ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಸೆ.1) : ಕುಂದಾನಗರಿ ಬೆಳಗಾವಿಯಲ್ಲಿ ಆಚರಿಸುವ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. 1905ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಗೆ ಬೆಳಗಾವಿ(Belagavi)ಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್(Bala Gangadhar Tilak) ಆಗಮಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲೂ ಬೆಳಗಾವಿಯಲ್ಲಿ ಪ್ರತಿ ವರ್ಷ 11 ದಿನಗಳ ಕಾಲ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಬೆಳಗಾವಿಯಲ್ಲಿ 118ನೇ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಗಣೇಶೋತ್ಸವದಲ್ಲಿ ಸಾವರ್ಕರ್(Veer Savarkar) ಭಾವಚಿತ್ರ ಇಡಬೇಕು ಎಂಬ ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಬೆಳಗಾವಿಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಗೊತ್ತಾ ವಿನಾಯಕ ದಾಮೋದರ ಸಾವರ್ಕರ್ ಬದುಕಿನ ಸತ್ಯ ಕಥೆ? ಭಾಗ-2
ಈಗಾಗಲೇ ಕೆಲವು ಗಣೇಶ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಇಟ್ಟು ಪೂಜೆ ಮಾಡಲಾಗಿದೆ. ಬೆಳಗಾವಿಯ ರಾಮತೀರ್ಥನಗರ(Ramateertha Nagar)ದ ಗಣೇಶ ವೃತ್ತ ಹಾಗೂ ಚನ್ನಬಸವೇಶ್ವರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಇಟ್ಟು ಪೂಜೆ ಮಾಡಲಾಗುತ್ತಿದೆ. ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್(Murughendragowda Patil) ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸಾವರ್ಕರ್ ಭಾವಚಿತ್ರದ ಫೋಟೋ ಫ್ರೇಮ್ ಹಂಚಿಕೆ ಮಾಡಿದ್ದರು. ಇದಕ್ಕೆ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಹನುಮಂತ ಕೊಂಗಾಳಿ(Hanamanth kongali) ಸಹ ಬೆಂಬಲ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಮುರುಘೇಂದ್ರಗೌಡ ಪಾಟೀಲ್, 'ವೀರ ಸಾವರ್ಕರ್‌ಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದ ಸಾವರ್ಕರ್ ಅವರು ಸ್ವಾತಂತ್ರ್ಯ ಸಿಕ್ಕ ನಂತರವೂ ಜೈಲು ಶಿಕ್ಷೆ ಅನುಭವಿಸಿದ್ದರು. ಜವಾಹರಲಾಲ್ ನೆಹರು(Jawaharlal Nehru) ಪ್ರಧಾನಿಯಾದ ವೇಳೆ ಪಾಕ್ ಪ್ರಧಾನಿ ಭಾರತ ಪ್ರವಾಸ ಕೈಗೊಂಡಿದ್ದರು. ಇದನ್ನು ವಿರೋಧಿಸಿದ್ದ ವೀರ್ ಸಾವರ್ಕರ್‌ರನ್ನು ಬಂಧಿಸಿ ನೂರು ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿ(Hindalaga Jail)ನಲ್ಲಿ ಇರಿಸಲಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಗೆ ಇತಿಹಾಸ ಗೊತ್ತಿಲ್ಲ. ಕಾಂಗ್ರೆಸ್(Congress)ನವರು ಸಾವರ್ಕರ್ ಬಗ್ಗೆ ಅವಹೇಳನ ಮಾಡಿದ ಹಿನ್ನೆಲೆ ಈ ಬಾರಿ ಗಣೇಶ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಇಡಲಾಗುತ್ತಿದೆ' ಎಂದರು.
ಇನ್ನು ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾರೂ ಅವಮಾನ ಮಾಡಬಾರದು. ಪ್ರತಿ ವರ್ಷ ಬೆಳಗಾವಿಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತೆ. ಅದೇ ರೀತಿ ರಾಮತೀರ್ಥ ನಗರದ ಗಣೇಶ ವೃತ್ತದಲ್ಲಿ 19ನೇ ವರ್ಷದ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಈ ಬಾರಿ ಗಣೇಶ ಮಂಟಪದಲ್ಲಿ ಸಾವರ್ಕರ್ ಭಾವಚಿತ್ರ ಇಟ್ಟಿದ್ದೇವೆ' ಎಂದರು.
ಮುಂದಿನ ವರ್ಷವೂ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇಡ್ತೀವಿ ಎಂದ ಮಾಜಿ ಸೈನಿಕ
ವೀರ್ ಸಾವರ್ಕರ್ ಬಗ್ಗೆ ಅಪಮಾನ ಮಾಡುವವರ ವಿರುದ್ಧ ಮಾಜಿ ಸೈನಿಕ(Ex-soldier)ರೋರ್ವರು ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದ ಚನ್ನಬಸವೇಶ್ವರ ಬಡಾವಣೆ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷರೂ ಆಗಿರುವ ಮಾಜಿ ಸೈನಿಕ ರಾಜೇಂದ್ರ ಹಲಗಿ(Rajendra Halagi) ಮಾತನಾಡಿ, 'ಸಾರ್ವಜನಿಕ ಗಣೇಶ ಮಂಟಪದಲ್ಲಿ ಸಾವರ್ಕರ್ ಫೋಟೋ ಇಡಲು ಯಾರದ್ದೂ ತಕರಾರಿಲ್ಲ. ನಾನು ಮಾಜಿ ಸೈನಿಕ, ಯಾವುದೇ ಪಕ್ಷಕ್ಕೆ ಬೆಂಬಲಿಸಲ್ಲ. ದೇಶಕ್ಕಾಗಿ ಹೋರಾಡಿದವರನ್ನು ನಾವು ಗೌರವಿಸಬೇಕು. ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಶ್ರದ್ಧೆ ಇಡಬೇಕು.ಮುಂದಿನ ವರ್ಷವೂ ನಾವು ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕುತ್ತೇವೆ' ಎಂದು ಹೇಳಿದ್ದಾರೆ. ಇನ್ನು ರಾಮತೀರ್ಥ ನಗರ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಬಿಡ್ನಾಳ್ ಮಾತನಾಡಿ '19 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ನಾವು ಅದ್ಧೂರಿಯಾಗಿ ಗಣೇಶೋತ್ಸವ ಅಚರಿಸುತ್ತಿದ್ದೇವೆ. ಕೆಲವು ಮುಖಂಡರು ವೀರ ಸಾವರ್ಕರ್ ಬಗ್ಗೆ ಸರಿಯಾದ ಅಭ್ಯಾಸ ಇಲ್ಲದೇ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಅಂತಾ ಹೇಳಲು ಇಚ್ಛೆ ಪಡುವೆ' ಎಂದರು.
Vijayanagara; ವೀರ ಸಾವರ್ಕರ್ ಫೋಟೋ ಇಟ್ಟು ಗಣೇಶ ಪ್ರತಿಷ್ಠಾಪಿಸಿದ ಉರ್ದು ಶಾಲೆ
ಇನ್ನು ಬೆಳಗಾವಿಯ ಸಮಾದೇವಿ ಬೀದಿ, ಖಡೇಬಜಾರ್ ಸೇರಿ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಮಂಡಲಗಳಲ್ಲಿ ಸಾವರ್ಕರ್ ಭಾವಚಿತ್ರ ಇಡಲಾಗಿದ್ದು, ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ. 11 ದಿನಗಳ ಗಣೇಶೋತ್ಸವದಲ್ಲಿ ಸಾವರ್ಕರ್ ಜೀವನ ಚರಿತ್ರೆ ಸಾರುವ ಭಿತ್ತಿಪತ್ರ ಅಳವಡಿಸಲು ಕೆಲವು ಮಂಡಳಿಗಳು ನಿರ್ಧರಿಸಿವೆ.