿ ಸಂವತ್ಸರ ಪ್ರಾರಂಭವಾಗುತ್ತಿರುವುದು ಮಂಗಳವಾರ. ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಅದೇ ವಾರದ ಅಧಿಪತಿ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಕುಜ.
ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ. ಹೀಗಾಗಿ ಈ ವರ್ಷದಲ್ಲಿ ಶನಿವಾರದಂದು ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಶನಿಯಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಈ ವರ್ಷ ರಾಜ-ಮಂತ್ರಿಗಳೀರ್ವರೂ ಪಾಪ ಗ್ರಹರೇ ಆಗಿರುವುದರಿಂದ ದೇಶದ ಕಥೆ ಏನಾಗಲಿದೆ..!?
ಗ್ರಹಗಳ ರಾಜಾದಯಫಲ :
ರಾಜ - ಕುಜ
ಬೆಂಕಿಯಂಥ ವಾತಾವರಣ ಇರಲಿದೆ. ಬರಬಿಸಿಲ ಬೇಗೆಯಲಿ ಜನ ತತ್ತರವಾಗುತ್ತಾರೆ. ಅಗ್ನಿ ಭಯ ಹೆಚ್ಚಾಗಲಿದೆ. ಯುದ್ಧ ಭಯವನ್ನು ಸೃಷ್ಟಿಸುತ್ತದೆ. ಕಳ್ಳಕಾರ ಭಯ ಹೆಚ್ಚಲಿದೆ.
ಮಂತ್ರಿ - ಶನಿ
ಕೆಟ್ಟ ಆಲೋಚನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ. ಧರ್ಮವಲ್ಲದ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಾಗಿದೆ.ಗರ್ವ, ಮದಗಳಿಂದ ಮನಸ್ಸಿನ ವಾತಾವರಣ ಹಾಳಾಗುತ್ತದೆ. ದು:ಖ ಹೆಚ್ಚಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಭೂಮಿಯಲ್ಲಿ ಬೆಳೆ ಕಡಿಮೆಯಾಗುತ್ತದೆ.
ಸೇನಾಧಿಪತಿ - ಶನಿ
ಸೇನೆ ಅಂದ್ರೆ ರಕ್ಷಣಾ ವ್ಯವಸ್ಥೆ. ಈ ವ್ಯವಸ್ಥೆಗಳಲ್ಲಿ ಆಲಸ್ಯ ಮೈದೋರುತ್ತದೆ. ದೇಶದ ಬಲ ಕುಂಠಿತವಾಗುವ ಲಕ್ಷಣವಿದು. ನಾಯಕರಲ್ಲಿ ಅಧರ್ಮ ಪ್ರವೃತ್ತಿ ಹೆಚ್ಚಾಗಲಿದೆ.
ಸಸ್ಯಾಧಿಪತಿ - ಕುಜ
ಕುಜನೇ ಸಸ್ಯಗಳ ನಾಯಕನಾದ್ದರಿಂದ ಕೆಂಪು ಬಣ್ಣದ ಬೆಳೆಗಳು ಸಮೃದ್ಧವಾಗಿ ಬರಲಿವೆ. ತೊಗರಿ, ಕಡಲೆ, ಬತ್ತ ಇತ್ಯಾದಿ ಬೆಳೆ ಸಮೃದ್ಧವಾಗಿ ಬರಲಿವೆ. ಉಳಿದಂತೆ ಬೆಳೆಗಳಿಗೆ ಅಗ್ನಿ ಭಯವೂ ಉಂಟಾಗಲಿದೆ.
ಧಾನ್ಯಾಧಿಪತಿ - ಚಂದ್ರ
ಚಂದ್ರನಿಂದಲೇ ಬೆಳೆಯಲ್ಲಿ ರಸೋತ್ಪತ್ತಿ. ಹೀಗಾಗಿ ಬೆಳೆಗಳು ತಕ್ಕಮಟ್ಟಿಗೆ ಸಮೃದ್ಧವಾಗಿರುತ್ತವೆ. ಕುಜನಿಗೂ ಚಂದ್ರನಿಗೂ ಸಮೃದ್ಧ ಸ್ನೇಹವಿರುವುದರಿಂದ ಧಾನ್ಯ ಸಮೃದ್ಧಿ ಕಾಣಬಹುದು.
ಅರ್ಘಾಧಿಪತಿ – ಶನಿ
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಶನೈಶ್ಚರನಿಂದ ಕಪ್ಪು ಧಾನ್ಯ, ಎಣ್ಣೆ , ಕಬ್ಬಿಣ, ಇಟ್ಟಗೆ ಇತ್ಯಾದಿ ಮನೆ ನಿರ್ಮಾಣ ವಸ್ತುಗಳ ಬೆಲೆ ಹೆಚ್ಚಾಗುತ್ತದೆ.
ಮೇಘಾಧಿಪತಿ - ಶನಿ
ಶನಿಯ ಕಾರಣದಿಂದ ವಿಪರೀತವಾದ ಗಾಳಿ ಉಂಟಾಗಲಿದೆ. ಮೇಘ ಕಟ್ಟುವುದು ಕಷ್ಟವಾಗುತ್ತದೆ. ಅಲ್ಲಲ್ಲಿ ಮಳೆ ಹೆಚ್ಚಾಗಿ ಕೆಲವುಕಡೆ ಅನಾವೃಷ್ಟಿಯಾಗಲಿದೆ.
ರಸಾಧಿಪತಿ- ಗುರು
ಎಲ್ಲ ಸಸ್ಯಗಳಲ್ಲಿ ಸಮೃದ್ಧ ಸತ್ವ ಉಂಟಾಗಿ. ಪ್ರಜೆಗಳ ಆರೋಗ್ಯ ಚೆನ್ನಾಗಿರುತ್ತದೆ. ಜನರಿಗೆ ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ.
ನೀರಸಾಧಿಪತಿ - ಕುಜ
ಕೆಂಪುಚೆಂದನ, ಹವಳ, ಕೆಂಪು ಬಟ್ಟೆಗಳು, ಮುಂತಾದ ಕೆಂಪು ವಸ್ತುಗಳ ಬೆಲೆ ಕಡಿಮೆಯಾಗುತ್ತದೆ.
ಪಶುನಾಯಕ - ಯಮ
ಯಮನ ನಾಯಕತ್ವದಲ್ಲಿ ಪಶುಗಳಿಗೆ ರೋಗ ಬಾಧೆ ಹೆಚ್ಚಬಹುದು. ಮೇವಿನ ಕೊರತೆ ಉಂಟಾಗಲಿದೆ.
ಗ್ರಹಣ ವಿಚಾರ :
ಈ ವರ್ಷ ಯಾವ ಗ್ರಹಣವೂ ಭಾರತಕ್ಕೆ ಗೋಚರಿಸುವುದಿಲ್ಲವಾದ್ದರಿಂದ ಆಚರಣೆ ಇಲ್ಲ.
