
ಬೆಂಗಳೂರು (ಜ.24): ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿದೆ. ಭಾರಿ ಬೇಡಿಕೆಯ ನಟಿಯಾಗಿದ್ದ ರಾಧಿಕಾ ಪಂಡಿತ್ ಇಷ್ಟು ದಿನ ತಾವು ತುಂಬಾ ಪ್ರೀತಿಸುತ್ತಿದ್ದ ಶೂಟಿಂಗ್ ಸೆಟ್'ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಶೂಟಿಂಗ್ ಸೆಟ್'ಗೆ ಎಂಟ್ರಿ ಕೊಟ್ಟಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಪ್ರಿಯಾ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಈಗಾಗಲೇ ಇಪ್ಪತ್ತು ದಿನದ ಚಿತ್ರೀಕರಣ ಮುಗಿದಿದೆ. ವಿಶೇಷ ಅಂದ್ರೆ ಈ ಚಿತ್ರ ಅವರ ಸಿನಿ ಕೆರಿಯರ್'ನ ಹಲವು ಪ್ರಥಮಗಳನ್ನು ದಾಖಲಿಸಿದೆ. ಇದೇ ಮೊದಲು ನಿರ್ದೇಶಕಿ ಪ್ರಿಯಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ಮಾಪಕ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲೂ ಇದು ಮೊದಲ ಸಿನಿಮಾ. ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಕಾಂಬಿನೇಷ್‌ನಲ್ಲೂ ಇದು ಮೊದಲ ಸಿನಿಮಾ. ಇಂತಹ ಹಲವು ವಿಶೇಷತೆಗಳ ನಡುವೆ ಮದುವೆ ನಂತರ ಮತ್ತೆ ಕ್ಯಾಮೆರಾ ಎದುರಿಸಿ ಬಂದಿರುವ ಅವರು ಹೇಳುವುದೇನು?
1. ಮದುವೆ ಆಗಿ ಒಂದು ವರ್ಷ ಎಷ್ಟು ಬೇಗ ಕಳೆಯಿತು ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ಎಲ್ಲವೂ ನಿನ್ನೆ-ಮೊನ್ನೆ ನಡೆದ ಹಾಗಿದೆ. ಆಗಲೇ ಒಂದು ವರ್ಷ ಕಳೆದಿದೆ. ಒಂದು ವರ್ಷದ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿಕೊಂಡಿದ್ದೇನೆ.
2. ಈ ಚಿತ್ರದ ನಿರ್ದೇಶಕಿ ಪ್ರಿಯಾ ಮತ್ತು ಛಾಯಾಗ್ರಾಹಕಿ ನೀತು. ಇಷ್ಟು ವರ್ಷಗಳಲ್ಲಿ ನಾನು ಆ ಜಾಗಗಳಲ್ಲಿ ನೋಡಿದ್ದು ಪುರುಷರನ್ನೇ. ಈ ಚಿತ್ರದ ಚಿತ್ರೀಕರಣದ ಸೆಟ್ ನನಗೆ ಮೊದಲಿಗೆ ವಿಶೇಷ ಎನಿಸಿದ್ದು ಅವರಿಬ್ಬರನ್ನು ನೋಡಿದಾಗ. ಇಷ್ಟು ವರ್ಷ ನಾನು ನಟಿಯಾಗಿ ಅಭಿನಯಿಸಿದ್ದರೂ ಒಬ್ಬೆ ಒಬ್ಬ ಮಹಿಳಾ ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ.
3. ಅವರಿಬ್ಬರೂ ಪಕ್ಕಾ ವೃತ್ತಿಪರರು. ಸಿನಿಮಾ ನಿರ್ಮಾಣದಲ್ಲಿ ಹಿಡಿತವಿದೆ. ಸರಿ ಸುಮಾರು 20 ಕ್ಕೂ ಹೆಚ್ಚು ದಿನಗಳ ಕಾಲ ಅವರ ಜತೆಗೆ ಕೆಲಸ ಮಾಡಿದ್ದೇನೆ. ಯಾವುದೇ ಶ್ರೇಷ್ಠ ನಿರ್ದೇಶಕರಿಗೂ ಕಮ್ಮಿ ಇಲ್ಲದಂತೆ ವೃತ್ತಿಪರತೆ ತೋರುತ್ತಿದ್ದಾರೆ. ಅವರ ಕೆಲಸ ನೋಡಿದ್ರೆ ಥ್ರಿಲ್ ಆಗುತ್ತದೆ.
4. 20 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅಷ್ಟು ದಿನ ಮುಗಿದಿದ್ದೇ ಗೊತ್ತಾಗಲಿಲ್ಲ. ಆ ಚಿತ್ರೀಕರಣವೆಲ್ಲವೂ ಬೆಂಗಳೂರಿನಲ್ಲಿಯೇ ನಡೆದಿದೆ. ಹಾಗಾಗಿ ಸಮಯಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿಲ್ಲ. ತುಂಬಾ ಎಂಜಾಯ್ ಮಾಡುತ್ತಾ ಶೂಟಿಂಗ್ ಮುಗಿಸಿದ್ದೇವೆ.
5. ನಿರೂಪ್ ತುಂಬಾ ಒಳ್ಳೆಯ ಸಹ ನಟ. ಅವರೊಂದಿಗೆ ನಾಯಕಿ ಆಗಿ ಅಭಿನಯಿಸಿದ್ದು ಖುಷಿ ತಂದಿದೆ.
6. ಈ ತಿಂಗಳ 29 ರಿಂದ ಮತ್ತೆ ಚಿತ್ರೀಕರಣ ಶುರು. ಅದು ಕಂಪ್ಲೀಟ್ ಆದ್ರೆ, ಫೆಬ್ರವರಿ ಮೊದಲ ವಾರ ಅಮೆರಿಕಕ್ಕೆ ವಿಮಾನ ಹತ್ತಲಿದ್ದೇನೆ. ನನ್ನ ಕುಟುಂಬಕ್ಕೆ ಒಬ್ಬ ಹೊಸ ಸದಸ್ಯರು ಬರುತ್ತಿದ್ದಾರೆ. ಬ್ರದರ್ ತಂದೆ ಆಗುತ್ತಿದ್ದಾರೆ. ಆ ಸಮಯದಲ್ಲಿ ಅಪ್ಪ, ಅಮ್ಮ, ನಾನು ಸೇರಿದಂತೆ ಇಡೀ ಫ್ಯಾಮಿಲಿ ಜತೆಗಿರಬೇಕು ಅನ್ನೋ ಕಾರಣಕ್ಕೆ ಅಮೆರಿಕಕ್ಕೆ ಹೋಗುತ್ತಿದ್ದೇವೆ.
7. ಸುಮಾರು ಒಂದು ತಿಂಗಳ ಕಾಲ ಅಮೆರಿಕಾದಲ್ಲಿರುತ್ತೇನೆ. ಅದಕ್ಕೆ ಮೊದಲು ಬ್ಯಾಲೆನ್ಸ್ ಶೂಟಿಂಗ್ ಕಂಪ್ಲೀಟ್ ಆಗಬೇಕು. ನಿರ್ದೇಶಕರು ಶೂಟಿಂಗ್ ಪ್ಲ್ಯಾನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೆರಡು ವಾರದಲ್ಲಿ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.