ದಿ ಶಕೀಲ ಚಿತ್ರದ ಪೂರ್ತಿ ವಿವರದ ಜತೆ ಇಂದ್ರಜಿತ್ ಲಂಕೇಶ್

By Kannadaprabha NewsFirst Published Sep 6, 2018, 10:27 AM IST
Highlights

ಶಕೀಲ ಒಂದುಕಾಲದಲ್ಲಿ ವರ್ಷಕ್ಕೆ 170 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಮುಂದೆ ಅವಕಾಶ ವಂಚಿತರಾದಾಗ ಅವರು ಏನೆಲ್ಲಾ ಕಷ್ಟಗಳನ್ನು ಅನುಭವಿಸಿದರು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಪುಟ್ಟಣ್ಣ ಕಣಗಾಲ್ ಅವರ ನಂತರ ಮತ್ತೆ ಕನ್ನಡ ನಿರ್ದೇಶಕರು ನೇರವಾಗಿ ಬಾಲಿವುಡ್ ಸಿನಿಮಾ ನಿರ್ದೇಶಿಸಿಲ್ಲ. ಅಂಥ ಅವಕಾಶ ನನಗೆ ಬಂದಿದೆ.

- ಹೀಗೆ ಹೇಳಿ ಲಾಫಿಂಗ್ ಬುದ್ಧನಂತೆ ನಕ್ಕವರು ಇಂದ್ರಜಿತ್ ಲಂಕೇಶ್. ಬಾಲಿವುಡ್ ಚಿತ್ರಕ್ಕೆ ಕತೆ ಬರೆದು, ಅಲ್ಲಿ ನಿರ್ಮಾಪಕರ ಬ್ಯಾನರ್‌ನಲ್ಲೇ ಕನ್ನಡ ತಂತ್ರಜ್ಞರನ್ನು ಒಳಗೊಂಡು ಬಾಲಿವುಡ್ ಸಿನಿಮಾ ಮಾಡುತ್ತಿರುವ ಕನ್ನಡ ನಿರ್ದೇಶಕ ತಾವೇ ಮೊದಲು ಎಂಬುದು ಇಂದ್ರಜಿತ್ ಅವರ ಹೆಮ್ಮೆಯ ಮಾತು. ಅವರಲ್ಲಿ ಹೀಗೆ ಹೆಮ್ಮೆ ಮೂಡಿಸಿರುವುದು ‘ದಿ ಶಕೀಲಾ’ ಚಿತ್ರ.

ಮಲಯಾಳಂ ಚಿತ್ರರಂಗದ ಶಕೀಲಾ ಜೀವನ ಚರಿತ್ರೆ ಹೇಳುವ ಸಿನಿಮಾ ಇದಾಗಿದ್ದು, ಇಲ್ಲಿ ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸುತ್ತಿದ್ದಾರೆ. ಉಳಿದಂತೆ ಮುಖ್ಯ ಪಾತ್ರಗಳಲ್ಲಿ ಎಸ್ತರ್ ನೊರೊನ್ಹಾ, ಪಂಕಜ್ ತ್ರಿಪಾಠಿ, ರಾಜೀವ್, ಶಿವ ನಟಿಸುತ್ತಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರ ತಯಾರಾಗುತ್ತಿರುವ ಈ ಚಿತ್ರಕ್ಕೆ ಕನ್ನಡ ನಿರ್ದೇಶಕನ ಆ್ಯಕ್ಷನ್-ಕಟ್, ಕನ್ನಡಿಗ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಆ ಒಂದು ನೆಪದಲ್ಲಿ ಚಿತ್ರತಂಡ ಶೂಟಿಂಗ್ ಸೆಟ್‌ನಲ್ಲಿ ಎದುರಾಯಿತು.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ‘ದಿ ಶಕೀಲಾ’ಗೆ ಸಡಗರದಿಂದ ಚಿತ್ರೀಕರಣ ಸಾಗುತ್ತಿತ್ತು. ಮೊದಲು ಮಾತಿಗೆ ನಿಂತವರು ಇಂದ್ರಜಿತ್ ಲಂಕೇಶ್. ‘ಈ ಚಿತ್ರದ ಮೂಲಕ ನಾನೊಬ್ಬನೇ ಬಾಲಿವುಡ್‌ಗೆ ಹೋಗುತ್ತಿಲ್ಲ. ಛಾಯಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್, ಹೀಗೆ ಕನ್ನಡದ ತಂತ್ರಜ್ಞರುಗಳನ್ನು ಕರೆದುಕೊಂಡು ಹೋಗುತ್ತಿರುವೆ. ಇದು ಪೂರ್ಣಪ್ರಮಾಣದ ಹಿಂದಿ ಚಿತ್ರ. ಶಕೀಲಾ ಕುರಿತು ಹೇಳುವು ದಾದರೆ ಇದು ಆಕೆಯ ಬಯೋಪಿಕ್ ಆಗಿಲ್ಲ. ಪ್ರತಿಯೊಬ್ಬ ಮಹಿಳೆಯ ಕತೆಯಾಗಿದೆ. ಚಿತ್ರರಂಗದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ಯಾವ ರೀತಿ ಚಿತ್ರರಂಗಕ್ಕೆ ಬಂದರು. ಸ್ಟಾರ್ ಆದ ಸಮಯದಲ್ಲಿ ಒಂದೇ ದಿನದಲ್ಲಿ 5-6 ಚಿತ್ರಗಳಲ್ಲಿ
ನಟಿಸಿದ್ದರು. ವರ್ಷಕ್ಕೆ 170 ಚಿತ್ರಗಳು ಇವರ ಅಭಿನಯದಲ್ಲಿ ಬಿಡುಗಡೆಯಾಗಿ, ಮುಂದೆ ಅವಕಾಶ ವಂಚಿತರಾದಾಗ ಏನೆಲ್ಲಾ ಕಷ್ಟಗಳನ್ನು ಅನುಭವಿಸಿದರು ಎಂಬುದನ್ನು ಹೇಳಲಾಗಿದೆ.ಶುರು ಮಾಡುವ ಮುನ್ನ ಶಕೀಲಾರನ್ನು ಭೇಟಿ ಮಾಡಿ ಅವರು ಆಡಿದ ಮಾತುಗಳನ್ನು ದಾಖಲಿಸಿಕೊಂಡು ಇದಕ್ಕೆ ಕತೆ ಮಾಡಿಕೊಂಡಿದ್ದೇನೆ. ಅವರ ಬಾಲ್ಯ, ಯೌವ್ವನ, ಕುಟುಂಬಕ್ಕಿಂತ ಹೆಚ್ಚಾಗಿ ಅವರ ಚಿತ್ರಜೀವನವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂಬುದು ಇಂದ್ರಜಿತ್ ಲಂಕೇಶ್ ಮಾತು.

ಶಕೀಲಾ ಅವರಿಂದಲೇ ಒಂದಿಷ್ಟು ಸಲಹೆಗಳನ್ನು ಪಡೆದುಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದು ರಿಚಾ ಚಡ್ಡಾ. ಸಂತೋಷ್ ರೈ ಪಾತಾಜೆ, ಸಂದೀಪ್ ಮಲಾನಿ, ಎಸ್ತಾರ ನೊರೊನ್ಹಾ ಮುಂತಾದವರು ಚಿತ್ರದ ಕುರಿತು ಹೇಳಿಕೊಂಡರು.

click me!