
ವಿಜಯ್. ಮಹಾಂತೇಶ. ಪಾಪನಾಳ, ವೇದ, ಇತಿಹಾಸ, ಶಾಸನಗಳ ಸಂಶೋಧಕ.
ಮಹಾಶಿವರಾತ್ರಿಯ ಸಂಭ್ರಮವು ನಾಡಿನೆಲ್ಲೆಡೆ ಮನೆ ಮಾಡಿರುವ ಈ ಶುಭ ಸಂದರ್ಭದಲ್ಲಿ ಶಿವರಾತ್ರಿಯ ಮಹತ್ವದ ಕುರಿತು ಆಸ್ತಿಕ ಮನಸ್ಸುಗಳಲ್ಲಿ ಒಂದು ಕೌತುಕದ ಭಾವವಿದ್ದರೆ ಅದು ಸಹಜವೇ. ಇಂಥ ಕೌತುಕಗಳಿಗೆ ನಮ್ಮ ಸನಾತನ ಹಿಂದೂ ಧರ್ಮದ ಆರ್ಷ ಶಾಸ್ತ್ರ ಗ್ರಂಥಗಳಲ್ಲಿ ಅನೇಕ ವಿವರಣೆಗಳಿವೆ. ಇಂದಿನ ಈ ಮಹಾಶಿವರಾತ್ರಿಯ ಕುರಿತೂ ಅನೇಕ ವಿವರಣೆಗಳು ನಮಗೆ ನಮ್ಮ ಪ್ರಾಚೀನ ಪುರಾಣಗಳಲ್ಲಿ ದೊರೆಯುತ್ತವೆ. ವ್ಯಾಸ ಕೃತ ಹದಿನೆಂಟು ಮಹಾ ಪುರಾಣಗಳು ನಮ್ಮ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥಗಳು. ಇವುಗಳಲ್ಲಿ ‘ಶಿವಮಹಾಪುರಾಣ’ವೂ ಒಂದು. ಶಿವರಾತ್ರಿಯ ಮಹತ್ವದ ಕುರಿತು ಈ ಶಿವಮಹಾಪುರಾಣದ ಕೋಟಿ ರುದ್ರ ಸಂಹಿತೆಯ {ಶಿ.ಮ.ಪು.ಕೋ.ರು.ಸಂ} ನಲವತ್ತನೆಯ ಅಧ್ಯಾಯವಾದ ‘ಶಿವರಾತ್ರಿ ಮಹಿಮೆ’ಯು ಅತ್ಯಂತ ಮನೋಜ್ಞವಾಗಿ ವಿವರಿಸುತ್ತದೆ.
ಈ ಅಧ್ಯಾಯದಲ್ಲಿ ಗುರುದ್ರುಹ ಎಂಬ ಬೇಡನ ಕಥೆಯಿದೆ. ಈ ಶ್ಲೋಕವನ್ನು ಗಮನಿಸಿ:
‘ಪುರಾ ಕಶ್ಚಿದ್ವನೆ ಭಿಲ್ಲೋ ನಾಮ್ನಾ ಹ್ರಾಸೀದ್ಗುರುದ್ರುಹ
ಕುಟುಂಬಿ ಬಲವಾನ್ ಕ್ರೂರಃ ಕ್ರೂರಕರ್ಮಪರಾಯಣಃ’
{ಶಿ.ಮ.ಪು.ಕೋ.ರು.ಸಂ, ೪೦.೪}
