
ಹಿಂದೂ ಸಂಪ್ರದಾಯವೇ ರೋಚಕವಾದದ್ದು. ಇದರ ಪ್ರತಿಯೊಂದು ಆಚರಣೆಗಳಲ್ಲಿಯೂ ಅದರದ್ದೇ ಆದ ವಿಶೇಷತೆಗಳಿವೆ, ನಿಗೂಢತೆ ಇದೆ. ಹಿಂದೂ ಸಂಪ್ರದಾಯದಷ್ಟು ಪುರಾತನ ಸಂಪ್ರದಾಯ, ಅಂದಿನಿಂದ ನಡೆದುಕೊಂಡು ಬಂದಿರುವ ಆಚರಣೆಗಳ ಹಿಂದಿರುವ ಸತ್ಯಾಂಶ ವಿಭಿನ್ನವಾದದ್ದು, ಕೆಲವೊಂದು ಸಾಮಾನ್ಯ ಜನರ ತಲೆಯ ಒಳಗೆ ಹೋಗದೇ ಇರುವಂಥದ್ದು. ಅಂಥವುಗಳಲ್ಲಿ ಒಂದು ದುರ್ಗಾ ದೇವಿಯ ಪ್ರತಿಮೆ ಮಾಡುವ ವಿಧಾನ. ಇದೀಗ ನವರಾತ್ರಿ ನಡೆಯುತ್ತಿದೆ. ಭಾರತದ ಹಲವು ಕಡೆಗಳಲ್ಲಿ ದುರ್ಗಾ ದೇವಿಯ ವಿಗ್ರಹವನ್ನು ಸಂಪ್ರದಾಯ ಬದ್ಧವಾಗಿ ತಯಾರು ಮಾಡಲಾಗುತ್ತದೆ. ಅದರಲ್ಲಿಯೂ ಉತ್ತರ ಭಾರತದ ಕೆಲವು ಪ್ರದೇಶಗಳು ಇದಕ್ಕೆ ಫೇಮಸ್. ಹಾಗೆಂದು ಹೇಗೆ ಬೇಕೆಂದರೆ ಹಾಗೆ ದೇವರ ಮೂರ್ತಿಗಳನ್ನು ತಯಾರು ಮಾಡಲಾಗುವುದಿಲ್ಲ. ಅದಕ್ಕೆ ಅದರದ್ದೇ ಆದ ಸಂಪ್ರದಾಯ, ಕೆಲವೊಂದು ರೀತಿ-ನಿಯಮಗಳು ಇರುತ್ತವೆ.
ಅಂಥವುಗಳಲ್ಲಿ ಒಂದು ದುರ್ಗಾ ಮಾತೆಯ ಮೂರ್ತಿಯನ್ನು ತಯಾರು ಮಾಡುವಾಗ ಈ ಸಮಾಜದಿಂದ ಬಹಿಷ್ಕರಿಸಲ್ಪಟ್ಟಿರುವ ಲೈಂಗಿಕ ಅಲ್ಪಸಂಖ್ಯಾತರ ಮನೆಯ ಅಂಗಳದಿಂದ ಮಣ್ಣನ್ನು ತರುವುದು. ಆ ಮಣ್ಣನ್ನು ದುರ್ಗಾ ದೇವಿಯ ಮೂರ್ತಿಯ ಮಣ್ಣಿನಲ್ಲಿ ಕಲಸಿ ಮೂರ್ತಿಯನ್ನು ಕೆತ್ತುವುದು. ದುರ್ಗಾ ಪೂಜೆಯ ಸಮಯದಲ್ಲಿ, ವೇಶ್ಯಾವಾಟಿಕೆಗೆ ಸಂಬಂಧಿಸಿದ ಸ್ಥಳ ಅಥವಾ ವೇಶ್ಯಾಗೃಹದ ಮನೆ ಬಾಗಿಲಿನಿಂದ ಮಣ್ಣನ್ನು ತೆಗೆದುಕೊಂಡು ದುರ್ಗಾ ದೇವಿಯ ವಿಗ್ರಹವನ್ನು ತಯಾರಿಸಲಾಗುತ್ತದೆ, ಇದನ್ನು 'ಪುಣ್ಯ ಮಾಟಿ' (ಪವಿತ್ರ ಮಣ್ಣು) ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ಇತರ ಕೆಲವು ಪ್ರದೇಶಗಳಲ್ಲಿ, ವೇಶ್ಯಾಗೃಹದ ಮನೆ ಬಾಗಿಲಿನಿಂದ ಮಣ್ಣನ್ನು ಒಳಗೊಂಡಂತೆ, ದುರ್ಗಾ ದೇವಿಯ ವಿಗ್ರಹವನ್ನು ತಯಾರಿಸಲು ನಾಲ್ಕು ನಿರ್ದಿಷ್ಟ ಸ್ಥಳಗಳಿಂದ ಮಣ್ಣನ್ನು ಬೆರೆಸುವುದು ಶುಭವೆಂದು ಪರಿಗಣಿಸಲಾಗುತ್ತದೆ.
