ಧರ್ಮಸ್ಥಳ ದೇವಾಲಯ ಗೊತ್ತಿರದ ಕನ್ನಡಿಗರೇ ಇಲ್ಲ. ಆದರೆ, ಈ ದೇವಾಲಯದ ಬಗೆಗಿನ ಅಪರೂಪದ ಮಾಹಿತಿಗಳು ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಅದರ ಬಗ್ಗೆ ಬೆಳಕು ಹಾಯಿಸೋಣ.
ಶಿವ ದೇವಸ್ಥಾನ(Shiva temple)ಗಳೆಂದರೆ ಮೊದಲು ಯೋಚನೆಗೆ ಬರುವುದೇ ಧರ್ಮಸ್ಥಳ(Dharmasthala). ಧರ್ಮಸ್ಥಳವೆಂದರೆ ಕನ್ನಡಿಗರ ಭಯಭಕ್ತಿ ಅಪಾರ. ಎಂಥ ಕಳ್ಳ ಸುಳ್ಳನೇ ಆಗಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ತಲೆ ಮೇಲೆ ಆಣಿ ಮಾಡಿ ಸುಳ್ಳಾಡಲು ಧೈರ್ಯ ಮಾಡಲಾರ. ಅದಕ್ಕೇ ಹೇಳುವುದು ಮಾತಿಗೆ ಮಂಜುನಾಥ ಎಂದು. ಕರ್ನಾಟಕದಲ್ಲಿ ಅಥಿ ಹೆಚ್ಚು ಭಕ್ತರನ್ನು ಸೆಳೆಯುವ ದೇವಸ್ಥಾನಗಳಲ್ಲೂ ಧರ್ಮಸ್ಥಳ ಮುಂದು. ಈ ಧರ್ಮಸ್ಥಳ ಮಂಜುನಾಥ ದೇವಾಲಯದ ಹಿನ್ನೆಲೆ, ಪುರಾಣ, ವಿಶೇಷಗಳ ಬಗೆಗಿನ ಆಸಕ್ತಿಕರ ಮಾಹಿತಿಗಳು ಇಲ್ಲಿವೆ.
ನೇತ್ರಾವತಿ(Netravathi) ತಟದಲ್ಲಿ
ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ತಟದಲ್ಲಿದೆ. ಇಲ್ಲಿನ ಮುಖ್ಯ ದೇವಾಲಯ ಶಿವನಿಗೆ ಮೀಸಲಾಗಿದ್ದರೆ, ಅಮ್ಮನವರು, ಚಂದ್ರನಾಥ್ ಹಾಗೂ ಧರ್ಮ ದೈವ(Dharma Daivas)ಗಳು ಕೂಡಾ ಇಲ್ಲಿ ಪೂಜಿಸಲ್ಪಡುತ್ತಾರೆ.
ಇಂಥದ್ದಿನ್ನೊಂದಿಲ್ಲ!
ಈ ದೇವಾಲಯದ ವಿಶೇಷ ಇರುವುದು ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ. ಶೈವರು ಹಾಗೂ ವೈಷ್ಣವರ ನಡುವೆ ಆದ ಗಲಭೆಗಳನ್ನು ಇತಿಹಾಸದಲ್ಲಿ ಸಾಕಷ್ಟು ಕಂಡಿದ್ದೇವೆ. ಆದರೆ, ಇಲ್ಲಿ ಶಿವನಿಗೆ ಪೂಜಿಸುವ ಅರ್ಚಕರು ವೈಷ್ಣವ(Vaishnava)ರಾಗಿದ್ದರೆ, ದೇವಸ್ಥಾನದ ಆಡಳಿತ ನಡೆಸುವವರು ಜೈನ(Jains)ರೆಂಬುದು ಬಹಳ ವಿಶೇಷ. ಹೌದು, ಜೈನರಾದ ವೀರೇಂದ್ರ ಹೆಗ್ಗಡೆಯವರು ಇಲ್ಲಿ ಧರ್ಮದರ್ಶಿಗಳು.
