ಸೂರ್ಯನ ತುಲಾ ಸಂಕ್ರಮಣ; ಇಂದು ತಲಕಾವೇರಿ ತೀರ್ಥೋದ್ಭವ

By Suvarna News  |  First Published Oct 17, 2022, 9:54 AM IST

ಇಂದು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ
ರಾತ್ರಿ 7 ಗಂಟೆ 21 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ಕಾಣಿಸಲಿರುವ ಕಾವೇರಿ ಮಾತೆ
ಏಷಿಯಾನೆಟ್‌ ಸುವರ್ಣನ್ಯೂಸ್‌ನಲ್ಲಿ ನೇರಪ್ರಸಾರ


ದಕ್ಷಿಣ ಭಾರತದ ಪುಣ್ಯ ಕ್ಷೇತ್ರ, ಕನ್ನಡ ನಾಡಿನ ಜೀವ ನದಿ ಕಾವೇರಿಯ ತವರು ತಲಕಾವೇರಿ(Tala Cauvery)ಯ ಪವಿತ್ರ ಕುಂಡಿಕೆಯಲ್ಲಿ ಸೋಮವಾರ ರಾತ್ರಿ 7 ಗಂಟೆ 21 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ಪವಿತ್ರ ತೀರ್ಥೋದ್ಭವ ನೆರವೇರಲಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭ ಭಕ್ತರಿಗೆ ಅವಕಾಶವಿರಲಿಲ್ಲ. ಈ ವೇಳೆ ಗೊಂದಲ ಕೂಡ ಉಂಟಾಗಿತ್ತು. ತೀರ್ಥೋದ್ಭವದ ಬಳಿಕ ದರ್ಶನ ಅವಕಾಶ ನೀಡಲಾಗಿತ್ತು. ಈ ಬಾರಿ ತೀರ್ಥೋದ್ಭವ ಸಂದರ್ಭ ಮುಕ್ತ ಅವಕಾಶವಿದ್ದು, ಅತಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಭಾಗಮಂಡಲ(Bhagamandala)ದ ತ್ರಿವೇಣಿ ಸಂಗಮದಲ್ಲಿ ಹಿರಿಯರಿಗೆ ಪಿಂಡಪ್ರದಾನ ಮಾಡುವುದರೊಂದಿಗೆ ಭಕ್ತರು ಪುಣ್ಯ ಸ್ನಾನ ಮಾಡಲಿದ್ದಾರೆ. ದಕ್ಷಿಣ ಗಂಗೆ ಎಂದು ಕರೆಸಿಕೊಳ್ಳೋ ಕಾವೇರಿ ದಕ್ಷಿಣ ಭಾರತದ ಕೋಟ್ಯಾಂತರ ಜನರ ಪಾಲಿಗೆ ಜೀವ ಜಲವಾಗಿ, ಪಾಪ ನಾಶಿನಿಯಾಗಿ ಭಕ್ತರನ್ನು ಹರಸುತ್ತಿದ್ದಾಳೆ...

Latest Videos

undefined

ತೀರ್ಥೋದ್ಭವ ಸಂದರ್ಭ ಭಕ್ತರು ಹಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿ ಪವಿತ್ರ ಕುಂಡಿಕೆ ಬಳಿಯ ಕಲ್ಯಾಣಿಗೆ ಭಕ್ತರಿಂದ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ತೀರ್ಥೋದ್ಭವ ವೀಕ್ಷಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ ಕೂಡಾ ಮಾಡಲಾಗಿದೆ. ತೀರ್ಥೋದ್ಭವದ ಈ ತುಲಾ ಸಂಕ್ರಮಣದ ಕಾಲದಲ್ಲಿ ತಲಾವೇರಿಗೆ ಬಂದು ಭ್ರಹ್ಮಕುಂಡಿಕೆಯ ಬಳಿಯಿರುವ ಕಲ್ಯಾಣಿಯಲ್ಲಿ ಮಿಂದು ಕಾವೇರಿ ತೀರ್ಥ ಸ್ವೀಕಾರ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂಬುದು ಜನರ ನಂಬಿಕೆ. 

Vastu tips: ಈ 10 ಅದೃಷ್ಟದ ವಸ್ತುಗಳು ಮನೆಗೆ ತರುತ್ತವೆ ಸುಖ, ಸಂತೋಷ

ತೀರ್ಥೋದ್ಭವದ ನಂತರ ತೀರ್ಥವನ್ನು ಭಕ್ತರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸ್ವಯಂ ಸೇವಕರನ್ನು ಕೂಡ ನಿಯೋಜಿಸಲಾಗಿದೆ. ಅಲ್ಲದೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆ ತೀರ್ಥವನ್ನು ವಿತರಿಸಲು ವಿವಿಧ ಸಂಘ ಸಂಸ್ಥೆಗಳು ಸಜ್ಜುಗೊಂಡಿವೆ.

ಗಣ್ಯರು ಭಾಗಿ
ತೀರ್ಥೋದ್ಭವದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್‌, ಶಾಸಕರಾದ ಕೆ.ಜಿ.ಬೋಪಯ್ಯ, ಎಂಪಿ ಅಪ್ಪಚ್ಚು ರಂಜನ್‌, ಎಂಪಿ ಸುಜಾ ಕುಶಾಲಪ್ಪ, ಎಸ್‌ಎಲ್ ಭೋಜೇಗೌಡ, ಆಯನೂರು ಮಂಜುನಾಥ್‌, ಸಂಸದ ಪ್ರತಾಪ್‌ ಸಿಂಹ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮುಜರಾಯಿ, ಹಜ್‌ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಒಂದು ತಿಂಗಳು ಜಾತ್ರೆ
ತೀರ್ಥೋದ್ಭವದ ಹಿನ್ನೆಲೆಯಲ್ಲಿ ಒಂದು ತಿಂಗಳು ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದ್ದು, ಮೈಸೂರು, ಮಂಡ್ಯ ಸೇರಿದಂತೆ ಹೊರ ರಾಜ್ಯ ಕೇರಳ, ತಮಿಳುನಾಡಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಕೊಡಗು ಏಕೀಕರಣ ರಂಗದಿಂದ ಒಂದು ತಿಂಗಳ ಕಾಲ ಅನ್ನ ಸಂತರ್ಪಣೆ ವ್ಯವಸ್ಥೆ ಇರಲಿದೆ.

Kalava: ಸಿಕ್ಕ ಸಿಕ್ಕ ರಕ್ಷಾ ಸೂತ್ರ ಕಟ್ಟಬೇಡಿ, ಸಮಸ್ಯೆಗೆ ಅಗತ್ಯವಾದ ದಾರವನ್ನು ಮಾತ್ರ ಕಟ್ಟಿ

ನೇರಪ್ರಸಾರ
ತಲಕಾವೇರಿ ತೀರ್ಥೋದ್ಭವದ ನೇರಪ್ರಸಾರ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾಗಲಿದೆ.

click me!