
- ಮಹಾಬಲ ಸೀತಾಳಭಾವಿ
ಒಮ್ಮೆ ವೈಕುಂಠದಲ್ಲಿ ನಾರದ ಹಾಗೂ ವಿಷ್ಣುವಿನ ನಡುವೆ ಮಾಯೆಯ ಬಗ್ಗೆ ಗಹನವಾದ ಚರ್ಚೆಯಾಯಿತು. ನಾರದ ಮುನಿಗಳೇ, ಮಾಯೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಾವಿಷ್ಣು ಹೇಳಿದ. ನಾರದ ಒಪ್ಪಲಿಲ್ಲ. ಕಠಿಣ ಮನಸ್ಸಿದ್ದರೆ ಮಾಯೆಯಿಂದ ಪಾರಾಗಬಹುದು. ನನಗೆ ಬ್ರಹ್ಮ ಹಾಗೂ ದಕ್ಷ ಪ್ರಜಾಪತಿಯ ಶಾಪವಿದ್ದರೂ ಬಹಳ ಜಾಗರೂಕತೆಯಿಂದ ನಾನು ಮಾಯೆಯಿಂದ ತಪ್ಪಿಸಿಕೊಂಡಿಲ್ಲವೇ ಎಂದು ಕೇಳಿದ. ಓಹೋ ಹೌದಾ, ಹಾಗಾದರೆ ಇವನಿಗೊಂದು ಪಾಠ ಕಲಿಸಬೇಕು ಎಂದು ವಿಷ್ಣು ಮನಸ್ಸಿನಲ್ಲೇ ನಿರ್ಧರಿಸಿದ.
'ನಾರದರೇ, ನನ್ನ ಗರುಡ ವಾಹನದಲ್ಲಿ ಸಂಚಾರ ಮಾಡುವ ಅನುಭವ ಎಷ್ಟು ಮಜವಾಗಿರುತ್ತದೆ ಗೊತ್ತಾ ನಿಮಗೆ? ಬನ್ನಿ ಒಂದು ಸುತ್ತು ಹೋಗಿ ಎಲ್ಲಾ ಲೋಕಗಳನ್ನೂ ಸುತ್ತಿಕೊಂಡು ಬರೋಣ,' ಎಂದು ವಿಷ್ಣು ಹೇಳಿದ. ನಾರದನಿಗೂ ಬಹಳ ಹಿಂದಿನಿಂದ ಅದೊಂದು ಕನಸಿತ್ತು. ಗರುಡನ ಮೇಲೆ ಕುಳಿತು ವಿಷ್ಣು ಭಯಂಕರ ವೇಗದಲ್ಲಿ ಸಂಚರಿಸುವಾಗಲೆಲ್ಲ ನಾನೂ ಒಮ್ಮೆ ಹೀಗೆ ಗರುಡನ ಮೇಲೆ ಕುಳಿತು ಸಂಚಾರಕ್ಕೆ ಹೋಗಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ತಿಂದಿದ್ದ. ಆದರೆ ವಿಷ್ಣುವನ್ನು ಕೇಳುವುದು ಹೇಗೆ ಎಂದು ಸುಮ್ಮನಿದ್ದ. ಈಗ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿದೆ. ದೂಸರಾ ಮಾತಿಲ್ಲದೆ ಒಪ್ಪಿಕೊಂಡುಬಿಟ್ಟ.