ನಾಲ್ಕು ಮಿಶ್ರಣ ದುರ್ಗಾ ಮೂರ್ತಿಗೆ ಅಗತ್ಯವಾಗಿ ಬೇಕು. ಒಂದು ಗಂಗಾನದಿಯ ದಡದ ಮಣ್ಣು, ಇನ್ನೊಂದು ಗೋಮೂತ್ರ ಮತ್ತು 3ನೆಯದ್ದು ಗೋಮಯ ಮತ್ತು 4ನೆಯದ್ದು, ವೇಶ್ಯೆಯ ಮನೆಯಂಗಳದ ಮಣ್ಣು. ಅದನ್ನು ಕೂಡ ಈ ದೇವಿಯ ವಿಗ್ರಹವನ್ನು ತಯಾರಿಸಲು ಮಣ್ಣನ್ನು ಕೇಳಲು ವೇಶ್ಯೆಯ ಮನೆಗೆ ಪೂಜಾರಿ ಅಥವಾ ಶಿಲ್ಪಿಗಳು ಮಾತ್ರ ಹೋಗಬೇಕು. ಇಂತಹ ಸಮಯದಲ್ಲಿ ಅವರ ಮನಸ್ಸು ಮತ್ತು ದೇಹ ಎರಡೂ ಶುದ್ಧವಾಗಿರಬೇಕು, ಯಾವುದೇ ಕೆಟ್ಟ ಆಲೋಚನೆಗಳು ಇರಬಾರದು. ವೇಶ್ಯೆಯ ಮನೆಗೆ ಹೋದಾಗ ತಲೆ ಬಾಗಿಸಿ ಗೌರವದಿಂದ ಮಣ್ಣನ್ನು ಕೇಳಬೇಕು. ಒಂದು ವೇಳೆ ಆಕೆಗೆ ನೀವು ನೀಡಿದ ಗೌರವದ ಪರವಾಗಿ ಆಕೆ ನಿಮಗೆ ಮಣ್ಣನ್ನು ನೀಡಿದರೆ ಆ ಮಣ್ಣನ್ನು ತಂದು ಅದರಿಂದ ದುರ್ಗಾ ದೇವಿಯ ವಿಗ್ರಹವನ್ನು ಮಾಡಬೇಕು. ಆಗ ಮಾತ್ರ ದುರ್ಗಾ ವಿಗ್ರಹದಲ್ಲಿ ಶಕ್ತಿ ನೆಲೆಯಾಗುತ್ತದೆ.