ರಾಶಿಗಳ ವರ್ಷ ಫಲ
ಈ ವರ್ಷ ಪ್ರಧಾನವಾಗಿ ವರ್ಷದ ಆದಿಯಲ್ಲಿ ಗುರುವೂ ಹಾಗೂ ವರ್ಷಾಂತ್ಯದಲ್ಲಿ ಶನೈಶ್ಚರರ ಪರಿವರ್ತನೆ ಇರಲಿದೆ. ಇವುಗಳ ಜೊತೆಗೆ ಉಳಿದ ಗ್ರಹಗಳ ಸಂಚಾರವನ್ನೂ ಪರಿಗಣಿಸಿ ಈ ಭವಿಷ್ಯವನ್ನು ಸಿದ್ಧಪಡಿಸಲಾಗಿದೆ.
ಗುರು 01-05-2024 ರಂದು ಮೇಷದಿಂದ ವೃಷಭಕ್ಕೆ ಸಂಚಾರ ಶನೈಶ್ಚರ 29-03-2025 ರಂದು ಮೀನ ರಾಶಿಗೆ ಸಂಚಾರ.( ಈ ಕ್ರೋಧಿ ಸಂವತ್ಸರದ ಕೊನೆಯ ದಿನ ಶನೈಶ್ಚರ ಪರಿವರ್ತನೆ ಇದೆ. )
1. ಮೇಷ - ಈ ವರ್ಷ ನಿಮ್ಮ ಪಾಲಿಗೆ ಮಂಗಳ ಪ್ರದವಾಗಿರಲಿದೆ. ಮೇ ತಿಂಗಳ ಪ್ರಾರಂಭದಲ್ಲೇ ಗುರು ಬಲ ಶುರುವಾಗಲಿದ್ದು ನಿಮ್ಮ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವೃತ್ತಿಯ ಅಧಿಪತಿಯೂ ಲಾಭ ಸ್ಥಾನದಲ್ಲಿದ್ದು ಬಹ್ವಾಯು: ಸ್ಥೀರ ಸಂಪದಾಯ ಸಹಿತ: ಎಂಬ ಶಾಸ್ತ್ರ ವಚನದಂತೆ ಆಯಸ್ಸನ್ನೂ ಸ್ಥಿರ ಸಂಪತ್ತನ್ನೂ ರೋನಿ ನಿವಾರಣೆಯ ಫಲವನ್ನೂ ತಂದುಕೊಡಲಿದ್ದಾನೆ. ಈ ವರ್ಷ ನಿಮ್ಮ ಪಾಲಿಗೆ ಬೇವಗಿಂತ ಸಿಹಿ ಅಧಿಕವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕೌಟುಂಬಿಕ ಕಲಹಗಳು ದೂರಾಗಲಿವೆ. ವಿದೇಶ ಸಂಪರ್ಕದ ಅವಕಾಶಗಳು ಹೆಚ್ಚಾಗಿವೆ. ಇಟ್ಟಗೆ, ಮಣ್ಣು, ಮರಳು, ಕಬ್ಬಿಣ ಇತ್ಯಾದಿ ಗೃಹ ನಿರ್ಮಾಣ ಕ್ಷೇತ್ರಗಳ ವ್ಯಾಪಾರದಲ್ಲಿ ಅಧಿಕ ಲಾಭವಿದೆ. ಹೋಟೆಲ್ ಇಂಡಸ್ಟ್ರಿಯವರಿಗೂ ಅಧಿಕ ಲಾಭ. ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ವಿಶೇಷ ಫಲಗಳಿವೆ. ರಾಹು ನಿಮ್ಮ ಪಾಲಿಗೆ ಸ್ವಲ್ಪ ಕಂಟಕನಾಗಿದ್ದು, ಆರೋಗ್ಯ ಹಾನಿಯನ್ನೂ, ಅನಗತ್ಯ ವ್ಯಯವನ್ನೂ ಉಂಟು ಮಾಡುತ್ತಾನೆ. ವರ್ಷಪೂರ್ತಿ ಈ ಫಲವಿರುವುದರಿಂದ ಎಚ್ಚರವಾಗಿರಿ. ಇನ್ನು ಮುಖ್ಯವಾಗಿ ಜುಲೈ ತಿಂಗಳ ಕುಜನ ಪರಿವರ್ತನೆ ನಿಮ್ಮ ಪಾಳಿಗೆ ಸಾಕಷ್ಟು ಹಣ ವ್ಯಯಕ್ಕೆ ಕಾರಣವಾಗುತ್ತದೆ. ವರ್ಷಾಂತ್ಯದ ವೇಳೆಗೆ ಸಹೋದರರಲ್ಲಿ ಮನಸ್ತಾಪ ತರಲಿದೆ. ಅಲೆದಾಟ ಹೆಚ್ಚಿಸುತ್ತದೆ. ಕಣ್ಣು-ಕಾಲುಗಳ ಆರೋಗ್ಯದ ಕಡೆ ಗಮನವಿರಲಿ. ಸಾಲ ಬಾಧೆಯೂ ನಿಮ್ಮನ್ನು ಕಾಡುತ್ತದೆ. ಎಚ್ಚರವಾಗಿರಿ. ಈ ವರ್ಷ ಸುಖದ ಪಾಲು ಹೆಚ್ಚಾಗಿದೆ. ನೆಮ್ಮದಿಯಾಗಿರಿ.
