ಮುಮ್ತಾಜ್ ಅಲಿ ಖಾನ್ ಶ್ರೀ ಎಂ ಆಗಿದ್ದು ಹೇಗೆ? ಜಗತ್ತಿನ ಈ ಅಸಾಮಾನ್ಯ ಯೋಗಿಯ ಬಗ್ಗೆ ನಿಮಗೊತ್ತಾ?

By Suvarna NewsFirst Published Apr 3, 2024, 2:55 PM IST
Highlights

ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಿ. ಆದರೆ ಬೆಳೆದದ್ದು ಮಹಾನ್ ಯೋಗಿಯಾಗಿ. ಶ್ರೀ ಎಂ ಎಂಬ ಈ ಕ್ರಿಯಾಯೋಗ ಸಾಧಕರ ಬಗ್ಗೆ ನಿಮಗೊತ್ತಾ?

ಶ್ರೀ ಎಂ ಎಂಬ ಅಧ್ಯಾತ್ಮ ಗುರು ಇಂದು ಜಗದ್ವಿಖ್ಯಾತ. ಇವರು ಪ್ರಸಿದ್ಧ ಹಿಮಾಲಯನ್ ಯೋಗಿ. ಕ್ರಿಯಾಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ಯೋಗಿಯ ಬದುಕೇ ಸಖತ್‌ ಇಂಟರೆಸ್ಟಿಂಗ್.

ಮುಮ್ತಾಜ್ ಅಲಿ ಖಾನ್ ಹುಟ್ಟಿದ್ದು 6 ನವೆಂಬರ್ 1949 ರಂದು ಕೇರಳದ ತಿರುವಾಂಕೂರು-ಕೊಚ್ಚಿನ್ ನಡುವೆ ಬರುವ ತಿರುವನಂತಪುರಂನಲ್ಲಿ. ಮೇಲ್ಮಧ್ಯಮ ವರ್ಗದ ಮುಸ್ಲಿಂ ಕುಟುಂಬವದು. ಇವರು ಹಿಮಾಲಯದ ಯೋಗಿ ಆಗಿ ಬೆಳೆದದ್ದು ಮಹತ್ವದ ಸಂಗತಿ. ಎಳೆಯ ಬಾಲ್ಯದ ಸಾಮಾನ್ಯ ಹುಡುಗನ ಹಾಗೆ ಬೆಳೆದ ಎಂ ಅವರಿಗೆ ಪ್ರೈಮರಿ ಶಾಲೆಯಲ್ಲಿ ಓದುವ ಹೊತ್ತಿಗೆ ಗುರುವಿನ ದರ್ಶನವಾಗುತ್ತದೆ.

ಇವರ ಮನೆಯ ಹಿಂದೆ ಒಂದು ಹಲಸಿನ ಮರ ಇತ್ತು. ಆ ಹಲಸಿನ ಮರ ಇವರಿಗೆ ಪ್ರಿಯವಾದ ಜಾಗವಾಗಿತ್ತು. ಅಲ್ಲಿ ಆಟ ಆಡ್ತಾ, ಖುಷಿಯಿಂದ ಸಮಯ ಕಳೆಯುತ್ತಿದ್ದರು. ಆದರೆ ಒಮ್ಮೆ ಅಲ್ಲಿ ಇವರಿಗಾದ ಅನುಭವ ಇಡೀ ಬದುಕನ್ನೇ ಬದಲಿಸಿ ಬಿಡುತ್ತದೆ. ಅಲ್ಲಿ ಇವರಿಗೆ ಒಬ್ಬ ಜಟಾಧಾರಿ ವ್ಯಕ್ತಿಯ ಭೇಟಿಯಾಗುತ್ತದೆ. ಇವರಿಬ್ಬರ ನಡುವೆ ಒಂದು ಸಂಭಾಷಣೆ ನಡೆಯುತ್ತದೆ. ಆ ಸಂಭಾಷಣೆಯ ಬಗ್ಗೆ ಮನೆಯವರ ಬಳಿ ಹೇಳಬೇಕು ಅಂತ ಮುಮ್ತಾಜ್ ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಈ ಘಟನೆ ಇವರ ಯೋಚನೆಗಳನ್ನು, ಮನಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸಿ ಬಿಡುತ್ತದೆ. ಅಷ್ಟೂ ಜನರ ನಡುವೆ ಇದ್ದೂ ತಾನು ಅವರಲ್ಲೊಬ್ಬ ಅಲ್ಲ ಅನ್ನುವ ಅನುಭವ ಇವರಿಗೆ ಆಗುತ್ತಾ ಹೋಗುತ್ತದೆ.