ಇದಕ್ಕೆ ಹಲವು ಕಾರಣಗಳಿವೆ, ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಈ ಹಿಂದೆ ವೇಶ್ಯೆಯರು ಎಂದರೆ ರಾಜರು ಕೂಡ ಹೋಗುತ್ತಿದ್ದ ಕಾಲವದು. ಇಂದು ಈ ವೃತ್ತಿಯ ಸ್ವರೂಪ ಬದಲಾದರೂ ಸಂಪ್ರದಾಯ ಬದಲಾಗಿಲ್ಲ. ರಾಜ ಸೇರಿದಂತೆ ವೇಶ್ಯೆಯರನ್ನು ಹುಡುಕಿ ಹೋಗುವ ದೊಡ್ಡ ದೊಡ್ಡ ಮನುಷ್ಯರಿಂದ ಹಿಡಿದು ಸಾಮಾನ್ಯ ಮನುಷ್ಯರವರೆಗೂ ಆತ ವೇಶ್ಯೆಯ ಮನೆಗೆ ಪ್ರವೇಶಿಸಿದಾಗ, ಸಮಾಜವು ಸೂಚಿಸಿದಂತೆ ಅವನು ತನ್ನ ಶುದ್ಧತೆ, ತಾನು ಮಾಡಿದ ಪುಣ್ಯದ ಕೆಲಸ ಅಥವಾ ಅಹಂಕಾರವನ್ನು ಆಕೆಯ ಮನೆ ಬಾಗಿಲಲ್ಲಿ ಬಿಡುತ್ತಾನೆ. ರಾಜನಾದಿಯಾಗಿ ಎಲ್ಲರೂ ವೇಶ್ಯೆಯರಿಗೆ ತಲೆ ಬಾಗುತ್ತಾರೆ. ಅಲ್ಲಿ ಅಹಂಕಾರ ಎನ್ನುವುದು ಇರುವುದಿಲ್ಲ. ಇದೇ ಕಾರಣಕ್ಕೆ ಆ ಮನೆಯ ಅಂಗಳದ ಮಣ್ಣು ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಎನ್ನುತ್ತಾರೆ ಹಿರಿಯರು.
ಈ ಆಚರಣೆಯ ಆಳವಾದ ಸಾಮಾಜಿಕ ಸಂದೇಶವೆಂದರೆ ದುರ್ಗಾ 'ಶಕ್ತಿ'ಯ ಒಂದು ರೂಪ, ಮತ್ತು ಸಮಾಜದಿಂದ ಕಡೆಗಣಿಸಲ್ಪಟ್ಟ ಅಥವಾ ನಿರ್ಲಕ್ಷಿಸಲ್ಪಟ್ಟ ಮಹಿಳೆಯರನ್ನು ಸಹ ಗೌರವಿಸಬೇಕು ಮತ್ತು ದೇವತೆಯ ರೂಪದಲ್ಲಿ ಇರಿಸಬೇಕು. ಸಮಾಜವು ತಿರಸ್ಕರಿಸುವ ಮಹಿಳೆಯರ ಮನೆ ಬಾಗಿಲಿನಿಂದ ಬರುವ ಧೂಳನ್ನು ಈ ಪವಿತ್ರ ಹಬ್ಬದಂದು ಮಾತೃ ದೇವಿಯ ವಿಗ್ರಹದ ಭಾಗವಾಗಿ ಮಾಡಲಾಗುತ್ತದೆ ಎಂಬ ಕಹಿ ವಿರೋಧಾಭಾಸವನ್ನು ಇದು ಎತ್ತಿ ತೋರಿಸುತ್ತದೆ ಎನ್ನುವುದು. ವೇಶ್ಯರು ಎಂದ ಮಾತ್ರಕ್ಕೆ ಅವರನ್ನು ಅವಹೇಳನ ಮಾಡುವುದು, ಕೆಟ್ಟದಾಗಿ ನಡೆಸಿಕೊಳ್ಳುವುದು. ಅವರಿಗೂ ಸಮಾಜದಲ್ಲಿ ಗೌರವವನ್ನು ನೀಡಬೇಕೆನ್ನುವ ಕಾರಣದಿಂದ ಬಹುಶಃ ಈ ಪದ್ಧತಿ ಆರಂಭವಾಗಿರಬಹುದು ಎನ್ನಲಾಗಿದೆ.
