ತಬ್ಲೀಘಿ ಜಮಾತ್ ಸದಸ್ಯರ ದುರ್ವರ್ತನೆಯಿಂದ ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ದಾದಿಯರು ರಾಜೀನಾಮೆ ನೀಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ(ಮೇ.07): ತಬ್ಲೀಘಿ ಜಮಾತ್ ಸದಸ್ಯರ ದುರ್ವರ್ತನೆಯಿಂದ ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ದಾದಿಯರು ರಾಜೀನಾಮೆ ನೀಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಿಷಿ ರಜಪೂತ್ ಎಂಬುವರು ‘ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ನರ್ಸ್‌ಗಳು ರಾಜೀನಾಮೆ ನೀಡಿದ್ದಾರೆ’ ಎನ್ನಲಾದ ನ್ಯೂಸ್ ನೇಷನ್ ಹಿಂದಿ ವಾಹಿನಿಯ ಸ್ಕ್ರೀನ್‌ಶಾಟ್‌ವೊಂದನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ, ತಬ್ಲೀಘಿಗಳು ಮೈಮೇಲೆ ಉಗುಳುವುದರಿಂದ ಬೇಸತ್ತು ನರ್ಸ್‌ಗಳು ರಾಜೀನಾಮೆ ದಾರಿ ಹಿಡಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬಿರಿಯಾನಿ ಕೊಡದಿದ್ದಕ್ಕೆ ತಬ್ಲೀಘಿ ಸದಸ್ಯರು ವಾರ್ಡ್ ಬಾಯ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದೂ ಬರೆದಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.
राजस्थान के "झालावाड़" में एक साथ 100 नर्सों ने दिया इस्तीफ़ा... क्योंकि जमाती उनपर थूकते है, वार्ड बॉय खाना देने जाता है तो जाहिल जमाती बिरयानी की मांग करते हैं और मांग पूरी नहीं होने पर उन्हें गंदी गंदी गाली देते है.😡 pic.twitter.com/7gRHsZ59Ui
— ऋषि राजपूत (राष्ट्रवादी) (@srishirajIND)
undefined
ಆದರೆ ಈ ಸುದ್ದಿ ಹಿಂದಿನ ಸತ್ಯಾಸತ್ಯ ತಿಳಿಯಲು ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ನ್ಯೂಸ್ ನೇಷನ್ ಈ ಬಗ್ಗೆ ಏ.27, 2020ರಂದು ಮಾಡಿರುವ ವರದಿ ಲಭ್ಯವಾಗಿದೆ. ಅದರಲ್ಲಿ ಝಲಾವರ್ ಆಸ್ಪತ್ರೆಯ 100ಕ್ಕೂ ಹೆಚ್ಚು ದಾದಿಯರು ಕಡಿಮೆ ವೇತನ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂದಿದೆ.
ಜೊತೆಗೆ ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅತ್ಯಗತ್ಯವಾದ ಪಿಪಿಇ ಕಿಟ್ ಕೂಡ ನೀಡುತ್ತಿಲ್ಲ ಎಂದು ನರ್ಸ್‌ಗಳು ದೂರಿದ್ದಾರೆ ಎಂದಿದೆ. ಆದರೆ ಎಲ್ಲೂ ತಬ್ಲೀಘಿ ಜಮಾತಿಗಳ ವಿಷಯ ಪ್ರಸ್ತಾಪ ಆಗಿಲ್ಲ. ಇದೇ ಸುದ್ದಿಯನ್ನು ರಾಜಸ್ಥಾನದ ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ತಬ್ಲೀಘಿಗಳಿಂದಾಗಿ ನರ್ಸ್‌ಗಳು ರಾಜೀನಾಮೆ ನೀಡಿದ್ದರು ಎಂಬ ಸುದ್ದಿ ಸುಳ್ಳು ಎಂದು ಝಲಾವರ್ ಆಸ್ಪತ್ರೆಯ ಡೀನ್ ಕೂಡ ಸ್ಪಷ್ಟಪಡಿಸಿದ್ದಾರೆ.