ಪರಿಹಾರ - ನಾಗ ಪ್ರಾರ್ಥನೆ, ನಾಗ ಕ್ಷೇತ್ರ ದರ್ಶನ ಮಾಡಿ
ಶುಭ ರತ್ನ - ಹವಳ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ
2. ವೃಷಭ - ಈ ವರ್ಷದ ಪ್ರಾರಂಭದಲ್ಲೇ ಜನ್ಮ ಸ್ಥಾನವನ್ನು ಸೇರುವ ಗುರು ಸಸುಖಾರ್ಥ ಮಿತ್ರ ತನಯ: ತ್ಯಾಗೀ ಪ್ರಿಯ: ಶೌಕ್ರಭೇ ಎಂಬ ವರಾಹ ಮಿಹಿರರ ಮಾತನಂತೆ ಮಿತ್ರರು-ಪುತ್ರರಿಂದ, ದಾನ ತ್ಯಾಗ ಗುಣಗಳಿಂದ ಹೆಚ್ಚಿನ ಸಂತೋಷವನ್ನೇ ಅನುಭವಿಸುತ್ತೀರಿ. ನಿಮ್ಮ ಪಾಲಿಗೆ ಅಷ್ಟಮಾಧಿಪತಿಯೂ ಆಗಿರುವ ಗುರು ಸ್ವಲ್ಪ ಆರೋಗ್ಯ ವ್ಯತ್ಯಾಸವನ್ನೂ ಮಾಡಲಿದ್ದಾನೆ. ಆದರೆ ಕರ್ಮ ಸ್ಥಾನದ ಶನೈಶ್ಚರ ನಿಮ್ಮ ಪಾಲಿಗೆ ವೃತ್ತಿ ಸೌಖ್ಯವನ್ನೂ, ಅಧಿಕಾರ ಬಲವನ್ನೂ ತಂದುಕೊಡುತ್ತಾನೆ. ವರ್ಷದ ಆದಿ ನಿಮ್ಮ ಪಾಲಿಗೆ ಶುಭಾರಂಭವಾಗಿರಲಿದೆ. ಲಾಭದ ರಾಹುವಿನಿಂದ ವಿದೇಶ ಸಂಪಕರ್ದಿಂದ, ಔಷಧ ಕ್ಷೇತ್ರ ಇತ್ಯಾದಿ ಅನ್ಯ ಮಾರ್ಗಗಳಿಂದ ಅಧಿಕ ಸಂಪತ್ತನ್ನು ಹರಿದುಬರಲಿದೆ. ಗೃಹ ನಿರ್ಮಾಣ ಕ್ಷೇತ್ರದವರಿಗೆ ಹೆಚ್ಚಿನ ಲಾಭವಿದೆ. ಸರ್ಕಾರಿ ವಲಯದವರಿಗೆ ಹೆಚ್ಚಿನ ಅನುಕೂಲವಿದೆ. ಜುಲೈ ವೇಳೆಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಚರ್ಮ ಸಂಬಂಧಿ ತೊಂದರೆಗಳು ಉಂಟಾಗಲಿವೆ. ಹಣಕಾಸಿನ ತೊಂದರೆಗಳು ಸಂಭವಿಸಲಿವೆ. ವಿದ್ಯಾರ್ಥಿಗಳಿಗೆ ಆಗಸ್ಟ್ ನಂತರ ಕಠಿಣ ದಿನಗಳು. ಹೆಚ್ಚಿನ ಪರಿಶ್ರಮ ತೆಗೆದುಕೊಂಡು ಓದಿ. ಬಾಯಿ ಹುಣ್ಣು, ದಂತ ಸಮಸ್ಯೆಗಳು ಕಾಡಲಿವೆ. ವರ್ಷದ ಅಂತ್ಯದ ವೇಳೆಗೆ ಹಣಕಾಸಿನ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಕುಟುಂಬದಲ್ಲಿ ಘರ್ಷಣೆಗಳುಂಟಾಗಬಹುದು. ಸಮಾಧಾನ ಇರಲಿ.
ಪರಿಹಾರ - ಸುಬ್ರಹ್ಮಣ್ಯ ಸನ್ನಿಧಾನಕ್ಕೆ ಕೊಬ್ಬರಿ ಕಲ್ಸಕ್ರೆ ಸಮರ್ಪಣೆ ಮಾಡಿ
ಶುಭ ರತ್ನ - ಮರಕತ-ನೀಲ
ಶುಭ ಸಂಖ್ಯೆ - 9
ಶುಭ ವರ್ಣ - ಬಿಳಿ-ನೀಲಿ
3. ಮಿಥುನ - ಈ ವರ್ಷ ನಿಮ್ಮ ಪಾಲಿಗೆ ಶ್ರಮದಾಯಕ ವರ್ಷ. ಕರ್ಮಾಧಿಪತಿ ಗುರುವು ವ್ಯಯ ಸ್ಥಾನಕ್ಕೆ ಪ್ರವೇಶ ಮಾಡುವುದರಿಂದ ವರ್ಷದ ಆದಿಯಿಂದಲೇ ಕೆಲಸದಲ್ಲಿ ಅಧಿಕ ಒತ್ತಡ, ಅಲೆದಾಟ, ಸ್ಥಾನ ಚ್ಯುತಿಯಂತ ಫಲಗಳನ್ನು ಅನುಭವಿಸಬೇಕಾಗುತ್ತದೆ. ಕರ್ಮ ಸ್ಥಾನದ ರಾಹು ಕೆಲಸಗಳಲ್ಲಿ ಹೆಚ್ಚಿನ ತೊಡಕನ್ನುಂಟುಮಾಡುತ್ತಾನೆ. ದಾಂಪತ್ಯದಲ್ಲಿ ಮನಸ್ತಾಪಗಳಾಗಬಹುದು. ಆಪ್ತರು ದೂರಾಗಬಹುದು. ವ್ಯಾಪಾರದಲ್ಲಿ ಗೆಚ್ಚಿನ ವ್ಯಯ ಉಂಟಾಗಬಹುದು. ಕಠಿಣ ಸವಾಲುಗಳನ್ನು ಎದುರಿಸಲು ಸಿರ್ದಧರಾಗಬೇಕು. ಭಾಗ್ಯದ ಶನೈಶ್ಚರ ಸ್ವಲ್ಪ ಮಟ್ಟಿಗೆ ದೈವಾನು ಉಂಟುಮಾಡುತ್ತಾನೆ. ಹೆದರಬೇಡಿ. ಜುಲೈ ತಿಂಗಳಲ್ಲಿ ಹಣಕಾಸಿನ ತೊಡಕುಗಳುಂಟಾಗಲಿವೆ. ಆರೋಗ್ಯದಲ್ಲೂ ವ್ಯತ್ಯಾಸವಾಗಲಿದೆ. ಚರ್ಮ ಸಂಬಂಧಿ ತೊಂದರೆಗಳುಂಟಾಗಲಿವೆ. ಉಷ್ಣ ಸಂಬಂಧಿ ತೊಂದರೆಗಳು ಹೆಚ್ಚಾಗಿ ಕಾಡುತ್ತವೆ. ದೂರ ಪ್ರಯಾಣಗಳಲ್ಲಿ ತೊಡಕು ಸಂಭವಿಸಲಿವೆ. ಬುಧ-ಶುಕ್ರರ ಶುಭ ಸ್ಥಾನ ಸಂಚಾರ ಕಾಲದಲ್ಲಿ ಆರೋಗ್ಯ-ದೈವಾನುಕೂಲ, ಮಕ್ಕಳಿಂದ ಸಹಕಾರದಂಥ ಶುಭ ಫಲಗಳನ್ನು ಕಾಣುವಿರಿ. ಗೃಹನಿರ್ಮಾಣ, ಬಂಧು-ಮಿತ್ರರಲ್ಲಿ ಹೆಚ್ಚು ವ್ಯವಹರಿಸಬೇಡಿ. ಎಚ್ಚರವಾಗಿರಿ.
