ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು

Published : Sep 08, 2016, 12:23 PM ISTUpdated : Apr 11, 2018, 12:49 PM IST
ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು

ಸಾರಾಂಶ

ಕಾಲ್‌ಗರ್ಲ್ ಕುಮುದಾಳ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?

ಅದನ್ನ ನಾನ್ ಹೇಳೋದಿಕ್ಕಿಂತ ನೀವೇ ಹೇಳಬೇಕು. ಆದ್ರೂ, ಬಹಳಷ್ಟು ಜನರು ನನ್ನ ಪಾತ್ರದ ಬಗ್ಗೆ ವ್ಯಕ್ತಪಡಿಸಿದ ಪ್ರತಿಕ್ರಿಯೆ ನಿಜಕ್ಕೂ ಅದ್ಭುತ. ನಿಜ ಹೇಳ್ತೀನಿ, ಈ ತನಕ ಚಿತ್ರ ನೋಡಿದವರ್ಯಾರೂ ನಿಮ್ಮ ಪಾತ್ರ ಕೆಟ್ಟದಾಗಿದೆ ಅಂತ ಹೇಳಿಲ್ಲ. ಅಶ್ಲೀಲ ಅಂತಲೂ ಮುಜುಗರ ಮಾಡಿಕೊಂಡಿಲ್ಲ. ಆ ಮಟ್ಟಿಗೆ ಆರಂಭದಲ್ಲಿ ಕೇಳಿ ಬಂದ ಟೀಕೆಗಳಿಗೆ ತದ್ವಿರುದ್ಧದ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ರಿಲೀಸ್‌ಗೂ ಮುನ್ನ ಫ್ರೆಂಡ್ಸ್ ಹತ್ತಿರ ನಾನು ಇದೇ ಮಾತು ಹೇಳಿದ್ದೆ. ಫೋಟೋಗಳು ಮತ್ತು ಟ್ರೈಲರ್ ನೋಡಿ ಕೆಲವರು ವ್ಯಕ್ತಪಡಿಸಿದ್ದ ಆಕ್ರೋಶಕ್ಕೆ ರಿಲೀಸ್ ನಂತರ ಉತ್ತರ ಸಿಗುತ್ತದೆ ಅಂತ ಭರವಸೆ ನೀಡಿದ್ದೆ. ಅದೀಗ ನಿಜವಾಗಿದೆ.

ಕತೆ ಕೇಳಿದ ಆರಂಭದಲ್ಲಿ ನೀವು ಈ ಪಾತ್ರವನ್ನು ತಿರಸ್ಕರಿಸಿ, ನಂತರ ಒಪ್ಪಿಕೊಂಡಿದ್ದೇಕೆ?

ಹೇಳಿದಾಕ್ಷಣ ಒಪ್ಪಿಕೊಳ್ಳೋದಿಕ್ಕೆ ಇದು ಸಹಜವಾದ ಪಾತ್ರ ಆಗಿರ್ಲಿಲ್ಲ. ಇಡೀ ಕತೆ ಕೇಳಿದಾಗ ಅದ್ಭುತ ಎನಿಸಿತು. ವಿಜಯ್ ಪ್ರಸಾದ್ ಸಾರ್ ಅದನ್ನು ತುಂಬಾನೆ ರಸವತ್ತಾಗಿ ಹೇಳಿದ್ದರು. ಮೇಲಾಗಿ ರಮ್ಯಾರಂಥ ಶ್ರೇಷ್ಠ ನಟಿಯೇ ಒಪ್ಪಿಕೊಂಡಿದ್ದ ಪಾತ್ರ. ಸಹಜವಾಗಿಯೇ ಚೆನ್ನಾಗಿರುತ್ತದೆ ಅನ್ನುವ ಲೆಕ್ಕಾಚಾರ ಮನಸ್ಸಿನಲ್ಲಿತ್ತು. ಆದ್ರೆ ಸವಾಲಿನ ಪಾತ್ರ ಎನ್ನುವುದಕ್ಕಾಗಿ ಭಯ ಎನಿಸಿತು. ಕತೆ ಕೇಳಿದ ದಿನ ನೋಡೋಣ ಸಾರ್ ಅಂತ ಹೇಳಿದ್ದೆ. ಆದ್ರೆ ಫ್ರೆಂಡ್ಸ್ ಸರ್ಕಲ್‌ನಲ್ಲಿ ಈ ಬಗ್ಗೆ ಚೆರ್ಚೆ ಮಾಡಿದಾಗ ಧೈರ್ಯ ಬಂತು. ನಿನಗೆ ಕಂಫರ್ಟ್ ಅನಿಸಿದ್ರೆ ಮಾಡು ಅಂತ ಅಮ್ಮ ಕೂಡ ಹೇಳಿದ್ರು. ನಂತರ ನಿರ್ದೇಶಕರು ಕೂಡ ಎಲ್ಲೂ ಅಶ್ಲೀಲವಾಗಿ ತೋರಿಸುವುದಿಲ್ಲ ಅಂತ ಭರವಸೆ ನೀಡಿದ್ರು. ಹಾಗಾಗಿ ಒಪ್ಪಿಕೊಂಡೆ.

