
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ಹೆಚ್ಚಿನ ಮಹತ್ವವಿದೆ. ವ್ಯಕ್ತಿಯ ಗುಣ ಸ್ವಭಾವಗಳು ನಕ್ಷತ್ರದ ಆಧಾರದ ಮೇಲೆ ತಿಳಿಯಬಹುದಾಗಿರುತ್ತದೆ. ಜಾತಕವನ್ನು ಮಾಡುವಾಗ ಸಹ ವ್ಯಕ್ತಿಯ ನಕ್ಷತ್ರ ಮುಖ್ಯವಾಗಿ ಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಇಪ್ಪತ್ತೇಳು ನಕ್ಷತ್ರಗಳಿವೆ. ನಕ್ಷತ್ರಗಳ ಈ ಸಮೂಹವನ್ನು ದಕ್ಷ ಪ್ರಜಾಪತಿಯ ಪುತ್ರಿಯರು ಎಂದು ಸಹ ಹೇಳಲಾಗುತ್ತದೆ. ಈ ಎಲ್ಲ ಪುತ್ರಿಯರ ವಿವಾಹವು ಸೋಮದೇವ ಅಂದರೆ ಚಂದ್ರದೇವನ ಜೊತೆ ಆಯಿತೆಂದು ಸಹ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಮೊದಲಿನ ನಾಲ್ಕು ನಕ್ಷತ್ರಗಳಾದ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಇವುಗಳ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
ಇದನ್ನು ಓದಿ: ನಿಮ್ಮ ರಾಶಿಗೆ ಅನುಗುಣವಾಗಿ ಗುರು ವಂದನೆ ಸಲ್ಲಿಸಿ, ಬದುಕಿಕೊಂದು ದಾರಿ ಕಾಣಿಸುತ್ತೆ!
ಅಶ್ವಿನಿ ನಕ್ಷತ್ರ
ಇಪ್ಪತ್ತೇಳು ನಕ್ಷತ್ರಗಳಲ್ಲಿ ಅಶ್ವಿನಿ ನಕ್ಷತ್ರವು ಮೊದಲನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಕೇತು ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖವಾದ ಮತ್ತು ಸರ್ವಪ್ರಥಮ ನಕ್ಷತ್ರವನ್ನು ಅಶ್ವಿನಿ ನಕ್ಷತ್ರವೆಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಬಲಶಾಲಿ ಆಗಿರುತ್ತಾರೆ. ಅಷ್ಟೇ ಅಲ್ಲದೆ ಸದಾ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿರಲು ಇಷ್ಟಪಡುತ್ತಾರೆ. ಈ ನಕ್ಷತ್ರದವರು ಹೊಂದಿರುವ ಮಹತ್ವಾಕಾಂಕ್ಷೆಯ ಗುಣ ಇವರನ್ನು ಸಂತುಷ್ಟರಾಗಿರಲು ಬಿಡುವುದಿಲ್ಲ. ಈ ನಕ್ಷತ್ರದವರು ಹೆಚ್ಚು ವಿಷಯಗಳನ್ನು ರಹಸ್ಯವಾಗಿಡುತ್ತಾರೆ. ಅಷ್ಟೇ ಅಲ್ಲದೆ ಗಡಿಬಿಡಿಯ ಸ್ವಭಾವ ಇವರದ್ದಾಗಿರುತ್ತದೆ. ಕೆಲವು ಬಾರಿ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸುತ್ತಾರೆ. ಈ ನಕ್ಷತ್ರದವರು ಉತ್ತಮ ಜೀವನ ಸಂಗಾತಿ ಜೊತೆಗೆ ವಿಶ್ವಾಸಿ ಸ್ನೇಹಿತರು ಆಗುತ್ತಾರೆ.
ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವದಿಂದ ಪಾರಾಗಲು ಧರಿಸಿ ಈ ರುದ್ರಾಕ್ಷಿ ...!!!