ಪರಿಹಾರ - ಗುರು ಚರಿತ್ರೆ ಪಾರಾಯಣ ಮಾಡಿ
ಶುಭ ರತ್ನ - ಪಚ್ಚೆ
ಶುಭ ಸಂಖ್ಯೆ - 05
ಶುಭ ವರ್ಣ - ಹಸಿರು, ನೀಲಿ, ಬಿಳಿ
4. ಕರ್ಕಟಕ - ಈ ಕ್ರೋಧಿ ಸಂವತ್ಸರ ನಿಮ್ಮ ಪಾಲಿಗೆ ಮಂಗಳ ಫಲಗಳನ್ನು ತರಲಿದೆ. ಲಾಭ ಸ್ಥಾನಕ್ಕೆ ಪ್ರವೇಶಿಸುವ ಗುರು ಆಯಸ್ಥೇ ಧನಿಕ: ಅಭಯ: ಅಲ್ಪ ತನಯ: ಎಂಬ ಶಾಸ್ತ್ರವಾಣಿಯಂತೆ ಅತ್ಯಧಿಕ ಧನವನ್ನು, ಅಭಯವನ್ನೂ ಗುರುವು ತರಲಿದ್ದಾನೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. ಶುಭ ಫಲಗಳನ್ನು ಕಾಣಲಿದ್ದೀರಿ. ದೇವತಾನೂಕೂಲದಿಂದ ಆಗಬೇಕಾದ ಕಾರ್ಯಗಳು ಸರಾಗವಾಗಿ ಸಾಗಲಿವೆ. ಹಿರಿಯರಿಂದ ಉಪಕಾರಗಳು-ಸಲಹೆಗಳು ಸಿಗಲಿವೆ. ಸಜ್ಜನರ ಭೇಟಿಯಾಗಲಿದೆ. ಅಷ್ಟಮದ ಶನೈಶ್ಚರ ಸ್ವಲ್ಪ ಮಾನಸಿಕ ಹಿಂಸೆ ಮಾಡಲಿದ್ದಾನೆ. ಹಿರಿಯರಿಂದ ನಷ್ಟ ಸಂಭವ. ಸೋಲುಂಟಾಗುವ ಸಾಧ್ಯತೆ. ಧರ್ಮ ವಿರೋಧಿ ಚಟುವಟಿಕೆಗಳಿಂದ ತೊಂದರೆ ಸಿಲುಕುವಿರಿ. ಹುಂಬತನದಿಂದ ಹೆಚ್ಚು ತೊಡಕನ್ನು ಕಾಣುವಿರಿ. ಆದರೆ ವೃತ್ತಿಯಲ್ಲಿ ಹೊಸ ಅವಕಾಶ, ವಿಶೇಷ ಮಾನ್ಯತೆ ಸಿಗಲಿದೆ. ಜುಲೈ ತಿಂಗಳ ನಂತರ ವೃತ್ತಿಯಲ್ಲಿ ಎಚ್ಚರವಹಿಸಿ. ವ್ಯಾಪಾರಿಗಳು ಎಚ್ಚರವಾಗಿರಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರಲಿದೆ. –
ಪರಿಹಾರ - ಶನೈಶ್ಚರ ಪ್ರಾರ್ಥನೆ. ಎಳ್ಳುದಾನ ಮಾಡಿ
ಶುಭ ರತ್ನ - ಮುತ್ತು, ಪುಷ್ಯರಾಗ
ಶುಭ ಸಂಖ್ಯೆ - 7
ಶುಭ ವರ್ಣ - ಬಿಳಿ, ಕೆಂಪು
5. ಸಿಂಹ - ಈ ಹೊಸ ವರ್ಷ ನಿಮ್ಮ ಪಾಲಿಗೆ ಹೆಚ್ಚಿನ ಸುಖ ಸಮೃದ್ಧಿಯ ಫಲ ತರಲಿದೆ. ವರ್ಷದ ಆದಿಯಲ್ಲಿ ಕರ್ಮ ಸ್ಥಾನವನ್ನು ಪ್ರವೇಶಿಸುವ ಗುರುವು ವೃತ್ತಿಯಲ್ಲಿ ವಿಶೇಷ ಅನುಕೂಲಗಳನ್ನು ತರಲಿದ್ದಾನೆ. ಹೊಸ ಕೆಲಸಗಳು ಅರಸಿಬರಲಿವೆ. ವಿಶೇಷ ಸ್ಥಾನ-ಮಾನ ಮಾನ್ಯತೆಗಳು ಸಿಗಲಿವೆ. ಪ್ರಶಂಸೆ-ಪುರಸ್ಕಾರಗಳು ಸಿಗಲಿವೆ. ಶನೈಶ್ಚರನೂ ಕೂಡ ಬಲಿಷ್ಠನಾಗಿದ್ದು ವ್ಯಾಪಾರದಲ್ಲಿ ಶುಭ ಫಲ ಕಾಣುತ್ತಿರಿ. ಆದರೆ ಅಷ್ಟಮದ ರಾಹು ನಿಮ್ಮ ಆರೋಗ್ಯ ಹಾನಿ ಮಾಡಲಿದ್ದಾನೆ. ಗುಹ್ಯ ಸ್ಥಾನಗಳಲ್ಲಿ ತೊಂದರೆಗಳು. ಇಕ್ಕಟ್ಟಿಗೆ ಸಿಲುಕಿಕೊಳ್ಳುವಂಥ ಘಟನೆಗಳೂ ನಡೆಯಲಿವೆ. ಹಣಕಾಸಿನ ತೊಂದರೆಗೆ ಗುರಿಯಾಗುತ್ತೀರಿ. ವಿದ್ಯಾರ್ಥಿಗಳಲ್ಲಿ ಆಲಸ್ಯ, ಮಾನಸಿಕ ಚಾಂಚಲ್ಯದ ಸಮಸ್ಯೆಗಳು ಕಾಡಲಿವೆ. ಜುಲೈ ನಂತರ ವೃತ್ತಿಯಲ್ಲಿ ವಿಶೇಷ ಅಧಿಕಾರ ಪ್ರಾಪ್ತಿ. ಸರ್ಕಾರಿ ಕೆಲಸಗಳಲ್ಲಿ ಅನುಕೂಲ. ರಾಜಕಾರಣದಲ್ಲಿ ಮಾನ್ಯತೆ ಇತ್ಯಾದಿ ಶುಭಫಲ ಸಿಗಲಿದೆ. ಕೆಲಸದಲ್ಲಿ ಶತ್ರುಗಳ ಬಾಧೆಯೂ ಕಾಡಲಿದೆ. ಹಿತ ಶತ್ರುಗಳ ಬಾಧೆ ಉಂಟಾಗಲಿದೆ. ಕೆಲಸ ಸ್ಥಳದಲ್ಲಿ ಎಚ್ಚರವಾಗಿರಿ. ವಿದೇಶದಿಂದ ಆಗಮನವಾಗಲಿದೆ.