ಸಹಜ ನಟಿಯೊಬ್ಬಳು ಇಷ್ಟೊಂದು ಬೋಲ್ಡ್ ಪಾತ್ರದಲ್ಲಿ ನಟಿಸೋದು ಕಷ್ಟ ಅಂತ ಅನಿಸಲಿಲ್ವೇ?

ಹೌದು, ನೀವು ಹೇಳೋದು ನಿಜವೇ. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಕಷ್ಟವೇ. ಬಾಲಿವುಡ್‌ನಲ್ಲಾದ್ರೆ, ಈ ರೀತಿಯ ಪಾತ್ರಗಳು ಫರ್ಫಾರ್ಮೆನ್ಸ್ ಒರಿಯೆಂಟೆಡ್ ಸಾಲಿಗೆ ಸೇರಿಬಿಡುತ್ತವೆ. ಅದನ್ನೇ ಕನ್ನಡದಲ್ಲಿ ಮಾಡಿದ್ರೆ, ಇನ್ನೇನೋ ಅವಾಂತರಗಳು ಹುಟ್ಟಿಕೊಳ್ಳುತ್ತವೆ. ರಿಲೀಸ್‌ಗೆ ಮುನ್ನ ನನ್ನ ಪಾತ್ರಕ್ಕೂ ಹೀಗೆ ಆಗಿದ್ದು ನಿಮ್ಗೆ ಗೊತ್ತಿದೆ. ಆದ್ರೂ ನಾನು ಈ ಪಾತ್ರದಲ್ಲಿ ನಟಿಸೋದಿಕ್ಕೆ ಕಾರಣ, ಹೊಸ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ತುಡಿತದಿಂದ ಮಾತ್ರ. ಆರಂಭದಿಂದ ಇಲ್ಲಿಯ ತನಕದ ನನ್ನ ಸಿನಿಜರ್ನಿ ನೋಡಿದವರಿಗೆ ನಾನೆಂಥ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ ಅನ್ನೋದು ಗೊತ್ತಿದೆ. ಇತ್ತೀಚೆಗಿನ ‘ಬುಲೆಟ್ ಬಸ್ಯಾ’ದಲ್ಲಿ ಪಕ್ಕಾ ಹಳ್ಳಿ ಹುಡುಗಿ, ‘ರಿಕ್ಕಿ’ಯಲ್ಲಿ ನಕ್ಸಲೈಟ್ ಆಗಿ, ಈಗ ಕಾಲ್‌ಗರ್ಲ್ ಆಗಿ ನಟಿಸಿರುವೆ. ಮುಂದೆ ‘ಭರ್ಜರಿ’ಯಲ್ಲಿ ಉತ್ತರ ಕರ್ನಾಟಕದ ಮುಗ್ಧ ಹುಡುಗಿ ಆಗುತ್ತೇನೆ. ವಿಭಿನ್ನ ಪಾತ್ರಗಳಿಗೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ.