ಅದರಂತೆ ಗರುಡನ ಮೇಲೆ ನಾರದ ಹಾಗೂ ಮಹಾವಿಷ್ಣು ಕುಳಿತು ಶರವೇಗದಲ್ಲಿ ಲೋಕ ಸಂಚಾರಕ್ಕೆ ಹೋದರು. ವಿಷ್ಣು ಹೇಳಿದಂತೆ ಪ್ರಯಾಣ ಬಹಳ ಆಹ್ಲಾದಕರವಾಗಿತ್ತು. ನಾರದ ಬಹಳ ಖುಷಿಯಾದ. ಅಷ್ಟರಲ್ಲಿ ಕನೌಜ ನಗರ ಬಂತು. ಅಲ್ಲೊಂದು ಸುಂದರ ಸರೋವರವಿತ್ತು. ಅದನ್ನು ನೋಡಿ ನಾರದನಿಗೆ ಈಜಾಡುವ ಮನಸ್ಸಾಯಿತು. 'ಭಗವಾನ್, ಈ ಕೊಳದಲ್ಲೊಂದು ಸ್ನಾನ ಮಾಡೋಣ. ತುಂಬಾ ಹೊತ್ತಿನಿಂದ ಹೀಗೇ ಹೋಗುತ್ತಲೇ ಇದ್ದೇವೆ. ಆಯಾಸವಾಗಿದೆ' ಎಂದು ಹೇಳಿದ. ಮಹಾವಿಷ್ಣು ಬೇಡ ಅಂದ. 'ಗೊತ್ತಿಲ್ಲದ ಊರು, ಗೊತ್ತಿಲ್ಲದ ನೀರು. ಎಲ್ಲಿ ಏನು ಅಪಾಯವಿರುತ್ತದೆಯೋ ಯಾರಿಗೆ ಗೊತ್ತು. ಬನ್ನಿ ಹೋಗೋಣ. ವೈಕುಂಠದ ಕೊಳದಲ್ಲಿ ಸ್ನಾನ ಮಾಡುವಿರಂತೆ' ಎಂದು ಹೇಳಿದ. ಆದರೂ ನಾರದ ಕೇಳಲಿಲ್ಲ. ಸರಿ, ನಿಮ್ಮ ಹಣೆಬರಹ ಎಂದು ವಿಷ್ಣು ವಾಹನ ನಿಲ್ಲಿಸಿದ.
Indian Mythology: ಪರಶುರಾಮ ಏಕೆ ಗಣೇಶನ ಹಲ್ಲು ಮುರಿದ?
ನಾರದ ತನ್ನ ಕಮಂಡಲ ಹಾಗೂ ವೀಣೆಯನ್ನು ದಡದ ಮೇಲಿಟ್ಟು, ಬಟ್ಟೆಗಳನ್ನೆಲ್ಲ ಕಳಚಿ ನೀರಿಗಿಳಿದ. ಮಹಾವಿಷ್ಣು ಹೋಗಲಿಲ್ಲ. ನಾರದ ನೀರಿನಲ್ಲಿ ಮುಳುಗುತ್ತಿದ್ದಂತೆ ವಿಷ್ಣು ಮೆತ್ತಗೆ ಅವನ ಕಮಂಡಲ, ವೀಣೆ ಹಾಗೂ ಬಟ್ಟೆ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿಬಿಟ್ಟ. ಅತ್ತ ನೀರಿನಲ್ಲಿ ಮುಳುಗಿದ್ದ ನಾರದ ಸ್ವಲ್ಪ ಹೊತ್ತಿನ ಬಳಿಕ ಮೇಲಕ್ಕೆದ್ದ. ಅದೇನು ಮಾಯೆಯೋ ಏನೋ, ಅವನು ಹೆಣ್ಣಾಗಿಬಿಟ್ಟಿದ್ದ. ಹೆಣ್ಣು ಅಂದರೆ ಅಂತಿಂಥ ಹೆಣ್ಣಲ್ಲ, ಸುರಸುಂದರಿಯೇ ಆಗಿದ್ದ. ಅವನಿಗೆ ಹಿಂದಿನ ಯಾವ ನೆನಪೂ ಇರಲಿಲ್ಲ. ತಾನು ಯಾರೆಂಬುದು ಕೂಡ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಹೊಸ ರೂಪ ತಳೆದು ಕಂಗೊಳಿಸುತ್ತಿದ್ದ.
ಅಷ್ಟರಲ್ಲಿ ಅಲ್ಲಿಗೆ ಕನೌಜದ ಮಹಾರಾಜ ಸ್ನಾನಕ್ಕೆ ಬಂದ. ಅವನಿಗೆ ಈ ಹೆಣ್ಣನ್ನು ನೋಡಿ ಮನಸ್ಸಾಯಿತು. ನೀನು ಯಾರು ಎಂದು ಪೂರ್ವಾಪರ ವಿಚಾರಿಸಿದ. ಇವಳಿಗೆ ಏನೂ ಗೊತ್ತಿರಲಿಲ್ಲ. ಆದರೆ ರಾಜನಿಗೆ ಅವಳ ಸೌಂದರ್ಯದ ಮುಂದೆ ಇನ್ನಾವುದೂ ಲೆಕ್ಕಕ್ಕಿರಲಿಲ್ಲ. ಅವಳನ್ನು ಅರಮನೆಗೆ ಕರೆದುಕೊಂಡು ಬಂದು, ಶಾಸ್ತ್ರೋಕ್ತವಾಗಿ ಮದುವೆಯಾಗಿ, ತನ್ನ ಪಟ್ಟದ ಅರಸಿಯನ್ನಾಗಿ ಮಾಡಿಕೊಂಡ. ಅವಳಿಗೆ ಸೌಭಾಗ್ಯ ಸುಂದರಿ ಎಂದು ಹೆಸರಿಟ್ಟಿದ್ದ. ಸುಂದರಿ ಹನ್ನೆರಡು ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಜೀವನ ಸುಖವಾಗಿತ್ತು.
