ಶಿವಮೊಗ್ಗ ದಸರಾ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ

Published : Sep 19, 2022, 11:28 PM IST
ಶಿವಮೊಗ್ಗ ದಸರಾ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ

ಸಾರಾಂಶ

ಕಳೆದ ಬಾರಿ ಶಿವಮೊಗ್ಗ ದಸರಾಕ್ಕೆ ಅನುದಾನವೇ ನೀಡದ ರಾಜ್ಯ ಸರ್ಕಾರ ಈ ಬಾರಿ 2 ಕೋಟಿ ಬದಲಾಗಿ 1 ಕೋಟಿ ಅನುದಾನ ನೀಡಲು ಒಪ್ಪಿದೆ. ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ಸೆ.19): ಕಳೆದ ಬಾರಿ ಶಿವಮೊಗ್ಗ ದಸರಾಕ್ಕೆ ಅನುದಾನವೇ ನೀಡದ ರಾಜ್ಯ ಸರ್ಕಾರ ಈ ಬಾರಿ 2 ಕೋಟಿ ಬದಲಾಗಿ 1 ಕೋಟಿ ಅನುದಾನ ನೀಡಲು ಒಪ್ಪಿದೆ. ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಸರ್ಕಾರಕ್ಕೆ 2 ಕೋಟಿ ಅನುದಾನವನ್ನು ಕೋರಿ ತಿಂಗಳ ಮೊದಲೇ ಮಹಾನಗರ ಪಾಲಿಕೆ ಪತ್ರ ಬರೆದಿದೆ. ಆದರೆ, ಸರ್ಕಾರ 2 ಕೋಟಿ ಬದಲಾಗಿ, ಕೇವಲ 1 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಿದೆ. ಸರ್ಕಾರ ಕೇಳದಷ್ಟು ಹಣ ನೀಡದಿದ್ದರೂ, ಅರ್ಧದಷ್ಟಾದರೂ ನೀಡುತ್ತಿರುವುದು ಪಾಲಿಕೆಗೆ ಆಡಳಿತಕ್ಕೆ ಸಮಾಧಾನ ತರಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಮೈಸೂರು ಮಾದರಿಯಲ್ಲೆ ಶಿವಮೊಗ್ಗ ದಸರಾವೂ ನೆರವೇರುತ್ತಿದ್ದು, 9 ದಿನಗಳ ಕಾಲ ವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ. ಇದಕ್ಕಾಗಿ 2 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಪಾಲಿಕೆಯಿಂದ 50 ಲಕ್ಷ ಹಣವನ್ನು ದಸರಾಗೆ ಮೀಸಲಿಸಿ, ಮಿಕ್ಕ ಹಣವನ್ನು ಸರ್ಕಾರ ಅನುದಾನ ರೂಪದಲ್ಲಿ ನೀಡುತ್ತದೆ. ಆದರೆ, ಈ ಕಳೆದ ಬಾರಿ ದಸರಾಗೆ ಆಚರಣೆಗೆ ಯಾವುದೇ ಹಣ ನೀಡದ ಸರ್ಕಾರ ಈ ಬಾರಿಯೂ ಅನುದಾನ ನೀಡುವುದು ಅನುಮಾನ ಎಂದು ಹೇಳಲಾಗಿತ್ತು.