ಎಂದರೆ ಪುರಾತನ ಕಾಲದಲ್ಲಿ ಗುರುದ್ರುಹ ಎಂಬ ಅತ್ಯಂತ ಬಲಶಾಲಿಯೂ, ಕ್ರೂರಿಯೂ ಆದ ಬೇಡನಿದ್ದನು. ಅವನು ಒಂದು ಸಾರಿ ಬೇಟೆಯಾಡಲು ಅಡವಿಗೆ ಹೋಗಿ ಬೇಟೆ ಸಿಗದೆ ನಿರಾಶನಾಗಿ ಒಂದು ಕೊಳದ ಬಳಿ ಬಂದು ಅದರ ದಡದಲ್ಲಿದ್ದ ಮರವೊಂದನ್ನು ಏರಿ ನೀರು ಕುಡಿಯಲು ಯಾವುದಾದರೂ ಪ್ರಾಣಿ ಬಂದರೆ ಅದನ್ನು ಕೊಂದು ಬೇಟೆಯಾಡಬೇಕೆಂದು ಹೊಂಚು ಹಾಕುತ್ತಾ ಮರದ ಮೇಲೆ ಕುಳಿತುಕೊಳ್ಳುತ್ತಾನೆ. ಹೊತ್ತು ಮುಳುಗಿ ಕತ್ತಲಾಗುತ್ತದೆ. ಜಾವದ ಮೊದಲ ಪ್ರಹರಿಯ ಹೊತ್ತಿಗೆ ಒಂದು ಹೆಣ್ಣು ಜಿಂಕೆ ಅಲ್ಲಿ ನೀರು ಕುಡಿಯಲು ಬರುತ್ತದೆ. ಬೇಡ ಇನ್ನೇನು ಬಿಲ್ಲಿಗೆ ಬಾಣ ಹೂಡಿ ಹೊಡೆಯಬೇಕೆಂದು ಬಿಲ್ಲನ್ನು ಮೇಲೆತ್ತಿದಾಗ ಆ ಮರದ ಎಲೆಗಳೂ, ಎಲೆಗಳಿಗಂಟಿದ ನೀರೂ ಕೆಳಗೆ ಬೀಳುತ್ತವೆ. ಆ ಸದ್ದಿಗೆ ಹೆಣ್ಣು ಜಿಂಕೆ ಕತ್ತೆತ್ತಿ ಮೇಲೆ ನೋಡುತ್ತದೆ.
ಇನ್ನೇನು ಬಾಣ ಬಿಡಲು ಸಿದ್ಧನಾಗಿದ್ದ ಬೇಡನಿಗೆ ಆ ಹೆಣ್ಣು ಜಿಂಕೆಯು ತನ್ನ ಮರಿಗಳನ್ನು ಸುರಕ್ಷಿತವಾಗಿ ಯಾರದಾದರೂ ಹತ್ತಿರ ಬಿಟ್ಟು ಮರಳಿ ಬರುತ್ತೇನೆಂದೂ ಅಲ್ಲಿಯವರೆಗೆ ತನ್ನನ್ನು ಕೊಲ್ಲಬೇಡವೆಂದೂ ಪರಿಪರಿಯಾಗಿ ಬೇಡಿಕೊಳ್ಳುತ್ತದೆ. ಮೊದಮೊದಲು ನಿರಾಕರಿಸುವ ಬೇಡನು ಕೊನೆಗೆ ಸಮ್ಮತಿಸುತ್ತಾನೆ. ಆದರೆ, ಎಷ್ಟು ಹೊತ್ತಾದರೂ ಆ ಹೆಣ್ಣು ಜಿಂಕೆ ಮರಳಿ ಬರುವುದಿಲ್ಲ. ಅಷ್ಟರಲ್ಲಿ ಇನ್ನೊಂದು ಹೆಣ್ಣು ಜಿಂಕೆ ಬರುತ್ತದೆ. ಅದೂ ಸಹ ಬೇಡನಿಗೆ ಮರಳಿ ಬರುತ್ತೇನೆ ಎಂದು ಮಾತು ಕೊಟ್ಟು ತನ್ನ ಆವಾಸಕ್ಕೆ ಹೋಗುತ್ತದೆ. ಸ್ವಲ್ಪ ಹೊತ್ತು ಕಳೆದ ಮೇಲೆ ಒಂದು ಗಂಡು ಜಿಂಕೆ ಅಲ್ಲಿ ನೀರು ಕುಡಿಯಲು ಬರುತ್ತದೆ. ಅದೂ ಕೂಡ ಮತ್ತೆ ಮರಳಿ ಬರುತ್ತೇನೆ ಎಂದು ಹೇಳಿ ಹೋಗುತ್ತದೆ.