ಭರಣಿ ನಕ್ಷತ್ರ
ನಕ್ಷತ್ರ ಕೂಟದಲ್ಲಿ ಭರಣಿ ನಕ್ಷತ್ರವು ಎರಡನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರ ಗ್ರಹವಾಗಿದೆ. ಹಾಗಾಗಿ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಸದಾ ಆರಾಮವಾಗಿರಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ನೋಡಲು ಆಕರ್ಷಕವಾಗಿ ಮತ್ತು ಸುಂದರವಾಗಿ ಇರುತ್ತಾರೆ. ಈ ನಕ್ಷತ್ರದವರ ವ್ಯಕ್ತಿತ್ವ ಇತರರನ್ನು ಇವರತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ಈ ವ್ಯಕ್ತಿಗಳು ಜೀವನದಲ್ಲಿ ಪ್ರೇಮಕ್ಕೆ ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಾವುದಾದರೂ ಕೆಲಸವನ್ನು ಮಾಡಿ ಮುಗಿಸಬೇಕೆಂದು ಛಲತೊಟ್ಟರೆ ಅದನ್ನು ಪೂರೈಸಿದ ಹೊರತು ಇವರಿಗೆ ನೆಮ್ಮದಿ ಇರುವುದಿಲ್ಲ. ಈ ನಕ್ಷತ್ರದವರ ಗೌರವ ಮತ್ತು ಪ್ರತಿಷ್ಠೆಗಳು ಸಮಾಜದಲ್ಲಿ ಹೆಚ್ಚಿರುತ್ತದೆ.
ಕೃತ್ತಿಕಾ ನಕ್ಷತ್ರ
ಕೃತಿಕಾ ನಕ್ಷತ್ರವೂ ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೂರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಇತರರ ಮೇಲೆ ವಿಶ್ವಾಸವನ್ನು ಬೇಗ ಬೆಳೆಸಿಕೊಳ್ಳುವುದಿಲ್ಲ. ಮೊದಲ ನೋಟದಲ್ಲೇ ಪ್ರೀತಿಯಾಗುತ್ತದೆ ಎಂಬ ವಿಚಾರದ ಬಗ್ಗೆ ಇವರಿಗೆ ನಂಬಿಕೆ ಇರುವುದಿಲ್ಲ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಿಗೆ ಸೂರ್ಯ ದೇವನ ಅನುಗ್ರಹ ಮತ್ತು ಪ್ರಭಾವ ಹೆಚ್ಚಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಸ್ವಾಭಿಮಾನಿಗಳಾಗಿರುತ್ತಾರೆ. ಜತೆಗೆ ಜೀವನದಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿರುತ್ತಾರೆ. ಯಾವುದೇ ಕೆಲಸವನ್ನಾದರೂ ಪೂರ್ಣ ಉತ್ಸಾಹ ಮತ್ತು ಶ್ರದ್ಧೆಯಿಂದ ಪೂರೈಸುವ ಸ್ವಭಾವ ಇವರದಾಗಿರುತ್ತದೆ.
ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ
ರೋಹಿಣಿ ನಕ್ಷತ್ರ
ಒಟ್ಟು ನಕ್ಷತ್ರಗಳಲ್ಲಿ ನಾಲ್ಕನೆಯ ನಕ್ಷತ್ರ ರೋಹಿಣಿ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಚಂದ್ರ ದೇವನಾಗಿದ್ದಾನೆ. ಚಂದ್ರ ಗ್ರಹಣದ ಪ್ರಭಾವದಿಂದ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾರೆ ಮತ್ತು ರೊಮ್ಯಾಂಟಿಕ್ ಆಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರದ್ದು ಚಂಚಲ ಸ್ವಭಾವ ವಾಗಿರುತ್ತದೆ. ಹಾಗಾಗಿ ಯಾವುದೇ ವಿಷಯಗಳನ್ನು ನಿರ್ಧಾರ ಮಾಡಿದರೂ ಅದಕ್ಕೆ ಬದ್ಧರಾಗಿರುವುದಿಲ್ಲ. ಜೀವನದಲ್ಲಿ ಎಲ್ಲ ಸುಖ ಸಮೃದ್ಧಿಗಳನ್ನು ಪಡೆಯಲು ಬಯಸುತ್ತಾರೆ. ವಿರುದ್ಧ ಲಿಂಗಿಗಳ ಬಗ್ಗೆ ವಿಶೇಷ ಆಕರ್ಷಣೆ ಇವರಿಗಿರುತ್ತದೆ.