
ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಗಳಿಗೆ ಒಟಿಟಿಯಲ್ಲಿ ಯಾವತ್ತೂ ಡಿಮ್ಯಾಂಡ್ ಇದ್ದೇ ಇರುತ್ತೆ. ಅದರಲ್ಲೂ ದೆವ್ವ, ಭೂತದ ಕಥೆಗಳೆಂದರೆ ವೀಕ್ಷಕರು ಕೊನೆವರೆಗೂ ಸೀಟ್ ತುದಿಯಲ್ಲಿ ಕೂತು ನೋಡ್ತಾರೆ. ಈಗ ಒಟಿಟಿಯಲ್ಲಿ ಸದ್ದು ಮಾಡ್ತಿರೋ 'ಕಣ್ಣಾಮೂಚಿ' ಕೂಡ ಅಂಥದ್ದೇ ಒಂದು ಹಾರರ್ ಥ್ರಿಲ್ಲರ್ ವೆಬ್ ಸೀರೀಸ್. ಸಾಲು ಸಾಲು ನಿಗೂಢ ಘಟನೆಗಳು, ಬೆಚ್ಚಿಬೀಳಿಸುವ ದೃಶ್ಯಗಳು ಹಾಗೂ ಮುಂದೆನಾಗುತ್ತೆ ಅನ್ನೋ ಕುತೂಹಲ ಈ ಸೀರೀಸ್‌ನಲ್ಲಿದೆ. ಐಎಂಡಿಬಿ (IMDb) ರೇಟಿಂಗ್‌ನಲ್ಲೂ ಇದು ಒಳ್ಳೆ ಸ್ಕೋರ್ ಮಾಡಿದ್ದು, ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.
ಕಥೆ ಏನು?
ಗಂಡನನ್ನು ಕಳೆದುಕೊಂಡ ಪ್ರಿಯಾ, ಕಿವುಡ ಹಾಗೂ ಮೂಕಿಯಾಗಿರುವ ತನ್ನ ಮಗಳ ಜೊತೆ ಚೆನ್ನೈನ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗ್ತಾಳೆ. ಹಳೆಯ ನೋವುಗಳನ್ನೆಲ್ಲಾ ಮರೆತು ಮಗಳ ಜೊತೆ ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕು ಅನ್ನೋದು ಅವಳ ಆಸೆಯಾಗಿರುತ್ತೆ. ಆದ್ರೆ, ಹೊಸ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅಲ್ಲಿನ ವಾತಾವರಣ ಬದಲಾಗುತ್ತೆ. ತಾಯಿ-ಮಗಳು ವಿಚಿತ್ರ ಹಾಗೂ ಭಯಾನಕ ಘಟನೆಗಳನ್ನು ಎದುರಿಸಲು ಶುರು ಮಾಡ್ತಾರೆ. ಅದೇ ಬಿಲ್ಡಿಂಗ್‌ನಲ್ಲಿ ವರ್ಷಗಳ ಹಿಂದೆ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದರು ಅನ್ನೋ ವಿಚಾರ ತಿಳಿದಾಗ ಪ್ರಿಯಾಳ ಅನುಮಾನ ಇನ್ನಷ್ಟು ಹೆಚ್ಚಾಗುತ್ತೆ.
ದಿಢೀರ್ ನಾಪತ್ತೆಯಾದ ಮಗಳು
ಒಂದು ದಿನ ಮನೆಯಲ್ಲಿ ಪ್ರಿಯಾ ತನ್ನ ಮಗಳ ಜೊತೆ ಕಣ್ಣಾಮುಚ್ಚಾಲೆ (ಕಣ್ಣಾಮೂಚಿ) ಆಟ ಆಡ್ತಿರ್ತಾಳೆ. ಆಟದ ಮಧ್ಯೆ ಮಗಳು ದಿಢೀರ್ ಅಂತ ನಾಪತ್ತೆ ಆಗ್ತಾಳೆ. ಮನೆಯಲ್ಲೇ ಇದ್ದ ಮಗಳು ಹೇಗೆ ಮಾಯವಾದಳು ಅನ್ನೋದು ಪ್ರಿಯಾಗೆ ಅರ್ಥವೇ ಆಗಲ್ಲ. ಮಗಳಿಗಾಗಿ ಹುಡುಕಾಡುವಾಗ ಅವಳಿಗೆ ಕೆಲವು ಅನಿರೀಕ್ಷಿತ ಸುಳಿವುಗಳು ಸಿಗುತ್ತವೆ. ಮಗಳು ನಾಪತ್ತೆಯಾಗಿರುವುದರ ಹಿಂದೆ ದೊಡ್ಡ ರಹಸ್ಯವಿದೆ ಅನ್ನೋದನ್ನ ಅರಿತ ಪ್ರಿಯಾ, ಅದರ ಬೆನ್ನತ್ತಿ ಹೋಗ್ತಾಳೆ.
ಈ ಹುಡುಕಾಟದಲ್ಲಿ 20 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ರಹಸ್ಯ ಅವಳಿಗೆ ಗೊತ್ತಾಗುತ್ತೆ. ಆ ಹಳೇ ಕೊಲೆಗೂ ಈಗ ಮಗಳು ನಾಪತ್ತೆಯಾಗಿರುವುದಕ್ಕೂ ಲಿಂಕ್ ಇದ್ಯಾ? ಅಪಾರ್ಟ್‌ಮೆಂಟ್‌ನಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೂ ಈ ರಹಸ್ಯಕ್ಕೂ ಏನು ಸಂಬಂಧ? ಕೊನೆಗೆ ಪ್ರಿಯಾ ತನ್ನ ಮಗಳನ್ನ ಹುಡುಕ್ತಾಳಾ? ಅನ್ನೋದೇ ಈ ಸೀರೀಸ್‌ನ ಕಥೆ.
ಈ ವೆಬ್ ಸೀರೀಸ್‌ನಲ್ಲಿ ನಟಿ ಪೂರ್ಣಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಗಳಿಗಾಗಿ ಒದ್ದಾಡುವ ತಾಯಿ ಪ್ರಿಯಾ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಯೂನಿಕಾರ್ನ್ ಹಾಗೂ ಟ್ರೆಂಡ್ ಲೌಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಸೀರೀಸ್ ಸದ್ಯ ಜೀ5 (ZEE5) ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಇದನ್ನ ನೋಡಬಹುದು. ಒಟ್ಟು 5 ಎಪಿಸೋಡ್‌ಗಳಿದ್ದು, ಪ್ರತಿಯೊಂದು ಎಪಿಸೋಡ್ ಕೇವಲ 20 ನಿಮಿಷ ಇದೆ. ಹೆಚ್ಚು ಸಮಯ ತೆಗೆದುಕೊಳ್ಳದೆ, ಫಾಸ್ಟ್ ಆಗಿ ಸಾಗುವ ಹಾರರ್ ಥ್ರಿಲ್ಲರ್ ನೋಡಲು ಇಷ್ಟಪಡುವವರಿಗೆ 'ಕಣ್ಣಾಮೂಚಿ' ಬೆಸ್ಟ್ ಚಾಯ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.