ಇತ್ತ ಬೇಡ ಕಾಯುತ್ತಲೆ ಇದ್ದರೆ ಅತ್ತ ದೂರದಲ್ಲಿ ಈ ಮೂರೂ ಜಿಂಕೆಗಳು ಬೇಡನ ಬಳಿ ಯಾರು ಹೋಗುವುದು ಎಂದು ಚರ್ಚಿಸತೊಡಗುತ್ತವೆ. ಕೊನೆಗೆ ಯಾರು ಹೋಗುವುದೆಂದು ಬಗೆಹರಿಯದೆ ಮೂರೂ ಜಿಂಕೆಗಳು ಆ ಕೊಳದ ಬಳಿ ಬಂದು ಬೇಡನ ಮುಂದೆ ನಿಲ್ಲುತ್ತವೆ. ಆಶ್ಚರ್ಯಚಕಿತನಾದ ಬೇಡ ಗುರುದ್ರುಹನಿಗೆ ಆ ಕ್ಷಣ ಆತ್ಮ ಜಿಜ್ಞಾಸೆ ಶುರುವಾಗುತ್ತದೆ - ಧರಣಿ ಮಂಡಲ ಮಧ್ಯದೊಳಗಿನ ಕಥೆಯ ಪುಣ್ಯಕೋಟಿ ಎಂಬ ಹಸುವು ಅಬು೯ತನೆಂಬ ಹೆಬ್ಬುಲಿಯ ಮುಂದೆ ಪುನಃ ಬಂದು ನಿಂತಾಗ ಆದಂತೆ! ಆ ಮೂರೂ ಜಿಂಕೆಗಳನ್ನು ಕೊಲ್ಲಲಾಗದೆ ಬೇಡನು ಪುನಃ ಅವುಗಳನ್ನು ತಮ್ಮ ಮರಿಗಳ ಆವಾಸಸ್ಥಾನಕ್ಕೆ ಹೋಗುವಂತೆ ಹೇಳುತ್ತಾನೆ.
ಹಾಗಾದರೆ, ಬೇಡನಿಗೆ ಮನಃಪರಿವರ್ತನೆ ಯಾಕಾಯಿತು?: ಯಾಕೆ ಎಂದರೆ, ಆ ಬೇಡ ಕುಳಿತ ಮರವು ಒಂದು ಬಿಲ್ವಪತ್ರೆಯ ಮರವಾಗಿರುತ್ತದೆ. ಅದರ ಕೆಳಗೆ ಒಂದು ಶಿವಲಿಂಗವಿರುತ್ತದೆ. ಮತ್ತು ಹಾಗೆ ಬೇಟೆಗಾಗಿ ಹೊಂಚುತ್ತಾ ಬೇಡನು ಮರವೇರಿ ಕುಳಿತ ರಾತ್ರಿ ಮಹಾಶಿವರಾತ್ರಿಯ ದಿನವಾಗಿರುತ್ತದೆ. ಇದಾವುದರ ಪರಿವೆಯೇ ಇಲ್ಲದೆ ಬೇಡನು ಆ ಜಿಂಕೆಗಳನ್ನು ಕೊಲ್ಲಲು ಪ್ರತಿ ಸಾರಿ ಬಿಲ್ಲನ್ನು ಮೇಲೆತ್ತಿದಾಗ ಬಿಲ್ವಪತ್ರೆಯ ಎಲೆಗಳೂ ಮತ್ತು ಅವುಗಳಿಗಂಟಿದ ನೀರೂ ಕೆಳಗಿನ ಶಿವಲಿಂಗದ ಮೇಲೆ ಬಿದ್ದು ಅವನಿಗೆ ತಿಳಿಯದಂತೆ ಆ ಬೇಡನಿಂದ ಶಿವರಾತ್ರಿಯಂದು ಜಲಾಭಿಷೇಕ, ಬಿಲ್ವಪತ್ರೆಯ ಸಮೇತ ಶಿವಪೂಜೆಯು ನಡೆದಿರುತ್ತದೆ. ಈ ಶಿವರಾತ್ರಿಯ ಶಿವಪೂಜೆಯ ಪುಣ್ಯದ ಫಲವಾಗಿ ಅವನಲ್ಲಿ ಮನಃಪರಿವರ್ತನೆಯಾಗಿರುತ್ತದೆ, ಆ ಶಿವರಾತ್ರಿಯ ಶಿವಾರ್ಚನೆಯ ಫಲವದು ಎಂದು ಶಿವಮಹಾಪುರಾಣದ ಈ ಕಥನ ನಮಗೆ ತಿಳಿಸುತ್ತದೆ.
