ಸಿನಿಮಾ ವಿಮರ್ಶೆ: ಸ್ಟಾರ್ ನಾಯಕನಿಗೆ ರಿಯಲ್ ಇಮೇಜ್

Published : Jan 28, 2017, 09:36 AM ISTUpdated : Apr 11, 2018, 12:41 PM IST
ಸಿನಿಮಾ ವಿಮರ್ಶೆ: ಸ್ಟಾರ್ ನಾಯಕನಿಗೆ ರಿಯಲ್ ಇಮೇಜ್

ಸಾರಾಂಶ

‘ಕೊಯಿ ದಂಧಾ ಛೋಟಾ ನಹೀ ಹೋತಾ, ದಂಧೆ ಸೆ ಕೊಯಿ ಧರ್ಮ ಬಡಾ ನಹೀ ಹೋತಾ’ ರಯೀಸ್‌ಗೆ ಅವರ ತಾಯಿ ಹೇಳಿದ ಮಾತು. ಅಕ್ರಮ ಸಾರಾಯಿ ದಂಧೆ ಮಾಡಿಕೊಂಡಿದ್ದರೂ ಅಮ್ಮನ ಈ ಮಾತನ್ನು ನೆನಪಿಟ್ಟುಕೊಂಡು ಯಾರಿಗೂ ಕೆಡುಕಾಗದೆ ಬದುಕುವ ನೀತಿ ಪಾಲಿಸುತ್ತಿದ್ದ ರಯೀಸ್ ದಂಧೆ ಮಾಡುವವನ ಇಮೇಜಿನಿಂದ ಜನನಾಯಕ ಇಮೇಜ್ ಪಡೆದುಕೊಳ್ಳುತ್ತಾನೆ. ಆದರೆ ಧರ್ಮವನ್ನು ದಂಧೆ ಮಾಡಿಕೊಂಡವರ ಕೈಗೆ ಸಿಕ್ಕು ದೊಡ್ಡ ಪಾಠವನ್ನೇ ಕಲಿಯುತ್ತಾನೆ. ಏಳುಬೀಳಿನ ಕಥೆಯಲ್ಲಿ ಶಾರುಖ್‌ಖಾನ್, ಸೂಪರ್ ಸ್ಟಾರ್ ಇಮೇಜಿನಿಂದ ಹೊರಬಂದು ನಿಜವಾದ ನಟರಾಗಿ

ಚಿತ್ರ: ರಯೀಸ್

ಭಾಷೆ : ಹಿಂದಿ

ತಾರಾಗಣ : ಶಾರುಖ್ ಖಾನ್, ಮಹೀರಾ ಖಾನ್, ನವಾಜುದ್ದೀನ್ ಸಿದ್ದಿಕಿ, ಮೊಹಮ್ಮದ್ ಝೀಷಾನ್ ಅಯ್ಯುಬ್, ಅತುಲ್ ಕುಲಕರ್ಣಿ, ಸನ್ನಿಲಿಯೋನೆ,

ನಿರ್ದೇಶಕ: ರಾಹುಲ್ ಢೋಲಕಿಯಾ

ಛಾಯಾಗ್ರಹಣ: ಕೆ ಯು ಮೋಹನನ್

ಸಂಗೀತ: ರಾಮ್ ಸಂಪತ್

ನಿರ್ಮಾಣ: ರಿತೇಶ್ ಸಿದ್ವಾನಿ, ಫರ‌್ಹಾನ್ ಅಖ್ತರ್, ಗೌರಿ ಖಾನ್

‘ಕೊಯಿ ದಂಧಾ ಛೋಟಾ ನಹೀ ಹೋತಾ, ದಂಧೆ ಸೆ ಕೊಯಿ ಧರ್ಮ ಬಡಾ ನಹೀ ಹೋತಾ’ ರಯೀಸ್‌ಗೆ ಅವರ ತಾಯಿ ಹೇಳಿದ ಮಾತು. ಅಕ್ರಮ ಸಾರಾಯಿ ದಂಧೆ ಮಾಡಿಕೊಂಡಿದ್ದರೂ ಅಮ್ಮನ ಈ ಮಾತನ್ನು ನೆನಪಿಟ್ಟುಕೊಂಡು ಯಾರಿಗೂ ಕೆಡುಕಾಗದೆ ಬದುಕುವ ನೀತಿ ಪಾಲಿಸುತ್ತಿದ್ದ ರಯೀಸ್ ದಂಧೆ ಮಾಡುವವನ ಇಮೇಜಿನಿಂದ ಜನನಾಯಕ ಇಮೇಜ್ ಪಡೆದುಕೊಳ್ಳುತ್ತಾನೆ. ಆದರೆ ಧರ್ಮವನ್ನು ದಂಧೆ ಮಾಡಿಕೊಂಡವರ ಕೈಗೆ ಸಿಕ್ಕು ದೊಡ್ಡ ಪಾಠವನ್ನೇ ಕಲಿಯುತ್ತಾನೆ. ಏಳುಬೀಳಿನ ಕಥೆಯಲ್ಲಿ ಶಾರುಖ್‌ಖಾನ್, ಸೂಪರ್ ಸ್ಟಾರ್ ಇಮೇಜಿನಿಂದ ಹೊರಬಂದು ನಿಜವಾದ ನಟರಾಗಿ

