ರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದೇ ಇರುತ್ತಾರೆ. ತುಂಬಿದ ಕುಟುಂಬವೇ ರಾಮಾವತಾರದ ಸಂದೇಶ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ, ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಅಲ್ಲಿ ಚಿಕ್ಕ ಅಳಿಲಿಗೂ ಮಹತ್ತರ ಸ್ಥಾನವಿದೆ.
ಶ್ರೀರಾಮ ಭಗವಂತನ ಏಳನೇ ಅವತಾರ. ಸುಂದರವಾದ ರೂಪ, ಪ್ರಸನ್ನ ಮುಖಭಾವ, ಶಾಂತತೆಯನ್ನು ಪ್ರಚೋದಿಸುವ ಆಹ್ಲಾದಕರ ಮುಖಮುದ್ರೆ, ಜೀವಕೋಟಿಗಳಿಗೆ ಚೈತನ್ಯ ನೀಡುವ ದಿವ್ಯ ಚೇತನ, ಕರುಣಾಸಮುದ್ರ ಸ್ವರೂಪಿ ಶ್ರೀರಾಮ. ರಾಮಾವತಾರವು ವಿಕಾಸಗೊಂಡ ಆದರ್ಶವಾದಿ ಮಾನವನನ್ನು ಸೂಚಿಸುತ್ತದೆ.
ಜೀವನದ ವಿವಿಧ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಸ್ವತಃ ಭಗವಂತನೇ ಅಭಿನಯಿಸಿ ತೋರಿದ ಅವತಾರವದು. ತ್ಯಾಗಮಯಿ ಪುರುಷನ ಅಪೂರ್ವ ಅವತಾರ. ರಾಮಾವತಾರದಲ್ಲಿ ಮುಖ್ಯವಾಗಿ ಕಾಣುವುದು ಕೌಟುಂಬಿಕ ಚಿತ್ರಣ. ರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ, ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದೇ ಇರುತ್ತಾರೆ. ತುಂಬಿದ ಕುಟುಂಬವೇ ರಾಮಾವತಾರದ ಸಂದೇಶ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ, ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಹನುಮಂತ, ಸುಗ್ರೀವ, ಜಾಂಬವಂತರಂತಹ ವೀರರಿಗೆ ಮಾತ್ರವಲ್ಲ, ಅಲ್ಲಿ ಚಿಕ್ಕ ಅಳಿಲಿಗೂ ಮಹತ್ತರ ಸ್ಥಾನವಿದೆ.
ವಿಷ್ಣುವಿನ 7 ನೇ ಅವತಾರ
ಆಕಾರದಲ್ಲಿಯೂ ಶ್ರೀರಾಮನದು ಪರಿಪೂರ್ಣ ಪುರುಷಾಕೃತಿ. ಆಜಾನುಬಾಹು ದೃಢಕಾಯ ದೃಢತೆಯ ಭಾವವನ್ನು ಸೂಚಿಸಿದರೆ, ಸೌಮ್ಯ ಸ್ವಭಾವ ಇಂದ್ರಿಯ ನಿಗ್ರಹ ಶಕ್ತಿಯ ಪ್ರತೀಕ. ಕೋಟಿ ಸೂರ್ಯರ ತೇಜೋರಾಶಿ ಆತನದು. ರಾಮನ ಜನ್ಮೋತ್ಸವವನ್ನು ಆಚರಿಸುವ ಹಬ್ಬ ಶ್ರೀರಾಮ ನವಮಿ. ಹಿಂದೂ ಪಂಚಾಗದ ಪ್ರಕಾರ ಚೈತ್ರ ಶುಕ್ಲ ನವಮಿಯ ಪುನರ್ವಸು ನಕ್ಷತ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ಜನನವಾಯಿತು. ಭೂಲೋಕದಲ್ಲಿ ಧರ್ಮದ ಮೇಲೆ ಅಧರ್ಮದ ಆಳ್ವಿಕೆ ಪ್ರಬಲವಾದಾಗಲೆಲ್ಲಾ ಅದನ್ನು ಬೇರು ಸಮೇತ ಕಿತ್ತು ಧರ್ಮ ಸ್ಥಾಪಿಸಿ, ತನ್ನ ಭಕ್ತರ ರಕ್ಷಣೆಗೈಯುತ್ತೇನೆಂದು ಶ್ರೀವಿಷ್ಣು ಅಭಯವಿತ್ತು ಯುಗಯುಗಗಳಲ್ಲಿಯೂ ಅವತರಿಸಿದ್ದಾನೆ. ಅಂತೆಯೇ ತ್ರೇತಾಯುಗದಲ್ಲಿ ರಾಮನ ಅವತಾರ ತಾಳಿ ಧರ್ಮ ಸಂಸ್ಥಾಪನೆ ಮಾಡಿದ.
