ಪಾಕಿಸ್ತಾನದಲ್ಲಿದೆ ರಣಬೀರ್ ಕಪೂರ್ ಮನೆ: 'ರಾಮಾಯಣ' ನಟನ 100 ವರ್ಷ ಹಳೆಯ ಹವೇಲಿ ಉಳಿಸಲು ₹200 ಕೋಟಿ ಬೇಡಿಕೆ!

Published : Nov 08, 2026, 08:15 AM IST
Ramayana ranbir kapoor ancestral home kapoor haveli pakistan peshawar

ಸಾರಾಂಶ

ಬಾಲಿವುಡ್‌ನ ಕಪೂರ್ ಕುಟುಂಬಕ್ಕೆ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವಿದೆ. ಪೃಥ್ವಿರಾಜ್ ಕಪೂರ್, ರಾಜ್ ಕಪೂರ್‌ನಿಂದ ಹಿಡಿದು ರಣಬೀರ್ ಕಪೂರ್‌ವರೆಗೆ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿವೆ. ಆದರೆ ಈ ಕುಟುಂಬದ ಬೇರುಗಳು ಭಾರತದಾಚೆಗೂ ಹರಡಿವೆ ಎಂಬುದು ನಿಮಗೆ ಗೊತ್ತೇ?

ಬಾಲಿವುಡ್‌ನ ಕಪೂರ್ ಕುಟುಂಬಕ್ಕೆ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವಿದೆ. ಪೃಥ್ವಿರಾಜ್ ಕಪೂರ್, ರಾಜ್ ಕಪೂರ್‌ನಿಂದ ಹಿಡಿದು ರಣಬೀರ್ ಕಪೂರ್‌ವರೆಗೆ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿವೆ. ಆದರೆ ಈ ಕುಟುಂಬದ ಬೇರುಗಳು ಭಾರತದಾಚೆಗೂ ಹರಡಿವೆ ಎಂಬುದು ನಿಮಗೆ ಗೊತ್ತೇ? ಹೌದು, ಪಾಕಿಸ್ತಾನದ ಪೇಶಾವರದಲ್ಲಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಕಪೂರ್ ಹವೇಲಿ ಈ ಕುಟುಂಬದ ಐತಿಹಾಸಿಕ ನೆನಪುಗಳನ್ನು ತನ್ನೊಳಗೆ ಉಳಿಸಿಕೊಂಡಿದೆ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಳೆಯ ಪೇಶಾವರ ನಗರದ ಪ್ರಸಿದ್ಧ ಕಿಸ್ಸಾ ಖ್ವಾನಿ ಬಜಾರ್‌ನಲ್ಲಿರುವ ಈ ಭವ್ಯ ಕಟ್ಟಡ ಕಪೂರ್ ಕುಟುಂಬದ ಪೂರ್ವಜರ ಮನೆ. ಒಂದು ಕಾಲದಲ್ಲಿ ಕುಟುಂಬದ ವೈಭವದ ಸಂಕೇತವಾಗಿದ್ದ ಈ ಹವೇಲಿ ಇಂದು ಶಿಥಿಲಾವಸ್ಥೆಯಲ್ಲಿದ್ದು, ಅದರ ಸಂರಕ್ಷಣೆ ಕುರಿತು ಚರ್ಚೆಗಳು ನಡೆಯುತ್ತಿವೆ.

1918ರಿಂದ 1922ರ ನಡುವೆ ನಿರ್ಮಾಣವಾದ ಹವೇಲಿ

ಕಪೂರ್ ಹವೇಲಿಯನ್ನು ರಣಬೀರ್ ಕಪೂರ್ ಅವರ ಮುತ್ತಜ್ಜನ ತಂದೆ ದಿವಾನ್ ಬಶೇಶ್ವರನಾಥ್ ಕಪೂರ್ ಅವರು 1918ರಿಂದ 1922ರ ನಡುವೆ ನಿರ್ಮಿಸಿದರು ಎನ್ನಲಾಗಿದೆ. ಬಹುಮಹಡಿ ಕಟ್ಟಡವಾಗಿದ್ದ ಈ ಹವೇಲಿ ಆರಂಭದಲ್ಲಿ ಕಪೂರ್ ಕುಟುಂಬದ ಭವ್ಯ ನಿವಾಸವಾಗಿತ್ತು.ಸುಮಾರು 40 ಕೋಣೆಗಳನ್ನು ಹೊಂದಿದ್ದ ಈ ಕಟ್ಟಡದಲ್ಲಿ ಸುಂದರ ಬಾಲ್ಕನಿಗಳು, ಜರೋಕಾಗಳು ಮತ್ತು ಹೂವಿನ ವಿನ್ಯಾಸದ ಕೆತ್ತನೆಗಳು ಗಮನ ಸೆಳೆಯುತ್ತಿದ್ದವು. ಅಂದಿನ ವಾಸ್ತುಶಿಲ್ಪದ ಸೊಬಗಿಗೆ ಈ ಮನೆ ಸಾಕ್ಷಿಯಾಗಿತ್ತು.

