Curses of Mahabharata: ಮಹಾಭಾರತದ ನಾಲ್ಕು ಶಾಪಗಳು ಇಂದಿಗೂ ಇವೆಯಂತೆ! ಯಾವುವು ಗೊತ್ತೆ?

By Suvarna News  |  First Published Mar 5, 2022, 3:42 PM IST

ಮಹಾಭಾರತದಲ್ಲಿ ಸಾಕಷ್ಟು ಶಾಪಗಳಿವೆ. ಅವುಗಳಲ್ಲಿ ಕೆಲವು ಶಾಪಗಳು ಇಂದಿಗೂ ಚಾಲ್ತಿಯಲ್ಲಿವೆ. ಅವು ಯಾವುವು ಅಂತ ತಿಳಿಯೋಣ ಬನ್ನಿ.


ಮಹಾಭಾರತದಲ್ಲಿ ಯಾರೋ ಯಾರಿಗೋ ನೀಡಿದ ಶಾಪಗಳಿವು. ಇವು ಇಂದಿಗೂ ಜಾರಿಯಲ್ಲಿವೆ ಎಂದರೆ ನಿಮಗೆ ಅಚ್ಚರಿಯಾದೀತು. 

1. ಅಶ್ವತ್ಥಾಮನ ಅಲೆದಾಟ (Ashwathama)

Latest Videos

undefined

ಕುರುಕ್ಷೇತ್ರ (Kurukshetra) ಯುದ್ಧ (War) ದಲ್ಲಿ ತನ್ನ ತಂದೆ ದ್ರೋಣರನ್ನು (Drona) ಕೊಂದು ಹಾಕಿದ ದೃಷ್ಟದ್ಯುಮ್ನನ ಮೇಲೆ, ಒಡೆಯ ದುರ್ಯೋಧನನನ್ನು ಕೊಂದ ಪಾಂಡವರ (Pandavas) ಮೇಲೆ ಅಶ್ವತ್ಥಾಮನಿಗೆ ಭಯಂಕರ ಸಿಟ್ಟು. ಅವನು ತೊಡೆ ಮುರಿದು ಬಿದ್ದಿದ್ದ ಕೌರವನಿಗೆ 'ಪಾಂಡವರ ಸರ್ವನಾಶ ಮಾಡುವೆ' ಎಂದು ಮಾತು ಕೊಟ್ಟು, ನಡುರಾತ್ರಿ ಪಾಂಡವರ ಶಿಬಿರಕ್ಕೆ ನುಗ್ಗುತ್ತಾನೆ. ಅಲ್ಲಿ ಅಡ್ಡ ಸಿಕ್ಕಿದ್ದ ದೃಷ್ಟದ್ಯುಮ್ನನ ತಲೆ ಕತ್ತರಿಸುತ್ತಾನೆ. ನಂತರ ಮಲಗಿದ್ದ ಉಪಪಾಂಡವರನ್ನು ಪಾಂಡವರೆಂದೇ ಭ್ರಮಿಸಿ, ಅವರ ತಲೆ ಕಡಿದು ತರುತ್ತಾನೆ. ಇದು ಮರುದಿನ ಪಾಂಡವರಿಗೆ ಗೊತ್ತಾಗಿ, ರೋಷದಿಂದ ಅಶ್ವತ್ಥಾಮನನ್ನು ಕೊಲ್ಲಲೆಂದು ಅಟ್ಟಿಸಿಕೊಂಡು ಬರುತ್ತಾರೆ. ಆಗ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಪ್ರತಿಯಾಗಿ ಅರ್ಜುನನೂ ಬ್ರಹ್ಮಾಸ್ತ್ರ ಬಿಡುತ್ತಾನೆ. ಇದರಿಂದ ಲೋಕವೇ ನಾಶವಾಗಲಿದೆ ಎಂದು ತಿಳಿದು ವೇದವ್ಯಾಸರು ಅಡ್ಡ ಬಂದು, ಬ್ರಹ್ಮಾಸ್ತ್ರಗಳನ್ನು ಉಪಸಂಹರಿಸಲು ತಿಳಿಸುತ್ತಾರೆ. ಅರ್ಜುನ ಉಪಸಂಹರಿಸಿದರೂ ಅಶ್ವತ್ಥಾಮನಿಗೆ ಉಪಸಂಹಾರ ಗೊತ್ತಿರುವುದಿಲ್ಲ. ಕಡೆಗೆ ಅದು ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುತ್ತದೆ. ನಂತರ ಪಾಂಡವರು ಅಶ್ವತ್ಥಾಮನನ್ನು ಹಿಡಿದು ತಲೆ ಬೋಳಿಸಿ ಅವನ ತಲೆಯಲ್ಲಿದ್ದ ಶಿಖಾಮಣಿಯನ್ನು ತೆಗೆದು, ಅದು ಸದಾ ಕಾಲ ಗಾಯಗೊಂಡು ಆ ಕೀವಿನಿಂದ ರಕ್ತ ಸುರಿಯುತ್ತಾ ಇರುವಂತೆ ಮಾಡುತ್ತಾರೆ. 'ಚಿರಂಜೀವಿಯಾಗಿ ಈ ನೋವನ್ನು ಅನುಭವಿಸು' ಎಂದು ಶ್ರೀಕೃಷ್ಣ (Srikrishna) ಆತನಿಗೆ ಶಾಪ ಕೊಡುತ್ತಾನೆ. ಹೀಗಾಗಿ ಅಶ್ವತ್ಥಾಮ ಇಂದಿಗೂ ತಿರುಗಾಡುತ್ತಾ ಇರುತ್ತಾನಂತೆ.

Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

2. ಸ್ತ್ರೀಯರ ಬಾಯಲ್ಲಿ ಗುಟ್ಟು (Secret)

ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ, ಸತ್ತವರಿಗೆ ಅವರ ಸಂಬಂಧಿಕರು ತರ್ಪಣ ಕೊಡುತ್ತಿರುತ್ತಾರೆ. ಆಗ, ಕರ್ಣನಿಗೂ ತರ್ಪಣ ಕೊಡುವಂತೆ ಕುಂತಿಯು ಪಾಂಡವರಿಗೆ ತಿಳಿಸುತ್ತಾಳೆ. ಯಾಕೆ ಎಂದು ಕುತೂಹಲದಿಂದ ಧರ್ಮರಾಯ ಕೇಳಿದಾಗ, ಕರ್ಣನ ಜನ್ಮವೃತ್ತಾಂತವನ್ನು ಅವರಿಗೆ ತಿಳಿಸುತ್ತಾಳೆ. ಇದರಿಂದ ಧರ್ಮರಾಯ ತೀವ್ರವಾಗಿ ದುಃಖಿತನಾಗುತ್ತಾನೆ. ನಿಜವಾಗಿ ಕರ್ಣನೇ ಸಿಂಹಾಸನಕ್ಕೆ ಹಕ್ಕುದಾರ. ಅನ್ಯಾಯವಾಗಿ ಅವನನ್ನು ಕಳೆದುಕೊಂಡೆವು ಒಂದು ರೋದಿಸುತ್ತಾನೆ. ಅದೇ ಸಿಟ್ಟಿನಲ್ಲಿ ಶಪಿಸುತ್ತಾನೆ- 'ಲೋಕದ ಯಾವ ಹೆಣ್ಣು ಮಕ್ಕಳ ಬಾಯಿಯಲ್ಲಿ ರಹಸ್ಯ ನಿಲ್ಲದೇ ಹೋಗಲಿ.' ಅದಕ್ಕೆಂದೇ ಇಂದಿಗೂ ಸ್ತ್ರೀಯರು ಗುಟ್ಟನ್ನು ಹೊಟ್ಟೆಯೊಳಗೆ ಇಟ್ಟುಕೊಳ್ಳಲು ಶಕ್ತರಲ್ಲವಂತೆ.

Scorpions ಸಂಬಂಧದಲ್ಲಿ ಈ ತಪ್ಪು ಮಾಡುತ್ತಾರೆ!

3. ಕಲಿಯುಗ ಪ್ರವೇಶ (Kaliyug)

ಇಂದು ಕಲಿಯುಗ ನಡೆಯುತ್ತಿದೆ. ಇದರ ಪ್ರವೇಶವಾದುದು ಒಂದು ವಿಭಿನ್ನ ರೀತಿಯಲ್ಲಿ. ಪಾಂಡವರ ಮೊಮ್ಮಗನಾದ ಪರೀಕ್ಷಿತ ಜಗತ್ತನ್ನು ಚೆನ್ನಾಗಿ ಆಳುತ್ತಿರುತ್ತಾನೆ. ಅವನ ಆಳ್ವಿಕೆಯಲ್ಲಿ ಕಲಿಗೆ ಪ್ರವೇಶವೇ ಇರಲಿಲ್ಲ. ಕಲಿಯನ್ನು ಆಚೆಗೇ ನಿಲ್ಲಿಸಿರುತ್ತಾನೆ. ಒಂದು ದಿನ ಕಾಡಿಗೆ ಬೇಟೆಗೆ ಹೋದಾಗ ಅಲ್ಲಿ ತಪದಲ್ಲಿದ್ದ ಶಮೀಕ ಋಷಿ ತನ್ನನ್ನು ಮಾತಾಡಿಸಲಿಲ್ಲ ಎಂದು ಸಿಟ್ಟಿನಿಂದ ಅವರ ಕೊರಳಿಗೆ ಸತ್ತ ಹಾವನ್ನು ಹಾಕಿ ಬರುತ್ತಾನೆ. ಇದನ್ನು ನೋಡಿ ಶಮೀಕರ ಮಗ ಶೃಂಗಿ, ರೋಷದಿಂದ, ಸರ್ಪರಾಜ ತಕ್ಷಕ ಕಚ್ಚಿ ಪರೀಕ್ಷಿತ ಸಾಯಲಿ ಎಂದು ಶಾಪ ಕೊಡುತ್ತಾನೆ. ಹಾಗೇ ತಕ್ಷಕನ ಕಡಿತದಿಂದ ಪರೀಕ್ಷಿತ ಸಾಯುತ್ತಾನೆ. ಇದರಿಂದ ಭೂಮಿಗೆ ಕಲಿಯ ಪ್ರವೇಶ ಸುಗಮವಾಗುತ್ತದೆ.

Planets in astrology: ವಯಸ್ಸಿಗೆ ಮುಂಚೆ ಕಾಡ್ತಿರುವ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಗ್ರಹ ದೋಷ ಕಾರಣ!

4. ಮಕ್ಕಳ ತಪ್ಪಿಗೆ ಶಿಕ್ಷೆಯಿಲ್ಲ (Chlidren)

ಮಾಂಡವ್ಯ ಎಂಬ ಋಷಿಯ ಆಶ್ರಮದಲ್ಲಿ ಕಳ್ಳರು ಅವರಿಗೆ ತಿಳಿಯದಂತೆ ಬಚ್ಚಿಟ್ಟುಕೊಳ್ಳುತ್ತಾರೆ. ಮಾಂಡವ್ಯನೇ ತಪ್ಪಿತಸ್ಥ ಎಂದು ತಪ್ಪು ಭಾವಿಸಿದ ರಾಜ ಅವರನ್ನು ಗಲ್ಲಿಗೇರಿಸುತ್ತಾನೆ. ಆದರೆ ಮಾಂಡವ್ಯರು ಸಾಯುವುದಿಲ್ಲ. ಮುಂದೆ ಮಾಂಡವ್ಯರು ಯಮಲೋಕಕ್ಕೆ ಹೋಗಿ, ನನ್ನ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಕೇಳುತ್ತಾರೆ. ಬಾಲ್ಯದಲ್ಲಿ ಇರುವೆ, ಕಪ್ಪೆಗಳನ್ನು ಹಿಂಸಿಸಿದ್ದಕ್ಕೆ ಈ ಶಿಕ್ಷೆ ಎಂದು ಯಮ ಹೇಳುತ್ತಾನೆ. ಮಾಂಡವ್ಯ ಸಿಟ್ಟಿಗೆದ್ದು, 'ನಿನ್ನದು ಎಂಥ ನ್ಯಾಯ? ಬಾಲ್ಯದಲ್ಲಿ ನ್ಯಾಯ ಅನ್ಯಾಯದ ಪರಿಜ್ಞಾನ ಇರುತ್ತದೆಯೇ? ಇನ್ನು ಮುಂದೆ ಬಾಲ್ಯದಲ್ಲಿ ಮಾಡಿದ ತಪ್ಪುಗಳಿಗೆ ಮನುಷ್ಯರಿಗೆ ಶಿಕ್ಷೆಯಾಗದಿರಲಿ. ಹಾಗೇ ನೀನು ಮನುಷ್ಯನಾಗಿ ಜನಿಸು' ಎಂದು ಶಾಪ ಕೊಡುತ್ತಾನೆ. ಹೀಗಾಗಿ ಇಂದಿಗೂ ಮಕ್ಕಳ ತಪ್ಪಿಗೆ ಶಿಕ್ಷೆಯಿಲ್ಲ ಹಾಗೂ ಯಮನೇ ವಿದುರನಾಗಿ ಜನಿಸುತ್ತಾನೆ.
 

click me!