ಒಮ್ಮೆ ಭೀಕರ ಯುದ್ಧ ನಡೆಯಿತು. ಅದರಲ್ಲಿ ರಾಜನ ಎಲ್ಲ ಹನ್ನೆರಡು ಮಕ್ಕಳೂ ಸತ್ತು ಹೋದರು. ಅವರ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ರಾಜ ಹಾಗೂ ರಾಣಿ ಅದೇ ಸರೋವರದಲ್ಲಿ ಸ್ನಾನ ಮಾಡಿ, ಆಶೌಚ ತೊಳೆದುಕೊಳ್ಳಲು ಬಂದರು. ರಾಣಿ ನೀರಿನಲ್ಲಿ ಮುಳುಗಿ ಏಳುತ್ತಿದ್ದಂತೆ ನಾರದನಾಗಿ ಬದಲಾಗಿಬಿಟ್ಟಳು! ಆಗ ನಾರದನಿಗೆ ಹಿಂದಿನದ್ದೆಲ್ಲ ನೆನಪಿಗೆ ಬಂತು. ತಾನು ವಿಷ್ಣುವಿನ ಜೊತೆ ಸಂಚಾರಕ್ಕೆ ಹೋಗಿದ್ದು, ಬೇಡ ಅಂದರೂ ಕೇಳದೆ ನೀರಿನಲ್ಲಿ ಮುಳುಗಿದ್ದು, ಹೆಣ್ಣಾಗಿ ಬದಲಾಗಿದ್ದು, ಸ್ವತಃ ದೇವರಾಗಿದ್ದರೂ ಭೂಲೋಕದಲ್ಲಿ ಒಂದು ಜನ್ಮವನ್ನು ಮನುಷ್ಯನಂತೆ ಬದುಕಬೇಕಾಗಿ ಬಂದಿದ್ದು ಹೀಗೆ ಎಲ್ಲವೂ ಒಂದಾದ ಮೇಲೊಂದರಂತೆ ಮನಸ್ಸಿನಲ್ಲಿ ಹಾದು ಹೋದವು.
ರಾವಣನಿಗೆ ಪುಷ್ಪಕ ವಿಮಾನ ಸಿಕ್ಕಿದ್ದೆಲ್ಲಿ? ಕೇಳರಿಯದ ಕಥೆ ಇಲ್ಲಿದೆ
ಮಾಯೆಯೆಂದರೆ ಹಾಗೆಯೇ. ಮಹಾವಿಷ್ಣುವು ಈ ಘಟನೆಯ ಮೂಲಕ ವಿಷ್ಣುವಿಗೆ ಮಾಯೆಯ ಮಜಕೂರಿನ ಬಗ್ಗೆ ಪಾಠ ಹೇಳಿದ್ದ. ಎಲ್ಲರೂ ತಮ್ಮ ತಮ್ಮ ಪ್ರಾರಬ್ಧಕ್ಕೆ ಅನುಗುಣವಾಗಿ ಮಾಯೆಯ ಫಲವನ್ನು ಉಣ್ಣಲೇಬೇಕು. ಯಾರು ಏನೇ ಹೇಳಿದರೂ ಮಾಯೆ ತನ್ನ ಕೆಲಸವನ್ನು ಮಾಡಿಯೇ ಮಾಡುತ್ತದೆ ಎಂಬುದು ನಾರದನಿಗೆ ಅರ್ಥವಾಗಿತ್ತು.
ಶ್ರೀಮದ್ ಭಗವತ ಪುರಾಣದಲ್ಲಿ ಬರುವ ಈ ಕತೆಯು ಬದುಕಿನ ಮಾಯೆಗಳ ಬಗ್ಗೆ ನಮಗೂ ಪಾಠವಿದ್ದಂತೆ. ಮಹಾಮುನಿ ನಾರದನನ್ನೇ ಬಿಡದ ಮಾಯೆ ನಮ್ಮ ಬದುಕಿನಲ್ಲಿ ಏನೇನು ಆಟ ಆಡಬಹುದು ನೋಡಿ!