ಹರಿಪ್ರಿಯ ದುಡ್ಡಿಗಾಗಿಯೇ ಈ ಪಾತ್ರ ಮಾಡಿದ್ದು ನಿಜವೇ?

ವಾಸ್ತವ ಪರಿಸ್ಥಿತಿಗಳು ಟೀಕಿಸುವವರಿಗೂ ಗೊತ್ತಿಲ್ಲ. ಹಾಗಂತ ಅದೆಲ್ಲವನ್ನೂ ಅವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವೂ ನಂಗಿಲ್ಲ. ಕೆಲವರು ಅನಗತ್ಯವಾಗಿ ಮಾತನಾಡಿದ್ದಕ್ಕಾಗಿ ನಾನಿಲ್ಲಿ ಸಂಭಾವನೆಯ ವಿಚಾರ ಹೇಳಬೇಕಿದೆ. ನಿಜ ಹೇಳಬೇಕೆಂದ್ರೆ ನನ್ನ ಸಂಭಾವನೆಯಲ್ಲಿ ಇದಕ್ಕೆ ಅರ್ಧದಷ್ಟು ಹಣ ಪಡೆದಿಲ್ಲ. ಕತೆ ಚೆನ್ನಾಗಿದೆ ಅನ್ನೋ ಕಾರಣಕ್ಕಾಗಿ ತಿರಸ್ಕಾರದ ನಂತರವೂ ಅಭಿನಯಿಸಲು ಕಮಿಟ್ ಆಗಿಬಿಟ್ಟೆ. ಅದಕ್ಕೆ ತಕ್ಕಂತೆ ನಾನು ನಡೆದುಕೊಳ್ಳಬೇಕಿತ್ತು. ಡ್ರೈವರ್ ಇಲ್ಲದಿದ್ದಾಗಲೂ ಹಲವು ಬಾರಿ ನಾನೇ ಕಾರ್‌ಡ್ರೈವ್ ಮಾಡಿಕೊಂಡು ಹೋಗಿ ಚಿತ್ರೀಕರಣ ಮುಗಿಸಿದ್ದೇನೆ. ಬೆಲ್ಲಿ ಡ್ಯಾನ್ಸ್ ಸಂದರ್ಭದಲ್ಲಿ ಕಾಲಿಗೆ ಗಾಯವಾಗಿದ್ದರೂ ನನ್ನ ಪಾಲಿನ ಕೆಲಸವನ್ನು ಇನ್‌ಟೈಮ್ ಮುಗಿಸಿಕೊಟ್ಟಿದ್ದೇನೆ. ಇವೆಲ್ಲವನ್ನು ಕೇವಲ ದುಡ್ಡಿಗಾಗಿ ಮಾಡ್ತಾರಾ?

ಇಂಥ ಪಾತ್ರ ನಟಿಯೊಬ್ಬಳ ಇಮೇಜ್ ಅನ್ನು ಡ್ಯಾಮೇಜ್ ಮಾಡುತ್ತಾ?

ಇದು ಎಷ್ಟು ಸತ್ಯವೋ ನಂಗಂತೂ ಗೊತ್ತಿಲ್ಲ. ಕೆಲವರು ಆಯ್ಕೆಯಲ್ಲಿ ಎಡವಿದ್ದು ಇದಕ್ಕೆ ಕಾರಣವಿರಬಹುದೇನೋ. ಆದ್ರೆ, ಈ ಚಿತ್ರದಲ್ಲಿನ ಕುಮುದಾ ಪಾತ್ರ ನನ್ನ ಇಮೇಜ್‌ಗೆ ಡಾಮೇಜ್ ಎನ್ನುವ ಯಾವ ಭಯವೂ ನಂಗಿಲ್ಲ. ಹಾಗೊಂದು ವೇಳೆ, ಚಿತ್ರ ಪ್ರೇಕ್ಷಕರಿಂದ ತಿರಸ್ಕರಿಸಲ್ಪಟ್ಟು ಫ್ಲಾಪ್ ಎನ್ನುವ ಪಟ್ಟ ಹೊತ್ತಿದ್ದರೆ ಆ ಬಗ್ಗೆ ಯೋಚಿಸಬಹುದಾಗಿತ್ತೋ ಏನೋ. ಆದ್ರೆ ನನ್ನ ಅದೃಷ್ಟ ಚೆನ್ನಾಗಿದೆ. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

ಭವಿಷ್ಯದಲ್ಲಿ ಇಂಥದ್ದೇ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರೆ ಕತೆಯೇನು?

