ಈ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾರಾಟಕ್ಕಿದೆ!

By Kannadaprabha NewsFirst Published Jul 28, 2018, 12:59 PM IST
Highlights

ಬೆಂಗಳೂರಿನಲ್ಲಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನೆಲ್ಲ ಮಲ್ಟಿಪ್ಲೆಕ್ಸುಗಳು ನುಂಗಿ ನೀರು ಕುಡಿಯುತ್ತಿವೆ ಎಂಬ ಮಾತಿಗೆ ಪೂರಕವಾಗಿ ಮತ್ತೊಂದು ಚಿತ್ರಮಂದಿರ ಬಾಗಿಲು ಮುಚ್ಚಲಿಕ್ಕೆ ಸಿದ್ಧವಾಗುತ್ತಿದೆ.

ಕಪಾಲಿ, ನಟರಾಜ ಚಿತ್ರಮಂದಿರದ ನಂತರ ಇದೀಗ ಮುಚ್ಚುತ್ತಿರುವ ಚಿತ್ರಮಂದಿರ ವಿನಾಯಕ. ಮೈಸೂರು ರಸ್ತೆಯಲ್ಲಿರುವ ವಿನಾಯಕ ಥೇಟರ್ ಮುಂದೆ, ಚಿತ್ರಮಂದಿರ ಮಾರಾಟಕ್ಕಿದೆ ಎಂಬ ಬೋರ್ಡು ರಾರಾಜಿಸುತ್ತಿದೆ. ವಿನಾಯಕ ಹೇಳಿಕೇಳಿ ಪರಭಾಷಾ ಚಿತ್ರಗಳಿಗೆಂದೇ ಮೀಸಲಾಗಿದ್ದ ಚಿತ್ರಮಂದಿರ. ಅಲ್ಲಿ ಹೆಚ್ಚಾಗಿ ಪ್ರದರ್ಶನ ಕಾಣುತ್ತಿದ್ದದ್ದು ತಮಿಳು  ಸಿನಿಮಾಗಳೇ. ಆ ಥೇಟರ್ ಇರುವ ಜಾಗವೂ ತಮಿಳು ಪ್ರೇಕ್ಷಕರೇ ಹೆಚ್ಚಿರುವ ಪ್ರದೇಶ ಆಗಿದ್ದರಿಂದ ವಿನಾಯಕ ಚಿತ್ರಮಂದಿರಕ್ಕೆ ತಮಿಳು ಚಿತ್ರ ನೋಡಲಿಕ್ಕೆ ಆಸುಪಾಸಿನ ಮಂದಿ ಬರುತ್ತಿದ್ದರು. ಆದರೆ ಮಲ್ಟಿಪ್ಲೆಕ್ಸ್ ಸಂಸ್ಕೃತಿ ಬಂದ ನಂತರ ಅಲ್ಲಿಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿತ್ತು.

ಒಂದಾನೊಂದು ಕಾಲದಲ್ಲಿ ತಮಿಳು ಚಿತ್ರಗಳ ಹೃದಯ ಎಂದೇ ಹೆಸರಾಗಿದ್ದ ಚಿತ್ರಮಂದಿರಗಳ ಪಟ್ಟಿಯಲ್ಲಿ ವಿನಾಯಕ ಕೂಡ ಇತ್ತು. ನಟರಾಜ್ ಚಿತ್ರಮಂದಿರದ ಮುಂದೆ ಕಟೌಟ್ ನಿಲ್ಲಿಸುತ್ತಿದ್ದ ಹಾಗೇ, ರಜನೀಕಾಂತ್, ಕಮಲ್‌ಹಾಸನ್ ಕಟೌಟ್‌ಗಳು ವಿನಾಯಕ ಚಿತ್ರಮಂದಿರದ ಮುಂದೂ ಇರುತ್ತಿದ್ದವು.‘ಈಗಂತೂ ಆ ಚಿತ್ರಮಂದಿರ ಆಕರ್ಷಣೆ ಕಳಕೊಂಡಿದೆ. ಅಲ್ಲೇ ಸಮೀಪದಲ್ಲಿ ಇಟಾ ಮಾಲ್ ಬಂದಿದೆ. ಅಲ್ಲಿ ಸುಸಜ್ಜಿತವಾದ ಸ್ಕ್ರೀನ್ ಗಳಿವೆ. ಅಲ್ಲೂ ನೂರು ರುಪಾಯಿ ಪ್ರವೇಶ ದರ. ಇಲ್ಲೂ ಅದೇ ದರ. ಅಂದಮೇಲೆ ಈ ಚಿತ್ರಮಂದಿರಕ್ಕೆ ಯಾರು ಬರುತ್ತಾರೆ ಹೇಳಿ’ ಅನ್ನುತ್ತಾರೆ ನಿರ್ಮಾಪಕ ಕನಕಪುರ ಶ್ರೀಕಾಂತ್. 

click me!