ಕನ್ನಡದಲ್ಲಿ ಮತ್ತೊಬ್ಬ ನಾಯಕ ನಟ ನಿರ್ದೇಶಕನಾಗತ್ತಿದ್ದಾರೆ. ಈ ಹಿಂದೆ ಮದರಂಗಿ ಕೃಷ್ಣ ನಿರ್ದೇಶಕರಾಗಿದ್ದರು. ಈಗ ನೀನಾಸಂ ಸತೀಶ್ ಸರದಿ.
ಹೌದು, ನಟ ಸತೀಶ್ ಈಗ ನಿರ್ದೇಶಕನಾಗಲು ಹೊರಟಿದ್ದಾರೆ. ಸದ್ಯ ‘ಅಯೋಗ್ಯ’ ಸಿನಿಮಾ ಕೊಟ್ಟಯಶಸ್ಸಿನಿಂದ ‘ಚಂಬಲ್’ ಬಿಡುಗಡೆಯ ಸಂಭ್ರಮದಲ್ಲಿರುವ ನೀನಾಸಂ ಸತೀಶ್, ಈ ನಡುವೆ ತಮಿಳು ಚಿತ್ರವೊಂದಕ್ಕೂ ಹೀರೋ ಆಗಿದ್ದಾರೆ.
ಈ ಎಲ್ಲ ಚಿತ್ರಗಳ ಕೆಲಸ ಮುಗಿಯುತ್ತಿದ್ದಂತೆಯೇ ತಾವೇ ಒಂದು ಸಿನಿಮಾ ನಿರ್ದೇಶಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ತಾವೇ ಒಂದು ಕತೆ ಬರೆದುಕೊಂಡಿದ್ದು, ಅದಕ್ಕೆ ಹೊಸ ವರ್ಷದಂದು ಸಿನಿಮಾ ರೂಪ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
Tap to resizeLatest Videos
‘ಇದು ನನ್ನೊಳಗೆ ಹುಟ್ಟಿಕೊಂಡಿರುವ ಆಪ್ತವಾದ ಕತೆ. ಇದನ್ನು ನಾನೇ ನಿರ್ದೇಶಿಸಬೇಕು ಎಂಬುದು ನನ್ನ ಆಸೆ. ಹೀಗಾಗಿ ಈಗ ಚಂಬಲ್ ಸಿನಿಮಾ ಮುಗಿಸಿದ್ದೇನೆ. ಸದ್ಯಕ್ಕೆ ತಮಿಳು ಚಿತ್ರ ಸೆಟ್ಟೇರಿದೆ. ಇದನ್ನು ಮುಗಿಸಿಕೊಂಡು ನನ್ನ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಹೊಸ ರೀತಿಯ ಕತೆ ಇದಾಗಿದೆ. ನನ್ನ ಇಮೇಜಿನ ಕತೆ ಎನ್ನುವುದಕ್ಕಿಂತ ಪ್ರೇಕ್ಷಕರು ಯಾವ ರೀತಿಯ ಕತೆಗಳನ್ನು ಇಷ್ಟಪಡುತ್ತಿದ್ದಾರೆ ಎಂಬುದನ್ನು ಹತ್ತಿರದಿಂದ ನೋಡಿ ಬರೆದಿರುವ ಕತೆ ಇದು’ ಎನ್ನುತ್ತಾರೆ ನೀನಾಸಂ ಸತೀಶ್.
ಅಂದಹಾಗೆ ನೀನಾಸಂ ಸತೀಶ್ ಅವರ ಈ ಚಿತ್ರದ ಫಸ್ಟ್ ಲುಕ್ ಹೊಸ ವರ್ಷಕ್ಕೆ ಅನಾವರಣಗೊಳ್ಳಲಿದೆ. ನಿರ್ದೇಶನದ ಜತೆಗೆ ನಾಯಕನಾಗಿ ಸತೀಶ್ ಕಾಣಿಸಿಕೊಳ್ಳಲಿದ್ದಾರೆ.