ಒಪ್ಪಿಕೊಂಡಿದ್ದ ಒಂದೇ ಒಂದು ಕನ್ನಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

By Kannadaprabha News  |  First Published Sep 18, 2018, 9:38 AM IST

ರಶ್ಮಿಕಾ ಮಂದಣ್ಣ ಕಡೆಯಿಂದ ಬೇಸರದ ಸುದ್ದಿ ಬಂದಿದೆ. ಅವರು ತುಂಬಾ ಖುಷಿಯಿಂದ ಒಪ್ಪಿಕೊಂಡ ‘ವೃತ್ರ’ ಚಿತ್ರದಿಂದ ಹೊರ ನಡೆದಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ: ನನ್ನ ಸಿನಿಮಾ ಕೆರಿಯರ್‌ನ ಆರಂಭದ ಹಂತದಲ್ಲಿ ಈ ಚಿತ್ರ ಒಪ್ಪಿಕೊಂಡಿದ್ದು ಸರಿಯಾದ ನಿರ್ಧಾರ ಆಗಿರಲಿಲ್ಲ.


ಗೌತಮ್ ಅಯ್ಯರ್ ಎಂಬ ಹುಡುಗನ ಈ ಚಿತ್ರ ಒಪ್ಪಿಕೊಂಡ ಸಂದರ್ಭದಲ್ಲಿ ರಶ್ಮಿಕಾ ತುಂಬಾ ಎಕ್ಸೈಟ್ ಆಗಿದ್ದರು. ಅಪ್ಪನಿಗೆ ತಾನು ಪೊಲೀಸ್ ಅಧಿಕಾರಿ ಆಗಬೇಕು ಅನ್ನೋ ಆಸೆ ಇತ್ತು, ಅವರ ಆಸೆ ಈಗ ಪೂರೈಸಿದೆ. ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ ಈಗ ಪ್ಲೇಟ್ ಉಲ್ಟಾ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಪ್ರೀತಿಸಿದ ಹುಡುಗಿ ತನ್ನ ಹುಡುಗನಿಗೆ ಬ್ರೇಕಪ್ ಸುದ್ದಿ ಹೇಳುವಾಗ ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಅನ್ನುವ ಥರ ರಶ್ಮಿಕಾ ಕೂಡ ಬೇರೆ ನಟಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಕುರಿತು ನಿರ್ದೇಶಕ ಗೌತಮ್ ಕೊಟ್ಟ ಕಾರಣ: ಅವರಿಗೆ ಡೇಟ್ ಸಮಸ್ಯೆಯಾಗುತ್ತದೆ. ಹಾಗಾಗಿ ಇಬ್ಬರೂ ಕೂತು ಮಾತನಾಡಿ ಈ ಚಿತ್ರದಿಂದ ರಶ್ಮಿಕಾ ಅವರನ್ನು ಬೀಳ್ಕೊಟ್ಟಿದ್ದೇವೆ.

ರಶ್ಮಿಕಾ ಹೇಳಿದ್ದಕ್ಕೂ ಇವರ ಉತ್ತರಕ್ಕೂ ತಾಳೆಯಾಗಲಿಲ್ಲ. ಹಾಗಾಗಿ ರಶ್ಮಿಕಾ ಕಾರಣವನ್ನು ಹೇಳಿದಾಗ ಗೌತಮ್, ‘ಇದೊಂದು ಮಹಿಳಾ ಪ್ರಧಾನ ಚಿತ್ರವಾದ್ದರಿಂದ ಕೆರಿಯರ್‌ನ ಆರಂಭದಲ್ಲೇ ಇಂಥ ಆ ಚಿತ್ರ ಮಾಡುವುದು ಸರಿಯಲ್ಲ ಅನ್ನೋ ಭಾವನೆ ಅವರದು ಅನ್ನಿಸುತ್ತದೆ’ ಎಂದರು. ಪಾಪ ನಿರ್ದೇಶಕ ಇನ್ನೇನು ತಾನೇ ಮಾಡಲಾಗುತ್ತದೆ. ಹೇಳಿಕೇಳಿ ಈ ಗೌತಮ್ ಅಯ್ಯರ್ ಅವರು ರಕ್ಷಿತ್ ಶೆಟ್ಟಿ ಕ್ಯಾಂಪಿನ ಹುಡುಗ. ಪರಂವಾಹ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದವರು.

Tap to resize

Latest Videos

ಹೋಗ್ಲಿಬಿಡಿ ಈ ಕುರಿತಂತೆ ರಶ್ಮಿಕಾ ಅವರಿಗೆ ಸಂಪರ್ಕಿಸಲು ಯತ್ನಿಸಿದರೆ ಅವರು ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆಪ್ತರ ಬಳಿ ಹೇಳಿಸಿದರೆ ನನಗೆ ಮಾತನಾಡಲು ಏನಿಲ್ಲ ಎಂದರಂತೆ. ಇಷ್ಟಕ್ಕೂ ಅವರಿಗೆ ಕನ್ನಡದಲ್ಲಿ ಬೇರೆ ಚಿತ್ರಗಳಿಲ್ಲ. ‘ಯಜಮಾನ’ ಚಿತ್ರೀಕರಣ ಮುಗಿದಿದೆ. ತೆಲುಗಿನಲ್ಲಿ ನಾಗಾರ್ಜುನ, ನಾನಿ ಚಿತ್ರ ಮುಗಿದಿದೆ. ವಿಜಯ್ ದೇವರಕೊಂಡ ಜತೆಗೆ ‘ಡಿಯರ್ ಕಾಮ್ರೇಡ್’ ಚಿತ್ರೀಕರಣ ಬಹುಶಃ ನಡೆಯುತ್ತಿರಬೇಕು. ನಿತಿನ್ ಜತೆಗಿನ ಚಿತ್ರ ಶುರುವಾದಂತಿಲ್ಲ. ಜೂ.ಎನ್‌ಟಿಆರ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎನ್ನಲಾಗಿದ್ದರೂ ಅಧಿಕೃತವಾಗಿಲ್ಲ. ಅಂಥದ್ದರಲ್ಲಿ ಯಾವ ಡೇಟ್ ಸಮಸ್ಯೆಯಾಗಿದೆ ಅನ್ನುವುದನ್ನು ಮೇಡಂ ತಿಳಿಸಬೇಕಿತ್ತು. ಆದರೆ ಅವರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ. ಆದಷ್ಟು ಬೇಗ ತಮ್ಮನ್ನು ಬೆಳೆಸಿದ ಕನ್ನಡದ ಅಭಿಮಾನಿಗಳಿಗೆ ಚಿತ್ರ ಜೀವನ ಕುರಿತಂತೆ ಏನಾದರೂ ಹೇಳುತ್ತಾರೆ ಎಂಬ ಆಶಾ ಭಾವನೆ ಇಟ್ಟುಕೊಳ್ಳೋಣ

click me!