ಜನಪ್ರಿಯ ಆಧ್ಯಾತ್ಮಿಕ ಟೆಕ್ ಸ್ಟಾರ್ಟ್ ಅಪ್ ಆಸ್ಟ್ರೋಟಾಕ್ ಸಿಇಒ ಮಹತ್ವದ ಘೋಷಣೆ ಮಾಡಿದ್ದಾರೆ. 200 ಕೋಟಿ ರೂ. ಬಂಡವಾಳ ಸಿಕ್ಕರೆ ಜ್ಯೋತಿಷಿಗಳ ಜೊತೆಗೆ ಗ್ರಾಹಕರು ಉಚಿತವಾಗಿ ಚಾಟ್ ಮಾಡಲು ಅವಕಾಶ ಕಲ್ಪಿಸೋದಾಗಿ ತಿಳಿಸಿದ್ದಾರೆ.
ನವದೆಹಲಿ (ಜೂ.3): ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿರೋರ ಸಂಖ್ಯೆ ಹೆಚ್ಚಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸ್ಥಾಪನೆಗೊಂಡ ಸ್ಟಾರ್ಟ್ ಅಪ್ ಆಸ್ಟ್ರೋಟಾಕ್. ದೆಹಲಿ ಮೂಲದ ಈ ಕಂಪನಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ದೇಶಾದ್ಯಂತ ಹಲವು ಗ್ರಾಹಕರು ಇದರಲ್ಲಿ ನೋಂದಣಿ ಮಾಡಿಸಿಕೊಂಡು ತಮ್ಮ ಭವಿಷ್ಯ ತಿಳಿದುಕೊಳ್ಳುತ್ತಾರೆ. ಈ ಸ್ಟಾರ್ಟ್ ಅಪ್ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಈ ಸ್ಟಾರ್ಟ್ ಅಪ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣ ಆಸ್ಟ್ರೋಟಾಕ್ ಸಿಇಒ ಹೇಳಿಕೆ. ಒಂದು ವೇಳೆ ನನಗೆ 200 ಕೋಟಿ ರೂ. ಸಿಕ್ಕಿದ್ರೆ ನಾನು ಜ್ಯೋತಿಷಿಗಳ ಜೊತೆಗೆ ಉಚಿತವಾಗಿ ಚಾಟ್ ಮುಖಾಂತರ ಸಂವಹನ ನಡೆಸಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತೇನೆ ಎಂದು ಆಸ್ಟ್ರೋಟಾಕ್ ಸಿಇಒ ಪುನೀತ್ ಗುಪ್ತಾ ಘೋಷಣೆ ಮಾಡಿದ್ದಾರೆ. ಅವರ ಈ ಹೇಳಿಕೆ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಆಸ್ಟ್ರೋಟಾಕ್ ನೀಡಿರುವ ಮಾಹಿತಿ ಪ್ರಕಾರ ಈ ತನಕ ಅದು 2 ಕೋಟಿ ಉಚಿತ ಸೆಷನ್ಸ್ ನಡೆಸಿದ್ದು, ಈ ಆಫರ್ ಜೂನ್ 5ಕ್ಕೆ ಕೊನೆಗೊಳ್ಳಲಿದೆ. ಇನ್ನು ಆಸ್ಟ್ರೋಟಾಕ್ ನಲ್ಲಿ ಯಾವೆಲ್ಲ ಪ್ರಶ್ನೆಗಳನ್ನು ಅತೀಹೆಚ್ಚಾಗಿ ಕೇಳಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಈ ಸಂದರ್ಭದಲ್ಲಿ ಪುನೀತ್ ಗುಪ್ತಾ ನೀಡಿದ್ದಾರೆ.
ಆಸ್ಟ್ರೋಟಾಕ್ ನಲ್ಲಿ ಗ್ರಾಹಕರು ಹೆಚ್ಚಾಗಿ ಕೇಳುವ ಪ್ರಶ್ನೆಗಳೆಂದ್ರೆ 'ನನಗೆ ಯಾವಾಗ ಮದುವೆ ಆಗುತ್ತೆ?', 'ನನಗೆ ಯಾವಾಗ ಒಳ್ಳೆಯ ಉದ್ಯೋಗ ಸಿಗುತ್ತೆ?', ಹಾಗೂ 'ನನ್ನ ಮಾಜಿ ಪ್ರಿಯಕರ ಅಥವಾ ಪ್ರಿಯತಮೆ ಮತ್ತೆ ವಾಪಸ್ ಸಿಗುತ್ತಾರಾ?' ಎಂಬುದೇ ಆಗಿವೆ ಎಂದು ಪುನೀತ್ ಗುಪ್ತಾ ತಿಳಿಸಿದ್ದಾರೆ.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂಪಾಯಿ ದಾನ, ಆಸ್ಟ್ರೋಟಾಕ್ ಸಿಇಒ ಘೋಷಣೆ!
ಆಸ್ಟ್ರೋಟಾಕ್ ಆಧ್ಯಾತ್ಮಿಕ ಟೆಕ್ ಸ್ಟಾರ್ಟ್ ಅಪ್ ಆಗಿದೆ. 2017ರಲ್ಲಿ ಪುನೀತ್ ಗುಪ್ತಾ ಹಾಗೂ ಅನ್ಮೋಲ್ ಜೋಷಿ ಈ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದರು. ಈ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಿಕೊಂಡು ಗ್ರಾಹಕರು ಜೋತಿಷಿಗಳ ಜೊತೆಗೆ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಜಾತಕ ಓದುವುದು, ಭವಿಷ್ಯದ ಕುರಿತ ಪ್ರಶ್ನೆಗಳಿಗೆ ಸಂಬಂಧಿಸಿ ಜೋತಿಷಿಗಳ ಜೊತೆಗೆ ಗ್ರಾಹಕರು ನೇರ ಸಂವಹನ ನಡೆಸಲು ಈ ಪ್ಲಾಟ್ ಫಾರ್ಮ್ ಅವಕಾಶ ಕಲ್ಪಿಸುತ್ತದೆ. ಇನ್ನು ನೇರ ಪ್ರಾರ್ಥನೆಗಳಿಗೂ ಕೂಡ ಇದರಲ್ಲಿ ಅವಕಾಶವಿದೆ.
ಆಸ್ಟ್ರೋಟಾಕ್ ಭಾರತದ ಮುಂಚೂಣಿಯಲ್ಲಿರುವ ಆಧ್ಯಾತ್ಮಿಕ ಟೆಕ್ ಕಂಪನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಉದ್ಯಮ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಕಂಪನಿ ನೀಡಿರುವ ಮಾಹಿತಿ ಪ್ರಕಾರ ಅದರ ಶೇ.20ರಷ್ಟು ಆದಾಯ ಮಾತ್ರ ವಿದೇಶಗಳಿಂದ ಬರುತ್ತಿದೆ. ಉಳಿದ ಶೇ.80ರಷ್ಟು ಆದಾಯ ಭಾರತದ ಮಾರುಕಟ್ಟೆಯನ್ನೇ ಅವಲಂಬಿಸಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಈ ಕಂಪನಿ ಸುಮಾರು 125 ಕೋಟಿ ರೂ. ಲಾಭ ಗಳಿಸಿತ್ತು. ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯಮ ವಿಸ್ತರಣೆಗೆ ಆಸ್ಟ್ರೋಟಾಕ್ ಪ್ರಯತ್ನಿಸುತ್ತಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ವಿಶ್ವಕಪ್ ಸಂದರ್ಭದಲ್ಲಿ ಭಾರತ ಈ ಬಾರಿ ವಿಶ್ವಕಪ್ ಗೆದ್ದರೆ 100 ಕೋಟಿ ರೂಪಾಯಿಯನ್ನು ಗ್ರಾಹಕರ ವ್ಯಾಲೆಟ್ ಗೆ ಹಾಕೋದಾಗಿ ಆಸ್ಟ್ರೋಟಾಕ್ ಸಿಇಒ ಪುನೀತ್ ಗುಪ್ತಾ ಘೋಷಿಸಿದ್ದರು. ಈ ಮೂಲಕ ಆ ಸಮಯದಲ್ಲಿ ಅವರು ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು ಕೂಡ. ಆಸ್ಟ್ರೋಟಾಕ್ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಸೆಳೆಯುವಲ್ಲಿ ಯಶಸ್ವಿಯಾಗಿದೆ ಕೂಡ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳ ಸೆಳೆಯುವ ಗುರಿಯನ್ನು ಅದು ಹೊಂದಿದೆ. ಇದೇ ಕಾರಣಕ್ಕೆ ಕಂಪನಿ ಸಿಇಒ 200 ಕೋಟಿ ಬಂಡವಾಳ ಸಿಕ್ಕರೆ ಜೋತಿಷಿಗಳ ಜೊತೆಗೆ ಗ್ರಾಹಕರಿಗೆ ಉಚಿತವಾಗಿ ಚಾಟ್ ಮಾಡಲು ಅವಕಾಶ ಕಲ್ಪಿಸೋದಾಗಿ ಘೋಷಿಸಿರೋದು.