
ಬೆಂಗಳೂರು(ನ.11): ಮಾಸ್ತಿ ಗುಡಿ ಕ್ಲೈಮ್ಯಾಕ್ಸ್ ಇಬ್ಬರು ಖಳನಟರನ್ನೇ ನುಂಗಿ ಹಾಕಿದೆ. ಸಾಹಸ ಕಂಪೋಜ್ ಮಾಡಿದ ರವಿ ವರ್ಮಾ ಅಂದಿನಿಂದ ತಲೆ ಮರೆಸಿಕೊಂಡಿದ್ದಾರೆ. ಉದಯ್-ಅನಿಲ್ ಅಂತ್ಯಕ್ರಿಯೆಗೂ ಬಂದಿಲ್ಲ. ಇದುವರೆಗೂ ಪೊಲೀಸರಿಗೂ ಶರಣಾಗಲಿಲ್ಲ. ಹಾಗಾದರೆ ಎಲ್ಲಿಗೆ ರವಿ ವರ್ಮಾ ಹೋದರು?
ಸಾಹಸ ನಿರ್ದೇಶಕ ರವಿ ವರ್ಮಾ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಕೆರೆ ಅಂಗಳದಲ್ಲಿದ್ದರು. ಅಂದು ರವಿ ವರ್ಮಾ ಒಂದ್ ಪ್ರಯೋಗ ಮಾಡ್ತಿದ್ದರು. ಅದರ ಬಗ್ಗೆ ಒಂಚೂರು ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಅದನ್ನ ಅಷ್ಟೇ ಗೌಪ್ಯವಾಗಿಯೇ ಇಟ್ಟಿದ್ದರು. ಯಾಕೆ? ಈ ಪ್ರಶ್ನೆಗೆ ಉತ್ತರ ಈಗಲೂ ಸಿಕ್ಕಿಲ್ಲ.
ರವಿ ವರ್ಮಾ ಅಂದು ತೆಗೆದ ದೃಶ್ಯ ಹಲವು.. ಕೊನೆಗೆ ತೆಗೆದಿದ್ದು ಸಾವಿನ ಜಿಗಿತವೇ ಸರಿ. ಖಳನಾಯಕರಾದ ಉದಯ್ ಮತ್ತು ಅನಿಲ್ ಆ ದೃಶ್ಯವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿದ್ದರು. ಆಗ ಅವರ ಪ್ರಾಣ ಪಕ್ಷಿನೂ ಹಾರಿ ಹೋಗಿತ್ತು. ಆದರೆ, ಯಾಕೆ ಬೇಕಿತ್ತು ಈ ಸಾಹಸ. ಮುಗ್ಧ ಮನಸಿನ ಖಳನಟರ ಜೀವಕ್ಕೆ ಬೆಲೆಯೇ ಇಲ್ಲವೇ ಎನ್ನುವುದು ಎಲ್ಲರ ಪ್ರಶ್ನೆ.
ಇಡೀ ಇಂಡಸ್ಟ್ರೀ ಈಗ ರವಿವರ್ಮಾರ ಹೆಸರು ಕೇಳಿದರೆ ಕೆಂಡ ಕಾರುತ್ತಿದೆ. ರವಿವರ್ಮಾ ಎಲ್ಲಿದ್ದಾರೆ. ಉದಯ್-ಅನಿಲ್ ಅಂತ್ಯಕ್ರಿಯೆಗಾದರೂ ಬರಬೇಕಿತ್ತಲ್ಲ ಅಂತಾ ಸಾಹಸ ಕಲಾವಿದ ಬಸವರಾಜ್ ಪ್ರಶ್ನೆ. ರವಿ ವರ್ಮಾ ಕಿಲ್ಲಿಂಗ್ ದೃಶ್ಯ ತೆಗೆದ ಮೇಲೆ ಕೆರೆ ದಡದಲ್ಲಿ ಕೆಲ ಹೊತ್ತು ಇದ್ದರು. ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ದೇಶಕ ನಾಗಶೇಖರ್ ಜೊತೆಗೂ ಚರ್ಚಿಸಿದ್ರು. ತದನಂತರ ರವಿ ವರ್ಮಾ ಕಾಣಿಸಿಕೊಳ್ಳಲಿಲ್ಲ.
ಒಟ್ಟಿನಲ್ಲಿ ರವಿ ವರ್ಮಾ ಮನೆಯಲ್ಲೂ ಇಲ್ಲ. ಉದಯ್-ಅನಿಲ್ ಅಂತ್ಯಕ್ರಿಯೆಗೂ ಬರಲಿಲ್ಲ. ಪೊಲೀಸರಿಗೂ ಸರಂಡರ್ ಆಗಿಲ್ಲ. ಹಾಗಾದರೇ ರವಿವರ್ಮಾ ಎಲ್ಲಿ ಅನ್ನೋದು ಯಕ್ಷಪ್ರಶ್ನೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.