ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ ರಿಯಾಲಿಟಿ ಶೋ ವಿನ್ನರ್ ಪ್ರೀತಮ್ ಕಥೆ ಇಲ್ಲಿದೆ. ಕೊಪ್ಪಳದ ಹುಡುಗನ ಸಾಧನೆಯ ಸ್ಟೋರಿ.
ಡ್ರಾಮಾ ಜೂನಿಯರ್‌ನಲ್ಲಿ ದರಾ ಬೇಂದ್ರೆ ಪಾತ್ರದ ಮೂಲಕ ಮನೆಮಾತಾಗಿದ್ದ ಪ್ರೀತಮ್ ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಗ್ರಾಮದವ. ಮಂಜುನಾಥ ಮತ್ತು ಮಧು ಎನ್ನುವ ದಂಪತಿಯ ಹಿರಿಯ ಮಗ. ಈಗಿನ್ನು 6ನೇ ತರಗತಿ ಓದುತ್ತಿದ್ದಾನೆ. ಆದರೆ, ಅಪ್ರತಿಮ ಪ್ರತಿಭೆಯ ಮೂಲಕ ಈಗ ಮತ್ತೆ ಹೆಸರಾಗಿದ್ದಾನೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ೨ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈತನ ಕುಣಿತಕ್ಕೆ ಇಡೀ ಕರ್ನಾಟಕವೇ ಫಿದಾ ಆಗಿದೆ.
ಬೆಂಗಳೂರಿನ ಕುಮಾರನ್ ಚಿಲ್ಡ್ರನ್ ಹೋಮ್ ಸ್ಕೂಲ್‌ನಲ್ಲಿ ಅಭ್ಯಾಸ ಮಾಡುತ್ತಲೇ ವಿವಿಧ ರೀತಿಯ ಸಾಧನೆಯಲ್ಲಿ ತೊಡಗಿದ್ದಾನೆ. ಡ್ರಾಮಾ ಜೂನಿಯರ್ ಆಯ್ಕೆಯಾಗಿ, ಫೈನಲ್ವರೆಗೂ ತಲಿಪಿದ್ದ ಪ್ರೀತಮ್ ನಾಲ್ಕನೇ ಸ್ಥಾನ ಪಡೆದಿದ್ದರು. ಅನಂತರ ಡ್ರಾಮಾ ಜೂನಿಯರ್ ಮತ್ತು ಸರಿಗಮ ಲಿಟಲ್ ಚಾಂಪ್ಸ್ ಮಕ್ಕಳಿಗಾಗಿಯೇ ನಡೆಸಿದ ಡಾನ್ಸ್ ಕರ್ನಾಟಕ ಡಾನ್ಸ್ ಆಡಿಷನ್‌ನಲ್ಲಿ ಆಯ್ಕೆಯಾದರು. ಅಷ್ಟೇ ಅಲ್ಲ, ಜಡ್ಜ್ಗಳಾದ ರಕ್ಷಿತಾ, ವಿಜಯ ರಾಘವೇಂದ್ರ ಹಾಗೂ ಅರ್ಜುನ್ ಜನ್ಯ ಅವರ ಅಚ್ಚುಮೆಚ್ಚಿನ ಡಾನ್ಸರ್ ಆದರು. ಗ್ಯಾಂಡ್ ಫಿನಾಲೆಯಲ್ಲಿ ಪ್ರೀತಮ್ ಮತ್ತು ಅನ್ಷಿಕಾ ಜೋಡಿ ಮನಸೂರೆಗೊಳ್ಳುವಂತೆ ಡ್ಯಾನ್ಸ್ ಮಾಡಿತು. ಫೈನಲ್ ರೌಂಡ್‌ನಲ್ಲಿ ಬಾಹುಬಲಿ, ದಿ ವಿಲನ್ ಮತ್ತು ಚಕ್ರವರ್ತಿ ಹಾಡಿಗೆ ಡ್ಯಾನ್ಸ್ ಮಾಡಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2 ಸೀಸನ್‌ನಲ್ಲಿ ಪ್ರೀತಮ್ ಮತ್ತು ಅನ್ಷಿಕಾ ಜೋಡಿ ಪ್ರಥಮ ಸ್ಥಾನ ಗಳಿಸಿದೆ.
