
ಹಿಮಾಲಯ (Himalaya)ದ ತಪ್ಪಲಿನಲ್ಲಿ ಕಠಿಣ ತಪಸ್ಸು ಮಾಡುವ ಅದೆಷ್ಟೋ ಸನ್ಯಾಸಿಗಳು ನಮಗೆ ಸಿಗ್ತಾರೆ. ಭಾರತ ಆಧ್ಯಾತ್ಮಿಕತೆಗೆ ಹೆಸರುವಾಸಿ. ಇಲ್ಲಿ ಮುಕ್ತಿಗೆ ಮೊದಲ ಸ್ಥಾನ. ಭೌತಿಕ ಸುಖ – ಸಂತೋಷವನ್ನು ತೊರೆದು ಸನ್ಯಾಸಿ (monk) ದೀಕ್ಷೆ ಪಡೆಯುವ ಜನರು ಕಠಿಣ ಧ್ಯಾನ, ತಪಸ್ಸಿನ ಮೂಲಕ ದೇವರನ್ನು ಒಲಿಸಿಕೊಳ್ತಾರೆ. ಮೋಕ್ಷಕ್ಕೆ ಹತ್ತಿರವಾಗ್ತಾರೆ. ಆತ್ಮ ಸಂತೋಷವನ್ನು ಪಡೆಯುತ್ತಾರೆ. ಕುಂಭ ಮೇಳದ ಸಂದರ್ಭದಲ್ಲಿ ಇಂಥ ಅನೇಕ ಸಾಧು – ಸಂತರು ನಮ್ಮ ಕಣ್ಣಿಗೆ ಬಿದ್ದಿದ್ದಿದೆ. ಅದ್ರಲ್ಲಿ ಅಮರ್ ಭಾರತಿ (Amar Bharati) ಕೂಡ ಒಬ್ಬರು. ಇವರು ವಿಶ್ವ ಶಾಂತಿ (world peace)ಗಾಗಿ ತಮ್ಮನ್ನು ತಾವು ದಣಿಸಿಕೊಳ್ತಿದ್ದಾರೆ. ಸುಮಾರು ಐವತ್ತು ವರ್ಷಗಳಿಂದ ತಮ್ಮ ಬಲಗೈ ಮೇಲೆತ್ತಿಕೊಂಡಿದ್ದಾರೆ.
ಅಮರ್ ಭಾರತಿ, ಕಳೆದ 50 ವರ್ಷಗಳಿಂದ ತೋಳಿಲ್ಲದವರಂತೆ ಬದುಕುತ್ತಿದ್ದಾರೆ. ತಿನ್ನುವುದು, ಬಟ್ಟೆ ಧರಿಸುವುದು, ಸ್ನಾನ ಸೇರಿದಂತೆ ಎಲ್ಲ ಕೆಲಸಕ್ಕೂ ಅವರು ಒಂದು ಕೈ ಮಾತ್ರ ಬಳಸ್ತಿದ್ದಾರೆ. ಇದು ಸುಲಭವಲ್ಲದಿದ್ದರೂ, ಈ ಜೀವನಶೈಲಿ ಅವರನ್ನು ಶಿವನ ಹತ್ತಿರಕ್ಕೆ ಕರೆದೊಯ್ಯುತ್ತಿದೆ, ಜೀವನಕ್ಕೆ ಶಾಂತಿ ನೀಡ್ತಿದೆ ಎಂದು ಅಮರ್ ಭಾರತಿ ನಂಬಿದ್ದಾರೆ.
ನಾವು ನಮ್ಮ ಮಕ್ಕಳನ್ನು ಪರಸ್ಪರ ಜಗಳ ಆಡಲು ಪ್ರೇರೇಪಿಸುತ್ತಿದ್ದೇವೆ. ನಮ್ಮ ನಡುವೆ ಇಷ್ಟೊಂದು ದ್ವೇಷ ಏಕೆ, ಎಲ್ಲಾ ಭಾರತೀಯರು ಮತ್ತು ಇಡೀ ಪ್ರಪಂಚವು ಪರಸ್ಪರ ಶಾಂತಿಯಿಂದ ಬದುಕಬೇಕೆಂದು ನಾನು ಬಯಸುತ್ತೇನೆ ಎಂದು ಸಾಧು ಅಮರ್ ಭಾರತಿ ಅಭಿಪ್ರಾಯವಾಗಿದೆ. ಅದಕ್ಕಾಗಿಯೇ ಅವರು ಒಂದು ಕೈ ಮೇಲೆತ್ತಿ ಬದುಕುತ್ತಿದ್ದಾರೆ.
ಭಾರತೀಯ ಸಾಧುಗಳಿಗೆ, ವಿಮೋಚನೆ ಮತ್ತು ಜ್ಞಾನೋದಯವನ್ನು ಸಾಧಿಸಲು ತೀವ್ರ ಸ್ವ-ಶಿಸ್ತಿನ ಅಗತ್ಯವಿರುತ್ತದೆ. ಸನ್ಯಾಸಿಗಳು ಎಷ್ಟೇ ಕಷ್ಟ ಬಂದ್ರೂ ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗ್ತಾರೆ. ಅಮರ್ ಭಾರತಿಯಂತೆ ಭಾರತದಲ್ಲಿ ಅನೇಕ ಸಾಧುಗಳು ತಮ್ಮದೇ ರೀತಿಯಲ್ಲಿ ಮೋಕ್ಷ ಪಡೆಯುವ ಪ್ರಯತ್ನ ನಡೆಸ್ತಿದ್ದಾರೆ.