ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಕೊಂಡ್ರೆ ಲೆಕ್ಕನೇ ಇಲ್ದಷ್ಟು ಅದೃಷ್ಟ!

By Suvarna NewsFirst Published Oct 22, 2022, 5:44 PM IST
Highlights

ಇಂದು ಮತ್ತು ನಾಳೆ ಧನ್ ತೇರಸ್ ಹಿನ್ನಲೆ
ಪುಸ್ತಕ ಕೊಳ್ಳಲು ಮುಗಿಬಿದ್ದ ಅಂಗಡಿ ಮಾಲೀಕರು
ದೀಪಾವಳಿ ಹಬ್ಬದಂದು ಅಂಗಡಿಗಳಲ್ಲಿ ಪೂಜೆ ಮಾಡುವ ಪ್ರತೀತಿ
ಅದೃಷ್ಟ ಹಂಚೋ ಅದೃಷ್ಟವಂತ ಅಂಗಡಿ!

ದೀಪಾವಳಿ ಬಂತೆಂದರೆ ಸಾಕು, ಬೆಂಗಳೂರಿನ ಚಿಕ್ಕ ಪೇಟೆಯ ಈ ಅಂಗಡಿಯೆದ್ರು ದೊಡ್ಡ ಕ್ಯೂ. ಅದೂ ಯಾರದಂತೀರಿ? ಬೇರೆ ಬೇರೆ ಅಂಗಡಿಗಳ ಮಾಲೀಕರದು! ಇಷ್ಟಕ್ಕೇ ಅಚ್ಚರಿ ಪಡ್ಬೇಡಿ, ಇವರೆಲ್ಲ ಕ್ಯೂ ನಿಲ್ಲೋದು ಯಾಕೆ ಗೊತ್ತಾ- ಲೆಕ್ಕದ ಪುಸ್ತಕ ಖರೀದಿಗೆ!

ಅರೆರೆ! ಇದೇನಪ್ಪಾ ಇದು, ಅಂಗಡಿ ಮಾಲೀಕರೆಲ್ಲ ಇದೇ ಅಂಗಡಿಯ ಮುಂದೆ ಅದೂ ಲೆಕ್ಕದ ಪುಸ್ತಕ ಕೊಳ್ಳೋಕೆ ಕ್ಯೂ ನಿಲ್ತಾರಂದ್ರೆ ಏನೋ ವಿಶೇಷ ಇರಲೇಬೇಕಲ್ಲ..

Latest Videos

ಹೌದು, ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಷಾ ಜಸ್ ರಾಜ್ ಜೈನ್ ಅಂಗಡಿ(Sha Jasraj Jain Books) ಅಂಥದೊಂದು 'ಅದೃಷ್ಟ'ದ ಅಂಗಡಿಯಾಗಿ ಹೆಸರು ಮಾಡಿದೆ. ದೀಪಾವಳಿ ಬಂದರೆ ಸಾಕು, ಈ ಅಂಗಡಿಯಲ್ಲಿ ಪುಸ್ತಕ ಕೊಳ್ಳಲು ಜನರು ಮುಗಿ ಬೀಳ್ತಾರೆ. ಇಲ್ಲಿ ಲೆಕ್ಕದ ಪುಸ್ತಕ ಕೊಂಡು ಲಕ್ಷ್ಮೀ ಪೂಜೆಯ ದಿನ ತಮ್ಮ ಅಂಗಡಿಯಲ್ಲಿ ಈ ಪುಸ್ತಕವಿಟ್ಟು ಪೂಜೆ ಮಾಡಿದ್ರೆ ನಂತರವೆಲ್ಲ ತಮ್ಮ ಅಂಗಡಿಯ ಅದೃಷ್ಟ ಹೊಳೆಯುತ್ತದೆ, ಹಣ ಹರಿದುಬರುತ್ತದೆ ಎಂಬ ನಂಬಿಕೆ ಬಹಳ ಪ್ರಚಲಿತದಲ್ಲಿದೆ. ಇದೇ ಕಾರಣಕ್ಕೆ ಲಕ್ಷ್ಮೀ ಪೂಜೆಗೂ ಮುನ್ನ ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಕೊಳ್ಳಲು ಬೇರೆ ಬೇರೆ ಅಂಗಡಿಯ ಮಾಲೀಕರೆಲ್ಲ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಒಂದೆರಡು ಗಂಟೆ ಕ್ಯೂ ನಿಲ್ಲುವುದಾದರೂ ಬೇಸರಿಸದೆ ನಿಂತು ತಮ್ಮ 'ಅದೃಷ್ಟದ ಲೆಕ್ಕಪುಸ್ತಕ' ಕೊಂಡೇ ಹೋಗುತ್ತಾರೆ!

ಈ 5 ರಾಶಿಯವರಿಗೆ ಶನಿ ಮಾರ್ಗಿಯಿಂದ ಆರ್ಥಿಕ ಆಘಾತ, ಎಚ್ಚರದಿಂದಿರಿ!

