Fact Check| ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಸೋಂಕು!

By Kannadaprabha NewsFirst Published May 22, 2020, 11:49 AM IST
Highlights

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

ವಾಷಿಂಗ್ಟನ್(ಮೇ.22): ಇತ್ತೀಚೆಗೆ ಕೊರೋನಾ ವೈರಸ್‌ ಲಕ್ಷಣಗಳಿಲ್ಲದಿದ್ದರೂ ಸೋಂಕು ಬಾರದಿರಲಿ ಎಂದು ಹೈಡ್ರಾಕ್ಸಿಕ್ಲೊರೋಕ್ವಿನ್‌ (ಮಲೇರಿಯಾ) ಮಾತ್ರೆ ಸೇವಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಫಾಕ್ಸ್‌ ನ್ಯೂಸ್‌’ ಹೆಸರಿನಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, 11 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ಫಾಕ್ಸ್‌ನ್ಯೂಸ್‌ ಸುದ್ದಿವಾಹಿನಿಯ ನಿರೂಪಕಿ ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ಇರುವುದಾಗಿ ವೈಟ್‌ ಹೌಸ್‌ ಮೆಡಿಕಲ್‌ ಟೀಮ್‌ ದೃಢಪಡಿಸಿದೆ’ ಎಂದು ಹೇಳುವ ದೃಶ್ಯವಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ, ಇದು ಸುಳ್ಳು ಸುದ್ದಿ, ಟ್ರಂಪ್‌ಗೆ ಕೊರೋನಾ ಸೋಂಕು ತಗಲಿಲ್ಲ ಎಂಬುದು ಖಚಿತವಾಗಿದೆ. ವೈರಲ್‌ ವಿಡಿಯೋದ ಮೂಲ ವಿಡಿಯೋ ಯುಟ್ಯೂಬ್‌ನಲ್ಲಿ ಲಭ್ಯವಿದ್ದು, ಟ್ರಂಪ್‌ ಅವರ ಅಧಿಕೃತ ನಿವಾಸ ವೈಟ್‌ಹೌಸ್‌ನಲ್ಲಿ ಕೆಲಸ ಮಾಡುವ ಟ್ರಂಪ್‌ ಅಂಗಸೇವಕರಿಗೆ ಕೊರೋನಾ ದೃಢಪಟ್ಟಿರುವುದಾಗಿ ಫಾಕ್ಸ್‌ ನ್ಯೂಸ್‌ ಮೇ 7, 2020ರಂದು ವರದಿ ಮಾಡಿತ್ತು.

ಅದೇ ಸುದ್ದಿಯನ್ನು ಎಡಿಟ್‌ ಮಾಡಿ, ಟ್ರಂಪ್‌ ಅವರಿಗೇ ಕೊರೋನಾ ಎಂದು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

click me!