
ಇಬ್ಬರಿಗೂ ಇದು ಮೊದಲ ಚಿತ್ರ. ಹೀರೋ ಆಗಿ ವಿನಯ್ ಅವರಿಗೆ ನಾಲ್ಕನೇ ಚಿತ್ರ. ಅವರಿಗೆ ನಾಯಕಿ ಅಮೃತಾ ಅಯ್ಯರ್. ಡಾ.ರಾಜ್‌ಕುಮಾರ್ ಹುಟ್ಟೂರು ಗಾಜನೂರಿನ ಪರಿಸರದೊಂದಿಗೆ ಮೂಡಿಬಂದ ‘ಗ್ರಾಮಾಯಣ’ದ ಮೊದಲ ಟೀಸರ್ ತೀವ್ರ ಕುತೂಹಲ ಹುಟ್ಟಿಸಿದೆ. ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜ್‌ಕುಮಾರ್ ಹುಟ್ಟಿ ಬೆಳೆದ ಕರಿಹೆಂಚಿನ ಮನೆ, ಬೀರಪ್ಪನ ದೇವಸ್ಥಾನದ ಪರಿಸರದೊಳಗಿನ ದೃಶ್ಯಗಳ ಝಲಕ್ ಮೂಲಕವೇ ವಿನಯ್ ರಾಜ್‌ಕುಮಾರ್ ಪಾತ್ರದ ಮೊದಲ ಲುಕ್ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ. ಉದ್ದನೆ ಗಡ್ಡ, ಪಂಚೆ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ವಿನಯ್ ರಾಜ್‌ಕುಮಾರ್ ಹೊಸ ಬಗೆಯಲ್ಲೇ ಬರುವುದು ಗ್ಯಾರಂಟಿ ಆಗಿದೆ.
ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಟೀಸರ್ ಬಿಡುಗಡೆಗೆ ಸಾಕ್ಷಿಯಾದರು. ಮಾತಿಗೆ ನಿಂತ ನಿರ್ದೇಶಕ ದೇವನೂರು ಚಂದ್ರು, ‘ನಿರ್ಮಾಪಕ ಮೂರ್ತಿ ಅವರಿಗೆ ನಾಲ್ಕು ಬಾರಿ ಕಥೆ ಹೇಳಿ ಸುಸ್ತಾಗಿತ್ತು. ಬೇಸರವಾಗಿ ಊರಿಗೆ ಹೋಗಿದ್ದೆ. ಒಂದು ದಿನ ರಾಘಣ್ಣ ಫೋನ್ ಮಾಡಿ ಊಟಕ್ಕೆ ಬನ್ನಿ ಎಂದರು. ಅವರ ಮನೆಗೆ ಹೋದೆ. ಅವರಿಗೆ ಕಥೆ ಇಷ್ಟವಾಗಿತ್ತು. ಚಿತ್ರ ಮಾಡಿ ಅಂತ ಹೇಳಿದರು. ನಿರ್ಮಾಪಕರು ಒಪ್ಪಿದರು’ ಎಂದರು.
ವಿನಯ್ ರಾಜ್‌ಕುಮಾರ್ ಪಾತ್ರದ ಹೆಸರು ಸಿಕ್ಸ್ತ್ ಸೆನ್ಸ್ ಸೀನ. ‘ಗಾಜನೂರಿನಲ್ಲಿ ತಾತ ಹುಟ್ಟಿದ ಮನೆಯಲ್ಲಿ ಟೀಸರ್ ಚಿತ್ರೀಕರಣ. ತುಂಬಾ ಭಯ ಇತ್ತು. ಟೀಸರ್ ನೋಡಿದರೆ, ಕಥೆ ಏನಿರಬಹುದು ಎಂದು ಗೊತ್ತಾಗುತ್ತದೆ. ಸುಮಾರು ಎಂಟು ತಿಂಗಳ ಹಿಂದೆ ಚಂದ್ರು ಕಥೆ ಹೇಳಿದ್ದರು. ಕಥೆ ಸಾಕಷ್ಟು ಕಾಡಿತು’ ಎಂದು ವಿನಯ್ ಹೇಳಿದರು. ನಟಿ, ನಿರೂಪಕಿ ಅಪರ್ಣ, ಸೀತಾ ಕೋಟೆ, ಸಂಪತ್ ಕುಮಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಹೇಳಿದ ಕತೆ
ನಿರ್ದೇಶಕ ಚಂದ್ರು ಕಥೆ ಹೇಳುತ್ತಿದ್ದಂತೆ ಅಪ್ಪಾಜಿ ಹೇಳಿದ ಮಾತೊಂದು ನೆನಪಾಯಿತು. ಒಮ್ಮೆ ಅವರು ಊರಿಗೆ ಕರೆದುಕೊಂಡು ಹೋಗೋದಕ್ಕೆ ಹೇಳಿದರು. ಕಾರಣಾಂತರಗಳಿಂದ ಆಗಲಿಲ್ಲ. ಆಗ ನೀವು ಊರನ್ನು ಮಿಸ್ ಮಾಡ್ಕೋತಿದ್ದೀರಾ ಅಂತ ಕೇಳಿದೆ. ಅದಕ್ಕವರು, ‘ನಾನು ಊರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ, ಊರು ನನ್ನನ್ನ ಮಿಸ್ ಮಾಡಿಕೊಳ್ಳುತ್ತಿದೆ ಎಂದರು. ನಿರ್ದೇಶಕರು ಕಥೆ ಹೇಳಿದಾಗ ಈ ನೆನಪು ಕಾಡಿತು. ಆ ಕಥೆಯೇ ಸಿನಿಮಾ ಮಾಡಿಸಿಕೊಳ್ಳುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.