ಪರಿಹಾರ - ಆದಿತ್ಯ ಹೃದಯ ಪಾರಾಯಣ ಹಾಗೂ ವೈದ್ಯನಾಥೇಶ್ವರ ದರ್ಶನ ಮಾಡಿ
ಶುಭ ರತ್ನ - ಮಾಣಿಕ್ಯ, ಹವಳ
ಶುಭ ಸಂಖ್ಯೆ - 04
6. ಕನ್ಯಾ - ಈ ಯುಗಾದಿ ನಿಮ್ಮ ಪಾಲಿಗೆ ವಿಶೇಷ ಶುಭಫಲವನ್ನು ತರಲಿದೆ. ಭಾಗ್ಯ ಸ್ಥಾನಕ್ಕೆ ಬರುವ ಗುರುವು ನಿಮ್ಮ ಮನೆಯಲ್ಲಿ ಮಂಗಳಕಾರ್ಯಗಳನ್ನು ಮಾಡಿಸುತ್ತಾನೆ. ವಿವಾಹ-ಉಪನಯನದಂಥ ವಿಶೇಷ ಕಾರ್ಯಗಳು ನಡೆಯಲಿವೆ. ದೈವಾನುಕೂಲದಿಂದ ನಿಮ್ಮ ಕಷ್ಟಗಳೆಲ್ಲ ದೂರಾಗಲಿದ್ದು ನಿರಾಳತೆಯನ್ನು ಹೊಂದುವಿರಿ. ಶನೈಶ್ಚರನೂ ನಿಮ್ಮ ಪಾಲಿಗೆ ಧೈರ್ಯ-ಸ್ಥೈರ್ಯಗಳನ್ನುಂಟುಮಾಡುತ್ತಾನಲ್ಲದೆ ನಿಮ್ಮ ಶತ್ರುಗಳನ್ನು ದೂರ ಮಾಡುತ್ತಾನೆ. ಕೋರ್ಟು ಕಚೇರಿಗಳಲ್ಲಿ ಜಯ ಸಿಗಲಿದೆ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲ ಕಾಣುತ್ತೀರಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸುತ್ತೀರಿ. ದಂಪತ್ಯದಲ್ಲಿ ಸಮಾಧಾನ ಏರ್ಪಾಡಾಗಲಿದೆ. ಸಂಗಾತಿಯಿಂದ ಸಹಕಾರ-ಸಹಬಾಳ್ವೆ. ಸಪ್ತಪದ ರಾಹು ಆಗಾಗ ಸಾಮರಸ್ಯ ಹಾಳುಮಾಡಿ ಕಲಹವನ್ನೂ ತರುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಕಾಣದ ಕೈಗಳಿಂದ ವ್ಯಾಪಾರಿಗಳಿಗೆ ತೊಂದರೆ. ಎಚ್ಚರವಹಿಸಿ. ಜುಲೈ ನಂತರದಲ್ಲಿ ತಂದೆ-ಮಕ್ಕಳಲ್ಲಿ ಅಸಮಾಧಾನ, ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿ ಇರಲಿದೆ. ಬಂಧು-ಮಿತ್ರಲ್ಲಿ ಹೆಚ್ಚಿನ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲ ಉಂಟಾಗಲಿದೆ.
ಪರಿಹಾರ - ನಾಗ ಸನ್ನಿಧಾನ ದರ್ಶನ ಮಾಡಿ
ಶುಭ ರತ್ನ - ಪಚ್ಚೆ, ಮಾಣಿಕ್ಯ
ಶುಭ ಸಂಖ್ಯೆ - 5
ಶುಭ ವರ್ಣ - ಹಸಿರು-ಬಿಳಿ-ನೀಲಿ
7. ತುಲಾ - ಈ ವರ್ಷ ನಿಮ್ಮ ಪಾಲಿಗೆ ಸ್ವಲ್ಪ ಕಹಿ ಅನುಭವವಾಗುತ್ತದೆ. ಮೇ ತಿಂಗಳಲ್ಲಿ ಅಷ್ಟಮ ಸ್ಥಾನಕ್ಕೆ ಗುರುವು ಪ್ರವೇಶವಾಗುವುದರಿಂದ ದು:ಖದ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಸಹೋದರರಲ್ಲಿ ಮನಸ್ತಾಪಗಳು ಏರ್ಪಾಡಾಗಲಿವೆ. ಸಾಲ-ನಷ್ಟಗಳ ಕಷ್ಟದಲ್ಲಿ ನಲುಗಬೇಲಾದೀತು. ಶತ್ರುಗಳ ಕಾಟದಿಂದ ಒದ್ದಾಟವಿದೆ. ಪಂಚಮದ ಶನೈಶ್ಚರನೂ ಸ್ವಲ್ಪ ಬೇವಿನ ಕಹಿ ಉಣಬಡಿಸುತ್ತಾನೆ. ಮಕ್ಕಳಲ್ಲಿ ಅಸಮಾಧಾನ. ಉದರ ಸಂಬಂಧಿ ತೊಂದರೆಗಳುಂಟಾಗಲಿವೆ. ಜುಲೈ ನಂತರದಲ್ಲಿ ದಾಂತ್ಯದಲ್ಲೂ ಅಸಮಾಧಾನಗಳು ಉಂಟಾಗಲಿವೆ. ವ್ಯವಹಾರಗಳಲ್ಲಿ ತೊಡಕುಗಳು, ಅನಗತ್ಯ ವ್ಯಯಗಳೂ ಹೆಚ್ಚಾಗುತ್ತವೆ. ಕೋರ್ಟು-ಕಚೇರಿಗಳ ಓಡಾಟ ಹೆಚ್ಚಲಿದೆ. ರಾಶ್ಯಧಿಪತಿ ಶುಕ್ರ ಹಾಗೂ ಮಿತ್ರ ಗಹ್ರಹ ಬುಧರ ಶುಭ ಸ್ಥಳ ಸಂಚಾರ ಸಮಯದಲ್ಲಿ ಹೆಚ್ಚಿನ ಅನುಕೂಲ ಹೊಂದುವಿರಿ. ಮಿತ್ರರ-ಬಂಧುಗಳ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಸಮಾಧಾನ ಫಲ ಕಾಣುವಿರಿ.
