ರಾಮನ ಜನ್ಮಭೂಮಿ ಆಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಕಾಣುವ ಕೋಟ್ಯಂತರ ಭಕ್ತರ ನೂರಾರು ವರ್ಷಗಳ ತಪಸ್ಸು ಕೊನೆಗೂ ಫಲಕೊಡುವ ಸಮಯ ಸನ್ನಿಹಿತವಾಗಿದೆ..ಕೋಟ್ಯಂತರ ಭಾರತೀಯರ ತನು ಮನ ಧನದಿಂದ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ವೈಭವೋಪೇತ ಸಮಾರಂಭದಲ್ಲಿ ಜರುಗಲಿದೆ.
ಅಯೋಧ್ಯಾ: ರಾಮನ ಜನ್ಮಭೂಮಿ ಆಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಕಾಣುವ ಕೋಟ್ಯಂತರ ಭಕ್ತರ ನೂರಾರು ವರ್ಷಗಳ ತಪಸ್ಸು ಕೊನೆಗೂ ಫಲಕೊಡುವ ಸಮಯ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಅನುಮತಿ ಮತ್ತು ಕೋಟ್ಯಂತರ ಭಾರತೀಯರ ತನು ಮನ ಧನದಿಂದ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ವೈಭವೋಪೇತ ಸಮಾರಂಭದಲ್ಲಿ ಜರುಗಲಿದೆ.
ಶ್ರೀ ಶೋಭಕೃತ್ ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ದ್ವಾದಶಿ, ಉತ್ತರಾಯಣ, ಮೃಗಶಿರಾ ನಕ್ಷತ್ರ, ಅಭಿಜಿತ್ ಲಗ್ನದ ಸಮಯವಾದ ಮಧ್ಯಾಹ್ನ 12.30ರ ವೇಳೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 5 ವರ್ಷದ ಬಾಲರಾಮನನ್ನು ಪ್ರತಿನಿಧಿಸುವ ಸುಂದರ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಚಾರಿತ್ರಿಕ ಸಮಾರಂಭದ ಮುಖ್ಯ ಯಜಮಾನತ್ವ ವಹಿಸಲಿದ್ದು, ಅವರ ಜತೆ ಕರ್ನಾಟಕದ ಲಿಂಗರಾಜ ಬಸವರಾಜ ಅಪ್ಪ ಸೇರಿದಂತೆ 14 ದಂಪತಿಗಳು ಸಹ-ಯಜಮಾನತ್ವ ವಹಿಸಿ ಧಾರ್ಮಿಕ ವಿಧಿವಿವಿಧಾನ ನೆರವೇರಿಸಲಿದ್ದಾರೆ. 1 ದಿನದ ನಂತರ, ಅಂದರೆ ಮಂಗಳವಾರ ದೇಗುಲವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ.
ಏನೇನು ಕಾರ್ಯಕ್ರಮ?
ಪ್ರಾಣ ಪ್ರತಿಷ್ಠಾ ಸಮಾರಂಭವು ಕಾಶಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹಾಗೂ ಲಕ್ಷ್ಮೀಕಾಂತ ಶಾಸ್ತ್ರಿಗಳ ನೇತೃತ್ವದಲ್ಲಿ ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ಕೆತ್ತಿರುವ 51 ಇಂಚಿನ ರಾಮಲಲ್ಲಾ ಮೂರ್ತಿಯನ್ನು ಗುರುವಾರ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗಿತ್ತು. ಸಂಪ್ರದಾಯದಂತೆ ಮೂರ್ತಿಯ ಕಣ್ಣು ಮುಚ್ಚಿ ಇಡಲಾಗಿದ್ದು, ಪ್ರಾಣಪ್ರತಿಷ್ಠಾಪನೆ ವೇಳೆ ಆ ಬಟ್ಟೆ ತೆಗೆಯಲಾಗುತ್ತದೆ. ಈ ಮೂಲಕ ರಾಮನು ತನ್ನ ಮಂದಸ್ಮಿತ ಮುಖಾರವಿಂದದ ದರ್ಶನ ಮಾಡಿಸಲಿದ್ದಾನೆ.
ಪ್ರಧಾನ ಮಂತ್ರಿಗಳು ತಮ್ಮ ಅಮೃತ ಹಸ್ತದಿಂದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ, ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟಿರುವ 7,000ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭರ್ಜರಿ ಸಿದ್ಧತೆ
ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಮಂದಿರ ಹಾಗೂ ಇಡೀ ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಿಲ್ಲು ಮತ್ತು ಬಾಣದ ಕಟೌಟ್‌ಗಳು ಮತ್ತು ಅಲಂಕಾರಿಕ ದೀಪ ಸ್ತಂಭಗಳು ರಾಮನಗರಿಯಲ್ಲಿ ರಾರಾಜಿಸುತ್ತಿವೆ. ಇದೇ ವೇಳೆ ದೇಶ ಹಾಗೂ ವಿದೇಶಗಳಲ್ಲೂ ಏಕಕಾಲಕ್ಕೆ ಅನೇಕ ಮಂದಿರ-ಮಠಗಳಲ್ಲಿ ರಾಮನ ಪೂಜೆ, ಪುನಸ್ಕಾರ, ಪ್ರತಿಷ್ಠಾಪನೆ, ಮೆರವಣಿಗೆ, ದಾಸೋಹಗಳು ಆಯೋಜನೆಯಾಗಿವೆ. ಅಯೋಧ್ಯೆಯಂತೂ ಸಂಪೂರ್ಣ ರಾಮಮಯವಾಗಿದ್ದು, ಜನರು ಉತ್ಸಾಹದಿಂದ ಪುಟಿದೇಳುತ್ತಿದ್ದಾರೆ.
ಕೇವಲ 84 ಸೆಕೆಂಡಿನ ಮುಹೂರ್ತ
ಅಯೋಧ್ಯೆ: ಪ್ರಾಣಪ್ರತಿಷ್ಠಾಪನೆಯ ವಿವಿಧ ವಿಧಿಗಳು ಮಧ್ಯಾಹ್ನ 12.20ರಿಂದ ಆರಂಭವಾಗಲಿವೆ. ಆದರೆ ಮೂಲ ಮುಹೂರ್ತ ಮಧ್ಯಾಹ್ನ 12.30ರ ಸುಮಾರಿಗೆ ಕೇವಲ 84 ಸೆಕೆಂಡಿನದ್ದಾಗಿದೆ. 84 ಕ್ಷಣಗಳಲ್ಲಿ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಇತರ ವಿಧಿ ವಿಧಾನಗಳನ್ನು 12.55ರೊಳಗೆ ಮುಗಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.