ಜೈನ ತೀರ್ಥಂಕರ(Jain Thirthankara)ಗೂ ಪೂಜೆ
ಈ ದೇವಾಲಯದಲ್ಲಿ ಹಿಂದೂ ಧರ್ಮ ಹಾಗೂ ಜೈನ ಧರ್ಮ ಒಂದರಲ್ಲೊಂದು ಸಾಮರಸ್ಯದಿಂದ ಬೆರೆತು ಹೋಗಿವೆ. ಇಲ್ಲಿ ಮಂಜುನಾಥ ಸ್ವಾಮಿಯಷ್ಟೇ ಅಲ್ಲ, ದೈವಗಳ ಪಕ್ಕದಲ್ಲಿ ಜೈನ ತೀರ್ಥಂಕರನಿಗೂ ಪೂಜೆ ನಡೆಯುತ್ತದೆ.
ಸ್ಥಳ ಪುರಾಣ
ಸುಮಾರು 800 ವರ್ಷಗಳ ಹಿಂದೆ ಹೋದರೆ ಆಗ ಕಡುಮ ಎಂಬ ಹೆಸರಿನ ಊರು ಇದಾಗಿತ್ತು. ಇಲ್ಲಿನ ನೆಲ್ಲಾಡಿ ಬೀಡಿನಲ್ಲಿ ಜೈನ ಮುಖ್ಯಸ್ಥ ಭೀರ್ಮನ್ನ ಪೆರ್ಗಡೆ ಹಾಗೂ ಪತ್ನಿ ಅಮ್ಮು ಬಲ್ಲತಿ ಎಂಬವರು ವಾಸಿಸುತ್ತಿದ್ದರು. ಒಂದು ರಾತ್ರಿ ಪೆರ್ಗಡೆಯ ಕನಸಿನಲ್ಲಿ ಧರ್ಮ ದೈವಗಳಾದ ಕಾಳರಾಹು, ಕಾಳಾರ್ಕಾಯಿ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಬಂದು ತಮಗಾಗಿ ದೇವಸ್ಥಾನ ನಿರ್ಮಿಸುವಂತೆ ಕೇಳಿದವಂತೆ. ಅದಕ್ಕೆ ಒಪ್ಪಿದ ಪೆರ್ಗಡೆ ಕಡುಮದಲ್ಲಿ ಈ ದೈವಗಳಿಗೆ ದೇವಾಲಯ ಕಟ್ಟಿಸಿದರು. .
ಈ ದೈವಗಳಿಗೆ ಪೂಜೆ ಮಾಡಲು ಬ್ರಾಹ್ಮಣ ಅರ್ಚಕರನ್ನು ಪೆರ್ಗಡೆ ಕರೆಸಿದಾಗ, ಇಲ್ಲೊಂದು ಶಿವಲಿಂಗವನ್ನೂ ಪ್ರತಿಷ್ಠಾಪಿಸಲು ಅರ್ಚಕರು ಕೋರಿದರಂತೆ. ಆಗ ಪೆರ್ಗಡೆ ಸ್ಥಳೀಯ ಅಣ್ಣಪ್ಪನಿಗೆ ಹೇಳಿ ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿದ್ದ ಶಿವಲಿಂಗವನ್ನು ತರಿಸಿದರು. ಆ ನಂತರದಲ್ಲಿ ಲಿಂಗಕ್ಕೂ ದೊಡ್ಡ ದೇವಾಲಯ ಕಟ್ಟಿಸಿದರು.
ವಾದಿರಾಜರ ಆಗಮನ
16ನೇ ಶತಮಾನದಲ್ಲಿ, ಅಂದಿನ ದೇವಾಲಯ ಧರ್ಮಾಧಿಕಾರಿ ಶ್ರೀ ದೇವರಾಜ ಹೆಗ್ಗಡೆಯವರು ಉಡುಪಿಯ ಶ್ರೀ ವಾದಿರಾಜ(Vadiraja) ಸ್ವಾಮಿಯನ್ನು ಇಲ್ಲಿಗೆ ಆಹ್ವಾನಿಸಿದರು. ಅವರ ಮಾತನ್ನು ಒಪ್ಪಿ ಬಂದ ವಾದಿರಾಜರು, ಲಿಂಗವನ್ನು ನೋಡಿ ವೇದಗಳಲ್ಲಿ ಹೇಳಿದ ರೀತಿಯಲ್ಲಿ ಲಿಂಗ ಪ್ರತಿಷ್ಠಾಪನೆ ಆಗಿಲ್ಲ ಎಂದು, ತಾವೇ ಮುಂದೆ ನಿಂತು ಸರಿಪಡಿಸಿದರಂತೆ. ನಂತರ ಈ ಸ್ಥಳದ ಮಹಿಮೆ, ವಿಶೇಷತೆ ಹಾಗೂ ದಾನಧರ್ಮ ಕಾರ್ಯಗಳನ್ನು ನೋಡಿ ಮೆಚ್ಚಿದ ವಾದಿರಾಜರು, ಇದಕ್ಕೆ ಧರ್ಮಸ್ಥಳ(Dharmasthala) ಎಂಬ ಹೆಸರನ್ನಿಟ್ಟರು.
ಪೆರ್ಗಡೆ ಕುಟುಂಬ
ಅಂದಿನಿಂದಲೂ ಪೆರ್ಗಡೆ ಕುಟುಂಬವೇ ಧರ್ಮಸ್ಥಳ ಕ್ಷೇತ್ರವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಇದುವರೆಗೂ ಪೆರ್ಗಡೆ ಕಟುಂಬದ 20 ತಲೆಮಾರುಗಳು ಧರ್ಮ ಸ್ಥಳ ಕ್ಷೇತ್ರದ ವಿಶೇಷತೆ ಹಾಗೂ ದಾನಧರ್ಮ(Charity) ಕಾರ್ಯವನ್ನು ಮುಂದುವರೆಸಿಕೊಂಡು ಬಂದಿವೆ. ಪ್ರತಿ ತಲೆಮಾರಿನ ಹಿರಿಯ ಮಗ ಧರ್ಮಾಧಿಕಾರಿಯಾಗಿ ಹೆಗ್ಗಡೆ ಹೆಸರನ್ನು ಬಳಸುತ್ತಾರೆ.
ಅನ್ನದಾನ
ಇಂದು ಪ್ರತಿದಿನ ದೇವಾಲಯಕ್ಕೆ ಸರಾಸರಿ 10,000 ಜನರು ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರಿಗೆ ಅನ್ನಪ್ರಸಾದವಿದ್ದು, ಹೊಟ್ಟೆ ತುಂಬುವವರೆಗೂ ಊಟ ಮಾಡಬಹುದು. ಇಲ್ಲಿನ ಅನ್ನದಾನ ಹಾಲ್ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಹಾಲ್‌ಗಳಲ್ಲಿ ಒಂದಾಗಿದೆ. ಇಲ್ಲಿ ಸುಲಭವಾಗಿ ದಿನಕ್ಕೆ 10,000 ಜನರು ಊಟ ಮಾಡಬಹುದಾಗಿದೆ. ಕಾರ್ತೀಕ ಮಾಸದಲ್ಲಿ 1,00,000 ಲಕ್ಷ ದೀಪಗಳನ್ನು ಹಚ್ಚಲಾಗುತ್ತದೆ. ಮಹಾಶಿವರಾತ್ರಿ ಆಚರಣೆಯನ್ನು ಬೃಹತ್ ರೂಪದಲ್ಲಿ ನಡೆಸಲಾಗುತ್ತದೆ.