
ಸಿನಿಮಾ ತಾರೆಯರು ಎಷ್ಟೇ ವರ್ಷಗಳಾದರೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಅದರಲ್ಲೂ ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ನಟಿಯರು ಇಂದಿಗೂ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಇದೀಗ ಅಂತಹದ್ದೇ ಒಬ್ಬ ಖ್ಯಾತ ನಟಿಯ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮಾತ್ರವಲ್ಲದೆ ನೆಟ್ಟಿಗರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮೇಲಿನ ಫೋಟೋದಲ್ಲಿರುವ ನಟಿ ಯಾರೆಂದು ಗುರುತಿಸಿದ್ದೀರಾ? ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಾಯಕಿಯಾಗಿದ್ದ ಈ ನಟಿ, ಪವನ್ ಕಲ್ಯಾಣ್, ರವಿತೇಜಾ, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲೂ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿರುವ ಈ ನಟಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. ಒಂದು ಕಾಲದಲ್ಲಿ ಕೈತುಂಬಾ ಸಿನಿಮಾಗಳಿದ್ದ ಈ ನಟಿ ಸದ್ಯ ಬೆಳ್ಳಿತೆರೆಯಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಸೀರೆಯಲ್ಲಿ ಮಿಂಚಿದ ನಟಿ.. ಗುರುತಿಸಲು ಸಾಧ್ಯವಾಯ್ತಾ?
ಸಿನಿಮಾಗಳಲ್ಲಿ ಸದ್ಯ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ನಟಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಂದರ ಸೀರೆಯುಟ್ಟು, ತಲೆಗೆ ಹೂ ಮುಡಿದು ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋಗಳು ಇದೀಗ ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದ ಮೊದಲ ಕ್ಷಣದಲ್ಲಿ ಹಲವರು ನಟಿಯನ್ನು ಗುರುತಿಸಲು ಸಾಧ್ಯವಾಗದೆ ಕನ್‌ಫ್ಯೂಸ್ ಆಗಿದ್ದಾರೆ. ಆದರೆ, ಒಮ್ಮೆ ಹೆಸರು ತಿಳಿದ ಬಳಿಕ ‘ಅರೆ, ಇವರೇನಾ?’ ಎಂದು ಅಚ್ಚರಿ ಪಡುವಂತಿದೆ.
ಈ ನಟಿ ಮತ್ಯಾರೂ ಅಲ್ಲ.. ಮೀರಾ ಜಾಸ್ಮಿನ್!
ಹೌದು, ನೀವು ಗುರುತಿಸಲು ಪ್ರಯತ್ನಿಸುತ್ತಿರುವ ಆ ನಟಿ ಮತ್ಯಾರೂ ಅಲ್ಲ, ಮೀರಾ ಜಾಸ್ಮಿನ್. ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಾಯಕಿಯಾಗಿದ್ದ ಮೀರಾ ಜಾಸ್ಮಿನ್ ಹಲವು ಯಶಸ್ವಿ ತೆಲುಗು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಅಲ್ಲದೇ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ 'ಅರಸು' ಸಿನಿಮಾದಲ್ಲಿ ನಟಿಸಿದ ನಂತರದಲ್ಲಿ ಕನ್ನಡಿಗರ ಮನಸ್ಸನ್ನು ಮೀರಾ ಗೆದ್ದಿದ್ದರು.
ಮದುವೆ ಬಳಿಕ ಚಿತ್ರರಂಗದಿಂದ ದೂರ
ನಾಯಕಿಯಾಗಿ ವೃತ್ತಿಜೀವನ ಉತ್ತುಂಗದಲ್ಲಿದ್ದ ಸಮಯದಲ್ಲೇ ಮೀರಾ ಜಾಸ್ಮಿನ್ ಉದ್ಯಮಿ ಅನಿಲ್ ಜಾನ್ ಟೈಟಸ್ ಅವರನ್ನು ವಿವಾಹವಾಗಿದ್ದರು. 2014ರಲ್ಲಿ ಇವರ ವಿವಾಹ ನೆರವೇರಿತ್ತು. ಮದುವೆಯ ಬಳಿಕ ಕೆಲಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಅವರು, ನಂತರ ಮತ್ತೆ ಸಿನಿರಂಗಕ್ಕೆ ಮರಳುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು.
ಇತ್ತೀಚಿನ ವರ್ಷಗಳಲ್ಲಿ ಮೀರಾ ಜಾಸ್ಮಿನ್ ನಾಯಕಿಯಾಗಿ ಮಾತ್ರವಲ್ಲದೆ ಸಹಾಯಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ವಿಮಾನಂ’, ‘ಸ್ವಾಗ್’, ‘ದಿ ಟೆಸ್ಟ್’, ‘ಹೃದಯಪೂರ್ವಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಮೀರಾ ಜಾಸ್ಮಿನ್ ಕೈಯಲ್ಲಿ ಎರಡು ಸಿನಿಮಾಗಳಿವೆ ಎನ್ನಲಾಗಿದ್ದು, ಚಿತ್ರಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ತಮ್ಮ ಹೊಸ ಫೋಟೋಗಳು, ವಿಡಿಯೋಗಳು ಹಾಗೂ ವೈಯಕ್ತಿಕ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ. ಇನ್ನು ಒಂದು ಕಾಲದಲ್ಲಿ ಟಾಲಿವುಡ್‌ನ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಮೀರಾ ಜಾಸ್ಮಿನ್ ಅವರ ಈ ಸಾಂಪ್ರದಾಯಿಕ ಲುಕ್‌ನ ಫೋಟೋಗಳು ಇದೀಗ ಮತ್ತೆ ಅವರ ಅಭಿಮಾನಿಗಳಿಗೆ ಹಳೆಯ ಸಿನಿಮಾಗಳ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.