ಹಿಂದೂ ಸಂಪ್ರದಾಯವೆಂದರೆ, ಪ್ರತಿ ಘಟನೆಗೂ ಒಂದು ಪೌರಾಣಿಕ ಸ್ಟೋರಿ ಇದ್ದೇ ಇರುತ್ತದೆ. ಅದೇ ರೀತಿ ವೇಶ್ಯೆಯ ಮನೆಯಂಗಳದ ಮಣ್ಣಿಗೂ ಒಂದು ಕಥೆ ಇದೆ. ಒಮ್ಮೆ ವೇಶ್ಯೆಯರ ಗುಂಪೊಂದು ಸ್ನಾನ ಮಾಡಲು ಗಂಗಾನದಿಯ ತೀರಕ್ಕೆ ಹೋಗುತ್ತಿದ್ದದು ಆ ಸಮಯದಲ್ಲಿ ಅವರು ಓರ್ವ ಕುಷ್ಠ ರೋಗಿಯು ಗಂಗಾ ನದಿಯ ದಡದ ಬಳಿ ಕುಳಿತಿರುವುದನ್ನು ಗಮನಿಸುತ್ತಾರೆ. ಆ ಕುಷ್ಠರೋಗಿಯು ಸ್ನಾನ ಮಾಡದೆ ತುಂಬಾನ ಸಮಯಗಳಾಗಿತ್ತು, ಅವನು ತಾನು ಸ್ನಾನ ಮಾಡುವುದಕ್ಕಾಗಿ ಅಲ್ಲಿ ಅಲೆದಾಡುತ್ತಿದ್ದ ಒಂದಿಷ್ಟು ಜನರನ್ನು ಸಹಾಯ ಕೇಳುತ್ತಾರೆ. ಆದರೆ, ಯಾರೂ ಅವನಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಅವನು ಮತ್ತೆ ಚಿಂತಿತನಾಗಿ ಅದೇ ಸ್ಥಳದಲ್ಲಿ ಕುಳಿತುಕೊಂಡನು. ಇದನ್ನೆಲ್ಲಾ ಗಮನಿಸಿದ ವೇಶ್ಯೆಯರ ಗುಂಪೊಂದು ಆತನಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ವೇಶ್ಯೆಯರು ಆತನಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಶುದ್ಧನನ್ನಾಗಿ ಮಾಡುತ್ತಾರೆ.
ಆದರೆ, ಇವು ಕುಷ್ಠಿರೋಗಿಯಾಗಿರಲಿಲ್ಲ. ಸಾಕ್ಷಾತ್ ಶಿವನೇ ಅಲ್ಲಿ ಕುಷ್ಠರೋಗಿಯ ಅವತಾರದಲ್ಲಿ ಕುಳಿತುಕೊಂಡಿದ್ದನು. ವೇಶ್ಯೆಯರ ಸಹಾಯದಿಂದ ಸಂತಸಗೊಂಡ ಶಿವನು ಅವರ ಬಳಿ ನಿಮಗೆ ಯಾವ ವರಬೇಕಾದರೂ ಕೇಳಿ ನಾನು ಕೊಡಲು ಸಿದ್ಧನಿದ್ದೇನೆ ಎಂದು ಹೇಳುತ್ತಾನೆ. ನಂತರ ವೇಶ್ಯೆಯರು ಆತನ ಬಳಿ ದುರ್ಗಾ ದೇವಿಯ ವಿಗ್ರಹವನ್ನು ಮಾಡುವಾಗ ಅವರು ವೇಶ್ಯೆಯರ ಮನೆಯ ಅಂಗಳದ ಮಣ್ಣನ್ನು ಬಳಸಿ ದುರ್ಗಾ ದೇವಿಯ ವಿಗ್ರಹವನ್ನು ಮಾಡಬೇಕೆನ್ನುವ ವರವನ್ನು ಪಡೆದುಕೊಳ್ಳುತ್ತಾರೆ. ಇದಾದ ನಂತರ ಗಂಗಾ ದಡದ ಮಣ್ಣಿನಿಂದ ಹಾಗೂ ವೇಶ್ಯೆಯರ ಮನೆಯ ಅಂಗಳದಿಂದ ತಂದಿರುವ ಮಣ್ಣಿನಿಂದ ದುರ್ಗೆಯ ಮೂರ್ತಿಗಳನ್ನು ತಯಾರಿಸುವ ಸಂಪ್ರದಾಯ ಆರಂಭವಾಗಿ ಇಂದಿಗೂ ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ.