
ವಾಷಿಂಗ್ಟನ್(ಜೂ.15): ಬಾಲಿವುಡ್ ನಟರಿಗೆ ಭಾರತದಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಸಾಕಾಗಿ ಹೋಗಿದೆ. ಇದೇ ಕಾರಣಕ್ಕೆ ಇದೀಗ ದೂರದ ಅಮೆರಿಕದಲ್ಲೂ ಇವರುಗಳ ವಿರುದ್ದ ಮೊಕದ್ದಮೆ ದಾಖಲಾಗುತ್ತಿವೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟರಾದ ರಣವೀರ್ ಸಿಂಗ್, ನಿರ್ದೇಶಕ ಪ್ರಭುದೇವ್, ನಟಿಯರಾದ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಸಂಗೀತ ಕಾರ್ಯಕ್ರಮ ನಡೆಸಿ ಕೊಡುವುದಾಗಿ ಹೇಳಿ ಮುಂಗಡವಾಗಿ ಹಣ ಪಡೆದ ಈ ಎಲ್ಲ ಸೆಲಿಬ್ರಿಟಿಗಳು ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ಕೈ ಕೊಟ್ಟಿದ್ದಾರೆ ಎಂಬುದೇ ಇವರುಗಳ ಮೇಲಿರುವ ಆರೋಪ.
ಈ ಕುರಿತು ಚಿಕಾಗೋ ಮೂಲದ ವಿಬ್ರಾಂತ್ ಮಾಧ್ಯಮ ಸಮೂಹ ಇಲ್ಲಿನೊಯಿಸ್ ಉತ್ತರ ಜಿಲ್ಲಾ ನ್ಯಾಯಾಲಯದಲ್ಲಿ ಜೂ.10 ರಂದು ದೂರು ದಾಖಲಿಸಿದೆ. ಇದೇ ರೀತಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ಹಿನ್ನೆಲೆ ಗಾಯಕರಾದ ಉದಿತ್ ನಾರಾಯಣ್, ಅಲ್ಕಾ ಯಾಗ್ ನಿಕ್ ಮತ್ತು ಉಷಾ ಮಂಗೇಶ್ಕರ್ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ.
ಭಾರತೀಯ ಸಿನಿಮಾದ ಶತಮಾನೋತ್ಸವ ಅಂಗವಾಗಿ ಸೆಪ್ಟೆಂಬರ್ 1, 2013ರಲ್ಲಿ ಅಮೆರಿಕಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿಈ ನಟರು ಪ್ರದರ್ಶನ ನೀಡಲೂ ಒಪ್ಪಿ ನಂತರ ರದ್ದುಗೊಳಿಸಿದ್ದರು. ಕಾನೂನು ತೊಂದರೆಯಿಂದಾಗಿ ಸಲ್ಮಾನ್ ಖಾನ್ ಅಮೆರಿಕಾಕ್ಕೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು .
ದೂರಿನ ಪ್ರಕಾರ ಚಿಕಾಗೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಲ್ಮಾನ್ ಖಾನ್ ಗೆ 200, 000 ಡಾಲರ್, ಕತ್ರಿನಾ ಕೈಫ್ ಗೆ 40,000 ಡಾಲರ್ , ಸೊನಾಕ್ಷಿ ಸಿನ್ಹಾಗೆ 36, 000 ಡಾಲರ್ ನೀಡಲಾಗಿದೆ. ಆದರೆ, ಅವರು ಹಣ ವಾಪಾಸ್ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.