undefined
ಬಹುಮುಖ ಪ್ರತಿಭೆ
ಪ್ರೀತಮ್ ಬಹುಮುಖ ಪ್ರತಿಭೆ. ಅಭಿನಯದಲ್ಲಿ, ಡಾನ್ಸ್‌ನಲ್ಲಿ ಅಷ್ಟೇ ಅಲ್ಲಾ ಓದಿನಲ್ಲಿಯೂ ಈತನದು ಎತ್ತಿದ ಕೈ. ಜೊತೆಗೆ ಬ್ಯಾಡ್ಮಿಂಟನ್ ಆಟಗಾರ. ಅಷ್ಟೇ ಅಲ್ಲ, ಈತ ಶಾಲಾಮಟ್ಟದ ಚಾಂಪಿಯನ್ ಕೂಡ. ಕರಾಟೆ, ಅಥ್ಲೆಟಿಕ್ಸ್ ಮತ್ತು ಈಜುಗಾರಿಕೆಯಲ್ಲಿಯೂ ಪ್ರವೀಣ. ಇವೆಲ್ಲವುಗಳಲ್ಲಿಯೂ ಒಂದಿಲ್ಲೊಂದು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾನೆ. ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆಯುವುದಕ್ಕೆ ಈತ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಡಾನ್ಸ್ ಅಭ್ಯಾಸ ಸೇರಿದಂತೆ ಎಲ್ಲವನ್ನೂ ಏಕಚಿತ್ತದಿಂದ ಮಾಡುವುದಲ್ಲದೆ ಸ್ವಯಂ ಪ್ರೇರಿತವಾಗಿ ತಾನೇ ಬೆಳಗ್ಗೆಯೇ ಎದ್ದು ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದ. ನಿತ್ಯವೂ ನಾಲ್ಕು ಗಂಟೆ ಶ್ರಮಿಸಿದ್ದರಿಂದಲೇ ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು.
ಅಪ್ಪನೇ ಗುರು
ಪ್ರೀತಮ್‌ಗೆ ಅವರ ಅಪ್ಪ ಮಂಜುನಾಥ ಕಲಿಕೆಗೆ ಸೂಕ್ತ ಪರಿಸರ ಒದಗಿಸಿದರು. 2 ವರ್ಷದವನಿದ್ದಾಗಲೇ ಅವನಿಗೆ ಅಡಿಗರ ಆ್ಯಕ್ಟಿಂಗ್ ಅಕಾಡೆಮಿಯಲ್ಲಿ ತರಬೇತಿ ಕ್ಲಾಸ್‌ಗೆ ಕರೆದೊಯ್ಯುತ್ತಿದ್ದರು. ಆಗಿನ್ನೂ ತರಗತಿಗೆ ಕೂಡಿಸುತ್ತಿಲ್ಲವಾದರೂ ಅಲ್ಲಿಯದೆಲ್ಲವನ್ನು ನೋಡುತ್ತಲೇ ಬೆಳೆಯುವಂತೆ ಮಾಡಿದರು. ಅವನಿಗೆ ಅದರಲ್ಲಿಯೇ ಆಸಕ್ತಿ ಬೆಳೆಯಿತು. ಹೀಗಾಗಿ, ಅಕಾಡೆಮಿ ನಿರ್ದೇಶಕರಾದ ನೀಲಕಂಠ ಅಡಿಗ ಅವರ ಕೃಪೆಗೆ ಪಾತ್ರನಾಗಿ, ಐದು ವರ್ಷದ ವೇಳೆಗೆ ಪರಿಪೂರ್ಣ ಕಲಾವಿದನ ರೀತಿಯಲ್ಲಿ ಸ್ಟೇಜ್ ಪ್ರೋಗ್ರಾಂ ನೀಡಲು ಪ್ರೀತಮ್ ಶುರು ಮಾಡಿದ. ಪರಿಣಾಮ ಈಗ 6 ನೇ ತರಗತಿಯ ವೇಳೆಗೆ ಸ್ಟಾರ್ ಆಗಿ ಹೊರಹೊಮ್ಮಿದ.
ನನಗೆ ತುಂಬಾ ಸಂತೋಷವಾಗಿದೆ. ನಾನು ಸಹ ಅಂದುಕೊಂಡಿರಲಿಲ್ಲ ಪ್ರಥಮ ಸ್ಥಾನ ದೊರೆಯುತ್ತದೆ ಎಂದು. ಪ್ರಶಸ್ತಿ ಸಿಗಬೇಕು ಅಂತ ಅಂದುಕೊಂಡು ಡ್ಯಾನ್ಸ್ ಮಾಡದೆ ಅತ್ಯುತಮವಾಗಿ ಡ್ಯಾನ್ಸ್ ಮಾಡಬೇಕು ಎಂದು ಪ್ರಯತ್ನಿಸಿದ್ದಕ್ಕೆ ಸಿಕ್ಕಿತು - ಪ್ರೀತಮ್ ಎಂ.ಕೆ