‘ಏನೇ ಆಗಲಿ ಈ ವರ್ಷ ಒಂದು ಟ್ರಿಪ್ ಮಾಡಲೇಬೇಕು ಎಂದುಕೊಂಡಿದ್ದ ನನಗೆ ಫ್ರಾನ್ಸ್ ಮತ್ತು ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗುವ ಅವಕಾಶ ನನ್ನ ಆಪ್ತ ಸ್ನೇಹಿತೆಯ ಮೂಲಕ ಸಿಕ್ಕಿತು’ ಎನ್ನುವ ಆಶಿಕಾ ರಂಗನಾಥ್ ಹತ್ತು ದಿನಗಳ ಕಾಲ ಫ್ರಾನ್ಸ್‌ನ ಬೀದಿ ಬೀದಿ, ಪ್ರಸಿದ್ಧ ಸ್ಥಳಗಳು, ಸ್ವಿಜರ್‌ಲ್ಯಾಂಡ್‌ನ ಸುಂದರವಾದ ಬೆಟ್ಟ ಗುಡ್ಡಗಳು, ಕಾಡುಗಳಲ್ಲಿ ಸುತ್ತಾಡಿ ಬಂದಿದ್ದಾರೆ.
ಮೋಸ್ಟ್ ಮೊಮೋರಬಲ್ ಈವೆಂಟ್.
ಸ್ನೇಹಿತೆಯ ಅಣ್ಣ ಫ್ರಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಭೇಟಿ ಮಾಡುವುದರೊಂದಿಗೆ ಹೀಗೊಂದು ವಿದೇಶಿ ಪ್ರವಾಸಕ್ಕೆ ತರಾತುರಿಯಲ್ಲಿ ತಯಾರಿ ಮಾಡಿಕೊಂಡು ವಿಮಾನವೇರಿದ ಆಶಿಕಾ ನಾಲ್ಕು ದಿನ ಫ್ರಾನ್ಸ್ ಸುತ್ತಿದ್ದಾರೆ. ‘ಒಂದು ಸ್ಥಳಕ್ಕೆ ಹೋದಮೇಲೆ ಅಲ್ಲಿ ಏನೇನೋ ಪ್ರಸಿದ್ಧವೋ ಅದನ್ನೆಲ್ಲಾ ನೋಡಬೇಕು ಎನ್ನುವ ಆಸೆ ಇರುತ್ತದೆ. ನಮಗೂ ಆ ಆಸೆ ಇತ್ತು. ಪ್ರಸಿದ್ಧ ಐಫೆಲ್ ಟವರ್, ಮೋನಾಲಿಸಾ ಪೈಟಿಂಗ್ಸ್ ಮ್ಯೂಸಿಯಂ, ಚರ್ಚ್‌ಗಳು, ಅರಮನೆಗಳು ಸೇರಿ ಹಲವಾರು ಸ್ಥಳಗಳನ್ನು ನೋಡಿದೆವು. ಅದರೊಂದಿಗೆ ಅಲ್ಲಿನ ಗಲ್ಲಿ ಗಲ್ಲಿಗಳನ್ನು ಸುತ್ತುವುದನ್ನು ಮಿಸ್ ಮಾಡಿಕೊಳ್ಳಲಿಲ್ಲ. ಸುತ್ತಾಟ ಎಂದರೆ ಅದು ಖುಷಿ ತುಂಬುತ್ತಲೇ ಹೊಸ ಅನುಭವವನ್ನು ಕೊಡುತ್ತದೆ. ಆ ಖುಷಿಯನ್ನು ಎಂಜಾಯ್ ಮಾಡುತ್ತಾ, ಅನುಭವ ಗಳಿಸುತ್ತಾ ಹೋದರೆ ಲೈಫ್ ಇಸ್ ಬ್ಯೂಟಿಫುಲ್’ ಎನ್ನುತ್ತಾರೆ ಆಶಿಕಾ.