ರಾಜ್ ಕಪೂರ್ ಜನಿಸಿದ್ದು ಇದೇ ಮನೆಯಲ್ಲಿ!

ಕಪೂರ್ ಕುಟುಂಬದ ಚಿತ್ರರಂಗದ ಇತಿಹಾಸಕ್ಕೆ ಈ ಮನೆ ವಿಶೇಷವಾಗಿ ಸಂಬಂಧಿಸಿದೆ. ರಣಬೀರ್ ಕಪೂರ್ ಅವರ ಮುತ್ತಜ್ಜ ಹಾಗೂ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ಪೃಥ್ವಿರಾಜ್ ಕಪೂರ್ ಇದೇ ಮನೆಯಲ್ಲಿ ಜನಿಸಿದ್ದರು. ಅವರ ನಂತರ ಬಾಲಿವುಡ್‌ನ ದಂತಕಥೆ ರಾಜ್ ಕಪೂರ್ ಕೂಡ 1924ರಲ್ಲಿ ಇದೇ ಮನೆಯಲ್ಲಿ ಜನಿಸಿದ್ದರು.ಹೀಗಾಗಿ ಕಪೂರ್ ಹವೇಲಿ ಕೇವಲ ಒಂದು ಹಳೆಯ ಕಟ್ಟಡವಲ್ಲ. ಭಾರತೀಯ ಚಿತ್ರರಂಗದ ಪ್ರಸಿದ್ಧ ಕುಟುಂಬವೊಂದರ ಹಲವು ತಲೆಮಾರುಗಳ ನೆನಪುಗಳನ್ನು ಹೊತ್ತಿರುವ ಐತಿಹಾಸಿಕ ತಾಣವಾಗಿದೆ.

ದೇಶ ವಿಭಜನೆಯ ಬಳಿಕ ಮುಂಬೈಗೆ ಸ್ಥಳಾಂತರ

1947ರಲ್ಲಿ ಭಾರತ ವಿಭಜನೆಯಾದ ಸಂದರ್ಭದಲ್ಲಿ ಕಪೂರ್ ಕುಟುಂಬ ಪಾಕಿಸ್ತಾನದಲ್ಲಿದ್ದ ತಮ್ಮ ಪೂರ್ವಜರ ಮನೆಯನ್ನು ತೊರೆದು ಮುಂಬೈಗೆ ಸ್ಥಳಾಂತರಗೊಂಡಿತು. ಹೀಗೆ ಪೇಶಾವರದಲ್ಲಿದ್ದ ಕುಟುಂಬದ ನಂಟು ನಿಧಾನವಾಗಿ ದೂರವಾಯಿತು.ಆದರೆ ಈ ಮನೆಯೊಂದಿಗಿನ ಭಾವನಾತ್ಮಕ ಸಂಬಂಧ ಮಾತ್ರ ಮುಂದುವರಿದಿತ್ತು. 1990ರ ದಶಕದ ಆರಂಭದಲ್ಲಿ ರಣಬೀರ್ ಅವರ ತಂದೆ ರಿಷಿ ಕಪೂರ್ ಮತ್ತು ಚಿಕ್ಕಪ್ಪ ರಣಧೀರ್ ಕಪೂರ್ ಪೇಶಾವರಕ್ಕೆ ಭೇಟಿ ನೀಡಿ ತಮ್ಮ ಪೂರ್ವಜರ ಮನೆಯನ್ನು ವೀಕ್ಷಿಸಿದ್ದರು.

