ಸಾವು ಸತ್ಯವಾದ್ರೂ ಸತ್ತ ನಂತ್ರ ಏನಾಗುತ್ತೆ ಎಂಬುದು ಊಹೆಗೆ ನಿಲುಕದ್ದು. ವಿಜ್ಞಾನ ಒಂದು ಹೇಳಿದ್ರೆ, ಬೇರೆ ಬೇರೆ ಧರ್ಮಗಳ ಗ್ರಂಥಗಳು ಬೇರೆ ಬೇರೆ ವಿಷ್ಯವನ್ನು ಹೇಳುತ್ವೆ. ಆತ್ಮ ನಮ್ಮ ಜೊತೆ ಎಷ್ಟು ದಿನ ಇರುತ್ತೆ ಎಂಬ ಬಗ್ಗೆಯೂ ಧರ್ಮಗಳ ನಂಬಿಕೆ ಭಿನ್ನವಾಗಿದೆ.
ಹುಟ್ಟು ಸಾವು ಒಂದಕ್ಕೊಂದು ಪೂರಕ, ಜೊತೆಗಾರರು. ಹುಟ್ಟಿದ ಮೇಲೆ ಸಾವು ಸಹಜ. ಆದ್ರೆ ಸತ್ತ ಮೇಲೆ ಮನುಷ್ಯ ಏನಾಗ್ತಾನೆ? ಈ ಪ್ರಶ್ನೆಗೆ ಇಲ್ಲಿಯವರೆಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಸತ್ತ ನಂತ್ರ ದೇಹದಿಂದ ಬೇರ್ಪಡುವ ಆತ್ಮ ಎಲ್ಲಿಗೆ ಹೋಗುತ್ತೆ? ಏನಾಗುತ್ತೆ? ಪುನರ್ಜನ್ಮ ಅನ್ನೋದು ಇದ್ಯಾ ಈ ಎಲ್ಲ ಪ್ರಶ್ನೆಗಳು ಪ್ರತಿಯೊಬ್ಬರನ್ನೂ ಕಾಡುತ್ತವೆ. ಮನುಷ್ಯನು ತನ್ನ ಹಳೆಯ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಅಳವಡಿಸಿಕೊಂಡಂತೆ, ಆತ್ಮವು ತನ್ನ ಹಳೆಯ ದೇಹವನ್ನು ತ್ಯಜಿಸಿ ಹೊಸ ದೇಹವನ್ನು ಪಡೆಯುತ್ತದೆ ಎಂಬ ನಂಬಿಕೆ ಇದೆ. ಪ್ರತಿ ಧರ್ಮವೂ ಆತ್ಮವನ್ನು ನಂಬುತ್ತದೆ. ಆದ್ರೆ ಸತ್ತ ನಂತ್ರ ಆತ್ಮ ಎಷ್ಟು ದಿನ ಮನೆಯಲ್ಲಿರುತ್ತದೆ ಎಂಬ ಪ್ರಶ್ನೆ ಬಂದಾಗ ಪ್ರತಿ ಧರ್ಮದ ಉತ್ತರ ಭಿನ್ನವಾಗಿದೆ.
ಹಿಂದೂ ಧರ್ಮ (Hinduism) : ಹಿಂದೂ ಧರ್ಮದಲ್ಲಿ ವ್ಯಕ್ತಿಯ ಆತ್ಮವು 13 ದಿನಗಳ ಕಾಲ ಮನೆಯಲ್ಲಿ ಇರುತ್ತದೆ ಎಂದು ನಂಬಲಾಗಿದೆ. ಸತ್ತ ದಿನದಿಂದ 13 ದಿನಗಳ ಕಾಲ ಕುಟುಂಬಸ್ಥರು ಸಾಕಷ್ಟು ಕಾರ್ಯಗಳನ್ನು ಮಾಡ್ತಾರೆ. ಶ್ರಾದ್ಧ, ಪಿಂಡ ದಾನ ಸೇರಿದಂತೆ ಅನೇಕ ಕಾರ್ಯಗಳು ಮನೆಯಲ್ಲಿ ನಡೆಯುತ್ತದೆ. 13ನೇ ದಿನ ಆತ್ಮ ಎಲ್ಲ ಬಂಧನದಿಂದ ಬೇರ್ಪಟ್ಟು ತನ್ನ ಗಮ್ಯ ಸ್ಥಾನಕ್ಕೆ ತೆರಳುತ್ತದೆ. ಈ 13 ದಿನ ಕುಟುಂಬಸ್ಥರು ಮಾಡುವ ಕೆಲಸ, ಆತ್ಮ ಗಮ್ಯಸ್ಥಾನ ಸೇರಲು ನೆರವಾಗುತ್ತದೆ ಎಂದು ನಂಬಲಾಗಿದೆ.
Pini Village: ಭಾರತದ ಈ ಹಳ್ಳಿಯಲ್ಲಿ ಬಟ್ಟೆ ಧರಿಸಲ್ಲ ಮಹಿಳೆಯರು!
ಸಿಖ್ ಧರ್ಮ (Sikhism) : ಸಿಖ್ ಧರ್ಮದಲ್ಲಿ ಸಾವಿನ ನಂತರ ಆತ್ಮ ಮನೆಯಲ್ಲಿ ಇರೋದಿಲ್ಲ. ಸಿಖ್ ನಂಬಿಕೆಗಳ ಪ್ರಕಾರ, ಆತ್ಮಕ್ಕೆ ಮರುಹುಟ್ಟಿದೆ. ಆತ್ಮ ದೇವರೊಂದಿಗೆ ವಿಲೀನಗೊಳ್ಳುವವರೆಗೆ ಹುಟ್ಟು, ಸಾವು ಸಂಭವಿಸುತ್ತಲೇ ಇರುತ್ತದೆ. ಮನೆಯಲ್ಲಿ ಎಷ್ಟು ದಿನ ಆತ್ಮವಿರುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಹೇಳಲಾಗಿಲ್ಲ.