ಪರಿಹಾರ - ಲಲಿತಾ ಸಹಸ್ರನಾಮ ಪಠಿಸಿ-ಗುರು ಚರಿತ್ರೆ ಪಾರಾಯಣ ಮಾಡಿ
ಶುಭ ರತ್ನ - ವಜ್ರ-ನೀಲ
ಶುಭ ಸಂಖ್ಯೆ - 09
ಶುಭ ವರ್ಣ - ಬಿಳಿ-ನೀಲಿ
8. ವೃಶ್ಚಿಕ - ಈ ಯುಗಾದಿ ನಿಮ್ಮ ಪಾಲಿಗೆ ಶುಭಫಲವನ್ನು ತರಲಿದೆ. ಮೇ ತಿಂಗಳಿನಿಂದ ಪ್ರಾರಂಭವಾಗುವ ಗುರುಬಲವು ನಿಮ್ಮ ಬಾಳಿಗೆ ಶುಭಯೋಗವನ್ನು ತರಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವ್ಯಾಪಾರದಲ್ಲಿ ಯಶಸ್ಸನ್ನು ಕಾಣುತ್ತೀರಿ. ಬುದ್ಧಿಬಲದಿಂದ ಕಾರ್ಯ ಸಾಧನೆ ಮಾಡುತ್ತೀರಿ, ವೃತ್ತಿಯಲ್ಲೂ ಹೆಚ್ಚಿನ ಅನುಕೂಲ ಕಾಣುವಿರಿ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ. ಅಂದುಕೊಂಡ ಕಾರ್ಯಗಳು ಕೈಗೂಡಲಿವೆ. ಆದರೆ ಬಂಧು-ಸ್ನೇಹಿತರ ವಿಚಾರದಲ್ಲಿ ಎಚ್ಚರಾವಾಗಿರಿ. ಭ್ರಮಿಸಿದಂತೆ ಜೀವನ ಇರಲಾರದು. ಸ್ನೇಹಿತರು ಕಷ್ಟಕಾಲದಲ್ಲಿ ಸಹಾಯ ಮಾಡಲಾರರು. ಪಂಚಮದ ರಾಹು ನಿಮ್ಮ ಬುದ್ಧಿಗೆಡಿಸಬಹುದು. ತಪ್ಪಾದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಗುರು-ಹಿರಿಯರ ಮಾರ್ಗದರ್ಶನ ಪಡೆಯಿರಿ. ಲಾಭದ ಕೇತು ವಿಶೇಷ ಲಾಭ ಫಲವನ್ನು ತರಲಿದ್ದಾನೆ. ಆಧ್ಯಾತ್ಮದತ್ತ ಮುಖಮಾಡಲಿದ್ದೀರಿ. ಮುಖ ಮಾಡಿದರೆ ಸಾಲದು ಮನಸ್ಸು ಪರಿವರ್ತನೆಯಾಗಬೇಕು. ಜುಲೈ ನಂತರ ಸಂಗಾತಿಯಲ್ಲಿ ಮನಸ್ತಾಪ. ಅಗತ್ಯ ವ್ಯಯ. ವಾಗ್ವಾಗ ಸೋಲು ಇಂಥ ಘಟನೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ.
ಪರಿಹಾರ - ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ನಾಗ ಪ್ರಾರ್ಥನೆ ಮಾಡಿ
ಶುಭ ರತ್ನ - ಹವಳ-ಮಾಣಿಕ್ಯ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ
9. ಧನಸ್ಸು - ಈ ಯುಗಾದಿ ನಿಮ್ಮ ಪಾಳಿಗೆ ಕಹಿಬೇವನ್ನು ತರಲಿದೆ. ಮೇ ತಿಂಗಲ್ಲಿ ಪರಿವರ್ತನೆಯಾಗುವ ಗುರು ನಿಮ್ಮ ಪಾಲಿಗೆ ರೋಗ ಬಾಧೆ ತರಲಿದ್ದಾನೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹೆಚ್ಚಿನ ಸಾಲ ಬಾಧೆ ಉಂಟಾಗಬಹುದು. ಬಂಧು-ಮಿತ್ರರಲ್ಲಿ ಶತ್ರುತ್ವ ಉಂಟಾಗಬಹುದು. ಭೂ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಚತುರ್ಥ ಸ್ಥಾನದ ರಾಹುವಿನಿಂದ ಜಲ ಕಂಟಕಗಳು ಸಂಭವಿಸಬಹುದು. ನೀರಿನ ಬಾಧೆ. ನೀರಗಾಗಿ ಕಲಹಗಳು ನಡೆಯಲಿವೆ. ಪ್ರಯಾಣದಲ್ಲಿ ತೊಂದರೆ ಎದುರಿಸುವಿರಿ. ವೃತ್ತಿಯಲ್ಲೂ ವಿಘ್ನಗಳು ಕಾಡಲಿವೆ. ಅಂದುಕೊಂಡದ್ದು ಪೂರ್ಣವಾಗುವುದಿಲ್ಲ. ಆದರೆ ಶನೈಶ್ಚರ ನಿಮ್ಮ ಪಾಲಿಗೆ ಮಹಾ ಅಭಯ ಪ್ರದ. ಎಲ್ಲವನ್ನೂ ಮೆಟ್ಟಿನಿಲ್ಲುವ ಶಕ್ತಿಯನ್ನು ಕೊಡುತ್ತಾನೆ. ಎಲ್ಲದನ್ನೂ ಎದುರಿಸುವ ಶಕ್ತಿ ಕೊಡುತ್ತಾನೆ. ಸಹೋದರರ ಸಹಕಾರ ಇರಲಿದೆ. ಸೇವಕರಿಂದ ಸಹಾರ ಸಿಗಲಿದೆ. ಜುಲೈ ನಂತರ ರೋಗ ಬಾಧೆ ಹೆಚ್ಚಲಿದೆ. ಸಾಲವೂ ಹೆಚ್ಚಾಗಬಹುದು. ದಾಂಪತ್ಯದಲ್ಲಿ ಮನಸ್ತಾಪಗಳಾಗಬಹುದು. ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲ.
