ಉತ್ತರ ಕನ್ನಡ: ಮಾರ್ಕೆಪೂನವ್‌ ಜಾತ್ರೆಯಲ್ಲಿ ಮಕ್ಕಳ ಹೊಕ್ಕಳಿಗೆ ಸೂಚಿ ಚುಚ್ಚುವ ಹರಕೆ!

By Kannadaprabha News  |  First Published Feb 7, 2023, 9:39 AM IST

ತಾಲೂಕಿನ ಮಾಜಾಳಿಯಲ್ಲಿ ಸೋಮವಾರ ಮಾರ್ಕೆಪೂನವ್‌ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಹರಕೆಯ ಅಂಗವಾಗಿ ಗಂಡು ಮಕ್ಕಳ ಹೊಕ್ಕಳ ಭಾಗಕ್ಕೆ ಸೂಜಿ ಚುಚ್ಚಿ, ದಾರ ಪೋಣಿಸುವ ಸಂಪ್ರದಾಯ ನಡೆಯಿತು.


ಕಾರವಾರ (ಫೆ.7) : ತಾಲೂಕಿನ ಮಾಜಾಳಿಯಲ್ಲಿ ಸೋಮವಾರ ಮಾರ್ಕೆಪೂನವ್‌ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಹರಕೆಯ ಅಂಗವಾಗಿ ಗಂಡು ಮಕ್ಕಳ ಹೊಕ್ಕಳ ಭಾಗಕ್ಕೆ ಸೂಜಿ ಚುಚ್ಚಿ, ದಾರ ಪೋಣಿಸುವ ಸಂಪ್ರದಾಯ ನಡೆಯಿತು.

ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಸಂಪ್ರದಾಯ ಪರಂಪರಾಗತವಾಗಿ ಬಂದಿದ್ದು, ಸೋಮವಾರ ದಾಡ್‌ ದೇವಸ್ಥಾನದಲ್ಲಿ ಗಂಡು ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು.

Tap to resize

Latest Videos

ಅದಾನಿ ಷೇರು ಕುಸಿತ ಪ್ರಕರಣ: ಎಲ್‌ಐಸಿ ಕಚೇರಿ ಎದುರು ಕಾಂಗ್ರೆಸ್‌ ಪ್ರತಿಭಟನೆ

ಸೂಜಿ ದಾರವನ್ನು ಮಕ್ಕಳ ಪಾಲಕರೇ ತಂದಿದ್ದರು. ಸೂಜಿ ಚುಚ್ಚುವ ಸಂದರ್ಭದಲ್ಲಿ ಮಕ್ಕಳು ಸಂಪ್ರದಾಯದಂತೆ ಅಯ್ಯೋಯ್ಯೋ ಎಂದು ಕೂಗಿದರು. ರಾಮನಾಥ ಕ್ಷೇತ್ರದ ಪರಿವಾರ ದೇವರ ಜಾತ್ರೆ ಇದಾಗಿದ್ದು, ಪ್ರತಿವರ್ಷ ಶುದ್ಧ ಪೂರ್ಣಿಮೆಯಂದು ಈ ಜಾತ್ರೆ ಜರುಗುತ್ತದೆ.

ಹುಣ್ಣಿಮೆಗೆ ಕೊಂಕಣಿ ಭಾಷೆಯಲ್ಲಿ ಪೂನವ್‌ ಎನ್ನುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ಮಾರ್ಕೆಪೂನವ್‌ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳು ಕುಲದೇವರಿಗೆ ದೀವಜ್‌ (ದೀಪ) ನೀಡಿ ಹರಕೆ ಅರ್ಪಿಸಿದರು.

ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ತಲೆ ಮೇಲೆ ದೀಪವನ್ನಿರಿಸಿಕೊಂಡು ದಾಡ್‌ ದೇವಸ್ಥಾನದಿಂದ ಮಾರಿಕಾದೇವಿ (ದೇವತಿ) ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪದಾರತಿ ಮಾಡುತ್ತಾರೆ.

ಕಾಕಡ ಹೂವಿನಿಂದ ಅಲಂಕೃತಗೊಂಡ ಬಂಡಿಯನ್ನು ಭಕ್ತರು ದಾಡ್‌ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಎಳೆದರು. ಈ ಜಾತ್ರೆಗೆ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಜಿಲ್ಲೆಯ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅರಣ್ಯ ಇಲಾಖೆಯ ಭೂದೃಶ್ಯ ಯಾತ್ರೆ!

ಇಲ್ಲಿನ ಮಾರಿಕಾದೇವಿಗೆ ದೀಪದಿಂದ ಆರತಿ ಬೆಳಗುವುದರಿಂದ ಆಕೆ ಕುಲದೇವರ ಪ್ರೀತಿಗೆ ಪಾತ್ರಳಾಗುತ್ತಾಳೆ ಎನ್ನುವುದು ನಂಬಿಕೆ ಹಾಗೂ ದಾಡ್‌ ದೇವಸ್ಥಾನದಲ್ಲಿ ಗಂಡು ಮಕ್ಕಳು ಪೋಣಿಸಿಕೊಂಡ ದಾರವನ್ನು ಮಾರಿಕಾ ದೇವಿಯ ದೇವಸ್ಥಾನದಲ್ಲಿ ತೆಗೆಯಲಾಗುತ್ತದೆ.

click me!