ಎಪ್ಪತ್ತರ ದಶಕದಲ್ಲಿ ಶಾಲೆಗೆ ಹೋಗುವ ಬಾಲಕನಾಗಿ ಕಾಣಿಸಿಕೊಳ್ಳುವ ರಯೀಸ್ ದಂಧೆ ಮಾಡುವ ಸೇಠ್ ಕೈಯಲ್ಲಿ, ‘ಬನಿಯೇ ಕಿ ದಿಮಾಗ್, ಮಿಯಾ ಭಾಯಿ ಕಿ ಡೇರಿಂಗ್’ ಇರುವ ಹುಡುಗ ಎನಿಸಿಕೊಳ್ಳುತ್ತಾನೆ. ಬೆಳೆಯುವ ರಯೀಸ್, ವ್ಯಾಪಾರಿಯ ಬುದ್ಧಿವಂತಿಕೆ, ಮಿಯಾ ಭಾಯ್‌ನ ದಿಟ್ಟತನದಿಂದಲೇ ದಂಧೆಯಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಗೆಲ್ಲುತ್ತಾನೆ. ಹಾಡುವ, ಕುಣಿಯುವ, ಫೈಟ್ ಮಾಡುವ, ತಂತ್ರ ಮಾಡುವ ಶಾರುಖ್‌ಖಾನ್ ಎಲ್ಲ ಇಮೇಜುಗಳನ್ನು ಒಮ್ಮೇ ಹೊತ್ತುಬಂದಿರುವ ರಯೀಸ್ ನಿಜಕ್ಕೂ ಆಕರ್ಷಿಸುತ್ತಾನೆ. ಸೂಪರ್ ಸ್ಟಾರ್ ಇಮೇಜಿನ ಹೊರೆಯಿಲ್ಲದ ಸಾಮಾನ್ಯನಂತೆ, ಸೋತು, ಒದೆ ತಿಂದು, ಕಣ್ಣೀರಾಗಿ, ಗೆಲ್ಲುವುದಕ್ಕೆ ಶ್ರಮಿಸುವ ಪಾತ್ರದಲ್ಲಿ ಶಾರುಖ್‌ಖಾನ್ ಆಪ್ತವಾಗುವಂತೆ ನಟಿಸಿದ್ದಾರೆ. ರಯೀಸ್‌ನ ಅಕ್ರಮ ದಂಧೆಯನ್ನು ಮುಗಿಸಿಯೇ ತೀರಬೇಕು ಪಣತೊಟ್ಟ ಪೊಲೀಸ್ ಅಧಿಕಾರಿ ಮಜುಮ್‌ದಾರ್ ಆಗಿ ನವಾಜುದ್ದೀನ್ ಕೂಡ ಭರ್ಜರಿಯಾಗಿ ಆವರಿಸಿಕೊಂಡಿದ್ದಾರೆ. ಕಲಾತ್ಮಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಕಲಾವಿದ ನವಾಜುದ್ದೀನ್ ಮತ್ತು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಶಾರುಖ್‌ಖಾನ್ ನಡುವೆ ನಟನೆಯ ಜಿದ್ದೇ ನಡೆಯುತ್ತಿದೆ ಎಂಬ ಅನುಭವ ಚಿತ್ರದ ಹಲವು ದೃಶ್ಯಗಳು ಕಟ್ಟಿಕೊಡುತ್ತವೆ.