ಸ್ವಿಸ್‌ಗೆ ಅನಿರೀಕ್ಷಿತ ಭೇಟಿ
‘ನಾವು ಫ್ರಾನ್ಸ್‌ಗೆ ಹೋಗಬೇಕು ಎಂದು ಅವಸರದಲ್ಲಿ ತೀರ್ಮಾನ ಮಾಡಿ ಹೊರಟೆವು. ಅದೇ ರೀತಿ ಸುಮ್ಮನೆ ಡ್ರೈವ್ ಮಾಡೋಣ ಎಂದುಕೊಂಡು ಹೋಗಿ ಅನಿರೀಕ್ಷಿತವಾಗಿ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಿದ್ದೆವು. ಫ್ರಾನ್ಸ್ ಮತ್ತು ಸ್ವಿಡ್ಜರ್‌ಲ್ಯಾಂಡ್ ನನಗೆ ಎರಡು ರೀತಿಯ ಅನುಭವ ನೀಡಿದವು. ಫ್ರಾನ್ಸ್ ಸಿಟಿ ಲೈಫ್ ರೀತಿ. ಆದರೆ ಸ್ವಿಡ್ಜರ್‌ಲ್ಯಾಂಡ್ ಪ್ರಾಕೃತಿಕವಾಗಿ ತುಂಬಾ ಸುಂದರವಾಗಿ ಇರುವ ದೇಶ. ಅಲ್ಲಿನ ಕಾಡುಗಳು, ಬೆಟ್ಟ ಗುಡ್ಡಗಳ ನಡುವೆ ಕಳೆದ ಕ್ಷಣಗಳಿಗೆ ಅವುಗಳೇ ಸಾಟಿ. ನನಗೆ ಮೊದಲಿನಿಂದಲೂ ಪ್ರಕೃತಿಯ ಮಡಿಲಲ್ಲಿ ಇರುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ನನಗೆ ತುಂಬಾ ಖುಷಿಕೊಟ್ಟ ಘಳಿಗೆಗಳು ಸ್ವಿಡ್ಜರ್‌ಲ್ಯಾಂಡ್‌ನ ಪ್ರಕೃತಿಯ ಮಡಿಲಿನಲ್ಲಿ ಇದ್ದಂತಹವು’ ಎನ್ನುವ ಆಶಿಕಾ ಇದೇ ವೇಳೆಯಲ್ಲಿ ಎರಡು ಅಪರೂಪದ ಸನ್ನಿವೇಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದೇಶದಲ್ಲಿ ಮೊದಲ ಬರ್ತ್‌ಡೇ
ಎಲ್ಲರಿಗೂ ತಮ್ಮ ಬರ್ತ್ ಡೇ, ವೆಡ್ಡಿಂಗ್ ಡೇ ಅಲ್ಲಿ ಆಚರಿಸಿಕೊಳ್ಳಬೇಕು, ಹಾಗೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಆದರೆ ಆಶಿಕಾ ಅವರ ಪಾಲಿಗೆ ತಮ್ಮ ಇಪ್ಪತ್ತ್ಮೂರನೇ ವರ್ಷದ ಬರ್ತ್‌ಡೇ ಅನ್ನು ವಿಶಿಷ್ಟವಾಗಿ ತಾವು ಇಷ್ಟಪಡುವ ಪ್ರಕೃತಿಯ ತಟದಲ್ಲಿ ಆಚರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ‘ನಾನು ಮೊದಲ ಬಾರಿಗೆ ನನ್ನ ಬರ್ತ್ ಡೇ ಅನ್ನು ವಿದೇಶದಲ್ಲಿ ಆಚರಣೆ ಮಾಡಿಕೊಂಡೆ. ಅದು ಖುಷಿ ಕೊಟ್ಟ ವಿಚಾರ. ಜೊತೆಗೆ ಮೊದಲ ಬಾರಿಗೆ ನನ್ನ ಫ್ಯಾಮಿಲಿಯನ್ನು ಹೊರತಾಗಿಸಿ ಬತ್ ಡೇರ್ ಆಚರಣೆ ಮಾಡಿಕೊಂಡಿದ್ದಕ್ಕೆ ಸ್ವಲ್ಪ ನೋವಿತ್ತು. ನಾನು ನನ್ನ ಸ್ನೇಹಿತೆ ಇಬ್ಬರೇ ಇದ್ದ ಆ ಕ್ಷಣದಲ್ಲಿ ನನ್ನ ಬರ್ತ್‌ಡೇ ಅನ್ನು ಸೆಲಬ್ರೇಟ್ ಮಾಡಿದ್ದು ಅಪರೂಪದಲ್ಲಿ ಅಪರೂಪದ ಕ್ಷಣ’ ಎಂದು ತಮ್ಮ ವಿಶಿಷ್ಟ ಹುಟ್ಟು ಹಬ್ಬದ ಆಚರಣೆ ಬಗ್ಗೆ ತುಂಬು ಸಂತೋಷದಿಂದ ಹೇಳುತ್ತಾರೆ ಆಶಿಕಾ.
ಯುರೋಪ್ ಅನ್ನು ಮೆಚ್ಚುತ್ತಾ..