ಬೌದ್ಧ ಧರ್ಮ (Buddhism) : ಬೌದ್ಧಧರ್ಮದಲ್ಲಿ ಸಾವಿನ ನಂತರ ಆತ್ಮವು 49 ದಿನಗಳವರೆಗೆ ಮಧ್ಯಂತರ ಸ್ಥಿತಿಯಲ್ಲಿ ಇರುತ್ತದೆ. ಅದಕ್ಕೆ ಬಾರ್ಡೋ ಎಂದು ಕರೆಯಲಾಗುತ್ತದೆ. ಆತ್ಮದ ಮುಂದಿನ ಜೀವನಕ್ಕೆ ದಾರಿ ಮಾಡಲು ಈ ಸಮಯದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಆತ್ಮಕ್ಕೆ ಪುನರ್ಜನ್ಮ ಸಿಗಲೆಂದು ವಿಶೇಷ ಪ್ರಾರ್ಥನೆ ಮತ್ತು ಆಚರಣೆಗಳನ್ನು ಮಾಡಲಾಗುತ್ತದೆ.
ಇಸ್ಲಾಂ ಧರ್ಮ (Islam) : ಇಸ್ಲಾಂ ಧರ್ಮದ ಪ್ರಕಾರ, ಆತ್ಮ ಮನೆಯಲ್ಲಿ ಇರೋದಿಲ್ಲ. ಆತ್ಮ, ಸ್ವಲ್ಪ ಸಮಯ ಸಮಾಧಿಯಲ್ಲಿಯೇ ವಿಶ್ರಾಂತಿ ಪಡೆಯುತ್ತದೆ. ಅಲ್ಲಿ ಅದಕ್ಕೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮಾಡಿದ ಕೆಲಸಕ್ಕೆ ತಕ್ಕಂತೆ ಸ್ವರ್ಗ ಅಥವಾ ನರಕದ ಘೋಷಣೆಯಾಗುತ್ತದೆ. ಕೆಲ ಸಮಯ ಮಾತ್ರ ಸಮಾಧಿಯಲ್ಲಿರುವ ಆತ್ಮ ನಂತ್ರ ತನಗೆ ಸೂಚಿಸಿದ ಜಾಗಕ್ಕೆ ಹೋಗುತ್ತದೆ.
ಕ್ರಿಶ್ಚಿಯನ್ ಧರ್ಮ (Christianity) : ಇನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಕೂಡ ಆತ್ಮ ಮನೆಯಲ್ಲಿರುತ್ತದೆ ಎಂಬುದನ್ನು ನಂಬಲಾಗುವುದಿಲ್ಲ. ಸಾವಿನ ತಕ್ಷಣ ಆತ್ಮ ದೇವರ ಮುಂದೆ ಕಾಣಿಸಿಕೊಳ್ಳುತ್ತದೆ. ಕ್ರಿಶ್ಚಿಯನ್ ಧರ್ಮದ ಪ್ರಕಾರ, ಆತ್ಮ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತದೆ. ಅಲ್ಲಿ ಅದಕ್ಕೆ ತನ್ನ ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ. ಇಲ್ಲಿ ಯಾವುದೇ ನಿರ್ದಿಷ್ಟ ಸಮಯವನ್ನು ಸೂಚಿಸಿಲ್ಲ.
ಆಗಸ್ಟ್ ಒಂದು ತಿಂಗಳು ಈ ಮೂರು ರಾಶಿಯವರಿಗೆ ಗೌರವ, ಬ್ಯಾಂಕ್ ಬ್ಯಾಲೆನ್ಸ್ ಡಬಲ್
ಪ್ರತಿಯೊಂದು ಧರ್ಮವೂ ಆತ್ಮ, ಸ್ವರ್ಗ, ನರಕ, ಕರ್ಮಫಲಗಳನ್ನು ನಂಬುತ್ತದೆ. ಮನುಷ್ಯ ಇಲ್ಲಿ ಮಾಡಿದ ಕೆಲಸವೇ ನರಕ – ಸ್ವರ್ಗಕ್ಕೆ ದಾರಿ ಎಂಬುದನ್ನು ಎಲ್ಲ ಧರ್ಮದಲ್ಲಿ ಹೇಳಲಾಗಿದೆ.
ವೈಜ್ಞಾನಿಕ ವಿಧಾನ : ವಿಜ್ಞಾನದಲ್ಲಿ ಹುಟ್ಟು ಮತ್ತು ಸಾವನ್ನು ಮಾತ್ರ ಸತ್ಯ ಎಂದು ನಂಬಲಾಗಿದೆ. ಸಾವಿನ ನಂತ್ರದ ಆತ್ಮಕ್ಕೆ ಇಲ್ಲಿ ಬೆಲೆ ಇಲ್ಲ. ವಿಜ್ಞಾನವು ಆತ್ಮದ ಅಸ್ತಿತ್ವವನ್ನು ಗುರುತಿಸುವುದಿಲ್ಲ ಮತ್ತು ಸಾವನ್ನು ಭೌತಿಕ ಕ್ರಿಯೆಗಳ ಅಂತ್ಯವೆಂದು ಪರಿಗಣಿಸುತ್ತದೆ.