ಗುಜರಾತಿನ ಅಕ್ರಮ ಮದ್ಯ ಮಾರಾಟದಲ್ಲಿ ಕಿಂಗ್ ಪಿನ್ ಆಗಿದ್ದ ಅಬ್ದುಲ್ ಲತೀಫ್ ಜೀವನದಿಂದ ಸ್ಫೂರ್ತಿ ಪಡೆದ ಈ ಕಥೆ, ಶಾರುಖ್ ಖಾನ್ ಇಮೇಜಿಗೆ ತಕ್ಕಂತೆ ಮಾರ್ಪಡು ಹೊಂದಿದೆ. ಗುಜರಾತ್ ಹೆಸರಿನೊಂದಿಗೆ ನೆನಪಾಗುವ, ಅಕ್ರಮ ದಂಧೆ, ಕರಾವಳಿಯಲ್ಲಿ ನಡೆಯುವ ಅಕ್ರಮ ಸಾಗಾಣಿಕೆ, ಉಗ್ರವಾದದ ನೆರಳು, ಬಾಂಬ್ ಬ್ಲಾಸ್ಟ್ ಎಲ್ಲವನ್ನೂ ನೆನಪಿಸುತ್ತದೆ. ಅದೇ ಹೊತ್ತಿಗೆ ಸಹಬಾಳ್ವೆ, ಸಹಿಷ್ಣುತೆಯನ್ನು ನೆನಪಿಸುತ್ತದೆ. ಗುಜರಾತ್ ಅನ್ನು ಕೇಂದ್ರವಾಗಿರಿಸಿಕೊಂಡೇ ಒಂದು ಚಿತ್ರ ಕೊಟ್ಟ ರಾಹುಲ್ ಢೋಲಕಿಯಾ ಈ ಚಿತ್ರದ ಕಥೆಗೆ ಕೆಲಸ ಮಾಡಿದ್ದಾರೆ. ಶಾರುಖ್ ಖಾನ್ ಪಾತ್ರ ಮತ್ತು ಕಥೆ ಎರಡೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ನೆರಳಿನಲ್ಲೇ ಅರಳಿದಂತೆ ಕಾಣಿಸುತ್ತದೆ.

ಇನ್ನು ರಯೀಸ್ ಪತ್ನಿಯಾಗಿ ಕಾಣಿಸಿಕೊಂಡಿರು ಮಹೀರಾ ಖಾನ್ ಹೊಸ ಮುಖವಾಗಿ ಆಕರ್ಷಿಸಿದರೂ, ನೆನಪಿನಲ್ಲಿ ಉಳಿಯುವಂತೆ ಕಾಣುವುದಿಲ್ಲ. ಚಿತ್ರದ ಹಿನ್ನೆಲೆ ಸಂಗೀತ ಮನಸ್ಸಿಗೆ ಇಳಿದರೂ ಹಾಡುಗಳು ಇಷ್ಟವಾಗುವುದಿಲ್ಲ. ಜನಪ್ರಿಯ ಲೈಲಾ ಓ ಲೈಲಾ ಹಾಡೊಂದು ಇದಕ್ಕೆ ಅಪವಾದ. ಈಗಾಗಲೇ ಜನಪ್ರಿಯವಾಗಿರುವ ಈ ಗೀತೆ ಹೊಸ ಹುರುಪಿನಲ್ಲಿ ಬಂದಿರುವುದು ಒಂದು ಕಾರಣವಾದರೆ, ಸನ್ನಿಲಿಯೋನೆ ಹೆಜ್ಜೆ ಹಾಕಿರುವುದು ಇನ್ನೊಂದು.

ರಿಯಲಿಸ್ಟಿಕ್ ಆದ ಕಥೆಯನ್ನು ಸೂಕ್ಷ್ಮವಾಗಿ, ಜನಪ್ರಿಯ ಮಾದರಿಯಲ್ಲೇ ನಿರ್ವಹಿಸಿರುವ ನಿರ್ದೇಶಕ ಢೋಲಕಿಯಾ, ಶಾರುಖ್‌ಖಾನ್ ಅನ್ನು ಸೂಪರ್ ಸ್ಟಾರ್ ಇಮೇಜಿನಿಂದ ಹೊರತಂದು, ರಿಯಲ್ ಸ್ಟಾರ್ ಆಗಿಸಿದ್ದಾರೆ. ಇಲ್ಲಿ ಅಸಹಜವಾದ, ಬದುಕಿಗಿಂತ ದೊಡ್ಡದೆನಿಸುವ ಇಮೇಜು ಸತ್ತು ಹೋಗುತ್ತದೆ. ಹಲವು ಪ್ರಯೋಗಗಳು ಮಾಡಿ ಸೋತಿರುವ ಶಾರುಖ್‌ಖಾನ್‌ಗೆ ಇದು ಹೊಸ ಹುಟ್ಟು ಕೊಡುವ ಸೂಚನೆಯನ್ನು ನೀಡುತ್ತದೆ. ರಾಚುವ ರೋಚಕತೆ ಇಲ್ಲವಾದರೂ, ಆವರಿಸಿಕೊಳ್ಳುವ ಕತೆ ಇದೆ.

-ಕುಮಾರ್

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?