ನಾನೀಗ ಅವಕಾಶಗಳಿಲ್ಲದೆ ಈ ಪಾತ್ರ ಮಾಡಿಲ್ಲ. ಸಾಕಷ್ಟು ಬ್ಯುಸಿ ಇದ್ದೇನೆ ಎನ್ನುವುದು ನಿಮ್ಗೂ ಗೊತ್ತು. ಈ ನಡುವೆಯೂ ಇಂಥದೊಂದು ಪಾತ್ರ ಮಾಡಿದ್ದು ಚೇಂಜ್ ಓವರ್‌ಗೆ ಮಾತ್ರ. ಇದು ಇಲ್ಲಿಗೆ ಕೊನೆ. ಇನ್ನು ಮುಂದೆ ಕೋಟಿ ಕೊಟ್ಟರೂ ಇಂಥ ಪಾತ್ರ ಮಾಡೋದಿಲ್ಲ.

ಇದೊಂದು ವಿಭಿನ್ನ ಪಾತ್ರ ಮಾತ್ರವಲ್ಲ, ಮೇಕ್‌ಓವರ್ ಕೂಡ ಭಿನ್ನವಾಗಿದೆ. ತಯಾರಿ ಹೇಗಿತ್ತು?

ಇದಕ್ಕಾಗಿ ಸಾಕಷ್ಟು ಹೋಮ್‌ವರ್ಕ್ ಮಾಡಿದ್ದೇನೆ. ಕಾಸ್ಟ್ಯೂಮ್ ಜತೆಗೆ ಹೇರ್‌ಸ್ಟೈಲ್ ಬದಲಾಯಿಸಿಕೊಳ್ಳುವುದಕ್ಕೆ ಮಣಿಪುರ ಮತ್ತು ಮುಂಬೈನಿಂದ ಸ್ಪೆಷಲಿಸ್ಟ್ ಬಂದಿದ್ರು. ಸುಮಾರು ಹತ್ತು ದಿನಗಳಲ್ಲಿ ನನ್ನ ಮೇಕ್‌ಓವರ್ ಟೆಸ್ಟಿಂಗ್ ಆದ ಮೇಲೆ ಕ್ಯಾಮೆರಾ ಎದುರಿಸಿದ್ದೇನೆ. ಚಿತ್ರದ ಆರಂಭದಲ್ಲಿ ಬರುವ ಬೆಲ್ಲಿ ಡ್ಯಾನ್ಸ್ ಮಾಡುವಾಗ ಕಾಲಿಗೆ ಗಾಯವಾದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಪಾತ್ರಕ್ಕೆ ಸಿಗರೇಟ್ ಹಚ್ಚಿದ್ದೇನೆ. ಇವೆಲ್ಲವೂ ಪಾತ್ರಕ್ಕಾಗಿ ಮಾತ್ರ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜ್ಯೋತಿಷಿ ಹೇಳಿದ್ದಕ್ಕೆ ಜೀವನದ ದಾರಿ ಬದಲಿಸಿದ Mahanati Show ಗಗನಾ; ರಕ್ಷಿತಾ‌ ಪ್ರೇಮ್, ವಿಜಯ್ ಶಾಕ್
ಪಾಯಲ್‌ ಗೇಮಿಂಗ್‌ Dubai MMS ವಿವಾದ, 'ಇದು ನಾನಲ್ಲ..' ಎಂದ ಯೂಟ್ಯೂಬರ್‌!