ಶನಿದೇವ ಏಕೆ ಕಪ್ಪಗಿದ್ದಾನೆ.. ಈ ಐದು ರಹಸ್ಯ ಹಿಂದಿನ ಗುಟ್ಟು ಗೊತ್ತಾ?

' ನನಗೆ 19 ವರ್ಷವಾದಾಗ ಹಿಮಾಲಯಕ್ಕೆ ಓಡಿಹೋದೆ. ಇದಕ್ಕೆ ನಮ್ಮ ಮನೆಯಲ್ಲಿ ತೀವ್ರ ವಿರೋಧವಿತ್ತು. ನಾನು ಹಿಮಾಲಯಕ್ಕೆ ಹೋಗುವುದು ತಾಯಿಗೆ ಇಷ್ಟ ಇರಲಿಲ್ಲ. ಆದರೆ ಹಿಮಾಲಯ ಪರ್ವತ ಶ್ರೇಣಿ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಕೇರಳದ ನನ್ನ ಮನೆಯಲ್ಲಿ ನನಗೆ ಪಂಜರದಲ್ಲಿದ್ದ ಹಾಗಾಗುತ್ತಿತ್ತು. ಕೊನೆಗೆ ತಡೆಯಲಾರದೇ ಎಲ್ಲ ಬಂಧನಗಳನ್ನು ಕೊಡವಿ ಹಿಮಾಲಯಕ್ಕೆ ಹೋದೆ. ಹಿಮಾಲಯ ಬೆಟ್ಟ ಶ್ರೇಣಿಯಲ್ಲಿ ಅಲೆದಾಡಿದೆ. ಅಲ್ಲಿ ನನಗೆ ಗುರುಗಳಾದ ಮಾಹೇಶ್ವರ ನಾಥ ಅವರು ಸಿಕ್ಕರು. ಗುರುಗಳ ಭೇಟಿ ನನಗೆ ಈ ಜನ್ಮದಲ್ಲಿ ಏನು ಬೇಕಿತ್ತೋ ಅದನ್ನು ನೀಡಿತು. ನನ್ನ ಗುರುಗಳದು ನಾಥ ಸಂಪ್ರದಾಯ. ಅವರ ಜೊತೆ ಸುಮಾರು 3 ವರ್ಷ ಹಿಮಾಲಯದ ಬೆಟ್ಟಗಳಲ್ಲಿ ಅಲೆದಾಡಿದೆ. ಅಧ್ಯಾತ್ಮದ ಪಾಠಗಳನ್ನು (Spiritual Lesson) ಹೇಳಿಸಿಕೊಂಡೆ. ಊಟ ಇದ್ದರೆ ಇದೆ, ಇಲ್ಲದಿದ್ದರೆ ಇಲ್ಲ ಎಂಬಂಥಾ ಸ್ಥಿತಿ. ಜಗತ್ತಿನ ಒಳಿತಿಗಾಗಿ ಅವರು ಸದಾ ಪ್ರಾರ್ಥಿಸುತ್ತಿದ್ದರು. 'ಲೋಕಾ ಸಮಸ್ತಾ ಸುಖಿನೋ ಭವಂತು' ಎಂಬುದು ಅವರ ತುಡಿತವಾಗಿತ್ತು. ಈ ಗುರುಗಳು ನನಗೆ ನಾಥ ಪಂಥದ ದೀಕ್ಷೆ ನೀಡಿದರು. ನನಗೆ ಮಧುಕರ ನಾಥ ಎಂಬ ಹೆಸರು ಕೊಟ್ಟರು' ಎಂದು ತಮ್ಮ ಬದುಕಿನ ತಿರುವುಗಳ ಬಗ್ಗೆ ಶ್ರೀ ಎಂ ಹೇಳುತ್ತಾರೆ.