ಶಿವನು ಪ್ರಸನ್ನನಾಗಿ ನಂತರ ಇದೇ ಬೇಡ ಗುರುದ್ರುಹನಿಗೆ ‘ಗುಹ’ ಎಂದು ನಾಮಕರಣ ಮಾಡಿ [‘ಶಿವೋಪಿಸು ಪ್ರಸನ್ನಾತ್ಮಾ ನಾಮ ದತ್ವಾ ಗುಹೇತಿ ಚ’ - ಶಿ.ಮ.ಪು.ಕೋ.ರು.ಸಂ - ೪೦.೮೯], ಮುಂದೆ ಶೃಂಗವೇರ್ಪುರದಲ್ಲಿ ವಾಸಿಸುವಂತೆ ತಿಳಿಸಿ [‘ರಾಜಧಾನೀಂ ಸಮಾಶ್ರಿತ್ಯ ಶೃಂಗವೇರ್ಪುರೆ ಪರಾಮ್’- ೪೦.೯೦],
ಕಾಲಾಂತರದಲ್ಲಿ ರಾಮನು ನಿನ್ನ ಬಳಿ ಬರುತ್ತಾನೆ ಎಂದು ಹೇಳಿ [‘ಗುಹೆ ರಾಮಸ್ತವ ವ್ಯಾಧ ಸಮಾಯಾಸ್ಯತಿ ನಿಶ್ಚಿತಮ್’ - ೪೦.೯೧], ರಾಮನು ನಿನ್ನೊಡನೆ ಸ್ನೇಹ ಬೆಳೆಸಿ ನಿನ್ನ ಸ್ನೇಹಿತನಾಗುತ್ತಾನೆ [‘ಕರಿಷ್ಯತಿ ತ್ವಯಾ ಮೈತ್ರಿಂ’ - ೪೦.೯೨] ಎಂದು ಆ ಬೇಡನಿಗೆ ಶಿವನು ಆಶೀರ್ವದಿಸಿ ಅನುಗ್ರಹಿಸುತ್ತಾನೆ. ರಾಮನೂ ಸಹ ರಾಮೇಶ್ವರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುವ ಕಥನವೂ ನಮ್ಮ ಪ್ರಾಚೀನ ಪುರಾಣಗಳಲ್ಲಿ ವರ್ಣಿತವಾಗಿದೆ. ಹೀಗೆ ಬೇಡನೊಬ್ಬನು ಶಿವನಿಗೆ ಶಿವರಾತ್ರಿಯಂದು ರಾತ್ರಿಯಿಡೀ ಎಚ್ಚರವಿದ್ದು ಜಲಾಭಿಷೇಕ ಮಾಡಿ ಬಿಲ್ವಪತ್ರೆಗಳನ್ನರ್ಪಿಸಿದ್ದರ ಫಲವಾಗಿ ಸಾಯುಜ್ಯ ಹೊಂದಿದ ಈ ಕಥಾನಕದಿಂದ ನಮಗೆ ಶಿವರಾತ್ರಿಯು ಎಷ್ಟು ಮಹತ್ವದ್ದು ಎಂದು ತಿಳಿಯುತ್ತದೆ.