ಅಯೋಧ್ಯೆಯ ರಾಜ ದಶರಥನಿಗೆ ಮೂವರು ಪತ್ನಿಯರು- ಕೌಸಲ್ಯೆ, ಸುಮಿತ್ರೆ, ಕೈಕೇಯಿ. ರಾಜನಿಗೆ ಮಕ್ಕಳಿಲ್ಲದ ಕಾರಣ ರಾಜವಂಶ ಪರಂಪರೆ ಮುಂದುವರೆಯಲು ಋುಷಿ ವಸಿಷ್ಠರ ಆದೇಶಾನುಸಾರ ಋುಷ್ಯಶೃಂಗ ಮಹಾಮುನಿಯನ್ನು ಮುಂದಿಟ್ಟುಕೊಂಡು ಪುತ್ರಕಾಮೇಷ್ಟಿಯಾಗ ನೆರವೇರಿಸಿದ. ಆಗ ಯಜ್ಞೇಶ್ವರ ಕರುಣಿಸಿದ ಪಾಯಸವನ್ನು ತನ್ನ ರಾಣಿಯರಿಗೆ ಹಂಚಿದ. ಪರಿಣಾಮ, ಕೌಸಲ್ಯೆ ರಾಮನನ್ನು, ಕೈಕೇಯಿ ಭರತನನ್ನು ಹಾಗೂ ತಮಗೆ ನೀಡಿದ ಪಾಯಸದಲ್ಲಿ ಅರ್ಧ ಭಾಗವನ್ನು ಹಿರಿಯ ಹಾಗೂ ಕಿರಿಯ ರಾಣಿಯರು ಸುಮಿತ್ರೆಗೆ ನೀಡಿದ ಕಾರಣ ಲಕ್ಷ್ಮಣ ಹಾಗೂ ಶತ್ರುಘ್ನರಿಗೆ ಜನ್ಮ ನೀಡುತ್ತಾರೆ. ದಶರಥನ ಹಿರಿಯ ಕುವರನೇ ಶ್ರೀರಾಮ.
ರಾಮನ ಜೀವನವೇ ಸಂದೇಶ
ರಾಮನ ಬಾಲ್ಯದ ಅಸಮಾನ ಬಿಲ್ಲಾಳುತನವು ವಿಶ್ವಾಮಿತ್ರ ಮಹರ್ಷಿಯನ್ನಾಕರ್ಷಿಸಿತು. ಘೋರ ರಕ್ಕಸರ ವಧೆ ಆತನ ಶಸ್ತ್ರ ಪಾಂಡಿತ್ಯದ ದಿವ್ಯ ಪ್ರಭೆಯನ್ನು ಸಾರಿತು. ಸೀತಾಕಲ್ಯಾಣ ಮಂಟಪದಲ್ಲಿ ಹರಧನಸ್ಸನ್ನು ಮುರಿದು ಅದ್ವೀತೀಯನೆನಿಸಿದ ರಾಮ. ಚಿಕ್ಕಮ್ಮ ಕೈಕೇಯಿಗೆ ತಂದೆ ನೀಡಿದ ಭಾಷೆಗಿದೆಕೋ ಭಾಷೆ ಎಂದು ನಗುನಗುತ್ತಲೇ ವನಕ್ಕೆ ಹೊರಟು ಸತ್ಯನಿಷ್ಠೆ ಮೆರೆದ. ಭರತನ ಗಮನ ಕಾಲದಲ್ಲಿ ಸಂದೇಹ ತಾಳಿ ಗರ್ಜಿಸಿದ ತಮ್ಮ ಲಕ್ಷ್ಮಣನನ್ನು ಸಂತೈಸಿ ಆತನ ಕಟುಗ್ರತೆಯನ್ನು ತಣಿಸಿ ಭರವಸೆ ನೀಡಿ ಆತನ ವಿವೇಕೋದಯಕ್ಕೆ ಕಾರಣವಾಗುತ್ತಾನೆ.
ಭರತನೆಡೆಗೆ ವಾತ್ಸಲ್ಯದ ಧಾರೆಯೆರೆಯುತ್ತಾನೆ. ಸೀತೆಯೊಡನೆ ವನವಾಸದ ಸಮಯದಲ್ಲಿ ಕಳೆದ ಆನಂದಮಯ ಕಾಲ ಹಾಗೂ ಸೀತಾಪಹರಣವಾದಾಗ ವಿರಹವೇದನೆಯಿಂದ ಪರಿತಪಿಸಿದ ಅವಧಿ ರಾಮನ ನಿಷ್ಕಳಂಕ ಪತ್ನಿಪ್ರೇಮದ ಅರಿವು ಮಾಡಿಕೊಡುತ್ತದೆ. ರಾಮ ಸೀತೆಯರ ಒಲವು ಅನೇಕ ಶೃಂಗಾರ ಕಾವ್ಯಗಳಿಗೆ ಸ್ಫೂರ್ತಿಯಾಗಿದೆ. ಲಕ್ಷ್ಮಣ, ಭರತ, ಸುಗ್ರೀವ, ಹನುಮಂತ, ವಿಭೀಷಣರ ಕುರಿತು ತೋರುವ ರಾಮನ ವಾತ್ಸಲ್ಯಪೂರ್ಣ ವರ್ತನೆ ಮಾನವನಿಗೆ ಆದರ್ಶಪ್ರಾಯ.
