ಹುಬ್ಬಳ್ಳಿ (ಸೆ.2) : ವಾದ-ವಿವಾದ, ನ್ಯಾಯಾಲಯದ ಆದೇಶ ಇತ್ಯಾದಿಗಳ ಬಳಿಕ ಕೊನೆಗೂ ಇಲ್ಲಿನ ಈದ್ಗಾ ಮೈದಾನದಲ್ಲಿ ಬುಧವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ದೇಶದಲ್ಲಿಯೇ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡ ಮೊಟ್ಟಮೊದಲ ಗಣೇಶ ಇದಾಗಿದೆ! ಈ ಗಣಪನ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿದೆ. ಮುಸ್ಲಿಂ ಸಮಾಜದವರೂ ವಿಘ್ನೇಶ್ವರನ ದರ್ಶನಕ್ಕೆ ಆಗಮಿಸುತ್ತಿರುವುದು ವಿಶೇಷ. ಈ ಮೂಲಕ ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಸೌಹಾರ್ದದ ಕೇಂದ್ರವಾದಂತಾಗಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದ ಮುಸ್ಲಿಂ ಕುಟುಂಬ
undefined
ಬೆಳಗ್ಗೆಯೇ ಪ್ರತಿಷ್ಠಾಪನೆ:
ಈ ಗಣೇಶನ ಪ್ರತಿಷ್ಠಾಪನೆಯನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ಮೂಲಕ ಮಾಡಬೇಕಿತ್ತು. ಆದರೆ ರಾತ್ರಿ 11.30ಕ್ಕೆ ಹೈಕೋರ್ಚ್ ತೀರ್ಪು ಹೊರಬಂದ ಆನಂತರವೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯೂ ಬೆಳಗ್ಗೆ 7.30ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಿತು. ಬಳಿಕ ಪೂಜೆ-ಪುನಸ್ಕಾರ, ಭಜನೆ ಹೀಗೆ ಸಂಜೆವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಂಜೆ ನಡೆದ ಮಹಾಮಂಗಳಾರತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಮುಖಂಡರು ಭೇಟಿ ನೀಡಿ ಗಣಪನ ದರ್ಶನ ಪಡೆದರು.
ಜನಸಾಗರ: ಹುಬ್ಬಳ್ಳಿ ಗಣೇಶೋತ್ಸವ ವೀಕ್ಷಣೆಗೆ ಮೊದಲ ದಿನ ಹೆಚ್ಚಿಗೆ ಇರುವುದಿಲ್ಲ. ಎರಡನೆಯ ದಿನದಿಂದ ಶುರುವಾಗುತ್ತದೆ. ಜತೆಗೆ ಸಂಜೆಯಿಂದ ವೀಕ್ಷಣೆ ಜೋರಾಗಿರುತ್ತದೆ. ಆದರೆ ಈದ್ಗಾದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ವೀಕ್ಷಣೆಗೆ ಮೊದಲ ದಿನದಿಂದಲೇ ಶುರುವಾಗಿದೆ. ಎರಡನೆಯ ದಿನವಂತೂ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಈ ನಡುವೆ ಮುಸ್ಲಿಂ ಸಮುದಾಯದವರು ಕೂಡ ಕುಟುಂಬ ಸಮೇತರಾಗಿ ಈದ್ಗಾ ಮೈದಾನಕ್ಕೆ ಆಗಮಿಸಿ ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹೋಗುತ್ತಿರುವುದು ವಿಶೇಷ. ‘ಯಾವ ಧರ್ಮವಾದರೇನು ಗಣೇಶನಿಗೆ ಧರ್ಮವಿಲ್ಲ. ಕೈಮುಗಿದವರಿಗೆ ಆತ ದೇವರು.. ನಮಗೇನೂ ಭೇದಭಾವವಿಲ್ಲ. ಯಾರೂ ಯಾವ ದೇವರಿಗೂ ಭೇದಭಾವ ಮಾಡಬಾರದು. ದೇವನೊಬ್ಬ ನಾಮ ಹಲವು ಅಷ್ಟೇ. ಅದರಂತೆ ಗಣೇಶನ ವೀಕ್ಷಣೆ ಮಾಡುತ್ತಿದ್ದೇವಷ್ಟೇ’ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿರುವುದು ವಿಶೇಷ. ದರ್ಶನಕ್ಕೆ ಬಂದ ಭಕ್ತರಿಗೆ ಗಜಾನನ ಮಹಾಮಂಡಳಿ ಪ್ರಸಾದ ವ್ಯವಸ್ಥೆ ಕೂಡ ಮಾಡಿದ್ದಾರೆ.
ಭಾರೀ ಭದ್ರತೆ: ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಆಗಿರುವುದರಿಂದ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮೈದಾನವನ್ನು ಎರಡು ಭಾಗಗಳನ್ನಾಗಿ ಪ್ರತ್ಯೇಕಿಸಲಾಗಿದೆ. ಒಂದು ಕಡೆ ಗಣೇಶನ ಪ್ರತಿಷ್ಠಾಪನೆ ಮಾಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರೆ, ಇನ್ನೊಂದೆಡೆ ಯಾರಿಗೂ ಪ್ರವೇಶವಿಲ್ಲ. ಅಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರಾರಯಪಿಡ್ ಪ್ರೊಟೆಕ್ಷನ್ ಪೋರ್ಸ್, ಕೆಎಸ್‌ಆರ್‌ಪಿ, ಸಿಎಆರ್ ದಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ತೊಡಗಿವೆ. ಈದ್ಗಾ ಮೈದಾನದಲ್ಲಿ 12 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಇಂದು ವಿಸರ್ಜನೆ:
ಈದ್ಗಾ ಮೈದಾನದಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನದೊಳಗೆ ಗಣೇಶನ ವಿಸರ್ಜನೆ ಮುಕ್ತಾಯವಾಗಲಿದೆ ಎಂದು ಮಹಾಮಂಡಳಿಯ ಮೂಲಗಳು ತಿಳಿಸಿವೆ. ಪಾಲಿಕೆ ರಚಿಸಿದ್ದ ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ ಹಾಗೂ ಸ್ನೇಹಿತರು ಸೇರಿಕೊಂಡು ಈ ಗಣೇಶನ ಮೂರ್ತಿಯನ್ನು ಕೊಡಿಸಿದ್ದಾರೆ. 4 ಅಡಿ ಎತ್ತರದ ಮೂರ್ತಿ ಇದಾಗಿದೆ.
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಹುಬ್ಬಳ್ಳಿ; ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆ
ಈದ್ಗಾದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನಕ್ಕೆ ಬಂದಿದ್ದೇವೆ. ಎಲ್ಲ ದೇವರು ಒಬ್ಬನೆ. ಜಾತಿಯೆನ್ನುವುದು ನಾವು ಮಾಡಿಕೊಂಡಿದ್ದೇವೆ ಅಷ್ಟೇ. ಮನುಷ್ಯನ ಮನಸ್ಸು ಬದಲಾಗಬೇಕಷ್ಟೇ. ಎಲ್ಲರೂ ಒಂದಾಗಿ ಹಬ್ಬ ಆಚರಿಸಬೇಕು.
ಸಾದಿಕ್, ಗಣೇಶನ ದರ್ಶನಕ್ಕೆ ಬಂದ ಮುಸ್ಲಿಂ ವ್ಯಕ್ತಿ
ಕಳೆದ 30 ವರ್ಷಗಳ ಹಿಂದೆ ರಾಷ್ಟ್ರಧ್ವಜಕ್ಕಾಗಿ ಇಲ್ಲಿ ಹೋರಾಟ ಮಾಡಿದ್ದೇವು. ಇದೀಗ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಎಲ್ಲರೂ ಸೇರಿಕೊಂಡು ಗಣೇಶನ ಪ್ರತಿಷ್ಠಾಪನೆ ಮಾಡಿದ್ದಾರೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ. ಎಲ್ಲರೂ ಸೇರಿಕೊಂಡು ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ.
ಜಗದೀಶ ಶೆಟ್ಟರ್, ಮಾಜಿ ಸಿಎಂ