ಈಗ ಶಿಥಿಲಾವಸ್ಥೆಯಲ್ಲಿ ಕಪೂರ್ ಹವೇಲಿ

ಒಂದು ಕಾಲದಲ್ಲಿ ರಾಜಮನೆತನದಂತಿದ್ದ ಈ ಕಟ್ಟಡ ಇಂದು ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಭೂಕಂಪಗಳು, ಪ್ರತಿಕೂಲ ಹವಾಮಾನ ಮತ್ತು ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕಟ್ಟಡದ ಮೇಲಿನ ಕೆಲವು ಭಾಗಗಳು ಕುಸಿದಿವೆ. ಗೋಡೆಗಳು ಮತ್ತು ಬಾಲ್ಕನಿಗಳು ಹಾನಿಗೊಳಗಾಗಿದ್ದು, ಇಡೀ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.ವಿಭಜನೆಯ ನಂತರ ಈ ಆಸ್ತಿಯನ್ನು ಸಾರ್ವಜನಿಕ ಹರಾಜುಗಳ ಮೂಲಕ ಮಾರಾಟ ಮಾಡಲಾಗಿತ್ತು. ಸದ್ಯ ಸ್ಥಳೀಯ ಆಭರಣ ವ್ಯಾಪಾರಿ ಹಾಜಿ ಇಸ್ರಾರ್ ಶಾ ಅವರ ಒಡೆತನದಲ್ಲಿದೆ ಎಂದು ವರದಿಯಾಗಿದೆ.

₹200 ಕೋಟಿ ಮೌಲ್ಯದ ಆಸ್ತಿ ಖರೀದಿಸಲು ಸರ್ಕಾರದ ಪ್ರಯತ್ನ!

ಕಪೂರ್ ಹವೇಲಿಯನ್ನು ಐತಿಹಾಸಿಕ ಪರಂಪರೆಯ ತಾಣವಾಗಿ ಉಳಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಪಾಕಿಸ್ತಾನದ ಪ್ರಾಂತೀಯ ಸರ್ಕಾರ ಈ ಕಟ್ಟಡವನ್ನು ಖರೀದಿಸಿ ರಾಷ್ಟ್ರೀಯ ಪಾರಂಪರಿಕ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಉದ್ದೇಶವನ್ನೂ ವ್ಯಕ್ತಪಡಿಸಿತ್ತು.ಆದರೆ ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಮಾಲೀಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಮಾಲೀಕರು ಈ ಆಸ್ತಿಗೆ ಸುಮಾರು 2 ಬಿಲಿಯನ್ ಪಾಕಿಸ್ತಾನಿ ರೂಪಾಯಿ (200 ಕೋಟಿ ರೂಪಾಯಿ) ಮೌಲ್ಯ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಈ ಜಾಗದಲ್ಲಿ ವಾಣಿಜ್ಯ ಮಾರುಕಟ್ಟೆ ನಿರ್ಮಿಸುವ ಪ್ರಯತ್ನಗಳ ಬಗ್ಗೆಯೂ ಚರ್ಚೆ ನಡೆದಿದೆ. ಇದಕ್ಕೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಒತ್ತು ನೀಡುವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಬಾಲಿವುಡ್ ಇತಿಹಾಸದ ನೆನಪಾಗಿ ಉಳಿಯಬೇಕಾದ ಮನೆ

ಪೃಥ್ವಿರಾಜ್ ಕಪೂರ್ ಮತ್ತು ರಾಜ್ ಕಪೂರ್ ಅವರಂತಹ ದಿಗ್ಗಜರು ಜನಿಸಿದ ಈ ಮನೆ ಕೇವಲ ಕಪೂರ್ ಕುಟುಂಬದ ಆಸ್ತಿಯಲ್ಲ. ಭಾರತೀಯ ಚಿತ್ರರಂಗದ ಇತಿಹಾಸದ ಒಂದು ಪ್ರಮುಖ ಕೊಂಡಿಯಾಗಿದೆ. ಇಂದು ರಣಬೀರ್ ಕಪೂರ್ ಸೇರಿದಂತೆ ಕುಟುಂಬದ ಮುಂದಿನ ತಲೆಮಾರುಗಳು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರೂ, ಅವರ ಪೂರ್ವಜರ ನೆನಪು ಪಾಕಿಸ್ತಾನದ ಪೇಶಾವರದಲ್ಲಿರುವ ಈ ಹಳೆಯ ಹವೇಲಿಯೊಂದಿಗೆ ಬೆಸೆದುಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 13: ಕಳಿಸಿ, ಕರೆಸೋದ್ಯಾಕೆ? ಇದೆಂಥಾ ಪರಿಸ್ಥಿತಿ ಬಿಗ್‌ಬಾಸ್‌? ಮತ್ತೆ ಬಂದ ಮಂಜು?
Ramayana Box Office Collection Day 3: ಭರ್ಜರಿ ಕಲೆಕ್ಷನ್‌ನೊಂದಿಗೆ ಕಮ್‌ಬ್ಯಾಕ್ ಮಾಡಿದ ಯಶ್ ರಾಮಾಯಣ; ಶನಿವಾರ ಒಂದೇ ದಿನ ಗಳಿಸಿದ್ದೆಷ್ಟು?