40 ಪರ್ಸೆಂಟ್‌ ಕಮಿಷನ್‌ಗೆ ದಾಖಲೆ ಕೊಡಿ: ಈಶ್ವರಪ್ಪ ಕಿಡಿ

2 ಕೋಟಿಗೆ ಪ್ರಸ್ತಾವನೆ: ಶಿವಮೊಗ್ಗದಲ್ಲಿ ದಸರಾ ಆಚರಣೆಗೆ ಸರ್ಕಾರದ ಅನುದಾನದ ಅವಶ್ಯ ಇದೆ. ದಸರಾ ಆಚರಣೆಗೆ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಕೇವಲ 1 ಕೋಟಿ ನೀಡುವುದಾಗಿ ತಿಳಿಸಿದೆ. ಕಳೆದ ವರ್ಷವೂ ರಾಜ್ಯ ಸರಕಾರದಿಂದ ನಯಾಪೈಸೆ ಮಂಜೂರು ಆಗಿಲ್ಲ. ಆದರೂ ಮಹಾನಗರ ಪಾಲಿಕೆಯೇ ಸಂಪೂರ್ಣ ಹೊರೆ ಹೊತ್ತು ಹಬ್ಬವನ್ನು ಆಚರಿಸಿತ್ತು. ಈ ಸಲ 1 ಕೋಟಿ ನೀಡುವುದಾಗಿ ಪ್ರತಿಕ್ರಿಯೆ ನೀಡಿದೆ ಎಂದು ಪಾಲಿಕೆ ಮೇಯರ್‌ ತಿಳಿಸಿದರು.

ಮಹಾನಗರ ಪಾಲಿಕೆಯು ತನ್ನ ಬಜೆಟ್‌ನಲ್ಲಿ ದಸರಾಗೋಸ್ಕರ 50 ಲಕ್ಷ ರು.ಮೀಸಲು ಇಟ್ಟಿದೆ. ಅದ್ಧೂರಿ ದಸರಾ ಆಚರಣೆಗೆ ಕಮ್ಮಿಯೆಂದರೂ 1.50 ಕೋಟಿಯಿಂದ 2 ಕೋಟಿಯವರೆಗೆ ಖರ್ಚಾಗುತ್ತದೆ. ಒಂದುವೇಳೆ, ಸರ್ಕಾರದಿಂದ ಅನುದಾನ ಬಾರದಿದ್ದರೆ ಮಹಾನಗರ ಪಾಲಿಕೆಯೇ ಈ ವೆಚ್ಚವನ್ನು ಭರಿಸಬೇಕಾಗುತ್ತದೆ. ಕಳೆದ ವರ್ಷವೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಪಾಲಿಕೆಯು ಕೊನೆಯವರೆಗೂ ಸರ್ಕಾರದಿಂದ 1.50 ಕೋಟಿ ರೂ. ಅನುದಾನ ಮಂಜೂರಾಗುತ್ತದೆ ಎಂಬ ನಂಬಿಕೆಯಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ಇದು ಸಾಧ್ಯವಾಗಿರಲಿಲ್ಲ.

ನಿರೀಕ್ಷೆ ಹುಸಿ ಆಗಲಿಲ್ಲ: ಕಳೆದ ಬಾರಿ ದಸರಾ ಬಳಿಕ ಅನುದಾನ ನೀಡುತ್ತೇವೆ ಎಂದಿದ್ದ ಸರ್ಕಾರ ಆನಂತರ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನೋಡೋಣ, ಮಾಡೋಣ ಎನ್ನುತ್ತಲೇ ವರ್ಷವೇ ಕಳೆದು ಹೋಗಿತ್ತು. ಈ ಬಾರಿಯೂ ಅನುದಾನ ನಿರೀಕ್ಷೆಯಲ್ಲಿ ಪ್ರಸ್ತಾವನೇ ಸಲ್ಲಿಸಿ ತಿಂಗಳೂ ಕಳೆದರೂ ಅನುದಾನ ಕೋರಿ ಪಾಲಿಕೆಯು ಸಲ್ಲಿಸಿದ್ದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಗದ ಕಾರಣ ಈ ಬಾರಿಯೂ ಅನುದಾನ ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಸರ್ಕಾರ ಪಾಲಿಕೆ ಸಲ್ಲಿಸಿದ ಮನವಿಗೆ ತಡವಾಗಿ ಸ್ಪಂದಿಸಿದ್ದು, ದಸರಾ ಉತ್ಸವಕ್ಕೆ ಪಾಲಿಕೆ ಕೋರಿದ ಅನುಸಾನದ ಅರ್ಧಷ್ಟುಅನುದಾನ ನೀಡುವುದು ತಿಳಿಸಿದೆ.