ಈ ಅಂಗಡಿಯಲ್ಲಿ ಪುಸ್ತಕ ಕೊಳ್ಳಲು ಕೇವಲ ಚಿಕ್ಕಪೇಟೆಯ ಸುತ್ತಮುತ್ತಲಿನ ಅಂಗಡಿಯವರಷ್ಟೇ ಅಲ್ಲ, ದೂರದೂರದ ನಗರಗಳಿಂದಲೂ ಇದೇ ಏಕೈಕ ಕಾರಣಕ್ಕಾಗಿ ಬರುವವರಿದ್ದಾರೆ. ಷಾ ಜಸ್ ರಾಜ್ ಜೈನ್ ಅಂಗಡಿ ಅಂಗಡಿಯು ಇಲ್ಲಿ ಸುಮಾರು 42 ವರ್ಷಗಳಿಂದ ಇದೆ. ಅದು ಹೇಗೋ ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಕೊಂಡು ಪೂಜಿಸಿ, ಮುಂದಿನ ವರ್ಷದ ಲೆಕ್ಕಗಳನ್ನೆಲ್ಲ ಬರೆದಿಡುತ್ತಾ ಹೋದರೆ ಅದೃಷ್ಟ ಹೊಳೆಯುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ. ಅದರಲ್ಲೂ ಈ ಸ್ಟೇಶನರಿ ಅಂಗಡಿಯಲ್ಲಿ ಲೆಕ್ಕಪುಸ್ತಕ ಕೊಳ್ಳಲೂ ಮುಹೂರ್ತ ನೋಡಿ ಬರುವವರ ಸಂಖ್ಯೆ ಹೆಚ್ಚಿದೆ. 

ಸಾಮಾನ್ಯವಾಗಿ ದೀಪಾವಳಿ ಹಬ್ಬದಂದು ಅಂಗಡಿಗಳಲ್ಲಿ ಪೂಜೆ ಮಾಡುವ ಪ್ರತೀತಿ ಇದೆ. ಈ ಲಕ್ಷ್ಮೀ ಪೂಜೆಯ ಸಮಯದಲ್ಲಿ ತಾಯಿ ಲಕ್ಷ್ಮಿಯ ಫೋಟೋದೊಡನೆ ಹಣಕಾಸು, ಚಿನ್ನವಿಟ್ಟು ಪೂಜಿಸುವವರೂ ಇದ್ದಾರೆ. ಆದರೆ, ಷಾ ಜಸ್ ರಾಜ್ ಜೈನ್ ಅಂಗಡಿಯಿಂದ ಲೆಕ್ಕದ ಪುಸ್ತಕ ಖರೀದಿ ಮಾಡಿ ತಂದವರು, ಈ ಪುಸ್ತಕವನ್ನೂ ಲಕ್ಷ್ಮಿಯ ಎದುರಿಟ್ಟು ಪೂಜಿಸಿ, ಮುಂದಿನ ದಿನಗಳಲ್ಲಿ ತಮ್ಮ ಬಳಿ ಹೆಚ್ಚಿನ ಅದೃಷ್ಟ, ಸಂಪತ್ತು ಹರಿದು ಬರಲಿ ಎಂದು ಬೇಡಿಕೊಳ್ಳುತ್ತಾರೆ. ಹೀಗೆ ಲೆಕ್ಕ ಪುಸ್ತಕ ತಂದು ಅದೃಷ್ಟ ನೋಡಿದವರ ಮಾತಿನ ಜಾಹಿರಾತಿನಿಂದಲೇ ವರ್ಷದಿಂದ ವರ್ಷಕ್ಕೆ ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

'ಷಾ ಜಸ್ ರಾಜ್ ಜೈನ್ ಅಂಗಡಿಯಲ್ಲಿ ಪುಸ್ತಕ ಖರೀದಿಸಿದ್ರೆ ಲಕ್ಷ್ಮಿ ಒಲಿಯುವಳು, ಆದ್ದರಿಂದ ಈ ಅಂಗಡಿಯಲ್ಲಿ ಪ್ರತಿ ದೀಪಾವಳಿಗೆ ಪುಸ್ತಕ ಖರೀದಿ ಮಾಡುತ್ತೇವೆ,' ಎನ್ನುತ್ತಾರೆ ಅಂಗಡಿ ಮಾಲೀಕರು. 

ಸೂರ್ಯಗ್ರಹಣ 2022: ಯಾವ ರಾಶಿಗೆ ಲಾಭ, ಯಾವ ರಾಶಿಗೆ ಸಂಕಷ್ಟ?

ಏನೇ ಹೇಳಿ, ಅದೃಷ್ಟದ ಅಂಗಡಿ ಎನಿಸಿಕೊಂಡು ಅದೃಷ್ಟ ಧಾರೆಯೆರೆಯಲೂ ಅದೃಷ್ಟ ಬೇಕು ಅಲ್ಲವೇ?!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!