ಪರಿಹಾರ – ಗುರು ಪ್ರರ್ಥನೆ-ನಾಗ ಪ್ರಾರ್ಥನೆ-ಗಣಪತಿ ಪ್ರಾರ್ಥನೆ ಮಾಡಿ
ಶುಭ ರತ್ನ - ಪುಷ್ಯರಾಗ, ಮಾಣಿಕ್ಯ
ಶುಭ ಸಂಖ್ಯೆ - 09
ಶುಭ ವರ್ಣ - ಹಳದಿ-ಕೇಸರಿ
10. ಮಕರ - ಈ ವರ್ಷದ ಆದಿಯಲ್ಲೇ ಬರುವ ಗುರುಬಲದಿಂದ ಸರ್ವ ಸಂಕಟಗಳನ್ನೂ ದಾಟುತ್ತೀರಿ. ಬೌದ್ಧಿಕವಾಗಿ ಹೆಚ್ಚು ಪ್ರಖರವಾಗುತ್ತೀರಿ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಉನ್ನತ ಶಿಕ್ಷಣದವರಿಗೆ ವಿಶೇಷ ಅನುಕೂಲಗಳು ಉಂಟಾಗಲಿವೆ. ಸಂತಾನ ಸೂಚನೆಯಂಥ ಶುಭ ಫಲಗಳನ್ನೂ ಹೊಂದುವಿರಿ. ಮಕ್ಕಳ ಪ್ರತಿಭೆಯಿಂದ ನಿಮಗೆ ಹೆಚ್ಚಿನ ಗೌರವ ಸಂದಾಯವಾಗಲಿದೆ. ದ್ವಿತೀಯದ ಶನೈಶ್ಚರ ಸ್ವಲ್ಪ ಆಲಸ್ಯವನ್ನು ತರುತ್ತಾನಾದರೂ ಹಣಕಾಸಿಗೆ ತೊಂದರೆಯಾಗುವುದಿಲ್ಲ. ಕುಟುಂಬದಲ್ಲಿ ಹಿರಿಯರ ಸಲಹೆಗೆ ಮಾನ್ಯತೆ ಸಿಗಲಿದೆ. ಉಪನ್ಯಾಸಕರಿಗೆ-ಬೋಧಕರಿಗೆ ಹೆಚ್ಚಿನ ಅನುಕೂಲ ಇದೆ. ಜುಲೈವೇಳೆಗೆ ಬಂಧುಗಳಲ್ಲಿ ಕಲಹ, ಗೃಹ ಸಂಬಂಧಿ ತೊಡಕುಗಳನ್ನ ಎದುರಿಸಬೇಕಾಗುತ್ತದೆ. ಉಳಿದಂತೆ ಅನ್ಯ ಗ್ರಹಗಳು ಸ್ವಕ್ಷೇತ್ರ, ಸುಸ್ಥಾನಗಳಲ್ಲಿ ಸಂಚರಿಸುವಾಗ ಶುಭಫಲಗಳನ್ನು ಕಾಣುವಿರಿ. ತೃತೀಯದ ರಾಹು ಸ್ವಲ್ಪ ಗಂಟಲು-ಕಿವಿ ಬಾಧೆಗಳನ್ನು ತರುತ್ತಾನೆ. ಸಹೋದರರಲ್ಲೂ ಮನಸ್ತಾಪ, ಆಗಂತಕ ಸಮಸ್ಯೆಗಳನ್ನು ಒಡ್ಡುತ್ತಾನೆ. ಆದರೆ ಎದುರಿಸುವ ಧೈರ್ಯವನ್ನೂ ಕೊಡುತ್ತಾನೆ. ಮುಖ್ಯವಾಗಿ ಸಾಡೇಸಾತಿನ ಪ್ರಭಾವದಲ್ಲಿರುವವರು ಈ ವರ್ಷದ ಅಂತ್ಯದಲ್ಲಿ ಕಷ್ಟದಿಂದ ಪಾರಾಗುತ್ತೀರಿ. ಈ ಒಂದು ವರ್ಷ ಶನೈಶ್ಚರ ಕೆಲವರನ್ನು ಕಾಡಲಿದ್ದಾನೆ. ತಾಳ್ಮೆಯಿಂದ ಇರಿ.
ಪರಿಹಾರ – ಆಂಜನೇಯ ಸ್ಮರಣೆ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು
11. ಕುಂಭ - ವರ್ಷದ ಆಧಿಯಲ್ಲಿ ಗುರು ಸುಖ ಸ್ಥಾನಕ್ಕೆ ಪ್ರವೇಶಿಸುವುದರಿಂದ ತಾಯಿ-ಬಂಧು-ಮಿತ್ರರ ಒಡನಾಟಗಳಲ್ಲಿ ಚೇತರಿಕೆ ಕಾಣುತ್ತೀರಿ. ಹಾಳಾಗಿದ್ದ ಬಾಂಧವ್ಯಗಳು ಚಿಗುರೊಡೆಯಲಿವೆ. ಕೃಷಿಕರಿಗೆ ಹೆಚ್ಚಿನ ಸೌಖ್ಯ ಉಂಟಾಗಲಿದೆ. ಗೃಹ ನಿರ್ಮಾಣದ ಕಾರ್ಯಗಳಲ್ಲಿ ಅನುಕೂಲ ಉಂಟಾಗಲಿವೆ. ಸುಖ ಸಮೃದ್ಧವಾಗಲಿದೆ. ಅಂದುಕೊಂಡದ್ದು ಈಡೇರಲಿದೆ. ಜನ್ಮದ ಶನೈಶ್ಚರ ಶಶಯೋಗದಲ್ಲಿ ಅಧಿಕಾರವನ್ನೂ ಕಾರ್ಯ ನೈಪುಣ್ಯವನ್ನೂ ಹೆಚ್ಚಿಸಲಿದ್ದಾನೆ. ಆದರೆ ಸಾಡೇಸಾತಿನ ಪ್ರಭಾವ ಇದ್ದೇ ಇರುವುದರಿಂದ ಕೆಲಸಗಳಲ್ಲಿ ನಿಧಾನಗತಿ ಇರಲಿದೆ. ದ್ವಿತಿಯದ ರಾಹು ಮುಖ-ಹಲ್ಲಿನ ಬಾಧೆ ಉಂಟು ಮಾಡುತ್ತಾನೆ. ಆಹಾರ ವ್ಯತ್ಯಾಸದಿಂದ ಹೆಚ್ಚು ಆರೋಗ್ಯ ಹಾಳಾಗಲಿದೆ. ನೀವಾಡುವ ಮಾತೇ ನಿಮಗೆ ಮುಳುವಾಗಲಿದೆ ಎಂಬುದನ್ನು ಮರೆಯಬೇಡಿ. ವಿದ್ಯಾರ್ಥಿಗಳಿಗೆ ಅನಗತ್ಯ ಆಸಕ್ತಿಯಿಂದ ತೊಂದರೆ. ದುಶ್ಚಟಗಳಲ್ಲಿ ತೊಡಗುವ ಸಾಧ್ಯತೆ. ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಕ್ಕೂ ಕಾರಣವಾಗಲಿದೆ. ತುಂಬ ಎಚ್ಚರಿಕೆವಹಿಸಬೇಕು ಈ ವರ್ಷ. ಜುಲೈ ನಂತರ ಸಹೋದರರಲ್ಲಿ ಭಿನ್ನಾಭಿಪ್ರಾಯ. ಮಕ್ಕಳ ಜೊತೆಗಿನ ಬಾಂಧವ್ಯ ಸ್ವಲ್ಪ ಹಾಳಾಗಲಿದೆ. ಅಷ್ಟಮದ ಕೇತು ಆರೋಗ್ಯ ಬಾಧೆಯನ್ನು ತರಲಿದ್ದಾರೆ. ವೃಥಾ ವಾದ-ಘರ್ಷಣೆಗಳನ್ನು ಸೋಲನ್ನು ಕೊಡಲಿದ್ದಾನೆ. ಈ ವರ್ಷ ರಾಹು-ಕೇತುಗಳೇ ನಿಮಗೆ ಹಿನ್ನಡೆ ಸೂಚಿಸುವ ಗ್ರಹಗಳು ಹೀಗಾಗಿ ಗ್ರಹ ಪ್ರಾರ್ಥನೆ ಮಾಡಿ.