ಆಶಿಕಾಗೆ ಯುರೋಪ್ ಖಂಡದ ಎರಡು ದೇಶಗಳಲ್ಲಿ ಕಳೆದ ಕ್ಷಣಗಳು ಸುಂದರವಾದ ಅನುಭವ ನೀಡಿವೆ. ಅಲ್ಲಿನ ಶಿಸ್ತು, ಸಮಯಪಾಲನೆ, ಜನರು ಆತ್ಮೀಯವಾಗಿ ಬೆರೆಯುವ ರೀತಿ, ಎಲ್ಲವೂ ಇಷ್ಟವಾಗಿದೆ. ತಮ್ಮದೇ ಕಾರ್ ಅನ್ನು ಪಾರ್ಕಿಂಗ್ ಮಾಡಲು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡುವಾಗ ನಮ್ಮ ವ್ಯವಸ್ಥೆಯ ಬಗ್ಗೆ ಸಣ್ಣ ಬೇಸರವೂ ಆಗಿದೆ. ‘ನಾವು ಕಾರ್ ಪಾರ್ಕ್ ಮಾಡಲು ಎರಡು ತಾಸು ಸುತ್ತಾಡಿದೆವು. ಅಂದರೆ ಅಲ್ಲಿನ ಕಾನೂನುಗಳು ತುಂಬಾ ಬಗಿ. ಯಾರೇ ತಪ್ಪು ಮಾಡಿದರೂ ಅದಕ್ಕೆ ತಕ್ಕ ಶಿಕ್ಷೆಯನ್ನು ಅಲ್ಲಿಯೇ ಕೊಡುತ್ತಾರೆ. ಹಾಗಾಗಿ ಅಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಸಾಗುತ್ತದೆ. ಆದರೆ ನಮ್ಮಲ್ಲಿ ಈ ರೀತಿ ಇಲ್ಲ. ಇವಾಗಿವಾಗ ಒಂದಷ್ಟು ಬದಲಾವಣೆ ಕಂಡುಬರುತ್ತಿದೆ. ಜೊತೆಗೆ ಅಲ್ಲಿನ ಮಂದಿ ತುಂಬಾ ಭಾಷಾಭಿಮಾನಿಗಳು. ಫ್ರೆಂಚ್ ಬಿಟ್ಟು ಬೇರೆ ಭಾಷೆ ಮಾತಾಡುವುದಿಲ್ಲ.
ಬೆಳಿಗ್ಗೆ ಮುಂದೆ ಸಿಕ್ಕರೆ, ಹಲೋ, ಗುಡ್ ಮಾರ್ನಿಂಗ್ ಎಂದು ಹೇಳಿ ಚೆಂದದೊಂದು ನಕ್ಕು ಚಿಮ್ಮಿಸಿ ಹೋಗುತ್ತಾರೆ. ಇದು ನಮ್ಮಲ್ಲೊಂದು ಪಾಸಿಟೀವ್ ಫೀಲ್ ತುಂಬುತ್ತೆ. ನನಗೆ ಅಲ್ಲಿನ ಜನಗಳು, ಅವರ ಸಂಸ್ಕೃತಿ ನೋಡಿದಾಗ ತುಂಬಾ ಖುಷಿ ಆಯ್ತು. ಇನ್ನಷ್ಟು ಜನರನ್ನು ಕಾಣಬೇಕು, ಅವರ ಸಂಸ್ಕೃತಿ ತಿಳಿಯಬೇಕು, ಮತ್ತಷ್ಟು ದೇಶಗಳನ್ನು ಸುತ್ತಬೇಕು ಎನ್ನಿಸಿತು. ಮುಂದೆ ಸಾಧ್ಯವಾದಾಗೆಲ್ಲಾ ಈ ರೀತಿಯ ಟ್ರಿಪ್‌ಗಳನ್ನು ಮಾಡುತ್ತಲೇ ಇರುವೆ’ ಎನ್ನುತ್ತಾರೆ ಆಶಿಕಾ ರಂಗನಾಥ್
ದೇಶ ಸುತ್ತಿ ಆನಂದ, ಅನುಭವ ಪಡೆಯಿರಿ
‘ನಾನೊಬ್ಬಳು ನಟಿಯಾಗಿ, ಸಿನಿಮಾ ಪ್ರೇಕ್ಷಕಿಯಾಗಿ ಸಾಕಷ್ಟು ಪಾತ್ರಗಳನ್ನು ತೆರೆಯಮೇಲೆ ನೋಡಿದ್ದೇನೆ. ನೋಡುತ್ತಲೂ ಇದ್ದೇನೆ. ಅವುಗಳು ನನ್ನ ಮೇಲೆ ವಿವಿಧ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಪರಿಣಾಮ ಬೀರಿವೆ. ಆದರೆ ಪ್ರವಾಸ ಎಂದು ಹೊರಗೆ ಹೊರಟಾಗ ಬೇರೆ ಬೇರೆ ರೀತಿಯ ವ್ಯಕ್ತಿಗಳು ನನ್ನ ಮುಂದೆ ವಿವಿಧ ಪಾತ್ರಗಳಾಗಿ ಕಾಣುತ್ತಾರೆ. ನಾನು ಕಂಡ ಎಷ್ಟೋ ಪಾತ್ರಗಳು ಜೀವಂತವಾಗಿ ಕಾಣುತ್ತಿವೆ ಎನ್ನುವ ಫೀಲ್ ಕೂಡ ನನಗೆ ಬಂದಿತ್ತು. ಕಡೆಯದಾಗಿ ನಾನು ಹೇಳುವುದು ಯಾರೇ ಆಗಲಿ ದೇಶ ಸುತ್ತಿದರೆ ಅನುಭವದ ಜೊತೆಗೆ ಆನಂದವೂ ಸಿಗುತ್ತದೆ’ ಎಂದು ಹೇಳುತ್ತಾ ದೇಶ ಸುತ್ತಾಡಿ ಬನ್ನಿ ಎಂದು ಹೇಳುತ್ತಾರೆ ಆಶಿಕಾ.