Faith And Reason: ಕಪ್ಪು ಬೆಕ್ಕು ನಿಮ್ಮ ದಾರಿಗೆ ಅಡ್ಡ ಹೋದರೆ ಅನಾಹುತದ ಸೂಚನೆಯೇ?

By Suvarna News  |  First Published Feb 13, 2022, 2:27 PM IST

ಕಪ್ಪು ಬೆಕ್ಕಿನ ಸುತ್ತ ಹಲವಾರು ಕತೆ, ಪುರಾಣಗಳಿವೆ. ಅಂತೆಕಂತೆಗಳಿವೆ. ಅದರಲ್ಲಿ ನಿಜವೆಷ್ಟು?


ಯಾವುದೋ ಕೆಲಸಕ್ಕೆ ಹೊರಟಿರುತ್ತೇವೆ. ದಾರಿಯಲ್ಲಿ ಬೆಕ್ಕು ಅಡ್ಡ ಹೋಯಿತೆಂದರೆ ಎದೆ ಢವಢವ ಎನ್ನಲಾರಂಭಿಸುತ್ತದೆ. ಅದರಲ್ಲೂ ಬೆಕ್ಕಿನ ಬಣ್ಣ ಕಪ್ಪಾಗಿದ್ದರೆ ಇನ್ನೂ ಭಯ ಆವರಿಸುತ್ತದೆ. ಏನೋ ಅಪಶಕುನ ಕಾದಿದೆ, ಗಂಡಾಂತರ ಎದುರಾಗಲಿದೆ ಎಂದುಕೊಳ್ಳುತ್ತೇವೆ. ಹಾಗಾದಾಗ ಆ ರಸ್ತೆಯಲ್ಲಿ ಕೊಂಚ ಹೊತ್ತು ನಿಂತು ಹೋಗಬೇಕು ಇಲ್ಲವೇ ದಾರಿ ಬದಲಿಸಬೇಕು ಎನ್ನಲಾಗುತ್ತದೆ. ಹೆಚ್ಚಿನವರು ನಿಂತು ಮತ್ಯಾರೋ ಆ ದಾರಿ ದಾಟಿದ ನಂತರ ತಾವು ದಾಟುತ್ತಾರೆ. ಅಂದರೆ, ತಮಗಿರುವ ಗಂಡಾಂತರವನ್ನು ಮತ್ಯಾರಿಗೋ ದಾಟಿಸಿ ನಿಟ್ಟುಸಿರು ಬಿಡುತ್ತಾರೆ! ಇಂಥ ನಂಬಿಕೆ ಕೇವಲ ಭಾರತಕ್ಕೆ ಸೀಮಿತವಲ್ಲ. ಕೆಲ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಪ್ಪು ಬೆಕ್ಕು(black cat)ಗಳೆಂದರೆ ಹ್ಯಾಲೋವೀನ್ ಅಥವಾ ವಾಮಾಚಾರ(witchcraft)ದ ಸೂಚಕ ಎಂಬಂತೆ ಭಾವಿಸಲಾಗುತ್ತದೆ. ಈಜಿಪ್ಟಿಯನ್ನರಿಗೆ ಕಪ್ಪು ಬೆಕ್ಕುಗಳೆಂದರೆ ಕೆಟ್ಟ ಪ್ರಾಣಿಗಳು. 

ಕೆಲ ದೇಶಗಳಲ್ಲಿ ಕಪ್ಪು ಬೆಕ್ಕು ಅಪಶಕುನವೇಕೆ?
ನಮ್ಮ ದೇಶದಲ್ಲಿ ಕಪ್ಪೆಂದರೆ ಅದು ಶನಿ(Lord Shani)ಯ ಬಣ್ಣ. ಹಾಗಾಗಿ ಅದು ಅಡ್ಡ ಬಂದರೆ ಶನಿಯೇ ಅಡ್ಡ ಬಂದಿದ್ದಾನೆ. ಅವನು ಬೆನ್ನು ಹತ್ತಿದರೆ ಜೀವನದಲ್ಲಿ ಎಲ್ಲ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬ ನಂಬಿಕೆಯಿದೆ. ಹಾಗಾಗಿ, ಕಪ್ಪು ಬೆಕ್ಕು ದಾಟಿದಾಗ ಅದನ್ನು ಅಪಶಕುನ ಎನ್ನಲಾಗುತ್ತದೆ. ಶನಿಯೇ ಎದುರು ಬಂದು ಹೊರ ಹೋಗಬೇಡ ಎಂದು ಎಚ್ಚರಿಸುತ್ತಿದ್ದಾನೆ ಎಂದುಕೊಳ್ಳುತ್ತಾರೆ. 

