ಐತಿಹಾಸಿಕ ಬೆಂಗಳೂರು ಕರಗಕ್ಕೆ ಇಂದು ಅದ್ಧೂರಿ ಚಾಲನೆ

By Kannadaprabha NewsFirst Published Mar 29, 2023, 8:25 AM IST
Highlights

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 10ಕ್ಕೆ ರಥೋತ್ಸವ, ಮುಂಜಾನೆ 3ಕ್ಕೆ ಧಜಾರೋಹಣ, 11 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ. 

ಬೆಂಗಳೂರು(ಮಾ.29): ತಿಗಳ ಪೇಟೆಯಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಇಂದು(ಬುಧವಾರ) ರಾತ್ರಿ 10ರಿಂದ ರಥೋತ್ಸವದೊಂದಿಗೆ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮುಂದಿನ 11 ದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.

ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಕರಗ ಉತ್ಸವ ಆರಂಭವಾಗಲಿದ್ದು, ಈ ಬಾರಿ ಮಾ.29ರ ರಾತ್ರಿಯಿಂದ ಕರಗ ಉತ್ಸವಕ್ಕೆ ಚಾಲನೆ ಸಿಗಲಿದೆ. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 10ಕ್ಕೆ ರಥೋತ್ಸವ ಹಾಗೂ ಮುಂಜಾನೆ 3ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಕರಗ ಉತ್ಸವಕ್ಕೆ 40 ಲಕ್ಷ ಮುಂಗಡ ಅನುದಾನ: ತುಷಾರ್‌ ಗಿರಿನಾಥ್‌

ಕರಗ ಉತ್ಸವದ ಅಂಗವಾಗಿ ಮಾ.29ರಿಂದ ಏ.6ರವರೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಜತೆಗೆ ಕಬ್ಬನ್‌ ಉದ್ಯಾನದ ಕರಗದ ಕುಂಟೆ, ಸಂಪಂಗಿರಾಮ ನಗರದಲ್ಲಿನ ಸಂಪಂಗಿ ಕೆರೆ, ಲಾಲ್‌ಬಾಗ್‌ ರಸ್ತೆಯ 3ನೇ ಕ್ರಾಸ್‌ನಲ್ಲಿನ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ, ಗವಿಪುರ ಗುಟ್ಟಹಳ್ಳಿಯ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ, ಕೆಂಪೇಗೌಡ ವೃತ್ತದ ಶ್ರೀ ಅಣ್ಣಮ್ಮ ದೇವಸ್ಥಾನ, ಕಲಾಸಿಪಾಳ್ಯದ ಮರಿಸ್ವಾಮಿ ಮಠಗಳಲ್ಲೂ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ಜರುಗಲಿವೆ. ಏ.8ರಂದು ಸಂಜೆ 4ಕ್ಕೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜಾವರೋಹಣ ಮಾಡಲಾಗುತ್ತದೆ. ಆ ಮೂಲಕ 2023ರ ಕರಗ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಏ.6ರ ಮಧ್ಯರಾತ್ರಿ ಶಕ್ತ್ಯುತ್ಸವ

ಕರಗ ಉತ್ಸವದ ಪ್ರಮುಖ ಆಚರಣೆ ಮತ್ತು ಆಕರ್ಷಣೆಯಾದ ಕರಗ ಶಕ್ತ್ಯುತ್ಸವ ಏ.6ರಂದು ಮಧ್ಯರಾತ್ರಿ 12.30ರಿಂದ ಜರುಗಲಿದೆ. ಈ ಬಾರಿ ಕರಗವನ್ನು ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರು ಹೊರಲಿದ್ದಾರೆ. ರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ದ್ರೌಪದಮ್ಮನ ಕರಗ ಅಕ್ಕಿಪೇಟೆ, ಕುಂಬಾರಪೇಟೆ, ನಗರ್ತಪೇಟೆ, ಗೊಲ್ಲರಪೇಟೆ ಸೇರಿ ನಗರದ ವಿವಿಧ ಭಾಗಗಳಿಗೆ ಸಂಚರಿಸಲಿದೆ. ಪ್ರಮುಖವಾಗಿ ಸಂಪ್ರದಾಯದಂತೆ ಮಸ್ತಾನ್‌ಸಾಬ್‌ ದರ್ಗಾಕ್ಕೆ ತೆರಳಿ ಅಲ್ಲಿಯೂ ಸೇವೆಯನ್ನು ಪಡೆಯಲಿದೆ. ಅ ಮೂಲಕ ಬೆಂಗಳೂರು ಕರಗ ಭಾವೈಕ್ಯತೆಯ ಸಂಕೇತ ಎಂಬುದನ್ನು ಪ್ರತಿಪಾದಿಸಲಾಗುತ್ತದೆ. ನಗರದ ವಿವಿಧ ದೇವಸ್ಥಾನ, ಪ್ರದೇಶಗಳಿಗೆ ವೀರ ಕುಮಾರರ ಭದ್ರತೆಯಲ್ಲಿ ಸಂಚರಿಸಲಿರುವ ದ್ರೌಪದಮ್ಮನ ಕರಗ ಏ.7ರ ಮುಂಜಾನೆ ಧರ್ಮರಾಯನಸ್ವಾಮಿ ದೇವಸ್ಥಾನಕ್ಕೆ ಮರಳಲಿದೆ.

ಕರಗ ಕುರಿತು ಅವಹೇಳನಕಾರಿ ಮಾತು: ತಿಗಳ ಜನಾಂಗದ ಕ್ಷಮೆ ಕೇಳಿದ ಶಾಸಕ ಹ್ಯಾರಿಸ್

ದೌಪ್ರದಮ್ಮನ ಕರಗ ತೆರಳುವ ಮಾರ್ಗದುದ್ದಕ್ಕೂ ಗೋವಿಂದ ನಾಮ ಸ್ಮರಣೆ ಇರಲಿದೆ. ಹೂವಿನ ಕರಗವು ಮಲ್ಲಿಗೆಯ ಘಮವನ್ನು ಪಸರಿಸಲಿದೆ. ಜತೆಗೆ ದೌಪ್ರದಿ ಪುತ್ರರಾದ ವೀರ ಕುಮಾರರು ದಾರಿಯುದ್ದಕ್ಕೂ ಕಾವಲು ಕಾಯಲಿದ್ದಾರೆ. ಇದೇ ವೇಳೆ ವೀರ ಕುಮಾರರು ಕೈಯಲ್ಲಿನ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾ ಅಲಗು ಸೇವೆಯನ್ನು ಸಲ್ಲಿಸಲಿದ್ದಾರೆ.

ಕರಗ ಉತ್ಸವಕ್ಕೆ ವೀರೇಂದ್ರ ಹೆಗ್ಗಡೆ?

ಮೊದಲ ಬಾರಿಗೆ ಕರಗ ಶಕ್ತ್ಯುತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಏ.6ರಂದು ನಡೆಯಲಿರುವ ಕರಗ ಶಕ್ತ್ಯುತ್ಸವದಲ್ಲಿ ಭಾಗವಹಿಸುವಂತೆ ವೀರೇಂದ್ರ ಹೆಗ್ಗಡೆ ಅವರನ್ನು ಧರ್ಮರಾಯ ಸ್ವಾಮಿ ದೇವಸ್ಥಾನ ಸಮಿತಿ ಕೋರಿದೆ.

click me!