ಸೀತಾನ್ವೇಷಣೆಗೆ ಸಹಕರಿಸಿದ ಅವರೆಡೆಗೆ ತೋರಿದ ಕೃತಜ್ಞತಾ ಭಾವನೆ ಅತ್ಯುನ್ನತವಾದುದು. ಶ್ರೀರಾಮ ರಾಜನೀತಿ ನಿಪುಣ. ರಾಜಧರ್ಮಕ್ಕೆ ಅನುಗುಣವಾದ ಸಂಧಿಕಾರ್ಯಕ್ಕೆ ರಾವಣನ ಮಿತ್ರನಾದ ವಾಲಿಯ ಪುತ್ರ ಅಂಗದನನ್ನೇ ರಾವಣನ ಆಸ್ಥಾನಕ್ಕೆ ಕಳುಹಿಸಲು ಆರಿಸಿದ್ದು ರಾಜನೀತಿಯ ನೈಪುಣ್ಯತೆಗೆ ಸಾಕ್ಷಿ. ಯೋಧ ಧರ್ಮಕ್ಕನುಗುಣವಾಗಿ ವಿರಹವನ್ನು ನೋಯಿಸೆನೆಂದು ನುಡಿದು ರಾವಣನನ್ನು ಮರಳಿಸಿದ್ದರಲ್ಲಿಯೂ ರಾಮನ ರಾಜನೈತಿಕ ಪ್ರಜ್ಞೆ ಎದ್ದು ಕಾಣುತ್ತದೆ.
ಆರೋಗ್ಯ ಧರ್ಮ ಸಮ್ಮಿಲನ
ಆದಿಕಾವ್ಯ ರಾಮಾಯಣ ಅಖಂಡ ಭಾರತದ ಜನತೆಯ ಆಸ್ತಿ. ಸುಸಂಸ್ಕೃತ ಜೀವನ ಮೌಲ್ಯಗಳ ಪ್ರತಿಬಿಂಬ. ಕಾವ್ಯ ಇತಿಹಾಸಗಳ ಮಧುರ ಸಂಗಮ. ಆರ್ಯ ಸಂಸ್ಕೃತಿಯ ಬಹುಮುಖವನ್ನು ಸಮಗ್ರವಾಗಿ ಕಲಾತ್ಮಕವಾಗಿ ಅಭಿವ್ಯಕ್ತಗೊಳಿಸುವ ಅಪೂರ್ವ ಕೃತಿಯ ಕರ್ತೃ ಮುನಿಪುಂಗವ ವಾಲ್ಮೀಕಿ.
ಸೀತಾರಾಮ ಸ್ಪರ್ಶದಿಂದ ಪವಿತ್ರವಾದ ಪಂಪಾ ಸರೋವರವೂ, ಸುಗ್ರೀವಾಂಜನೇಯರ ಸ್ವಸ್ಥಲವಾದ ಕಿಷ್ಕಿಂಧೆಯೂ ಕರ್ನಾಟಕದ ಕ್ಷೇತ್ರ ಸಂಪತ್ತು. ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ಎಂದು ಕುಮಾರವ್ಯಾಸನು ಉದ್ಗರಿಸಿ ಕನ್ನಡ ನುಡಿಯಲ್ಲಿ ರಾಮಾಯಣ ಸಾಹಿತ್ಯದ ವಿಪುಲತೆಯನ್ನು, ಕೀರ್ತಿಯನ್ನು ಸಾರಿದ್ದಾನೆ. ಪ್ರಕೃತಿಗೆ ವಸಂತಮಾಸದ ಸಂಭ್ರಮ, ಚೈತ್ರದ ಬಿಸಿಲ ತಾಪಕ್ಕೆ ಕೋಸಂಬರಿ, ಪಾನಕ, ಮಜ್ಜಿಗೆಗಳು ತನುಮನಕ್ಕೆ ಬಹು ಆಪ್ಯಾಯಮಾನ. ಹಣ್ಣುಗಳ ರಾಜ ಮಾವಿನ ಆಗಮನ. ಹೇರಳ ಪೋಷಕಾಂಶಗಳಿರುವ ಕಾರಣ ಮಾವು ಮಾನವನಿಗೆ ನಿಸರ್ಗ ನೀಡಿದ ವರದಾನ. ಮಾವಿನಕಾಯಿಯ ಪಾನಕ, ಕೋಸಂಬರಿಯ ವಿತರಣೆ ರಾಮ ನವಮಿಯ ವೈಶಿಷ್ಟ್ಯ. ಆರೋಗ್ಯ ಮತ್ತು ಧರ್ಮಗಳ ಸಮ್ಮಿಲನ ನಮ್ಮ ಸಂಪ್ರದಾಯ.
- ಪುಷ್ಪಾ ಮೋಹನ ಮುದಕವಿ, ಬೆಂಗಳೂರು