Latest Videos

undefined

ಇನ್ನು ಅಮೆರಿಕ(America)ದ ವಿಷಯಕ್ಕೆ ಬಂದರೆ, ಕಪ್ಪು ಬೆಕ್ಕು ದುರದೃಷ್ಟ ತರುತ್ತದೆ ಎಂದು ನಂಬುತ್ತಾರೆ. ಮಾಟಗಾರರ ಕುಟುಂಬದಿಂದ ಈ ಬೆಕ್ಕು ಬಂದು ತಮ್ಮ ಕೆಡುಕಿನ ಮುನ್ಸೂಚನೆ ನೀಡುತ್ತಿದೆ ಎಂದುಕೊಳ್ಳುತ್ತಾರೆ. ಮಾಟಗಾರರೇ ತಮ್ಮ ವೇಷ ಬದಲಿಸಿ ಬೆಕ್ಕಿನ ರೂಪ ಧರಿಸಿ ಬಂದಿದ್ದಾರೆ ಎಂಬುದು ಅವರ ನಂಬಿಕೆ. ಅದೂ ಅಲ್ಲದೆ ಲಾಸ್ ವೇಗಾಸ್‌ನಲ್ಲಿ ಗ್ಯಾಂಬ್ಲಿಂಗ್ ಹುಚ್ಚು ಜೋರು. ಕ್ಯಾಸಿನೋಗೆ ಹೋಗುವಾಗ ಕರಿ ಬೆಕ್ಕು ಅಡ್ಡವಾದರೆ ತಿರುಗಿ ಮನೆಗೆ ಹೋಗಬೇಕು, ಇಲ್ಲವೇ ಹಣ ಕಳೆದುಕೊಳ್ಳುವುದು ನಿಶ್ಚಿತ ಎನ್ನಲಾಗುತ್ತದೆ. ಇದನ್ನು ಬಹುತೇಕ ಜೂಜುಕೋರರು ನಂಬುತ್ತಾರೆ ಕೂಡಾ. 

Astro tips : ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ ಚಿನ್ನ!

ಗ್ರೀಕ್ ಪುರಾಣ(Greek mythology)ಗಳ ವಿಷಯಕ್ಕೆ ಹೋದರೆ, ಝಿಯಸ್‌ನ ಪತ್ನಿ ಹೆರಾ ಹರ್ಕ್ಯುಲೆಸ್ ಹುಟ್ಟಿಗೆ ಅಡ್ಡಿಯಾಗುತ್ತಿದ್ದಾನೆ ಎಂದು ತನ್ನ ಸೇವಕ ಗಲಿಂತಿಯಾಸ್‌ನನ್ನು ಕಪ್ಪು ಬೆಕ್ಕನ್ನಾಗಿ ಮಾರ್ಪಡಿಸಿದಳು. ನಂತರ ಗಲಿಂತಿಯಾಸ್ ಮಾಟಗಾರರ ದೇವತೆಯಾದ ಹೆಕೇಟ್‌ನ ಸೇವಕನಾಗಿ ಸೇರಿಕೊಂಡಿತು. ಹಾಗಾಗಿ, ಗ್ರೀಸ್, ಈಜಿಪ್ಟ್‌ನಲ್ಲೆಲ್ಲ ಕಪ್ಪು ಬೆಕ್ಕು ಕೆಟ್ಟದ್ದು ಎನ್ನಲಾಗುತ್ತದೆ. 

ಯೂರೋಪಿನಲ್ಲಿ ಜಾನಪದ ಕತೆಯೊಂದರಂತೆ, ಬೆಳದಿಂಗಳ ರಾತ್ರಿಯಲ್ಲಿ ನಡೆದು ಹೋಗುವಾಗ ಕಪ್ಪು ಬೆಕ್ಕು ಅಡ್ಡಬಂದರೆ ಸಾಂಕ್ರಾಮಿಕ ರೋಗದಿಂದ ಸಾವು ಬರುತ್ತದೆ ಎನ್ನಲಾಗುತ್ತದೆ. ಅದೇ ನಂಬಿಕೆ ನಂತರ ಹಬ್ಬಿದೆ. 

ಅದೃಷ್ಟವೂ ಹೌದು
ಆದರೆ, ಪಾಪ, ಕಪ್ಪು ಬೆಕ್ಕು ಇದಕ್ಕೆಲ್ಲ ಬೇಸರಿಸಿಕೊಳ್ಳಬೇಕಿಲ್ಲ. ಏಕೆಂದರೆ, ಅದನ್ನು ಅಪಶಕುನ ಎನ್ನುತ್ತಿದ್ದಾರೆ ಎಂದರೆ ಅದು ತಪ್ಪಾದ ಸ್ಥಳದಲ್ಲಿದೆ ಎಂದರ್ಥ. ಹೌದು, ಬ್ರಿಟನ್, ಜರ್ಮನಿ(Germany), ಐರ್‌ಲ್ಯಾಂಡ್ ಅಥವಾ ಜಪಾನ್‌(Japan)ನಲ್ಲಿ ಆ ಬೆಕ್ಕು ಹೀಗೆ ದಾರಿಗಡ್ಡವಾಗಿ ಹೋಗಿದ್ದರೆ, ಅದೃಷ್ಟ(luck) ಎಂದು ಭಾವಿಸಿ ಅದಕ್ಕೆ ಮುತ್ತೇ ಕೊಡುತ್ತಿದ್ದರು. ಸ್ಕಾಟ್‌ಲ್ಯಾಂಡ್‌(Scotland)ನಲ್ಲಾದರೆ, ಕಪ್ಪು ಬೆಕ್ಕು ಅಪ್ಪಿತಪ್ಪಿ ಮನೆಗೆ ಬಂದರೆ ಸಮೃದ್ಧಿಯನ್ನೇ ಹೊತ್ತು ತರುವುದು ಎಂದು ಖುಷಿಯಾಗಿ ಬಿಡುತ್ತಿದ್ದರು. 