ಯಡಿಯೂರಪ್ಪರಿಂದ ಸರ್ಕಾರಕ್ಕೆ ಪತ್ರ: ಸಾಮಾನ್ಯವಾಗಿ ದಸರಾ ಉತ್ಸವಕ್ಕೆ ಅನುದಾನ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೂಲಕ ಸರ್ಕಾರಕ್ಕೆ ಪತ್ರ ಸಲ್ಲಿಸಿರುವುದು ವಿಶೇಷವಾಗಿದೆ. ಈ ಪತ್ರಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ನೀಡಿದ್ದು, 1 ಕೋಟಿ ನೀಡುವುದಾಗಿ ತಿಳಿಸಿದೆ. ಕಳೆದ ಬಾರಿ ಕೆ.ಎಸ್‌.ಈಶ್ವರಪ್ಪ ಅವರು ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆಗ ಕೆ.ಎಸ್‌.ಈಶ್ವರಪ್ಪ ಸಚಿವರಾಗಿದ್ದರು. ಹೀಗಾಗಿ ದಸರಾ ಉತ್ಸವಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದರು. ಆದರೆ, ಈಗ ಮಂತ್ರಿಸ್ಥಾನ ಕಳೆದುಕೊಂಡಿರುವುದರಿಂದ ಅವರು ಈ ಬಾರಿ ದಸರಾಗೆ ಅಷ್ಟೇನೂ ಆಸಕ್ತಿ ತೋರುತ್ತಿಲ್ಲ ಎಂಬುದು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ಎಚ್‌.ಸಿ.ಯೋಗೀಶ್‌ ಎಂಬುದು ಅಪಾದನೆ.

ಅಸಮಾಧಾನ ಇರುವುದರಿಂದಲೇ ಸದನಕ್ಕೆ ಹೋಗುತ್ತಿಲ್ಲ: ಮಂತ್ರಿಗಿರಿಗಾಗಿ ಮತ್ತೆ ಸಿಡಿದೆದ್ದ ಈಶ್ವರಪ್ಪ

ಶಿವಮೊಗ್ಗ ದಸರಾವನ್ನು ಅದ್ದೂರಿ ಆಚರಣೆಗೆ ಸಲುವಾಗಿ ಸರ್ಕಾರಕ್ಕೆ 2 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ 1 ಕೋಟಿ ರು. ನೀಡಲು ಒಪ್ಪಿದೆ. ಕಳೆದ ಬಾರಿ ಸರ್ಕಾರ ಅನುದಾನ ನೀಡಿರಲಿಲ್ಲ. ಈ ಬಾರಿ ನೀಡಲು ಒಪ್ಪಿದೆ. ಸರ್ಕಾರದ ಅನುದಾನ ಹಾಗೂ ಪಾಲಿಕೆಯಲ್ಲಿ ದಸರಾಕ್ಕೆ ಮೀಸಲಿರುವ ಅನುದಾನವನ್ನು ಬಳಸಿಕೊಂಡು ದಸರಾವನ್ನು ಅದ್ದೂರಿಯಾಗಿ ಆಚರಿಸಲು ವೇದಿಕೆ ಸಿದ್ದಗೊಳಿಸಲಾಗಿದೆ
- ಸುನೀತಾ ಅಣ್ಣಪ್ಪ, ಮೇಯರ್‌, ಮಹಾನಗರ ಪಾಲಿಕೆ

PREV
Read more Articles on
click me!

Recommended Stories

ಕೃಷ್ಣ ಪೂಜೆಗೆ ತುಳಸಿ ಬೇಕು, ಆದರೆ ಜನ್ಮಾಷ್ಟಮಿ ದಿನ ಕೀಳಬಾರದೇ? ಇಲ್ಲಿದೆ ವಿಶಿಷ್ಟ ಮಾಹಿತಿ
ಸಂಸಾರದಲ್ಲಿ ನೆಮ್ಮದಿ ಬೇಕು, ಜೀವನ ಸುಗಮವಾಗ್ಬೇಕೆಂದ್ರೆ ಬರೀ ತಿನ್ನೋದಲ್ಲ ಜೇನುತುಪ್ಪವನ್ನು ಹೀಗೆ ಬಳಸಿ