ಗಣೇಶ ಚತುರ್ಥಿ ಸನ್ನಿಹಿತವಾಗಿದೆ. ಈ ದಿನ ಪ್ರತಿ ಹಿಂದೂವೂ ಪ್ರಥಮ ಪೂಜಕನ ಅನುಗ್ರಹ ಪಡೆಯಲು ತನ್ನದೇ ಆದ ರೀತಿಯಲ್ಲಿ ಪೂಜೆ, ಭಕ್ತಿಯಲ್ಲಿ ತೊಡಗುತ್ತಾನೆ. ಬಹಳಷ್ಟು ಮನೆಗಳಲ್ಲಿ, ಬೀದಿಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೆಲ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು.
ಗಣೇಶ ಚತುರ್ಥಿಯು ಹಿಂದೂ ಹಬ್ಬಗಳಲ್ಲೇ ಅತಿ ಪ್ರಮುಖವಾದುದಾಗಿದೆ. ಗಣೇಶ ಎಂದರೆ ಪ್ರಥಮ ಪೂಜಕ. ಯಾವುದೇ ಶುಭ ಸಂದರ್ಭವಿರಲಿ, ಗಣಪನಿಗೆ ಪೂಜೆಯಿಲ್ಲದೆ ಕಾರ್ಯಕ್ರಮ ಆರಂಭವಾಗಲಾರದು. ಆತ ಬೇಡಿದ ವರ ಕೊಡುವ ದೇವರು. ಬುದ್ಧಿವಂತಿಕೆ, ಜ್ಞಾನದಾತ. ಜೊತೆಗೆ ಬದುಕಿನ ಹಾದಿಕ ಕಷ್ಟಗಳನ್ನೆಲ್ಲ ನಿವಾರಿಸುವ ವಿಘ್ನ ನಿವಾರಕ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇದೇ ತಿಥಿಯಂದು ಕೈಲಾಸ ಪರ್ವತದಿಂದ ತಾಯಿ ಪಾರ್ವತಿ ದೇವಿಯೊಂದಿಗೆ ಗಣೇಶ ಧರೆಗಿಳಿದಿದ್ದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ.ಹಾಗಾಗಿ ಈ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಮನೆಮನೆಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆತನಿಗೆ ಪೂಜೆ ನೆರವೇರಿಸಿ, ಗಣಪನಿಗಿಷ್ಟವಾದ ಮೋದಕ, ಕಡಲೆ, ಕಬ್ಬು, ಕಡುಬು, ಪಂಚಕಜ್ಜಾಯ ಇತ್ಯಾದಿ ತಿನಿಸುಗಳನ್ನು ನೀಡಲಾಗುತ್ತದೆ. ಗರಿಕೆ ಅರ್ಪಿಸಲಾಗುತ್ತದೆ. ಸಕಲ ವಿಧಿ ವಿಧಾನಗಳಿಂದ ಗಣೇಶನನ್ನು ಪೂಜಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಗಣೇಶನ ಬಗ್ಗೆ ಸ್ಕಂದ ಪುರಾಣ, ನಾರದ ಪುರಾಣ ಮತ್ತು ಬ್ರಹ್ಮ ವೈವರ್ತ ಪುರಾಣಗಳಲ್ಲಿ ವರ್ಣಿಸಿರುವುದನ್ನು ಕಾಣಬಹುದು.
ಗಣೇಶ ಚತುರ್ಥಿ 2022 ಯಾವಾಗ? ಶುಭ ಮುಹೂರ್ತವೇನು?
ಸಾಮಾನ್ಯವಾಗಿ ಜನರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ದಿನವೇ ಸಂಜೆ ವಿಸರ್ಜನೆ ಮಾಡುವುದರಿಂದ ಹಿಡಿದು 10 ದಿನಗಳವರೆಗೂ ಮನೆಯಲ್ಲಿ ಇಟ್ಟುಕೊಂಡು ವಿಸರ್ಜನೆ ಮಾಡುವುದಿದೆ. ಈ ಸಂದರ್ಭದಲ್ಲಿ ಕೆಲ ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬಹಳ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ, ವಿನಾಯಕನ ಮೆಚ್ಚಿಸುವ ಬದಲು ಆತನ ಅವಕೃಪೆ ಎದುರಿಸುವಂತಾದೀತು. ಅಂಥ ನಿಯಮಗಳು ಯಾವೆಲ್ಲ ನೋಡೋಣ.