Weekly Horoscope: ವೃಷಭಕ್ಕೆ ಉತ್ತಮ ಹಣದ ಹರಿವು, ಧನುವಿಗೆ ಭೂಮಿಯಿಂದ ಲಾಭ

ಕೆಲ ಇತಿಹಾಸಗಳಲ್ಲಿ, ಪುರಾಣಗಳಲ್ಲಿ ಕೂಡಾ ಕಪ್ಪು ಬೆಕ್ಕನ್ನು ಅದೃಷ್ಟ ದೇವತೆ ಎಂದು ನಂಬಲಾಗಿದೆ. 3000 ಬಿಸಿಗೆ ಹೋದರೆ, ಆಗ ಅಮೆರಿಕದಲ್ಲಿಯೇ ಕಪ್ಪು ಬೆಕ್ಕುಗಳನ್ನು ಬಹಳ ಅಪರೂಪದ ಜೀವಿ ಎಂದು ಸಂಭ್ರಮಿಸಲಾಗುತ್ತಿತ್ತು. ಅವಕ್ಕೆ ಯಾರಾದರೂ ತೊಂದರೆ ಮಾಡಿದರೆ ಅದೊಂದು ದೊಡ್ಡ ಅಪರಾಧವೆಂದು ಪರಿಗಣಿತವಾಗಿ ಶಿಕ್ಷೆ ವಿಧಿಸಲಾಗುತ್ತಿತ್ತು. ಇನ್ನು ಹಡಗುಗಳಲ್ಲಿ ವರ್ಷಗಟ್ಟಲೆ ಪ್ರಯಾಣಿಸುತ್ತಿದ್ದ ನಾವಿಕರು, ವ್ಯಾಪಾರಿಗಳು ಹಡಗಿನಲ್ಲಿ ಕಪ್ಪು ಬೆಕ್ಕೊಂದು ಇದ್ದರೆ ಅದೃಷ್ಟ ತರುತ್ತವೆ ಎಂದು ಇಟ್ಟುಕೊಂಡಿರುತ್ತಿದ್ದರು. ಮೀನುಗಾರರ ಪತ್ನಿಯರೂ ತಮ್ಮ ಗಂಡ ಮನೆಗೆ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಕೋರಿ ಮನೆಯಲ್ಲಿ ಕಪ್ಪು ಬೆಕ್ಕು ಸಾಕುತ್ತಿದ್ದರು.

ಇನ್ನೂ ಹಲ ಸಂಸ್ಕೃತಿಗಳಲ್ಲಿ ಕಪ್ಪು ಬೆಕ್ಕು ನಮ್ಮ ಬಳಿ ಬಂದರೆ ಅದೃಷ್ಟ, ನಮ್ಮಿಂದ ದೂರ ಹೋದರೆ ದುರದೃಷ್ಟ ಎನ್ನಲಾಗುತ್ತದೆ. 

ಮಾನವೀಯತೆಯ ಹಾಗೂ ವಾಸ್ತವದ ದೃಷ್ಟಿಕೋನದಲ್ಲಿ ನೋಡಿದರೆ, ಅದೂ ಕೂಡಾ ಎಲ್ಲ ಜೀವಿಗಳಂತೆ ಒಂದು ಜೀವಿಯಷ್ಟೇ. ಬಣ್ಣದ ಆಧಾರದಲ್ಲಿ ಬೇಧ ತೋರುವುದು ಮನುಷ್ಯರಿಗೆ ಸರ್ವೇಸಾಮಾನ್ಯವಾಗಿದೆ. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ, ಅದಕ್ಕೂ ಏನೋ ಕೆಲಸವಿದೆ, ತನ್ನ ಕೆಲಸಕ್ಕಾಗಿ ಹೋಗುತ್ತಿದೆ ಎಂದಷ್ಟೇ ಅರ್ಥ. ನೀವು ಡ್ರೈವ್ ಮಾಡುತ್ತಿದ್ದರೆ ಅದರ ಮೇಲೆ ವಾಹನ ಚಲಿಸದಂತೆ ಎಚ್ಚರ ವಹಿಸಿದರೆ ಸಾಕು. ಬೇರಾವ ರೀತಿಯ ಎಚ್ಚರವೂ ಅಗತ್ಯವಿಲ್ಲ. 

click me!