
ನವದೆಹಲಿ(ಜೂ.11): ಚಹಾಕ್ಕೆ ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಸೇವಿಸಿದರೆ ಕೊರೋನಾ ವೈರಸ್ ತಗಲುವುದಿಲ್ಲ ಅಥವಾ ಕೊರೋನಾದಿಂದ ಗುಣಮುಖರಾಗಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಜಗತ್ತಿನ ಇತರ ರಾಷ್ಟ್ರಗಳಂತೆ ಇಸ್ರೇಲಿಗೂ ಕೊರೋನಾ ಸೋಂಕು ತಗುಲಿದೆ. ಆದರೆ ಇಸ್ರೇಲಿನಲ್ಲಿ ಜನರು ಟೀಗೆ ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ನಿತ್ಯ ಸೇವಿಸುತ್ತಿರುವುದರಿಂದ ಅಲ್ಲಿ ಒಂದೇ ಒಂದು ಸಾವು ಸಂಭವಿಸುತ್ತಿಲ್ಲ ಎಂದೂ ಹೇಳಲಾಗಿದೆ.
ಆದರೆ ಇಂಡಿಯಾ ಟುಡೇ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಟೀಗೆ ನಿಂಬೆ ಹಣ್ಣಿನ ರಸ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಕೊರೋನಾ ವೈರಸ್ಸನ್ನು ಕೊಲ್ಲುತ್ತದೆ ಎಂಬುದು ವೈಜ್ಞಾನಿಕವಾಗಿ ಎಲ್ಲೂ ಸಾಬೀತಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವುದರಿಂದ ಶೀತ ಗುಣಮುಖವಾಗುತ್ತದೆಂಬ ನಂಬಿಕೆ ಇದೆ. ಆದರೆ ಇದರಿಂದ ಉಸಿರಾಟ ಸಮಸ್ಯೆ ಪರಿಹಾರವಾಗುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಇಂದಿಗೂ ಚರ್ಚೆಯಾಗುತ್ತಿದೆ.
ಇನ್ನು ಇಸ್ರೇಲಿನಲ್ಲಿ ಕೊರೋನಾ ವೈರಸ್ಸಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಲಾದ ಸಂದೇಶವೂ ಸತ್ಯವಲ್ಲ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ, ಜೂನ್ 9ಕ್ಕೆ ಇಸ್ರೇಲಿನಲ್ಲಿ 298 ಜನರು ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ. ಅಲ್ಲಿ ಒಟ್ಟು 18,089 ಜನರಿಗೆ ಕೊರೋನಾ ತಗಲಿದೆ.
"