ನಾಥ ಸಂಪ್ರದಾಯಕ್ಕೆ ದೀಕ್ಷೆ ನೀಡಿದಾಗ ಅವರ ಕುಂಡಲಿನಿ ಶಕ್ತಿ ಜಾಗೃತವಾಯಿತು. ಶ್ರೀ ಎಂ ಮತ್ತು ಶ್ರೀ ಮಹೇಶ್ವರನಾಥ ಬಾಬಾಜಿ ಟಿಬೆಟ್‌ನ ಥೋಲಿಂಗ್‌ನಲ್ಲಿರುವ ಮಠಕ್ಕೆ ಪ್ರಯಾಣಿಸಿದರು .ಗ್ರ್ಯಾಂಡ್ ಮಾಸ್ಟರ್ ಶ್ರೀ ಗುರು ಬಾಬಾಜಿ ( ಮಹಾವತಾರ್ ಬಾಬಾಜಿ ) ಅವರನ್ನು ಭೇಟಿ ಮಾಡುವ ಬಯಕೆಯು ಮಹೇಶ್ವರನಾಥ ಬಾಬಾಜಿಯವರ ಸಹಾಯದಿಂದ ನೀಲಕಂಠ ಬೆಟ್ಟದಲ್ಲಿ ನೆರವೇರಿತು. ಹಿಂದಿನ ಜನ್ಮದಲ್ಲಿ ಶ್ರೀ ಬಾಬಾಜಿಯವರು ತಮ್ಮ ಗುರುಗಳಾಗಿದ್ದರು ಮತ್ತು ಮಹೇಶ್ವರನಾಥ್ ಬಾಬಾಜಿಯವರು ಭೂಮಿಯ ಮೇಲೆ ಅಥವಾ ಅದರಾಚೆಗಿನ ಯಾವುದೇ ರೂಪದಲ್ಲಿ ವಸ್ತುವಾಗಿಸುವ ಮತ್ತು ಡಿ-ಮೆಟಿರಿಯಲೈಸ್ ಮಾಡುವ ಶಕ್ತಿಯನ್ನು ಹೊಂದಿದ್ದರು ಎಂದು ಶ್ರೀ ಎಂ ಈ ವೇಳೆ ತಿಳಿದುಕೊಂಡರು.

ಕಲಬುರಗಿ: ಶರಣಬಸವೇಶ್ವರರ ಜಾತ್ರೆ, ಮಹಾ ದಾಸೋಹಿಯ ತೇರನ್ನೆಳೆದ ಭಕ್ತರು..!

ಅವರ ಪ್ರಕಾರ ಅವರ ಹೆಸರಿನಲ್ಲಿರುವ ಶ್ರೀ ಎಂ ಎಂಬುದಕ್ಕೆ ಮೂರು ಅರ್ಥಗಳಿವೆ. ಮೊದಲ ಎಂ ಅವರ ಹುಟ್ಟು ಹೆಸರು ಮುಮ್ತಾಜ್, ಎರಡನೇ ಎಂ ಗುರುಗಳು ನೀಡಿದ ದೀಕ್ಷಾನಾಮ ಮಧುಕರ ನಾಥ, ಮೂರನೇ ಎಂ ನಮ್ಮೆಲ್ಲರ ಮನುಷ್ಯ ಜಾತಿಯನ್ನ ಪ್ರತಿನಿಧಿಸುತ್ತದೆ ಎಂದು ಎಂ ಹೇಳುತ್ತಾರೆ.

ಗುರುಗಳಿಂದ ದೀಕ್ಷೆ ಪಡೆದು ಶ್ರೀ ಎಂ ಜಗತ್ತಿಗೆ ಹಿಮಾಲಯದ ಮಹಾತ್ಮರ ಸಂದೇಶ ತಿಳಿಸಲು ಹೊರಡುತ್ತಾರೆ. ಈ ನಡುವೆ ಗಣೇಶಪುರಿಯ ಭಗವಾನ್ ನಿತ್ಯಾನಂದ, ಯೋಗಿ ಗೋಪಾಲ ಸಾಮಿ, ಕಾಲಡಿ ಮಸ್ತಾನ್, ಸ್ವಾಮಿ ಅಭೇದಾನಂದ, ಚೆಂಪಜಂತಿ ಸ್ವಾಮಿ, ಸ್ವಾಮಿ ತಪಸ್ಯಾನಂದ ಮತ್ತು ಮಾಯಿ ಮಾ ಸೇರಿದಂತೆ ಹಲವಾರು ದಕ್ಷಿಣ ಭಾರತೀಯ ಸಂತರೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಸದ್ಯ ಇವರು ಜಗತ್ತಿನಾದ್ಯಂತ ಅಧ್ಯಾತ್ಮದ ಪ್ರವಚನ ನೀಡುತ್ತಾರೆ. ಧ್ಯಾನವನ್ನು ಕಲಿಸುತ್ತಾರೆ.

ಶ್ರೀ ಎಂ ಯೋಗಿ ಬದುಕಿನ ಜೊತೆಗೆ ಗ್ರಹಸ್ಥಾಶ್ರಮ ನಡೆಸುತ್ತಾರೆ. ಸುನಂದಾ ಸನದಿ ಇವರ ಪತ್ನಿ. ರೋಶನ್ ಅಲಿ ಮತ್ತು ಆಯಿಶಾ ಅಲಿ ಎಂಬ ಇಬ್ಬರು ವಯಸ್ಕ ಮಕ್ಕಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sri M (@srim_official)

 

 

click me!