ಪರಿಹಾರ - ಕಟೀಲು ದುರ್ಗಾ ದರ್ಶನ ಹಾಗೂ ಗಣಪತಿ ದರ್ಶನ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು
12. ಮೀನ - ಈ ವರ್ಷ ನಿಮ್ಮ ಪಾಲಿಗೆ ಸ್ವಲ್ಪ ಸಂಕಷ್ಟದ ಫಲಗಳಿದ್ದಾವೆ. ಮೇ ತಿಂಗಳಲ್ಲಿ ಗುರುಬಲ ಕಳೆಯಲಿದೆ. ಹಣಕಾಸಿಗೆ ಹೆಚ್ಚು ತೊಂದರೆ ಅನುಭವಿಸುವಿರಿ. ವ್ಯಯದ ಶನೈಶ್ಚರ ವೃಥಾ ಖರ್ಚನ್ನು ಉಂಟು ಮಾಡಿಸುತ್ತಾನೆ. ಹೆಚ್ಚಿನ ಅಲೆದಾಟ ಉಂಟಾಗಲಿದೆ. ಜನ್ಮದ ರಾಹು ತಲೆ ನೋವು, ಜಲರೋಗ ಬಾಧೆಯನ್ನು ಹೆಚ್ಚಿಸುತ್ತಾನೆ. ಚರ್ಮ ವ್ಯಾಧಿಯೂ ಉಂಟಾಗಲಿದೆ. ಸಹೋದರರ ಸಹಕಾರ ಇರಲಿದೆ. ಸೇವಕರು ಸಹಾಯಕರಿಂದ ಸ್ವಲ್ಪ ಸಮಾಧಾನ ಕಾಣುತ್ತೀರಿ. ವೃತ್ತಿಯಲ್ಲಿ ಸಮಾನ್ಯಫಲವಿದೆ. ಸಪ್ತಮದ ಕೇತು ನಿಮ್ಮ ದಾಂಪತ್ಯ ಜೀವನವನ್ನು ಅಸಮಾಧಾನಗೊಳಿಸುತ್ತಾನೆ. ವ್ಯವಹಾರಗಳಲ್ಲಿ ವಿಘ್ನ ತಂದೊಡ್ಡುತ್ತಾನೆ. ಮೇ-ಜೂನ್ ತಿಂಗಳಲ್ಲಿ ಸ್ವಲ್ಪ ಕುಟುಂಬ ಬಲವನ್ನು-ಸಹಕಾರವನ್ನೂ ಕಾಣುತ್ತೀರಿ. ಬುಧ-ಶುಕ್ರರ ಶುಭ ಸಂಚಾರ ಕಾಲದಲ್ಲಿ ಉತ್ತಮ ಫಲಗಳನ್ನು ಕಾಣುತ್ತಿರಿ. ಉಳಿದಂತೆ ಈ ವರ್ಷ ನಿಮಗೆ ಸಾಮಾನ್ಯವಾಗಿದೆ.. ಯಾವುದೇ ಮುಖ್ಯ ಕೆಲಸಕ್ಕೆ ಕೈಹಾಕಬೇಡಿ. ಅನಗತ್ಯ ಪ್ರವಾಸಗಳಿಂದ ಹಣ ನಷ್ಟ ಉಂಟಾಗಲಿದೆ. ಸಾಡೇಸಾತಿನ ಪ್ರಭಾವದಿಂದ ಆರೋಗ್ಯ-ಹಣ ನಷ್ಟ ಫಲವನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಎಚ್ಚರವಾಗಿರಿ. ಸಹವಾಸ ದೋಷದಿಂದ ವ್ಯಕ್ತಿತ್ವ ಹಾಳಾಗಲಿದೆ.
ಪರಿಹಾರ - ಶನೈಶ್ಚರ-ಗುರು ದರ್ಶನ ಮಾಡಿ. ನಾಗ ಪ್ರಾರ್ಥನೆ ಮಾಡಿ
ಶುಭ ರತ್ನ - ಮಾಣಿಕ್ಯ, ಪುಷ್ಯರಾಗ
ಶುಭ ಸಂಖ್ಯೆ - 09
ಶುಭ ವರ್ಣ - ಕೆಂಪು-ಹಳದಿ
ಗಮನಿಸಲೇ ಬೇಕಾದ ಅಂಶ :
ಯದ್ಭಾವಗೋ ಗೋಚರತೋ ವಿಲಗ್ನಾದ್ದಶೇಶ್ವರ: ಸ್ವೋಚ್ಚಸುಹ್ಯದ್ಗೃಹಸ್ಥ: |
ತದ್ಭಾವಪುಷ್ಟಿಂ ಕುರುತೇ ತದಾನೀಂ ಬಲಾನ್ವಿತಶ್ಚೇಜ್ಜನನೇ ಪಿತಸ್ಯ ||
ಎಂಬ ಶಾಸ್ತ್ರಾಧಾರದಂತೆ ಈ ವರ್ಷ ಫಲಕ್ಕಿಂತ ನಿಮ್ಮ ಜಾತಕದ ಗ್ರಹಸ್ಥಿತಿ ಬಹಳ ಮುಖ್ಯ. ಜೊತೆಗೆ ಜಾತಕಗಳಲ್ಲಿ ದಶಾಧಿಪತಿ-ಭುಕ್ತಿನಾಥರು ಬಲಿಷ್ಠರಾಗಿ(ಉಚ್ಚ, ಸ್ವಕ್ಷೇತ್ರ, ಮೂಲತ್ರಿಕೋಣ, ಮಿತ್ರಸ್ಥಾನ ಗಳಲ್ಲಿದ್ದರೆ ) ಲಗ್ನಾದಿ ಯಾವ ಭಾವಗಳಲ್ಲಿ ಗೋಚಾರದಲ್ಲಿ ಸಂಚರಿಸುವರೋ ಆ ಭಾವದ ಫಲಗಳನ್ನು ವೃದ್ಧಿಸುತ್ತಾರೆ. ಹೀಗಾಗಿ ರಾಶಿಫಲ ನೋಡಿ ಆತಂಕಕ್ಕೆ ಒಳಗಾಗಬೇಕಿಲ್ಲ. ಹತ್ತಿರದ ಬಲ್ಲ ಜ್ಯೋತಿಷಿಗಳಿಂದ ಜಾತಕ ಪರಾಮರ್ಶಿಸಿಕೊಳ್ಳಿ. ಎಷ್ಟೋ ಜನಕ್ಕೆ ಸಾಡೇಸಾತಿನ ಭಯವಿದೆ. ನಿಮ್ಮ ಜಾತಕದಲ್ಲಿ ಶನೈಶ್ಚರ ಬಲಿಷ್ಠನಾಗಿದ್ದರೆ ಈಗ ಅಷ್ಟೇನೂ ಸಂಕಷ್ಟಕ್ಕೆ ಒಳಗಾಗುವುದಿಲ್ಲ. ಹನ್ನೆರಡೂ ರಾಶಿಗಳವರು ನವಗ್ರಹ ಕವಚ ಹಾಗೂ ನವಗ್ರಹ ಸ್ತೋತ್ರಗಳನ್ನು ಪಠಿಸಿ.